ಮೈಸೂರು: ನಾಡ ಹಬ್ಬ ದಸರೆಯ ಭಾಗವಾಗಿ ಇದೇ ಮೊದಲ ಬಾರಿಗೆ ವೈದ್ಯಕೀಯ ದಸರೆ ಮತ್ತು ಕೈಗಾರಿಕೆ ದಸರೆ ಏರ್ಪಡಿಸಲಾಗಿದ್ದು ನಗರದ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ ವೈದ್ಯಕೀಯ ದಸರೆ ಎಲ್ಲರ ಗಮನ ಸೆಳೆಯುತ್ತಿದೆ.
ನಗರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಆರೋಗ್ಯ ದಸರಾ ಅಂಗವಾಗಿ ವೈದ್ಯಕೀಯ ವಸ್ತು ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಇಂದು ಮುಕ್ತವಾಗಿದೆ.
ವೈದ್ಯಕೀಯ ಕಾಲೇಜಿನ ಅನಾಟಮಿ (ಅಂಗರಚನಾ ವಿಭಾಗ) ದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ನೋಡುಗರನ್ನು ಕುತೂಹಲ ಮೂಡಿಸುವಂತೆ ಮಾಡಿದೆ. ನಾನಾ ರೋಗಗಳಿಗೆ ಸಂಬಂಧಿಸಿದೆ.
ನೀರು ತುಂಬಿದ ತಲೆ ಬುರುಡೆ, ಥಾಲಿಡೋಮೈಡ್ ಬೇಬಿ, ಸೀಳು ತುಟಿ ಮತ್ತು ಅಂಗಗಳು, ಅವಳಿ ಮಕ್ಕಳು, ಹುಟ್ಟಿನಿಂದ ಬಂದಿರುವ ವೈಪರೀತ್ಯಗಳಿಗೆ ಕಾರಣವಾಗುವ ಅಂಶಗಳು, ಜಠರದ ಹುಣ್ಣು,ಕರುಳಿನ ಕ್ಯಾನ್ಸರ್, ಯಕೃತ್ತಿನ ಲ್ಲಿ ಉಂಟಾಗುವ ಸಮಸ್ಯೆಗಳು, ಶ್ವಾಸಕೋಶದ ಕ್ಯಾನ್ಸರ್, ಟಿ.ಬಿ.ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಫೈಬ್ರಾಯ್ಡ್, ಬ್ರೈನ್, ಶಿಶ್ನದ ಕ್ಯಾನ್ಸರ್ ಇವೇ ಮೊದಲಾದ ರೋಗಗಳಿಂದ ಅಂಗಾಂಗಗಳ ಮೇಲೆ ಆಗುವ ಪರಿಣಾಮಗಳನ್ನು ಪ್ರದರ್ಶಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್,ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ವೈದ್ಯಕೀಯ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಸಚಿವದ್ವಯರಿಗೆ ಆಯಾಯ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮಾಹಿತಿಯನ್ನು ನೀಡಿದರು. ಮೃತಪಟ್ಟ ವ್ಯಕ್ತಿಯ ದೇಹದ ಭಾಗಗಳನ್ನು ಯಾವ ರೀತಿಯಲ್ಲಿ ಬಳಸಬಹುದು ಎನ್ನುವುದರ ಬಗ್ಗೆ ಗಮನ ಸೆಳೆಯುವಂತೆ ಇದ್ದವು.
ಶಾಸಕ ಎಲ್.ನಾಗೇಂದ್ರ, ಮಹಾಪೌರ ಶಿವಕುಮಾರ್, ಉಪ ಮಹಾಪೌರ ಡಾ.ಜಿ.ರೂಪಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಹಾಜರಿದ್ದರು. ಅ.5 ರವರೆಗೆ ಪ್ರದರ್ಶನ ಇದ್ದು,ಬೆಳಿಗ್ಗೆ ಹತ್ತರಿಂದ ಸಂಜೆ ಐದುಗಂಟೆಯ ತನಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ