ಆರೋಗ್ಯ

ಉತ್ತಮ ಜೀವನ ಶೈಲಿ; ಮಧುಮೇಹಕ್ಕೆ ಮದ್ದು

ಮಧುಮೇಹ ಕುರಿತ ಸಾರ್ವಜನಿಕರ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಉಡುಪ ಕ್ಲಿನಿಕ್‌ನ   ಡಾ.ಕಾರ್ತಿಕ್‌ಉಡುಪ ಅವರ ಬಳಿ ಇದೆ ಉತ್ತರ

ಪ್ರಸ್ತುತ ದೇಶದಲ್ಲಿ ಮಧುಮೇಹ ಕಾಯಿಲೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒತ್ತಡದ ಜೀವನ ಶೈಲಿಯಿಂದ ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗಂತು ದೇಹ ದಂಡಿಸದೆ ಕುಳಿತು ಮಾಡುವ ಕೆಲಸವೇ ಹೆಚ್ಚಾಗಿರುವುದರಿಂದ, ವ್ಯಾಯಾಮವಿಲ್ಲದೆ ಜೀವನ ನಡೆಸುತ್ತಿರುವುದರಿಂದ, ಅನಗತ್ಯ ಆಹಾರ ಸೇವನೆ ಹಾಗೂ ಆರೋಗ್ಯಕರ ವಲ್ಲದ ಆಹಾರ ಸೇವನೆಯಿಂದ ಮಧು ಮೇಹ ಕಾಯಿಲೆ ಬಹುಬೇಗ ಅಮರಿಕೊಳ್ಳುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೆ ಎಂದರೆ, ಇದೆ. ಎನ್ನುತ್ತಾರೆ ನಾರಾಯಣ ಶಾಸ್ತ್ರಿ ರಸ್ತೆ ಸಿದ್ದಪ್ಪ ವೃತ್ತದ ಬಳಿ ಇರುವ ಉಡುಪ ಕ್ಲಿನಿಕ್‌ನ ಡಾ.ಕಾರ್ತಿಕ್ ಉಡುಪ ಅವರು.

ಮಧುಮೇಹಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಡಾ.ಉಡುಪ ಅವರು ಅವರ ಜೀವನ ಶೈಲಿ ಬದಲಾಯಿಸುವ ಮಾರ್ಗದರ್ಶಿಯೂ ಆಗಿದ್ದಾರೆ. ಪ್ರಿ ಡಯಾಬಿಟಿಸ್ ಇರುವವರಿಗೆ ಚಿಕಿತ್ಸೆಯೊಂದಿಗೆ ನಿಗದಿತ ಸಲಹೆ ಸೂಚನೆಗಳನ್ನೂ ನೀಡುವ ಮೂಲಕ ಸರಿದಾರಿಗೆ ತರುತ್ತಿದ್ದಾರೆ.

ಅದರಂತೆ ಮಧುಮೇಹ ಕಾಯಿಲೆಗೆ ಕಾರಣಗಳೇನು?  ಅದನ್ನು ತಡೆಯುವುದು ಹೇಗೆ? ಪ್ರಿ ಡಯಾಬಿಟಿಸ್ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ?  ಡಯಾಬಿಟಿಸ್ ಕಾಯಿಲೆ ಇದ್ದರೆ ಅದನ್ನು ನಿರ್ವಹಿಸುವುದು ಹೇಗೆ ಮುಂತಾದ ಸಾರ್ವಜನಿಕರ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಉಡುಪ ಕ್ಲಿನಿಕ್‌ನ ಡಾ.  ಉಡುಪ ಅವರು ಉತ್ತರ ನೀಡಿದ್ದಾರೆ.

ಪ್ರಶ್ನೆ: ಸಕ್ಕರೆ ಕಾಯಿಲೆ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ.  ನನಗೂ ಮಧುಮೇಹ ಕಾಯಿಲೆ ಬಂದುಬಿಡುತ್ತದೇನೋ ಎಂಬ ಭಯವಿದೆ. ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಎಷ್ಟಿರಬೇಕು? ಇದನ್ನು ಬ್ಯಾಲೆನ್ಸ್ ಮಾಡುವುದು ಹೇಗೆ. ಈ ಬಗ್ಗೆ ಅರ್ಥವಾಗುವಂತೆ ತಿಳಿಸುವಿರಾ ಸರ್?

ಡಾ.ಕಾರ್ತಿಕ್ ಉಡುಪ: ನಿಮ್ಮ ದೇಹವನ್ನು ಒಂದು ಕಾರು ಅಂದುಕೊಳ್ಳಿ, ಶುಗರ್(ಮಧುಮೇಹ) ಅನ್ನು ಅದಕ್ಕೆ ತುಂಬಿಸುವ ಪೆಟ್ರೋಲ್ ಎಂದುಕೊಳ್ಳಿ. ಶುಗರ್ ದೇಹದಲ್ಲಿ ಜಾಸ್ತಿ ಆಗ್ತಾ ಇದೆ ಅಂದ್ರೆ, ಕಾರಿನ ಟ್ಯಾಂಕ್ ತುಂಬಿ ತುಳುಕುವಷ್ಟು ಪೆಟ್ರೋಲ್ ಹಾಕ್ತಿದ್ದೀವಿ ಎಂದು ಅರ್ಥ. ಜೊತೆಗೆ ಇಂಜಿನ್ನಿನ ಬೇರೆ ಭಾಗಗಳ ನಿರ್ವಹಣೆ ಸರಿಯಾಗಿ ಆಗದೆ ಈ ಕಾರಣದಿಂದ, ದೇಹ ಎಂಬ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಡೇಂಜರ್ ಲೈಟ್ ಬರುತ್ತಿದ್ದರೆ ಅದೇ ಪ್ರಿ-ಡಯಾಬಿಟಿಸ್! ಈಗಲೇ ಅದರತ್ತ ಗಮನ ಹರಿಸಿದರೆ ಗಾಡಿ ಹಾಳಾಗೋದನ್ನು ತಡೆಯಬಹುದು.

ಪ್ರಶ್ನೆ: ಹಾಗಾದರೆ ಪ್ರಿ-ಡಯಾಬಿಟಿಸ್ ಅಂದರೆ ಏನು?

ಡಾ.ಕಾರ್ತಿಕ್ ಉಡುಪ: ಪ್ರಿ-ಡಯಾಬಿಟಿಸ್ ಅಂದರೆ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿ ಇದೆ ಎಂದು ಅರ್ಥ.  ಆದರೆ, ಡಯಾಬಿಟಿಸ್ ಕಾಯಿಲೆಗೆ ನೀವು ತುತ್ತಾಗಿದ್ದೀರಿ ಅನ್ನುವಷ್ಟು ಇರುವುದಿಲ್ಲ.  ಉದಾಹರಣೆಗೆ ನಿಮ್ಮ ಕಾರು ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ. ಇನ್ನೂ ಹಳದಿ ದೀಪ ಉರಿಯುತ್ತಿರುತ್ತದೆ.  ಇನ್ನೂ ಕೆಂಪು ದೀಪ ಬಿದ್ದಿರುವುದಿಲ್ಲ ಎಂದುಕೊಳ್ಳಿ. ಅಂದರೆ ಪರಿಪೂರ್ಣ ಜೀವನವೆಂಬ ಸಿಗ್ನಲ್‌ನಲ್ಲಿ ಹಳದಿ ದೀಪ ಬಿದ್ದಿದೆ ಎಂದರೆ (ಮಿತಿಯಿಲ್ಲದೆ ಬೇಕಾದದ್ದನ್ನು ತಿಂದು,  ವ್ಯಾಯಾಮವಿಲ್ಲದ ಆರಾಮ ಜೀವನ ನಡೆಸುವಂತಿಲ್ಲ) ನಿಮ್ಮ ಮನ ಬಂದಂತೆ ಗಾಡಿ ಓಡಿಸು ವಂತಿಲ್ಲ. ಇನ್ನೂ ಹಳದಿ ದೀಪ ಉರಿಯುತ್ತಿರುವುದರಿಂದ (ಮಿತ ಆಹಾರದೊಂದಿಗೆ,  ನಿಯಮಿತ ವ್ಯಾಯಾಮದ ಜೀವನ) ನಿರ್ಬಂಽತ ಸಮಯದಲ್ಲಿ ಸಿಗ್ನಲ್ ದಾಟಬೇಕು. ಹೀಗೆ ಮಾಡದಿದ್ದರೆ ನಿಮ್ಮ ನಾಗಾಲೋಟದ (ಮನಸೋ ಇಚ್ಛೆಯ ಜೀವನ)  ಓಟಕ್ಕೆ ಕೆಂಪು ದೀಪದ ಬ್ರೇಕ್ ಬೀಳುತ್ತದೆ.

ಪ್ರಶ್ನೆ: ಅಂದರೆ ಪ್ರಿ ಡಯಾಬಿಟಿಸ್ ಗಂಭೀರ ಸಮಸ್ಯೆಯೇ?

ಡಾ.ಕಾರ್ತಿಕ್ ಉಡುಪ: ಇದು ಗಂಭೀರ ಸಮಸ್ಯೆಯ ಸೂಚನೆ ಎಂದು ಹೇಳಬಹುದು. ಪ್ರಿ ಡಯಾಬಿಟಿಕ್ ಎಂದರೆ ನಿಮ್ಮ ದೇಹದ ಇನ್ಸುಲಿನ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದರ್ಥ. ಇದು ಈಗೀಗ ಹನಿ ಹನಿಯಾಗಿ ಸೋರುತ್ತಿರುವ ಮನೆಯ  ಮಹಡಿಯ ಥರ.  ಈಗಲೇ ಸರಿ ಮಾಡಿಕೊಂಡರೆ, ಮನೆತುಂಬ ನೀರು ತುಂಬಲ್ಲ, ಮಹಡಿ ಕುಸಿದು ಬೀಳೋಲ್ಲ!

ಪ್ರಶ್ನೆ: ಹಾಗಾದರೆ ನನಗೆ ಪ್ರಿ-ಡಯಾಬಿಟಿಸ್ ಬರುವ ಸಾಧ್ಯತೆ ಇದೆಯೇ?

ಡಾ.ಕಾರ್ತಿಕ್ ಉಡುಪ: ಪ್ರಿ ಡಯಾಬಿಟಿಸ್ ಅಪಾಯದ ಲಕ್ಷಣಗಳನ್ನು ನಾವೇ ನೋಡಿಕೊಳ್ಳಬಹುದು.  ನಮ್ಮ ದೇಹ ಒಂದು ತೋಟ ಇದ್ದಂತೆ. ನೀವು ಎಷ್ಟೇ ಉಳುಮೆ ಮಾಡಿದರೂ ತೋಟದ ಮಣ್ಣಿನಲ್ಲೇ ಕೆಲವು ಕಳೆ ಬರುವ ಗುಣ ಇರುತ್ತದೆ. ಅಂತೆಯೇ ನಿಮ್ಮ ವಂಶವಾಹಿನಿಯಲ್ಲೇ ಡಯಾಬಿಟಿಸ್‌ನ ಅಪಾಯ ಇರಬಹುದು. ಹತ್ತಿರದ ಸಂಬಂಧಿಕರಲ್ಲಿ ಯಾರಿಗಾದರೂ ಒಬ್ಬರಿಗೆ ಸಕ್ಕರೆ ಕಾಯಿಲೆ ಇರಬಹುದು. ಅದರಿಂದ ನೀವು ಪ್ರಿ ಡಯಾಬಿಟಿಸ್‌ಗೆಒಳಗಾಗುವ ಸಾಧ್ಯತೆ ಇರುತ್ತದೆ. ಯಾರು ತುಂಬಾ ದಪ್ಪವಿದ್ದು, ಕತ್ತು, ಕಂಕುಳು, ಸೊಂಟಗಳಲ್ಲಿ ಕಪ್ಪು ಕಲೆಗಳಂತೆ ಇರುವುದು ಡಯಾಬಿಟಿಸ್ ಮುನ್ಸೂಚನೆ ಇರುತ್ತದೆ. ದಿನವೆಲ್ಲಾ ಕುಳಿತಲ್ಲೇ ಕೆಲಸ ಮಾಡುವವರು,  ದಿನವೊಂದರಲ್ಲಿ ೫,೦೦೦ ಹೆಜ್ಜೆಯನ್ನೂ ಹಾಕದೇ ಇರುವವರು, ಮನಸ್ಸಿಗೆ ತೋಚಿದ್ದನ್ನು ಹಸಿವಿಲ್ಲದಿದ್ದರೂ ಆಲೋಚಿಸದೆ ತಿನ್ನುವ ಗುಣವಿರುವವರು… ಇತ್ಯಾದಿ ಎಲ್ಲರಿಗೂ ಪ್ರಿ ಡಯಾಬಿಟಿಸ್‌ನ ಅಪಾಯವಿದೆ. ಮಧುಮೇಹ ಟೆಸ್ಟ್ ಮಾಡಿಸಿ, ಅಳತೆ ಮಾಡಿ ನೋಡುವ ಮೊದಲು, ನಿಮ್ಮಲ್ಲಿಯೇ ಕೆಲವು ಪ್ರಶ್ನೆ ಹಾಕಿಕೊಂಡು ಮಧುಮೇಹದ ಅಪಾಯ ಇದೆಯೇ ತಿಳಿದುಕೊಳ್ಳಿ.

೧. ನಿಮ್ಮ ಆಹಾರ ಸಮತೋಲಿತವಾಗಿದೆಯೇ? ಅಂದರೆ, ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿ,  ಕಾಳುಗಳು, ಅತ್ಯಾಗತ್ಯ ಕೊಬ್ಬು, ಇದೆಯೇ? ನೀವು ತಿನ್ನುವ ಆಹಾರದಲ್ಲಿ ಸಿಹಿ ಎಷ್ಟಿದೆ? ಇಲ್ಲವಾದಲ್ಲಿ ನಿಮಗೆ ಮಧುಮೇಹ ಬರುವ ಅಪಾಯ ಇದೆ!

೨. ನಿಮ್ಮ ಆಹಾರದಲ್ಲಿ, ಫಾಸ್ಟ್ ಫುಡ್, ಬೇಕರಿ ಪದಾರ್ಥ ಎಷ್ಟಿದೆ?  (ನೂಡಲ್ಸ್, – ಫ್ರೈಡ್‌ರೈ ಸ್, ಮಂಚೂರಿ,  ಮಸಾಲೆ ಪೂರಿ, ಪಫ್, ಚಿಪ್ಸ್,  ಮಿಕ್ಚರ್). ವಾರಕ್ಕೆ ಎರಡು ಬಾರಿ ತಿನ್ನುತೀರಿ ಅಂದ್ರೆ, ನಿಮಗೆ ಮಧುಮೇಹದ ಅಪಾಯ ಇದೆ!

೩. ನೀವು ಮದ್ಯ, ಸೋಡಾ, ಪೆಪ್ಸಿ,  ಕೋಲಾ ಸೇವನೆ ಮಾಡುತಿದ್ದೀರಾ?  ವಾರಕ್ಕೆ ಒಂದೆರಡು ಬಾರಿಯಾದರೂ ಈ ಪದಾರ್ಥಗಳನ್ನು ಬಳಸುವ ಹವ್ಯಾಸ ನಿಮಗಿದ್ದರೆ,  ನಿಮಗೆ ಮಧುಮೇಹದ ಅಪಾಯ ಇದೆ!

೩. ದಿನನಿತ್ಯ ಯಾವುದಾದರೂ ವ್ಯಾಯಮ, ಆಟೋಟಗಳಲ್ಲಿ ತೊಡಗಿದ್ದೀರ?  ಇಲ್ಲವಾದಲ್ಲಿ, ನಿಮಗೆ ಮಧುಮೇಹದ ಅಪಾಯ ಇದೆ!

೪. ನಿಮ್ಮ ತೂಕ ನಿಮ್ಮ ಎತ್ತರಕ್ಕನುಗುಣವಾಗಿ ಇದೆಯೇ?  (ನಿಮ್ಮ ಆರೋಗ್ಯಕರ ತೂಕ= ನಿಮ್ಮ ಎತ್ತರ ಸೆಂಟಿ ಮೀಟರ್‌ನಲ್ಲಿ-೧೦೦) ಇಲ್ಲವಾದಲ್ಲಿ, ನಿಮಗೆ ಮಧುಮೇಹದ ಅಪಾಯ ಇದೆ!

ಪ್ರಶ್ನೆ: ಪ್ರಿ ಡಯಾಬಿಟಿಸ್‌ನಿಂದ ಡಯಾಬಿಟಿಸ್‌ಗೆ ತಲುಪುವುದಕ್ಕೆ ಎಷ್ಟು ಸಮಯ ಹಿಡಿಯಬಹುದು?

ಡಾ.ಕಾರ್ತಿಕ್ ಉಡುಪ: ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಯನ್ನೂ ಮಾಡದಿದ್ದಲ್ಲಿ,  ಪ್ರಿ-ಡಯಾಬಿಟಿಸ್ ಇರುವ ಶೇ.೧೦ರಿಂದ ೧೫ ಮಂದಿ ಪ್ರತಿವರ್ಷ ಡಯಾಬಿಟಿಕ್ ಆಗಿ ಬಡ್ತಿ ಹೊಂದಿರುತ್ತಾರೆ!  ಅವರಿಗೆ ಔಷಧಿಗಳನ್ನು ಕೊಡಬೇಕಾಗುತ್ತದೆ.

ಪ್ರಶ್ನೆ: ಹಾಗಾದರೆ ಇದರಿಂದ ವಾಪಸ್ ಆಗೋದಕ್ಕೆ ಆಗುವುದಿಲ್ಲವೇ?

ಡಾ.ಕಾರ್ತಿಕ್ ಉಡುಪ: ಖಂಡಿತಾ ಆಗುತ್ತೆ; ಇದು ಸಾಧ್ಯ. ಅದು ಹೇಗೆಂದರೆ ಕವಲುದಾರಿಯಲ್ಲಿ ಸರಿದಾರಿ ಹಿಡಿಯುವಂತೆ. ತೂಕ ಕಡಿಮೆ ಮಾಡಿಕೊಳ್ಳಿ. ಅಂದರೆ ನಿಮ್ಮ ದೇಹದ ಶೇ.೧೦ರಷ್ಟು ತೂಕ ಇಳಿಸಿ, ಪ್ರತಿ ದಿನ ೭,೫೦೦-೧೦,೦೦೦ ಹೆಜ್ಜೆ ಹಾಕಿ. ಮನೆ ಊಟ ಮಾಡಿ…  ನೋಡಿ!

ಪ್ರಶ್ನೆ: ಅದೇನದು ಜೀವನ ಶೈಲಿ ಎಂದರೇನು ಬಿಡಿಸಿ ಹೇಳಿ ಸರ್?

ಡಾ.ಕಾರ್ತಿಕ್ ಉಡುಪ: ಅಂದರೆ ಆಹಾರ ಪದ್ಧತಿ:  ಹಿಟ್ಟಿಗಿಂತ, ಇಡೀ ಧಾನ್ಯಗಳು ಮೇಲು. ಇದನ್ನು ತಿಳಿಯಿರಿ.  ಯಾವುದು ಸಿಹಿಯೋ, ಅದನ್ನು ಬಿಡಿ.  ವ್ಯಾಯಾಮ: ಪ್ರತಿದಿನ ಕನಿಷ್ಠ ಪಕ್ಷ ೪೫ ನಿಮಿಷ ನಡೆದಾಡಿ. ವ್ಯಾಯಾಮ ಅಂದರೆ ಮೈಯಿಂದ ಸಕ್ಕರೆಯನ್ನು ಗುಡಿಸುವ ಪೊರಕೆ ಎಂದು ತಿಳಿಯಿರಿ.

ಪ್ರಶ್ನೆ: ಹಾಗಾದರೆ ನಾವು ಎಲ್ಲ ಸಕ್ಕರೆ ಪದಾರ್ಥಗಳನ್ನು ಸೇವಿಸುವುದನ್ನು ಬಿಡಬೇಕೆ?

ಡಾ.ಕಾರ್ತಿಕ್ ಉಡುಪ: ಇಲ್ಲ. ಆದರೆ,  ಒಗ್ಗರಣೆಯಷ್ಟಿರಬೇಕಾದ ಸಿಹಿ, ಊಟವಾಗಬಾರದು ಅಷ್ಟೇ. ಮನೆ ಊಟ, ಸಮತೋಲಿತ ಆಹಾರ ತಿನ್ನಿ. ಯಾವ ಆಹಾರ ಮೊದಲೇ ಪ್ಯಾಕ್ ಆಗಿದೆಯೋ ಅದನ್ನು ತಿನ್ನಬೇಡಿ. ಯಾವ ಪದಾರ್ಥ ತಿನ್ನಲು ಸಿಹಿ ಇದೆಯೋ ಅದನ್ನು ಬಿಡಿ. ಯಾವ ಪದಾರ್ಥದಲ್ಲಿ ಶರ್ಕರ ಪಿಷ್ಟ (ಕಾರ್ಬೋಹೈಡ್ರೇಟ್) ಜಾಸ್ತಿ ಇದೆಯೋ, ಅದನ್ನು ಕಡಿಮೆ ಉಪಯೋಗಿಸಿ.

೧. ಎಲ್ಲ್ಲ ದವಸಧಾನ್ಯಗಳಲ್ಲೂ ಶೇ.೩೦-೪೦ ಶರ್ಕರ ಪಿಷ್ಟ ಇದ್ದೇ ಇದೆ. (ಅಕ್ಕಿ, ಗೋಧಿ, ರಾಗಿ).

೨. ಬೆಲ್ಲ = ಸಕ್ಕರೆ

೩. ಬಿಳಿ ಎಂದರೆ ಪಿಷ್ಟ!

೪. ಪನ್ನೀರ್‌ನಲ್ಲಿ ಶೇ.೫-೧೦ ಪಿಷ್ಟ ಇದೆ ಅಷ್ಟೇ!

ಸೋಯಾ ಪನ್ನೀರ್ (ಟೋಫು) ನಲ್ಲಂತೂ ಪಿಷ್ಟವೇ ಇಲ್ಲ.

೫. ಮೊಟ್ಟೆ, ಮಾಂಸಾಹಾರದಲ್ಲಂತೂ ಶರ್ಕರ ಪಿಷ್ಟ

ಇಲ್ಲವೇಇಲ್ಲ!!

ಪ್ರಶ್ನೆ: ನನಗೆ ಪ್ರಿ-ಡಯಾಬಿಟಿಸ್ ಇದ್ದಲ್ಲಿ, ಔಷಧಿ ತೆಗೆದು ಕೊಳ್ಳಬೇಕೆ?

ಡಾ.ಕಾರ್ತಿಕ್ ಉಡುಪ: ಕೆಲವೊಮ್ಮೆ, ಪ್ರಿ ಡಯಾಬಿಟಿಸ್ ಜೊತೆಗೆ ಬೇರೆ ಆರೋಗ್ಯದ ಸಮಸ್ಯೆಗಳಿದ್ದಲ್ಲಿ, (ಅಂದರೆ, ರಕ್ತದೊತ್ತಡ, ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ ಇತ್ಯಾದಿ…) ಚಿಕಿತ್ಸೆ ಬೇಕಾಗಬಹುದು. ಆದರೆ, ಔಷಧಿಗಳು,  ಊರುಗೋಲಿನಂತೆ. ನಿಜವಾದ ಚಿಕಿತ್ಸೆ ‘ಜೀವನಶೈಲಿಯ ಸುಧಾರಣೆ’ಯೆಂದು ಮನಗಾಣಬೇಕು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ| ಮಾವನಿಂದ ದೈಹಿಕ ಕಿರುಕುಳ ಆರೋಪ: ಸೊಸೆ ಆತ್ಮಹತ್ಯೆ?

ಕೊಳ್ಳೇಗಾಲ: ಮಾವನಿಂದ ದೈಹಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ…

7 mins ago

ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌: ಸರ್ಕಾರಿ ವಾಹನದಲ್ಲೇ ಚಿನ್ನ ಸಾಗಾಟ?

ಬೆಂಗಳೂರು: ನಟಿ ರನ್ಯಾರಾವ್‌ ಅವರನ್ನು ಗೋಲ್ಟ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ತನಿಖೆಯಲ್ಲಿ ದುಬೈನಿಂದ ಅಕ್ರಮವಾಗಿ ತಂದ…

9 mins ago

ಎಚ್.ಡಿ.ಕೋಟೆ: ಜಿಂಕೆ ಬೇಟೆಯಾಡಿದ ಹುಲಿ

ಎಚ್.ಡಿ.ಕೋಟೆ: ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವ ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ವೇಳೆ…

24 mins ago

ಅಪಘಾತದಲ್ಲಿ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ: ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್‌

ದಾವಣಗೆರೆ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿಧಾನಸಭೆ ಉಪಸ್ಪೀಕರ್‌ ರುದ್ರಪ್ಪ ಲಮಾಣಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು…

53 mins ago

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಪ್ರಮಾಣ ವಚನ ಸ್ವೀಕಾರ

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದಕ್ಕೂ ಮೊದಲು ಮಾರ್ಕ್‌ ಕಾರ್ನಿ ಬ್ಯಾಂಕ್‌…

1 hour ago

ಬಹುಭಾಷಾ ಪಂಡಿತ ಪಂಚಾಕ್ಷರಿ ಹಿರೇಮಠ ನಿಧನ

ಕೊಪ್ಪಳ: ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಗಾರ ಹಾಗೂ ಬಹುಭಾಷಾ ಪಂಡಿತ ಡಾ.ಪಂಚಾಕ್ಷರಿ ಹಿರೇಮಠ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.…

1 hour ago