ಸಾವೋ ಪಾಲೊ (ಬ್ರೆಜಿಲ್) : ದೇಶದಾದ್ಯಂತ ಸಾಕಷ್ಟು ಆತಂಕವನ್ನು ಉಂಟು ಮಾಡುತ್ತಿರುವ ಮಂಕಿಪಾಕ್ಸ್ ವೈರಾಣುವಿನ ಮೊದಲ ಸಾವು ಬ್ರೆಜಿಲ್ ದೇಶದಲ್ಲಿ ವರದಿಯಾಗಿದೆ.
ಸುಮಾರು 41 ವರ್ಷದ ವ್ಯಕ್ತಿಯೊಬ್ಬರು ಮಂಕಿ ಪಾಕ್ಸ್ ರೋಗಲಕ್ಷಣಗಳು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಆದರೆ ಮೃತ ವ್ಯಕ್ತಿ ಈ ಮೊದಲು ಕ್ಯಾನ್ಸರ್ ಮತ್ತು ಪ್ರತಿ ರಕ್ಷಣೆಯ ಕ್ಷೀಣತೆಯಿಂದ ಬಳಲುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಇದೀಗ ವಿಶ್ವದಾದ್ಯಂತ ಮಂಕಿ ಪಾಕ್ಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ.
ಈ ಕುರಿತು ಬ್ರೆಜಿಲ್ ನ ಆರೋಗ್ಯ ಕಾರ್ಯದರ್ಶಿ ಫ್ಯಾಬಿಯೊ ಬ್ಯಾಚೆರೆಟ್ಟಿ ಅವರು ಮಂಕಿ ಪಾಕ್ಸ್ ಸೋಂಕು ಹರಡುವ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು. ಆದರೆ ಇತ್ತಾ ಬ್ರೆಜಿನಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಮಂದಿ ಮಂಕಿ ಪಾಕ್ಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಂಕಿ ಪಾಕ್ಸ್ ಸೋಂಕಿನ ಕುರಿತು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಣೆ ಮಾಡಿದೆ. ವಿಶ್ವದಾದ್ಯಂತ ಒಟ್ಟು 18 ಸಾವಿರಕ್ಕೂ ಅಧಿಕ ಮಂದಿ ಮಂಕಿಪಾಂಕ್ಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.