ಬೇಕರಿ ಮಾಲೀಕನಿಂದ ಲಂಚ ಕೇಳಿದ ಆರೋಗ್ಯಾಧಿಕಾರಿ ಆಡಿಯೊ ವೈರಲ್‌

ಬೆಂಗಳೂರು: ಲಂಚಕ್ಕಾಗಿ ಬೇಕರಿ ಮಾಲೀಕನಿಂದ ಆರೋಗ್ಯಾಧಿಕಾರಿಯೊಬ್ಬರು ಬೇಡಿಕೆ ಇಟ್ಟಿರುವ ಆಡಿಯೊ ವೈರಲ್‌ ಆಗಿದೆ.

ಬೆಂಗಳೂರು ದಕ್ಷಿಣ, ಜಯನಗರ ವಿಧಾನಸಭಾ ಕ್ಷೇತ್ರದ ಆರೋಗ್ಯ ನಿರೀಕ್ಷಕ ರಾಮಚಂದ್ರರ ವಿರುದ್ಧ ಕ್ರಮಕ್ಕೆ ದೂರು ದಾಖಲಿಸಲಾಗಿದೆ.

ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕಿ ಸೌಮ್ಯರೆಡ್ಡಿ ಅವರು ಕರ್ನಾಟಕ ಲೋಕಯುಕ್ತಕ್ಕೆ ಪತ್ರ ಬರೆದಿದ್ದಾರೆ.

ಬೇಕರಿ ಮಾಲೀಕ ಕರೆ ಮಾಡಿ ಅಧಿಕಾರಿಯಲ್ಲಿ ಲೈಸೆನ್ಸ್‌ಗಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಮಾತನಾಡಿದ ಅಧಿಕಾರಿ, ʻಎರಡು-ಮೂರು ಸಾವಿರಕ್ಕೆ ಯಾರು ಮಾಡಿಕೊಡ್ತಾರೆ. ನಾನೊಬ್ಬನೇ ಅಲ್ಲ, ಮೂರು ಜನರ ಹತ್ತಿರ ಫೈಲ್‌ ತೆಗೆದುಕೊಂಡು ಹೋಗಬೇಕು. ಏನಂತ ಹೋಗಲಿ ನಾನುʼ ಎಂದು ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿಯು ಬೇಕರಿ ಮಾಲೀಕನಿಂದ ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಆಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಡಿಯೊ ಆಧಾರದ ಮೇಲೆ ಕ್ರಮ ಕೈಗೊಳ್ಳಿ ಎಂದು ಶಾಸಕಿ ಸೌಮ್ಯರೆಡ್ಡಿ ಆಗ್ರಹಿಸಿದ್ದಾರೆ.