‘ಇಂತಹವರ ವಿರುದ್ಧ ಸಿಡಿಯೋಣ’: ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ

ಬೆಂಗಳೂರು: ‘ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ’.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ, ‘ಕಾರ್ಯಕರ್ತ ಬಂಧುಗಳೇ, ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ’ ಎಂದಿದ್ದಾರೆ.

ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಕೋವಿಡ್ ಕಾಲದಲ್ಲಿ ಜೆಡಿಎಸ್ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂದು ಉಲ್ಲೇಖಿಸಿದ್ದಾರೆ.

 

× Chat with us