ಟುಸ್ಸೆನ್ನುತ್ತಿರುವ ‘ಜನಸಂಖ್ಯಾ ಬಾಂಬ್’ ಸಿದ್ಧಾಂತ


ಶೇಷಾದ್ರಿ ಗಂಜೂರು
seshadri.ganjur@gmail.com

‘‘ಸೆಖೆ, ಗಬ್ಬು ನಾತ… ರಸ್ತೆಗಳಲ್ಲಿ ಎಲ್ಲೆಲ್ಲೂ ಜನ. ಆಹಾರ ಸೇವಿಸುತ್ತಿರುವವರು. ಹೇಸಿಗೆ ಮಾಡುತ್ತಿರುವವರು. ನಿದ್ರಿಸುತ್ತಿರುವವರು. ಯಾರನ್ನೋ ಭೇಟಿ ಮಾಡುತ್ತಿರುವವರು. ಕಿರಿಚುತ್ತಾ ಕಚ್ಚಾಡುತ್ತಿರುವವರು. ಭಿಕ್ಷೆ ಬೇಡುತ್ತಿರುವವರು… ಒಟ್ಟಿನಲ್ಲಿ ಜನ, ಜನ, ಜನ’’. ಇದು, ಡಾ.ಪಾಲ್ ಎ ಹರ್ಲಿಕ್ ಎಂಬ ಅಮೆರಿಕನ್ ವಿಜ್ಞಾನಿ 1968ರಲ್ಲಿ ಬರೆದ ‘‘ದ ಪಾಪ್ಯುಲೇಷನ್ ಬಾಂಬ್’’ ಎಂಬ ಪುಸ್ತಕದ ಮೊದಲ ಅಧ್ಯಾಯದ ಮೊದಲ ಪುಟದಲ್ಲಿ ಅಂದಿನ ದೆಹಲಿಯ ರಸ್ತೆಗಳನ್ನು ಚಿತ್ರಿಸುವ ಪರಿ. ಜನಸಂಖ್ಯಾ ‘‘ಸ್ಛೋಟ’’ದಿಂದಾಗಿ, ಇಸವಿ 2000ದ ಹೊತ್ತಿಗೆ ಭೂಮಂಡಲದ ಒಟ್ಟು ಜನಸಂಖ್ಯೆ 2400 ಕೋಟಿಯನ್ನೂ ಮೀರಿ, ಹಿಂದೆಂದೂ ಕಾಣದ ಬರ, ಕಿತ್ತು ತಿನ್ನುವ ಬಡತನ, ಕುಸಿದು ಬೀಳುವ ನೈತಿಕತೆ, ನಿಸರ್ಗ ನಾಶಗಳಿಂದಾಗಿ ಇಡೀ ಮಾನವ ಸಮಾಜವೇ ಅಧಃಪತನವಾಗುವ ಭೀಕರ ಭವಿಷ್ಯವನ್ನು ಆ ಪುಸ್ತಕ ಬಿಂಬಿಸುತ್ತದೆ.

ಇಸವಿ 2000 ಮುಗಿದು, ಈಗಾಗಲೇ, ಎರಡು ದಶಕಗಳು ಮುಗಿದಿವೆ. ಡಾ.ಎ ಹರ್ಲಿಕ್‌ರ ‘‘ಪಾಪ್ಯುಲೇಷನ್ ಬಾಂಬ್’’, ಸಿಡಿಯುವುದರ ಬದಲು ಟುಸ್ಸೆಂದಿದೆ. ಜಗತ್ತಿನ ಅರ್ಧಕ್ಕೂ ಮೇಲ್ಪಟ್ಟು ಹೆಚ್ಚು ರಾಷ್ಟ್ರಗಳು, ಇಂದು ಜನಸಂಖ್ಯಾ ಸ್ಛೋಟದ ಬದಲು, ಜನಸಂಖ್ಯೆಯ ಕುಸಿತದ ಪರಿಣಾಮಗಳನ್ನು ಎದುರಿಸುತ್ತಿವೆ. ಜಾಗತಿಕ ಜನಸಂಖ್ಯೆ, 2400 ಕೋಟಿ ತಲುಪುವುದಿರಲಿ, ಅದರ ಮೂರರ ಒಂದು ಭಾಗವಾದ 800 ಕೋಟಿಯನ್ನೂ ಮುಟ್ಟಿಲ್ಲ. 1970ರ ದಶಕದಲ್ಲಿ, ಬಡ ರಾಷ್ಟ್ರಗಳಲ್ಲಿ, ಜನಸಂಖ್ಯೆಯ ಅರ್ಧದಷ್ಟು ಮಂದಿ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದರೆ, ಇಂದು, ಈ ರಾಷ್ಟ್ರಗಳಲ್ಲಿ ಸುಮಾರು ಶೇ.9ರಷ್ಟು ಮಂದಿ ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದಾರೆ. (ಈ ಕಾಲದಲ್ಲೂ ಶೇ.9ರಷ್ಟು ಮಂದಿ ಹಸಿವಿಗೀಡಾಗುವುದು ಅಕ್ಷಮ್ಯವೆನ್ನುವುದರಲ್ಲಿ ಎರಡು ಮಾತಿಲ್ಲ) ತಮ್ಮ ದೇಶಗಳಲ್ಲಿನ ಹಸಿವಿನ ತಳಮಳವನ್ನು ನೀಗಿಸಲು, ಸಿರಿವಂತ ದೇಶಗಳಿಂದ ಆಹಾರ ಧಾನ್ಯಗಳ ನೆರವನ್ನು ಪಡೆಯುತ್ತಿದ್ದ ಭಾರತವೂ ಸೇರಿದಂತೆ ಎಷ್ಟೋ ರಾಷ್ಟ್ರಗಳು ಇಂದು ಆಹಾರ ಧಾನ್ಯಗಳ ವಿಷಯದಲ್ಲಿ ಸ್ವಯಂ ಸಮೃದ್ಧವಾಗಿವೆ. ಅಮಾರ್ತ್ಯ ಸೆನ್, ತಮ್ಮ ಅಧ್ಯಯನಗಳ ಮೂಲಕ ತೋರಿಸಿಕೊಡುವಂತೆ, ಬರ ಮತ್ತು ಹಸಿವುಗಳು, ವಿತರಣೆ ಮತ್ತು ಆರ್ಥಿಕ ಅಸಮಾನತೆಯ ಫಲಿತಗಳೇ ಹೊರತು ಜನಸಂಖ್ಯೆಯ ಹೆಚ್ಚಳದಿಂದಾದ ಸಮಸ್ಯೆಗಳಲ್ಲ.

ಜನಸಂಖ್ಯಾ ಕುಸಿತದಿಂದ ಇಂದು ಎಷ್ಟೋ ರಾಷ್ಟ್ರಗಳು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ. ನಿವೃತ್ತರಿಗೆ ನೀಡುವ ಪಿಂಚಣಿಯಾಗಲಿ ಅಥವಾ ಸರ್ಕಾರದ ಯಾವುದೇ ವೆಲ್‌ಫೇರ್ ಸ್ಕೀಮುಗಳಾಗಲಿ, ಕಾರ್ಯನಿರತವಾಗಿರಬೇಕೆಂದರೆ, ಬೊಕ್ಕಸಕ್ಕೆ ಬರುತ್ತಿರುವ ಹಣದ ಮೊತ್ತ ಅದರಿಂದ ಹೊರ ಹರಿಯುತ್ತಿರುವ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿರಬೇಕು. ಇದು, ಯುವಜನತೆಯ ಮತ್ತು ವೃದ್ಧರ ಸಂಖ್ಯೆಯ ಅನುಪಾತದ ಮೇಲೆ ಅವಲಂಬಿತವಾಗಿದೆ. ಕೆಲವೇ ದಶಕಗಳಲ್ಲಿ ಈ ಅನುಪಾತದಲ್ಲಿ ಏರುಪೇರಾದರೆ, ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಏರುಪೇರಾಗುವುದು ನಿಶ್ಚಿತ. ಇದು ಕೇವಲ ಅರ್ಥಿಕತೆಯ ವಿಚಾರ ಮಾತ್ರವಲ್ಲ; ವೃದ್ಧರನ್ನು ನೋಡಿಕೊಳ್ಳಲು ಹಣವಿದ್ದರಷ್ಟೇ ಸಾಲದು, ಯುವಜನರೂ ಬೇಕು. ಇಂದು, ತನ್ನ ದೇಶದಲ್ಲಿನ ವೃದ್ಧರನ್ನು ನೋಡಿಕೊಳ್ಳಲು ಸಾಕಷ್ಟು ಯುವಜನರು ಇಲ್ಲದ್ದರಿಂದ, ಜಪಾನ್, ರೋಬೋಟಿಕ್ಸ್ ಮೊರೆ ಹೊಗುವ ವಿಚಾರ ಮಾಡುತ್ತಿದ್ದರೆ, ಸಂತಾನ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದ ಚೈನಾ, ಈಗ, ಮಕ್ಕಳು ಮಾಡಿಕೊಳ್ಳುವಂತೆ ತನ್ನ ಯುವಜನರನ್ನು ಅಂಗಲಾಚುತ್ತಿದೆ. ಅಮೆರಿಕದಲ್ಲಿ, ಅಂತಹ ಸಂದರ್ಭ ಇನ್ನೂ ಕಂಡು ಬರದಿದ್ದರೆ, ಅದಕ್ಕೆ ಮುಖ್ಯ ಕಾರಣ, ಭಾರತವೂ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಅಮೆರಿಕಕ್ಕೆ ವಲಸೆ ಹೋಗಿರುವ ಯುವ ಜನತೆ. ಉದಾಹರಣೆಗೆ, ಅಮೆರಿಕದ ಆರೋಗ್ಯ ವ್ಯವಸ್ಥೆಯ ಶೇ.15ಕ್ಕೂ ಹೆಚ್ಚು ಜನರು ವಿದೇಶಿ ಸಂಜಾತರು. ನ್ಯೂಯಾರ್ಕ್, ನ್ಯೂ ಜರ್ಸಿ, ಕ್ಯಾಲಿಫೋರ್ನಿಯಾಗಳಂತಹ ಹಲವು ರಾಜ್ಯಗಳಲ್ಲಿ ಇದು ಶೇ.30ಕ್ಕೂ ಹೆಚ್ಚು ಇದೆ.

***

ಜನಸಂಖ್ಯಾ ಬಾಹುಳ್ಯದಿಂದ ಬರ, ಬಡತನ, ಹಸಿವು ಇತ್ಯಾದಿಗಳು ಹೆಚ್ಚುವುದೆಂದು ಒಂದು ವಾದವಾದರೆ, ಜನಸಾಂದ್ರತೆಯ ಹೆಚ್ಚಳದಿಂದ ಸಾಮಾಜಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುತ್ತದೆಂಬ ಇನ್ನೊಂದು ವಾದವೂ ಇದೆ. 1960ರ ದಶಕದ ಆದಿಯಲ್ಲಿ, ಅಮೆರಿಕದ ವಿಜ್ಞಾನಿ ಜಾನ್ ಕ್ಯಾಲಹೂನ್ ತನ್ನ ಪ್ರೋಂಗಾಲಯದಲ್ಲಿ ಇಲಿಗಳಿಗಾಗಿ ಒಂದು ‘‘ಸ್ವರ್ಗ’’ವನ್ನು ನಿರ್ಮಿಸಿದ. ಅವನು ನಿರ್ಮಿಸಿದ 9 ಅಡಿ ಉದ್ದ, ಅಗಲ, ಎತ್ತರದ ಬೋನಿನಲ್ಲಿ, ಸುಮಾರು 3000 ಇಲಿಗಳಿಗೆ ಆರಾಮವಾಗಿ ಇರಲು ಜಾಗವಿತ್ತು. ಅವುಗಳಿಗೆ ಬೇಕಾದ ಆಹಾರ, ನೀರು ಒದಗಿಸುವ ವ್ಯವಸ್ಥೆಯೂ ಇತ್ತು. ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳಲು ಹವಾ ನಿಯಂತ್ರಣವೂ ಇತ್ತು. ಈ ‘‘ಸ್ವರ್ಗ’’ದಲ್ಲಿ, ಅವನು 4 ಗಂಡು ಮತ್ತು 4 ಹೆಣ್ಣು ಇಲಿಗಳನ್ನು ಬಿಟ್ಟ. ಐದು ತಿಂಗಳ ನಂತರ, ಅವುಗಳ ಸಂಖ್ಯೆ ಆರುನೂರನ್ನು ಮುಟ್ಟಿತು; ಸ್ವರ್ಗದಲ್ಲಿ ತಳಮಳ ಪ್ರಾರಂಭವಾಯಿತು; ಅಲ್ಲಿದ್ದ ಇಲಿಗಳು ಹಲವು ಗುಂಪುಗಳಾಗಿ ವಿಭಜನೆಗೊಂಡು ಕಚ್ಚಾಡಲು ಪ್ರಾರಂಭಿಸಿದವು. ಇಪ್ಪತ್ತು ತಿಂಗಳಾಗುವ ವೇಳೆಗೆ, ಅವುಗಳ ಒಟ್ಟು ಸಂಖ್ಯೆ 2200ನ್ನು ಮೀರಿತು. ಕೆಲವೇ ದಿನಗಳಲ್ಲಿ ಆ ‘‘ಸ್ವರ್ಗ’’ದ ಸಾಮಾಜಿಕ ವ್ಯವಸ್ಥೆೆುೀಂ ಸಂಪೂರ್ಣವಾಗಿ ಕುಸಿದು ಬಿದ್ದು, ಇಡೀ ಇಲಿಗಳ ಸಮೂಹ ನಾಶವಾಗಿ ಕ್ಯಾಲಹೂನ್‌ನ ಆ ಪ್ರೋಂಗ ಕೊನೆಗೊಂಡಿತು.

ಕ್ಯಾಲಹೂನ್‌ನ ಈ ಅಧ್ಯಯನ ಪ್ರಕಟವಾದ ನಂತರದಲ್ಲಿ, ಅವನ ಪ್ರೋಂಗದ ಶೋಧನೆಗಳನ್ನು ಮಾನವ ಸಮಾಜಕ್ಕೂ ಅಳವಡಿಸಿ, ಹೆಚ್ಚುತ್ತಿರುವ ಜನಸಾಂದ್ರತೆಯ ಬಗೆಗೆ ಅಪಾಯದ ಕರೆಗಂಟೆಗಳನ್ನೊತ್ತುವ ಹಲವಾರು ವಿಶ್ಲೇಷಣೆಗಳೂ ನಡೆದವು. ಆದರೆ, ತಜ್ಞರು ಹೇಳುವಂತೆ, ಇಲಿಗಳ ಸಾಮಾಜಿಕ ವ್ಯವಸ್ಥೆಯ ಪ್ರೋಂಗವನ್ನು ಮಾನವ ಸಮಾಜಕ್ಕೆ ಹೋಲಿಸುವುದು ನಿಜಕ್ಕೂ ಅಸಂಬದ್ಧ. ತಜ್ಞರ ಈ ಅಭಿಪ್ರಾಯವನ್ನು, ಇಂದಿನ ಜಾಗತಿಕ ವಾಸ್ತವವೂ ಪುಷ್ಟೀಕರಿಸುತ್ತಿದೆ. ಉದಾಹರಣೆಗೆ, ಭಾರತದ ಜನಸಾಂದ್ರತೆಯ ಇಪ್ಪತ್ತು ಪಟ್ಟು ಹೆಚ್ಚಿರುವ ಸಿಂಗಪುರದ ಸಾಮಾಜಿಕ ವ್ಯವಸ್ಥೆ ಕುಸಿದಿರುವ ಯಾವುದೇ ಕುರುಹೂ ಕಾಣುತ್ತಿಲ್ಲ.

***

ಡಾ.ಎ ಹರ್ಲಿಕ್‌ರ ‘‘ದ ಪಾಪ್ಯುಲೇಷನ್ ಬಾಂಬ್’’ ಪ್ರಕಟವಾದ ಐವತ್ತು ವರ್ಷಗಳ ನಂತರ, ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ‘‘ಜನಸಂಖ್ಯಾ ಸ್ಛೋಟ’’ದ ವಿಷಯವನ್ನು ಪ್ರಸ್ತಾಪಿಸಿ, ಸಂತಾನ ನಿಯಂತ್ರಣಕ್ಕೆ ಪೀಠಿಕೆ ಹಾಕಿದರು. ಅದರ ಫಲಶ್ರುತಿ ಎಂಬಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿನ ಜನಸಂಖ್ಯೆಯನ್ನು ನಿಯಂತ್ರಿಸಲು ಇತ್ತೀಚೆಗೆ ಮಸೂದೆೊಂಂದರ ಕರಡನ್ನು ಪ್ರಕಟಿಸಿದ್ದಾರೆ. ಅದರಿಂದ ಪ್ರೇರಿತರಾಗಿ, ನಮ್ಮ ರಾಜ್ಯದಲ್ಲೂ ಅಂತಹದೊಂದು ಮಸೂದೆೊಂಂದನ್ನು ಜಾರಿಗೆ ತರುವ ಚರ್ಚೆಗಳು ನಡೆದಿವೆ.

ಮೋದಿಯವರು ಹೇಳಿದಂತೆ ಭಾರತದಲ್ಲಿ ಜನಸಂಖ್ಯೆ ‘‘ಸ್ಛೋಟಿ’’ಸುತ್ತಿದೆೆಯೇ?! ವಾಸ್ತವ ಬೇರೆಯದನ್ನೇ ಹೇಳುತ್ತದೆ. 1981ರ ಸೆನ್ಸಸ್‌ನಿಂದ ಪ್ರತಿ ಸೆನ್ಸಸ್‌ನಲ್ಲಿಯೂ ಜನಸಂಖ್ಯೆಯ ಹೆಚ್ಚಳದಲ್ಲಿ ಗಮನಾರ್ಹ ಇಳಿತವೇ ಕಂಡು ಬರುತ್ತಿದೆ. 1991 ರಿಂದ 2001ರ ದಶಕದಲ್ಲಿ, ಭಾರತದ ಜನಸಂಖ್ಯೆ ಶೇ.21ರಷ್ಟು ಏರಿದ್ದರೆ, ಮೋದಿಯವರ ವಿತ್ತ ಮಂತ್ರಾಲಯದ ವರದಿೊಂಂದು ಹೇಳುವಂತೆ, ಈ ಏರಿಕೆ ಈಗ ಶೇ.12ಕ್ಕೆ ಇಳಿದಿದೆ ಮತ್ತು ಇಳಿಯುತ್ತಲೇ ಇದೆ. ಹಲವರಿಗೆ ಇದು ಆಶ್ಚರ್ಯವೆನ್ನಿಸಬಹುದು, ಇಂದು ಭಾರತದ ವಾರ್ಷಿಕ ಜನಸಂಖ್ಯಾ ಏರಿಕೆಯ ಮಟ್ಟ (ರೇಟ್), ಆಸ್ಟ್ರೇಲಿಯಾ, ಐರ್ಲೆಂಡ್‌ನಂತಹ ರಾಷ್ಟ್ರಗಳಿಗಿಂತ ಕೆಳಕ್ಕೆ ಬಿದ್ದಿದೆ. ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಫರ್ಟಿಲಿಟಿ ರೇಟ್ 2.1ಕ್ಕಿಂತ ಕೆಳಕ್ಕೆ ಹೋಗಿದೆ. (2.1ಕ್ಕಿಂತ ಕೆಳಗಿಳಿದಿದೆ ಎಂದರೆ, ಜನಸಂಖ್ಯೆ ಇಳಿಮುಖವಾಗುತ್ತಿದೆ ಎಂದರ್ಥ) ಕರ್ನಾಟಕದಲ್ಲಿ ಇದು 1.7ನ್ನು ಮುಟ್ಟಿದೆ. ನಗರಗಳಲ್ಲಿ ಜನ ಸಂಖ್ಯೆ ಬೆಳೆಯುತ್ತಿದ್ದರೂ, ಗ್ರಾಮೀಣ ಭಾಗಗಳು ತೀವ್ರ ಕುಸಿತವನ್ನು ಕಂಡಿವೆ. ಇದು ಅಲ್ಲಿನ ಆರ್ಥಿಕತೆಗೆ ಹೊಡೆತ ನೀಡಿರುವುದಲ್ಲದೆ, ಆ ಭಾಗಗಳಲ್ಲಿನ ಜನ ಜೀವನದ ಮೇಲೆ, ಅದರಲ್ಲೂ ವೃದ್ಧರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಆದರೆ, ಆರ್ಥಿಕ ಅಸಮಾನತೆ, ನಿರುದ್ಯೋಗ, ಸಾಮಾಜಿಕ ಸೌಲಭ್ಯಗಳ ವಿತರಣೆಯಲ್ಲಿನ ಲೋಪ-ದೋಷಗಳಂತಹ ಇಂದಿನ ಪೀಳಿಗೆಯ ಯುವಜನರ ಸಮಸ್ಯೆಗಳೆಡೆಗೆ ಗಮನ ಹರಿಸುವುದು ಬಿಟ್ಟು, ನಮ್ಮ ನಾಯಕರು, ಮುಂದಿನ ಪೀಳಿಗೆಯಲ್ಲಿ ಯುವಜನರ ಸಂಖ್ಯೆಯನ್ನು ಕಡಿಮೆ ಮಾಡುವುದು ಹೇಗೆಂಬ ಆಲೋಚನೆಯಲ್ಲಿಯೇ ಇದ್ದಾರೆ.

× Chat with us