ಕೋತಿಗಳ ಕೈಗೆ ಸಿಕ್ಕ ಪ್ರೀತಿಯ ಲೂನಾ

ಯಾವುದು ಮೊದಲು ಹೇಳಲಿ? ಈ ಲೂನಾ ಬಗ್ಗೆ ಬರೆಯಲಾ ಅಥವಾ ಇದಕ್ಕೆ ಬಂದಿರುವ ದುಸ್ಥಿತಿ ಬಗ್ಗೆ ಹೇಳಲಾ? ಮೊದಲು ಪತ್ರಿಕಾ ಸೇವೆ ಮಾಡಿದ ಲೂನಾ ಬಗ್ಗೆ ಹೇಳುವೆ. ಅ ಓಂ 1553 ನಂಬರಿನ ಈ ಲೂನಾ 1989-91 ಮೂರು ವರ್ಷ ನನ್ನ ಜೊತೆ ಆಂದೋಲನ ಕಚೇರಿಗೆ ಸೇವೆ ಸಲ್ಲಿಸಿದೆ. ಇದು ಕಾಣದ ಮೈಸೂರು ರಸ್ತೆಗಳಿಲ್ಲ, ವೃತ್ತಗಳಿಲ್ಲ, ಋತುಗಳಿಲ್ಲ. ಅನೇಕ ಬಾರಿ ರಂಗನತಿಟ್ಟು ಪಕ್ಷಿಗಳ ದರ್ಶನ ಮಾಡಿ, ಇತ್ತ ನಂಜನಗೂಡಿನ ಕಪಿಲಾ ನದಿ ಉಕ್ಕಿ ಹರಿದಾಗ ನೋಡಿ ಬೆರಗಾಗಿದೆ. ಲೆಕ್ಕವಿಲ್ಲದಷ್ಟು ಸಲ ಉಸಿರುಗಟ್ಟದೆ ಚಾಮುಂಡಿ ಬೆಟ್ಟ ಏರಿಳಿದಿದೆ.

ಮೈಸೂರಿನ ಬಂದ್ ಕಂಡಿದೆ, ಗಲಭೆ ನೋಡಿದೆ. ಆಗಿದ್ದ ಎಲ್ಲ ಸಂಚಾರ ಪೋಲಿಸ್ ಮಿತ್ರರಿಗೆ ದಿನಾ ಸಲಾಂ ಹೇಳಿದೆ. ಕೆಲಸ ನಿಮಿತ್ತ ಬೆಂಗಳೂರಿಗೆ ಹೊರಟ ತನ್ನ ಸಂಪಾದಕ ರಾಜಶೇಖರ ಕೋಟಿಯವರನ್ನು ಬೆಳ್ಳಂಬೆಳಿಗ್ಗೆ ಮೊದಲ ಬಸ್ಸಿಗೆ ಕೂರಿಸಲು ಬಸ್ ನಿಲ್ದಾಣಕ್ಕೆ ಅಟೋ ಕಾಯದೆ ಹಲವು ಬಾರಿ ಹೊತ್ತೊಯ್ದಿದೆ. ಇದರ ಸವಾರಿ ಮಾಡಿರುವ ಗಣ್ಯರ ಹೆಸರು ಹೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಅಷ್ಟು ದೊಡ್ಡದಿದೆ.
ಇಂತಹ ಅದ್ಭುತ ಚಾರಿತ್ರ್ಯ ಹೊಂದಿರುವ ಈ ಲೋಹದ ಕುದುರೆಗೆ ಯಾಕೆ ಈ ದುಸ್ಥಿತಿ ಬಂತು? ಈಗ ಓದಿ.
monkey-menance-on-luna

ಅಂದು ಸುಮಾರು ಬೆಳಿಗ್ಗೆ ಹನ್ನೊಂದೂವರೆಯ ಸಮಯ. ಆಂದೋಲನ ಕಚೇರಿಯ ೨೭೩೨೮ ನಂಬರಿಗೆ ಕರೆ ಬಂತು, ನಾನು ಫೋನ್ ಎತ್ತಿ ಆತ್ಮಾಭಿಮಾನದಿಂದ ‘ಹಲೋ ಆಂದೋಲನ’ ಅಂದೆ. ಆ ಕಡೆಯಿಂದ…‘ಏನೋ ಮಹಾ ಆಂದೋಲನ ಮಾಡುತ್ತೀರಾ, ನಿಮ್ ಆಫೀಸನ್ನ ಸುಟ್ಟು ಬಿಡುತ್ತೀವಿ, ಆಗ ಅನ್ನದಾನ ಮಾಡಿರಿ’ ಅಂತ ಆ ಕಡೆ ವ್ಯಕ್ತಿ ಹೇಳಿದ. ಅದಕ್ಕೆ ನಾನು ಯಾರು ಮಾತಾಡೋದು ಅಣ್ಣ ಅಂತ ಕೇಳಿದೆ ‘ಅಣ್ಣ ಅಲ್ಲ ಕೋತಿ ಮಾತಾಡೋದು’ ಅಂತ ಹೇಳಿ ಫೋನಿಟ್ಟ. ಯಾರೋ ‘ಮದ್ಯ’ ಪ್ರದೇಶದಿಂದ ಫೋನ್ ಮಾಡಿರಬೇಕೆಂದು ನಾನು ಸುಮ್ಮನಾದೆ. ಆದರೆ ಈ ರೀತಿಯ ಕರೆಗಳು ಪ್ರತಿ ಅರ್ಧ ತಾಸಿಗೊಮ್ಮೆ ಕಾಡಲು ಆರಂಭವಾಯಿತು. ‘ನಾನು ಕೋತಿ ಮಾತಾಡೋದು, ನಾವು ಕೋತಿಗಳು’ ಅಂತ ಕಚೇರಿ ಮೇಲೆ ಕಾಲ್-ದಾಳಿ ನಿಲ್ಲಲೇ ಇಲ್ಲ. ಫೋನ್ ಪಕ್ಕಕ್ಕೆ ಇಟ್ಟು ಸುಮ್ಮನಿರಲೂ ಆಗಲಿಲ್ಲ. ಮಾಡಿದ್ದರೆ ಸುದ್ದಿ-ಸಮಾಚಾರ ಕೊಡುವ ಒಳಕರೆಗಳಿಗೆ ಕುತ್ತು ಉಂಟಾಗುತ್ತಿತ್ತು. ಸುಮಾರು ೪ ಗಂಟೆ ವೇಳೆಗೆ ಕೋತಿಗಳು ವಿಶ್ರಾಂತಿಗೆ ಹೋದವು. ಆಗ ತಂತ್ರಜ್ಞಾನ ಇಂದಿನಂತೆ ಸುಧಾರಿಸಿರಲಿಲ್ಲ. ಪಬ್ಲಿಕ್ ಫೋನ್ ಬೂತಿನಿಂದ ಬಾಂಬ್ ಹುಸಿ ಕರೆಗಳು, ಅಗ್ನಿಶಾಮಕ ಕಂಟ್ರೋಲ್ ರೂಂಗೆ ಕಾಲ್ ಮಾಡಿ ತಪ್ಪು ಮಾಹಿತಿ ಕೊಡೋದು, ಮಧ್ಯರಾತ್ರಿ ಪೋಲಿಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿ ಲೋ ಪೋಲಿಸ್ ಮೊದಲು ವೀರಪ್ಪನ್ ಹಿಡೀರಿ ಅಂತ ಕೀಟಲೆ ಮಾಡೋದು ಸಾಮಾನ್ಯವಾಗಿತ್ತು.

ಅದೇ ದಿನ. ಸಂಜೆ. ಬೆಳಕು ತನ್ನ ಕೆಲಸ ಮುಗಿಸಿ ಕತ್ತಲು ಪಾಳಿಗೆ ಬಂದಿತ್ತು. ನಾನು ಕಂಪ್ಯೂಟರ್ ರೂಂನಲ್ಲಿ ಇದ್ದೆ. ಸುದ್ದಿ ಸಂಪಾದಕ ಹರೀಶ್ ಎಂದಿನಂತೆ ಕಚೇರಿಯ ಮುಂಭಾಗದಲ್ಲಿ ಇದ್ದರು. ಎರಡರ ಮಧ್ಯೆ ಮುದ್ರಣ ವಿಭಾಗವಿತ್ತು. ಧಿಡೀರನೆ ಗಾಜು ಒಡೆದ ಶಬ್ದ, ಜೋರಾಗಿ ಕಿಟಕಿ ಬಾಗಿಲು ಹಾಕಿ ತೆಗೆದ ಸದ್ದು, ಅಲ್ಲಿದ್ದ ವಸ್ತುಗಳನ್ನು ನೆಲಕ್ಕೆ ಅಪ್ಪಳಿಸುತ್ತಿದ್ದ ಗದ್ದಲ. ನಾನು ಇದ್ದ ರೂಮಿನಿಂದ ಮುಂಭಾಗಕ್ಕೆ ಎರಡು ಬಾಗಿಲು ತೆಗಿದು ಬರುವಷ್ಟರಲ್ಲಿ ಸದ್ದಡಗಿತ್ತು. ಮುಂಭಾಗದ ಕಚೇರಿ ಧ್ವಂಸವಾಗಿತ್ತು. ಫೋನ್ ಕಿತ್ತು ಹಾಕಲಾಗಿತ್ತು. ಕಿಟಕಿ ಗಾಜು ಪುಡಿಪುಡಿ. ಮೇಜುಗಳು ಪಲ್ಟಿ, ಕೋಟಿಯವರ ನೆಚ್ಚಿನ ಪಾಕೆಟ್ ರೆಡಿೋಂ ನೆಲಕಚ್ಚಿತ್ತು. ಹರೀಶ್ ಕಡೆ ನೋಡಿದೆ. ‘ಕೋತಿಗಳು ಬಂದಿದ್ದವು’ ಅಂದರು. ಕೋತಿಗಳು ಆಚೆ ಇದ್ದ ಈ ಲೂನಾ ಮತ್ತು ಸೈಕಲ್‌ಗಳ ಮೇಲೂ ಪ್ರಹಾರ ಮಾಡಿದ್ದವು.

ಈ ಕೋತಿಗಳಿಗೆ ಆಂದೋಲನ ಮೇಲೆ ಕೋಪ ಏಕೆ ಗೊತ್ತೆ? ಅಂದು ಬೆಳಗಿನ ಸಂಚಿಕೆಯ ಓದುಗರ ಪತ್ರ ವಿಭಾಗದಲ್ಲಿ ವಿದ್ಯಾರ್ಥಿನಿಯ ಪತ್ರವೊಂದು ಪ್ರಕಟವಾಗಿತ್ತು. ಸಾರಾಂಶ: ಕಾಲೇಜೊಂದರ ಪುರುಷರ ಹಾಸ್ಟೆಲ್ ಬಳಿ ಕೋತಿಗಳು ಇವೆ. ರಸ್ತೆಯಲ್ಲಿ ಓಡಾಡುವ ಮಹಿಳೆಯರ ಮೇಲೆ ಪೇಪರ್ ಚೂರು ಹಾಕುತ್ತವೆ, ವಿಚಿತ್ರ ಶಿಳ್ಳೆ ಹೊಡೆಯುತ್ತವೆ.

ಈ ಓದುಗರ ಪತ್ರ ಕೋತಿಗಳನ್ನು ಕೆರಳಿಸಿತ್ತು. ಮರುದಿನ ‘ಕೋತಿಗಳು ಮಾಡಿದ ದಾಂದಲೆ’ ಎಂದು ಸುದ್ದಿ-ಚಿತ್ರ ಹಾಕಿದೆವು. ಅವುಗಳು ಮತ್ತೆ ಈ ಕಡೆ ಸುಳಿಯಲಿಲ್ಲ.
kpnkpn@gmail.com

× Chat with us