ಕಡೆಬೋಳಿ ಬೆಟ್ಟ ಮತ್ತು ಕಾಡು ಕಣಜ


ಅನಿಲ್ ಹೊಸೂರು
anilkumarhosuru@gmail.com

ಆಳೆತ್ತರದ ಹುಲ್ಲು ಒಣಗಿದಂತೆ ನೆಲಕ್ಕೆ ಒರಗಿ ಹಾದಿಯುದ್ದಕ್ಕೂ ಹಾಸಿಗೆ ಹಾಸಿದಂತೆೆುೀಂ ಇತ್ತು. ಹತ್ತಿಯ ಹಾಸಿನ ಮೇಲೆ ಕಾಲಿಟ್ಟಷ್ಟೆ ಹಿತವಾಗಿತ್ತು. ಬರೋಬ್ಬರಿ ಆರೇಳು ಗಂಟೆ ನಡೆದು ಚಾರಣದ ಗುರಿ ಮುಟ್ಟಿದ್ದೆವು. ಬೆಟ್ಟದ ನೆತ್ತಿಯ ಮೇಲೆ ಸಾಗುತ್ತಿದ್ದಂತೆ ಒಂದರ ಮಗ್ಗುಲಿಗೆ ಒಂದು ಒತ್ತಿಕೊಂಡು ಮಲಗಿದಂತೆ ಕಾಣುವ ಬೆಟ್ಟಗಳು, ಬೆಟ್ಟಗಳ ಕಣಿವೆಗಳಲ್ಲೊ,ನೆತ್ತಿಯಲ್ಲೊ ಕಣ್ಣಿಗೆ ಬೀಳುತ್ತಿದ್ದ ಪುಟ್ಟ ಊರುಗಳು. ಬೆಟ್ಟಗಳ ಕಣಿವೆಯಲ್ಲಿ ಹಿಂಜಿದ ಹತ್ತಿಯ ರಾಶಿ ಸುರಿದಂತೆ ಉದ್ದಕ್ಕೂ ಹರಿಯುವ ನದಿ. ಎತ್ತರದ ಬಂಡೆಗಳ ಇಳುಕಲಿನಿಂದ ಸಣ್ಣಧಾರೆಗಳಾಗಿ ಕಾಡನೆಲಚುಂಬಿಸಲು ಹಾತೊರೆದು ಕೆಳಗಿಳಿವ ಜಲಪಾತಗಳು. ಅಲೆಅಲೆಯಾಗಿ ಕಾಣುವ ಎಪ್ಪತ್ತೇಳು ಮಲೆಗಳ ನೆತ್ತಿಯಲ್ಲಿ ನಿಂತಂತೆ ನಮ್ಮ ಖುಷಿಗೆ ಪಾರವೇ ಇಲ್ಲ. ಬೆಟ್ಟದ ತುದಿಯಲ್ಲಿದ್ದ ಪುಟ್ಟ ಗುಡಿಯ ವೀರೇಶ್ವರನಿಗೆ ಭಕ್ತಿಗಿಂತ ಹೆಚ್ಚಿನದಾಗಿ ಭಯದಿಂದ ನಮಿಸಿ, ಕ್ಷೇಮವಾಗಿ ‘ಊರು ತಲುಪಿಸಪ್ಪ ದೇವ್ರೆ’ ಅಂತ ಮನವಿ ಸಲ್ಲಿಸಿದ್ದಾಯ್ತು. ಬಾಳೆಹಣ್ಣು, ಬೆಲ್ಲ ಹಾಕಿ ಪಂಚಾಮೃತದ ಜೊತೆಗೆ ಕಟ್ಟಿಕೊಂಡು ಬಂದಿದ್ದ ಬುತ್ತಿ ಖಾಲಿಮಾಡಿ, ಮನಸೋ ಇಚ್ಛೆ ಸೆಲ್ಛಿ ಕ್ಲಿಕ್ಕಿಸುತ್ತಾ ವಾಪಸು ಹೊರಟೆವು.

ಮರಳುವಾಗ ಮತ್ತೊಂದು ಅನಾಹುತವಾಯ್ತು. ನಮ್ಮ ಲೇಖಕರ ಬಲಗಾಲಿಗೆ ದೊಡ್ಡದಾಗಿದ್ದ ಕಾಡುಕಡಜವೊಂದು ಕಚ್ಚಿ ಅದರ ವಿಷಯುಕ್ತ ಮುಳ್ಳನ್ನು ಬಿಟ್ಟು ಹಾರಿತ್ತು. ಉರಿ ತಾಳದೆ ಸ್ವಲ್ಪ ಸಮಯ ನೋವು ಅನುಭವಿಸಿದರು. ತಮ್ಡಪ್ಪ ತನ್ನ ನಂಬಿಕೆಗಳಿಗೆ ಮತ್ತೆ ಮತ್ತೆ ಸಾಕ್ಷಿ ಸಿಗುತ್ತಿದೆೆುಂಂಬಂತೆ ಖುಷಿಯಲ್ಲಿ ನಮ್ಮನ್ನು ಅಣಕಿಸಿದ. ‘ವೀರೇಶ್ವರ ಸ್ವಾಮಿ ತವ್ಕಬರಾಗ ಹೆಂಗಿರ್ಬೇಕು ಯಾನ ಒಂದೂ ಗೊತ್ತಿಲ್ದೆ ಬಂದ್ಬುಡ್ತಿದರಿ, ಯಾನಾರ ಹೆಚ್ಚುಕಮ್ಮಿ ಆದ್ರ ಏನ್ ಕತ, ಊರ್ ತಲುಪಗಂಟ ಇನ್ನ ಏನೇನ್ ಕತೆ ಆದ್ದ’ ಅಂತ ಬೈಕೊಂಡ ತಮ್ಡಪ್ಪನ ಪ್ರಕಾರ ಲೇಖಕರು ಆರಂಭದಲ್ಲಿ ಬರಿಗಾಲಲ್ಲಿ ನಡೆದು ಬರಲು ನಿರಾಕರಿಸಿದ್ದೆ ಇದಕ್ಕೆಲ್ಲ ಕಾರಣ.

ಆ ಕಾಡು, ಅದರ ಅಗಮ್ಯತೆ ಯಾರೂ ಊಹಿಸಲಾಗದ ನಿಗೂಢತೆ ಎಲ್ಲವೂ ನಮಗೆ ಶಿಕ್ಷಣ ಹಾಗೂ ಓದು ಕಲಿಸಿದ ವೈಚಾರಿಕತೆಯನ್ನು ಮಂಕುಗೊಳಿಸಿ ತಮ್ಮಡಿ ಹೇಳಿದ ಈ ಕಾಕತಾಳೀಯ ಘಟನೆಗಳೆ ಸತ್ಯ ಎಂದು ಎನಿಸಿಬಿಡುವಷ್ಟು ನಾವು ಅಲ್ಲಿ ಶರಣಾಗಿಬಿಟ್ಟಿದ್ದೆವು. ಚಾರಣದ ಗುರಿ ಮುಟ್ಟಿದ ಖುಷಿಯಲ್ಲಿ ವಾಪಸು ಸಾಗಿದ್ದು ದಣಿವೆನಿಸಲಿಲ್ಲ. ದಾರಿಯುದ್ದಕ್ಕೂ ಸಿಗುತ್ತಿದ್ದ ಕಾಡು ಸೀಬೆ, ಬೆಟ್ಟದ ನೆಲ್ಲಿಕಾಯಿ, ಎಲಚಿಹಣ್ಣು ತಿನ್ನುತ್ತಾ, ಅಗೋಚರ ಮೂಲಗಳಿಂದ ಹರಿದು ಬರುತ್ತಿದ್ದ ಪುಟ್ಟ ತೊರೆಗಳ ಸಿಹಿನೀರು ಕುಡಿಯುತ್ತಾ ಮರಳಿದೆವು. ಚಾರಣ ಮುಗಿಸಿ ಪೊನ್ನಾಚಿ ತಲುಪಿದಾಗ ಪಡುವಣದಿ ಸೂರ್ಯ ಕಂತುತ್ತಿದ್ದ. ಕಾಡ ನಡುವಿನ ಊರು ದೀಪಗಳನ್ನು ಹೊತ್ತಿಸಿಕೊಂಡು ಬೆಳಗುತ್ತಿತ್ತು.

(ಮಲೆ ಮಹದೇಶ್ವರ ಬೆಟ್ಟ ಶ್ರೇಣಿಯ ದುರ್ಗಮ ಅರಣ್ಯದ ನಡುವಿನ ನಾಲ್ಕು ಸಾವಿರ ಅಡಿಗಿಂತಲೂ ಎತ್ತರವಾದ ‘ಕಡೆಬೋಳಿ’ ಬೆಟ್ಟಕ್ಕೆ ಚಾರಣ ಹೋಗಿ ಬಂದ ಲೇಖಕರ ಪ್ರವಾಸ ಕಥನದ
ಕೆಲವು ಸಾಲುಗಳು)

× Chat with us