ಅವನು ಅಪ್ಪ ಮತ್ತು ನಾನು ಮಗ

ಈಗ ವಯಸ್ಸಾದ ಈ ಕಾಲದಲ್ಲಿ ನೀವು ನಿಮ್ಮಪ್ಪನವರ ರೀತಿ ಕಾಣುತ್ತೀರಿ ಎನ್ನುತ್ತಾರೆ ನಮ್ಮೂರ ಹಿರಿಯರು. ನನಗೆ ಆಗ ಮೈೆುಂಲ್ಲ ಉರಿಯುತ್ತದೆ. ಈಗಲೂ ಆ ದುಷ್ಟ ತಂದೆ ಆಗಾಗ ನನ್ನ ಕನಸಿಗೆ ಬರುತ್ತಾನೆ. ಬಂದಾಗಲೇ ಫೈಟಿಂಗಿಗೆ ಇಳಿಯುತ್ತಾನೆ. ಆತ ಸತ್ತು ಎಷ್ಟೋ ವರ್ಷಗಳಾಗಿವೆ. ಆದರೂ ನನ್ನ ಮೇಲೇನೊ ಸೇಡು. ಹೊಡೆದುರುಳಿಸುವ ಛಲ. ನಾನು ಮಾತ್ರ ಬಿಟ್ಟುಕೊಡಲಾರೆ. ಒಂದೊಂದು ಹೊಡೆತವನ್ನೂ ನನ್ನ ತಾಯಿಯ ನೆನಪಲ್ಲಿ ಬಡಿಯುತ್ತ ಕನಸಿನಲ್ಲಿ ಬಂದ ಅವನನ್ನು ನಿದ್ದೆಯಲ್ಲೆ ಹೊಡೆದುರುಳಿಸಿ ಓಡಿಸುತ್ತಿರುತ್ತೇನೆ. ಕಾಲವೂ ನಡೆಯುತ್ತಿದೆ. ನಾನೂ ಇದ್ದೇನೆ.

ಡಾ.ಮೊಗಳ್ಳಿ ಗಣೇಶ್
mogalliganesh@gmail.com

ನಮ್ಮಪ್ಪ ಬಹಳ ಸುಂದರವಾಗಿದ್ದ. ಅಚ್ಚುಕಟ್ಟಾದ ಮೈ ಮಾಟ. ಸಣ್ಣ ಕಾಲು, ಸಿಂಹ ಕಟಿ, ನೀಳ ಮೂಗು, ಮಿನುಗುವ ಚಂಚಲ ಕಣ್ಣುಗಳು, ಗೋಧಿ ಬಣ್ಣದ ಮೈ. ಎತ್ತರದ ದನಿ. ಯಾರಿಗಾದರೂ ಕೊಂಚ ಅಳುಕು ಉಂಟಾಗುವಂತೆ ನಡೆದುಕೊಳ್ಳುತ್ತಿದ್ದ. ಹುಟ್ಟಿದ್ದು ಹೊಲೆ ಜಾತಿಯಲ್ಲಾದರೂ, ಅವನ ದರ್ಬಾರೆಲ್ಲ ಪಾಳೆಯಗಾರರದು. ನಮ್ಮ ತಾತ ಗಾಂಧಿಯ ಬಲ್ಲವನಾಗಿ ಮಕ್ಕಳಿಗೆಲ್ಲ ವಿದ್ಯೆ ಕಲಿಸಿದ್ದ. 1952ರ ವೇಳೆಗೇ ತನ್ನ ಮನೆಗೆ ವಿದ್ಯುತ್ ದೀಪಾಲಂಕಾರ ಇರಬೇಕೆಂದು ಇಡೀ ಹಳ್ಳಿಗೆ ಮೊದಲೇ ವಿದ್ಯುತ್ ದೀಪ ಹಾಕಿಸಿಕೊಂಡಿದ್ದ. ಆ ಸಿರಿಯೇ ಸಿರಿ. ಕೇರಿಯವರೆಲ್ಲ ಬಂದು ಆ ವಿದ್ಯುತ್ ಬೆಳಕಿನಲ್ಲಿ ಮಾಯಾಲೋಕ ಕಂಡಂತೆ ನನ್ನ ವಯಸ್ಸಿನ ಸಣ್ಣ ಹುಡುಗ ಹುಡುಗಿಯರು ಆಟ ಆಡಿ ಹೊರಟು ಹೋಗುತ್ತಿದ್ದರು.
ಅಪ್ಪ ಮನೆಗೆ ಬಂದ ಎಂದ ಕೂಡಲೆ ಅಡುಗೆ ಮನೆಯ ಬೆಂಕಿ ಒಲೆ ಕೂಡ ಜೋರಾಗಿ ಉರಿಯುವುದನ್ನು ತಗ್ಗಿಸಿಕೊಳ್ಳುತ್ತಿತ್ತು. ತಂತಾನೆ ಮನೆ ನಿಶ್ಯಬ್ದವಾಗಿ ಬಿಡುತ್ತಿತ್ತು. ಓದುವ ಆಸಕ್ತಿ ಇಲ್ಲದಿದ್ದರೂ ಒಂದೆರಡು ಮಗ್ಗಿ ಪುಸ್ತಕ, ಕಾಪಿ ಪುಸ್ತಕ ಹಿಡಿದು ಮಹಾ ಬುದ್ಧಿವಂತನಂತೆ ನಟಿಸುತ್ತಿದ್ದೆ. ಅಪ್ಪ ತೂರಾಡುತ್ತಿದ್ದ. ವಿಪರೀತ ನಿಶೆಯಲ್ಲಿದ್ದ. ಹೆಂಡದ ಪೇಟೆಯಲ್ಲಿ ಅವನಿಗೆ ಶ್ಯಾಮಲ ವರ್ಣದ ಅತ್ಯಂತ ತಮಿಳು ಸುಂದರಿಯರು ಸರದಿಯಂತೆ ನಿತ್ಯವೂ ಸಿಗುತ್ತಿದ್ದರು. ಆ ಹೆಂಗಸರೆಲ್ಲ ನನಗೆ ಗೊತ್ತಿತ್ತು. ಅಪ್ಪನ ಹೆಣ್ಣುಳ್ಳತನಕ್ಕೆಲ್ಲ ನನ್ನ ತಾಯೇ ನನ್ನನ್ನು ಗೂಢಚಾರಿಯನ್ನಾಗಿ ನೇಮಿಸಿದ್ದರು. ಅದರಿಂದ ನಾನು ಬಹಳ ಹೊಡೆತ ತಿಂದಿರುವೆ. ಎಷ್ಟೊ ಸಂಗತಿಗಳನ್ನು ತಾಯಿಗೆ ಹೇಳುವಂತಿರಲಿಲ್ಲ. ತಾಯಿಯ ಮೂಲಕ ಅದು ಬಯಲಾಗಿ ಕೊನೆಗೆ ಯಾವುದೊ ನೆಪ ತೆಗೆದು ಅಪ್ಪ ನನ್ನನ್ನು ಭತ್ತ ನೆಲ್ಲುಲ್ಲು ಹೊರೆಯನ್ನು ಬಡಿವಂತೆ ಎತ್ತಿ ಬಡಿದಾಗ ತಾಯೇ ಬಂದು ಕಾಪಾಡುತ್ತಿದ್ದಳು. ಅಪ್ಪನ ಅಂತಹ ಒಂದು ಹೊಡೆತಕ್ಕೆ ಶಾಸನ ಒಂದಿರಲಿ ಎಂದು ನನ್ನ ತಲೆ ಬುಂಡೆ ಮೇಲೆ ಮಚ್ಚೆ ಒಂದು ಇದೆ. ಕೊನೆಗೆ ನನ್ನ ತಾಯಿ ಗೂಢಚಾರಿಕೆಯೇ ಬೇಡ ಎಂದು ಬಿಟ್ಟಿದ್ದಳು.
ಯಾಕೆಂದರೆ ನಮ್ಮಪ್ಪ ಅಷ್ಟು ಸಲೀಸಾಗಿ ಮುಕ್ತವಾಗಿ ಹೆಂಗಸರ ಜೊತೆ ಸಂಬಂಧ ಇಟ್ಟುಕೊಂಡು ತಾನೇ ತನ್ನ ಪೌರುಷವನ್ನು ಸಾರಿಕೊಳ್ಳುತ್ತಿದ್ದ. ಕೆಲವೊಮ್ಮೆ ಮೇಲು ಜಾತಿಯ ಚೆಂದದ ಹೆಂಗಸರು ತಮ್ಮ ತೋಟದ ಮರೆಯಲ್ಲಿ ಕರೆದು ಮಲಗಿಸಿಕೊಂಡರು ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ. ರಂಗು ರಂಗಿನ ಮನುಷ್ಯ. ಸಿನಿಮಾದ ನಾಯಕರಂತೆ ಬಟ್ಟೆ ತೊಡುತ್ತಿದ್ದ. ಆಧುನಿಕ ಮೈಸೂರಿನಲ್ಲಿ ಅವರಣ್ಣ ನಗರಸಭೆಯ ರೆವಿನ್ಯೂ ಇಲಾಖೆಯಲ್ಲಿ ಗುಮಾಸ್ತನಾಗಿದ್ದ. ಆಗ ಅದೇ ಒಂದು ದೊಡ್ಡ ಅಧಿಕಾರ. ಆಗೊಂದು ಮಜಾ ದಿನದ ದಸರೆಯಲ್ಲಿ ಮೈಸೂರಿಗೆ ಹೋಗಿದ್ದಾಗ ನಮ್ಮಪ್ಪನೂ ದೊಡ್ಡಪ್ಪನೂ ಗಣೇಶ ಥಿಯೇಟರಿಗೆ ಕರೆದೊಯ್ದು ಸಿನಿಮಾ ತೋರಿದ್ದರು. ನನ್ನ ಜೀವನದಲ್ಲಿ ಅಹಹಾ ಚಿನ್ನದ ರಾಶಿಯೇ ನಿರಾಶೆಯ ವಿಧಿಯೇ ಎಂಬ ಭಾವನೆ ಆಗಲೇ ಹೇಗೊ ಸಿನಿಮಾದ ಕೊನೆಗೆ ಬಂದು ನನ್ನ ತಲೆ ಮುಟ್ಟಿತ್ತು. ಆ ಸಿನಿಮಾದ ಹೆಸರು “ಮೆಕನೈಸ್ ಗೋಲ್ಡ್”. ಬಾಲ್ಯದಲ್ಲಿ ನೋಡಿದ್ದಾಗ ನಾನದರ ಅಕ್ಷರಗಳ ಓದುವ ಶಕ್ತಿಯೇ ಇರಲಿಲ್ಲ. ಮತ್ತೆ ಮೈಸೂರಿಗೆ ಉನ್ನತ ಅಧ್ಯಯನಕ್ಕೆ ಬಂದಾಗ ಆ ಸಿನಿಮಾ ತಿಳಿದು ದಂಗಾಗಿದ್ದೆ.

ಎಲಾ! ನೀಚ ಅಣ್ಣತಮ್ಮಂದಿರಾ! ಮಾಡಬಾರದ್ದನ್ನೆಲ್ಲ ಮಾಡಿ ಇವರು ಯಾಕೆ ಬರೀ ಇಂಗ್ಲಿಷ್ ಮೂವಿಗಳನ್ನೇ ನೋಡುತ್ತಿದ್ದರು. ಮಡದಿಯರ ಬಿಟ್ಟು ಅಲಂಕಾರಿಕ ಸೂಳೆಯ ಜೊತೆಯೇ ಯಾಕಷ್ಟು ಇಷ್ಟ ಪಡುತ್ತಿದ್ದರು ಎಂದು ತಿಳಿಯಲು ನಾನು ಬಹಳ ಸಮಯ ತೆಗೆದುಕೊಳ್ಳಬೇಕಾಯಿತು. ನಮ್ಮಪ್ಪ ಎನ್ನಲು ನನಗಿಷ್ಟ ಇಲ್ಲಾ… ಸಭ್ಯವಾಗಿ ಬರೆಯುತ್ತಿರುವೆ. ಒಂದು ಮೂರು ದಿನದ ಜಾತ್ರೆ ಅಜ್ಜಿ ಊರಲ್ಲಿ ಗುಡ್ಡೆ ಬಸಪ್ಪನ ಹೆಸರಲ್ಲಿ ನಡೆಯುತ್ತಿತ್ತು. ರಾತ್ರಿ ನಡೆವ ಜಾತ್ರೆ. ಹೆಂಗಸರದೇ ಪ್ರಧಾನ ಪಾತ್ರ. ಯಾರ ಜೊತೆೊಯೊ ಮಲಗಿ ಮಕ್ಕಳ ಪಡೆದುಕೊಳ್ಳಬಹುದು. ಯಾರ ಅಡ್ಡಿಯೂ ಇರಲಿಲ್ಲಾ. ನನ್ನ ತಾಯಿಗೆ ಕಟ್ಟನಿಟ್ಟಿನ ನೀತಿ ಹೇಳಿ ನೀನಿಲ್ಲೆ ತಾಯಿ ಜೊತೆ ಮಲಗಿರಬೇಕೂ… ನಿನಗೆಲ್ಲಿ ಮಕ್ಕಳಾಗಿವೆ. ನಾನು ಸುಮ್ಮನೆ ಆ ಜಾತ್ರೆಗೆ ಹೋಗಿ ಬರುವೆ ಎಂದು ಹೇಳಿ ಒಪ್ಪಿಸಿ ಆತ ಜಾತ್ರೆಗೆ ಹೋಗಿದ್ದ ವ್ಯಕ್ತಿ. ಅವನು ಒಕ್ಕಲಿಗರ ಹೆಂಗಸರಿದ್ದ ಬೀದಿಗಳಿಗೇ ಹೋಗಿ ಮಲಗಿ ಬಿಡುತ್ತಿದ್ದ. ಅವನು ಹೊಲೆಯ ಬೇಡ ಎನ್ನುವಂತಿರಲಿಲ್ಲ. ಆನಂದದಲ್ಲಿ ತೇಲಾಡಿ, ಓಲಾಡಿದವಳ ಜೊತೆ ತಾಂಬೂಲ ಸವಿಯುತ್ತ ಕೂತಿದ್ದಾಗ. ಅವನು ಬಹಳ ನಗನಗುತ್ತಾ ಮಾನವೀಯವಾಗಿ ಇದ್ದಾನೆ ಎಂದಾಗ… ಯಾರೊ ಹೆಂಗಸು ಹೇಳುತ್ತಿತ್ತು. ನಿಮ್ಮಿಬ್ಬರ ಜೋಡಿಗೆ ತೆನೆ ಕಟ್ಟುತ್ತದೆ ಎಂದು ಹೇಳಿದಂತೆಯೇ ಎಲ್ಲರೂ ನಕ್ಕು ಸಂತಸಪಟ್ಟರು. ಅಂತಲ್ಲಿ ನಾನು ಕಾಣಿಸಿಕೊಂಡೆ. ಒಂದು ನಿಮಿಷ ಸುಮ್ಮನಿರೀ… ಎಂದು ಮೆಲ್ಲಗೆ ಅತ್ತ ಕತ್ತಲಿಗೆ ಕರೆದೊಯ್ದು ತುಳಿದು ಅದುಮಿ, ಕತ್ತು ಮುರಿದು ಅತ್ತ ಬೆಟ್ಟದ ಎತ್ತರದಿಂದ ಪ್ರಪಾತಕ್ಕೆ ಎಸೆದು ಬಿಡಲು ಅಪ್ಪ ಯೋಜಿಸುತ್ತಿದ್ದ. ನಾನು ಸಾದ್ಯಂತ ತಡೆಯುತ್ತಿದ್ದೆ. ಅಪ್ಪ ಕುಡಿದ ಅಮಲಿನಲ್ಲಿ ನನ್ನ ಅಲ್ಲೇ ಬಿಟ್ಟು ಹೊರಟು ಹೋಗಿದ್ದ.
ಮರುದಿನ ಅದವನಿಗೆ ನೆನಪೇ ಇರುತ್ತಿರಲಿಲ್ಲಾ… ಅಪ್ಪ ಕೂಡಿದ ಪ್ರತಿೊಂಬ್ಬ ಚೆಲುವೆಯರಿಂದಲೂ ಏನೊ ಒಂದು ರವಷ್ಟು ಕರುಣೆ ಗಿಟ್ಟಿಸಿಕೊಳ್ಳುವುದಷ್ಟೇ ನನ್ನ ಮಹಾಬಯಕೆಯಾಗಿತ್ತು. ಆ ತಾಯಂದಿರನ್ನೆಲ್ಲ ನಮಿಸುವೆ. ಅವರೆಲ್ಲರೂ ನನ್ನನ್ನು ಅನಾಥ ಮಗ ಎಂದೇ ಮಾತಾಡಿಸಿ ಹೋಗು ಎಂದು ಬೇಗ ಕಳಿಸಿಬಿಡುತ್ತಿದ್ದರು. ಅಲ್ಲಿಯೂ ಎಂತಹ ಪ್ರೀತಿ! ತಾಯಿಗೆ ಇದೆಲ್ಲವನ್ನು ಹೇಳಿದರೆ ಸಿಡುಕಾಡಿ, ನಾನು ಇದನೆಲ್ಲ ತಂದು ನಿನಗೆ ಹೇಳಿದ್ದನೇ… ಯಾರ ಗುಟ್ಟನ್ನೂ ಯಾರ ಮಾತನ್ನೂ, ಸುಮ್ಮನೆ ಬಂದು ಬೀದಿ ಬದಿಯ ಮಾತನ್ನೂ ನನಗೆ ಹೇಳಬಾರದು ಎಂದು ಮುದ್ದೆ ತಿರುಗುವ ಗಟ್ಟಿ ಬಿದಿರು ದೊಣ್ಣೆಯಿಂದ ಅವತ್ತು ನನ್ನವ್ವ ಎಷ್ಟೊಂದು ಹೊಡೆದಿದ್ದಳು ಎಂದರೆ ಎದ್ದು ತಿರುಗಾಡಲು ವಾರ ವಿರಾಮ ಬೇಕಾಗಿತ್ತು. ಅವಳೇ ನಿತ್ಯ ಉಪ್ಪಿನ ಶಾಖ ಕೊಡುತ್ತಿದ್ದಳು. ಮಾತಿಲ್ಲದೆ ಕಣ್ಣೀರ ಹರಿಸುತ್ತಿದ್ದಳು. ಗಂಡನ ಎದಿರು ಅವಳೊಂದು ಯಃಕಶ್ಚಿತ್ ಆಗಿದ್ದಳು. ನನ್ನಪ್ಪನ ಮಜಾ ಎಷ್ಟೊಂದು ರಂಗಾಗಿತ್ತು ಎಂದರೆ, ಆಗೊಮ್ಮೆ “ಚಂದವಳ್ಳಿಯ ತೋಟ” ಎಂಬ ಸಿನಿಮಾದ ಚಿತ್ರೀಕರಣವೊ; ಇನ್ನಾವುದೊ ನಡೆದಿತ್ತಂತೆ. ಅಲ್ಲಿಗೆ ನನ್ನಪ್ಪ ನೋಡಿ ಬರಲು ಹೋಗಿದ್ದನಂತೆ. ಆ ಸಿನಿಮಾದ ನಿರ್ದೇಶಕರಾದ ಬಿ.ಆರ್.ಪಂತುಲು ಗಮನಿಸಿ ಕರೆದು, ನಮ್ಮ ಸಿನಿಮಾದಲ್ಲಿ ಪಾತ್ರ ಮಾಡುವೆ ಏನಯ್ಯಾ… ಬಿಟ್ಟಿ ಅಲ್ಲಾ; ಸಂಭಾವನೆ ಕೊಡ್ತೀವಿ. ನಿನ್ನ ರೂಪ ಚಾತುರ್ಯ ನೋಡಿದರೆ… ನೀನು ಎಲ್ಲೆಲ್ಲಿಗೊ ಹೊರಟು ಹೋಗುತ್ತೀಯೇ! ಯೋಚನೆ ಮಾಡು. ನಿನ್ನ ವಿಳಾಸ ಕೊಡು ಎಂದು ಪಡೆದಿದ್ದರು. ತಿಂಗಳಾದ ನಂತರ ಪತ್ರ ಬರೆದು ನಮ್ಮ ಹೊಸ ಸಿನಿಮಾಕ್ಕೆ ನೀನು ಪಾತ್ರ ಮಾಡುವ ಆ ಶಕ್ತಿ ಇದ್ದರೆ ಈ ಕೂಡಲೆ ಕೆಳಗಿನ ವಿಳಾಸ ಹುಡುಕಿ ಬನ್ನಿ. ಗಾಂಧಿನಗರ ನಿಮ್ಮನ್ನು ಸ್ವಾಗತಿಸುತ್ತದೆ. ಆ ದರಿದ್ರ ನಮ್ಮಪ್ಪನಿಗೆ ಆ ಪತ್ರದ ಮಹತ್ವವೇ ಗೊತ್ತಿರಲಿಲ್ಲ.
ಅದನ್ನು ಮಡಚಿ ಜೇಬಿನಲ್ಲಿಟ್ಟುಕೊಂಡು, ಹೆಂಗಸರ ಮುಂದೆ ಪ್ರದರ್ಶನ ಮಾಡಿ; ಎಲ್ಲರೆದಿರೂ ಭಾರೀ ತೂಕ ತೆಗೆದುಕೊಂಡು ಇನ್ನಷ್ಟು ವರ್ಣರಂಜಿತನಾದ. ಅವನ ಬಯಕೆಯ ತೋಟ ಕೊಚ್ಚಿ ಹೋಗಿತ್ತು. ನನ್ನ ತಾಯಿ ಅವನ ಅವತಾರಗಳ ಮುಂದೆ ತಾನೊಬ್ಬ ಹಳ್ಳಿಯಲ್ಲಿ ದನ ಕುರಿಯಂತೆ ಎಮ್ಮೆ ಕಾಯುತ್ತ ಓದು ಬರಹವಿಲ್ಲದ ಅಜ್ಞಾನಿ. ಇಂತವನಿಗೆ ಮದುವೆ ಮಾಡಿ ತಂದೆ ತಾಯಿಯರೇ ತನಗೆ ಅನ್ಯಾಯ ಮಾಡಿಬಿಟ್ಟರು ಎಂದು ಗಾಢವಾದ ದುಃಖದಲ್ಲಿ ಮುಳುಗಿಯೇ ಹೋಗಿದ್ದಳು. ಅನಕ್ಷರಸ್ಥ ನನ್ನ ತಾಯ ಬಗ್ಗೆ ಯಾರಿಗೂ ಗೌರವ ಇರಲಿಲ್ಲ. ಕುರಿ ಮೇಯಿಸಿಕೊಂಡು ಬದುಕಿದ್ದವಳೆಂದು ಜರಿಯುತ್ತಿದ್ದರು.
ಒಂದು ದಿನ ಕತ್ತಲಾಗಿತ್ತು. ಹೆಂಡ ಇಳಿಸುವ, ಕಟ್ಟುವ ಕಂಪೆನಿಯೇ ಊರಲ್ಲಿತ್ತು. ಆ ಕಸುಬುದಾರರದೇ ಒಂದು ಲೋಕ ಹತ್ತಿರ ಕರೆದುಕೊಂಡು ಬರೋಗು ಎಂದು ನನ್ನ ತಾಯಿ ಅವನು ಎಷ್ಟೇ ನೀಚ ಕಿರುಕುಳಕೊಟ್ಟರೂ, ತೊಡೆ ಮೇಲೆ ಸಿಗರೇಟು ಬೆಂಕಿಯಿಂದ ಚುಚ್ಚಿದರೂ ನನ್ನ ತಾಯಿ ಸಹಿಸಿಕೊಂಡು ಗಾಯಗಳ ವಾಸಿ ಮಾಡಿಕೊಳ್ಳುತ್ತ ತನ್ನ ತಾಯಿ ಬಂದಾಗ ತೋರಿ… ಇದಕ್ಕಾಗಿ ನಾನು ಸಂಸಾರ ಮಾಡಬೇಕೇ… ನನ್ನಿಂದ ಆಗಲ್ಲಾ… ಎಲ್ಲಿಯಾದರೂ ಹೋಗಿ ಸಾಯುವೆ. ನನ್ನೆರಡು ಮಕ್ಕಳ ಪಾಲಿಗೆ ಹಾಕಿಕೊಂಡು ಸಾಕಿ ಅವುಗಳಿಗೊಂದು ದಾರಿ ತೋರೂ. ತಾನಿನ್ನೆತ್ತರ ದೂರ ಬರಲಾರೆ ಎಂದು ಮಾತು ನಿಲ್ಲಿಸಿದಾಗ, ತಾಯ ಉಚ್ಚೆ ಕೊಚ್ಚೆಯ ಹಾಗೇ ಆಘ್ರಾಣಿಸುತ್ತಾ… ನಮ್ಮವನ್ನಿಗೆ ಏನಾಗಿದೆೊಯೊ ದೇವರೇ ಎಂದು ಕಣ್ಣೀರು ಬರದ ಭಯದಲ್ಲಿ ತಾಯ ಮುಖವನ್ನು ಸುಮ್ಮನೇ ಗಂಟೆಗಟ್ಟಲೆ ನೋಡುತ್ತಿದ್ದೆ. ಅಪ್ಪ ಅಂಗಳದಲ್ಲಿ ದೊಡ್ಡ ಮಾತಾಡುತ್ತಿದ್ದ. ಅವನಿಗೆ ಭಾವನೆಗಳೇ ಇರಲಿಲ್ಲವೇ! ಇದ್ದವು. ಅವೆಲ್ಲ ಅವನ ಸರ್ವಾಧಿಕಾರಕ್ಕೆ ತಕ್ಕಂತೆ ಇರಬೇಕಿತ್ತು.
ಅಪ್ಪನ ನೆನಪು ಎಷ್ಟು ಆಪ್ಯಾಯಮಾನ ಅಲ್ಲವೇ? ಆದರೆ, ನನಗೆ ಹಾಗೆ ಆಗಲೇ ಇಲ್ಲ. ನಮ್ಮಪ್ಪ ಬಹಳ ದುಷ್ಟ. ಕೊಂದು ಬಿಡು ಎಂದರೆ ಆ ತಕ್ಷಣಕ್ಕೆ ಅಷ್ಟೆ ಆವೇಶಾಸ್ಥಿತನಾಗಿದ್ದ. ಅಂತವನ ಮಗನಾಗಿ ನಾನು ಒಂದು ಹೆಜ್ಜೆಯನ್ನೂ ಹಿಂಸೆಯತ್ತ, ಪೀಡಕನತ್ತ ಇಡಲಿಲ್ಲ.
ನಮ್ಮಪ್ಪನ ಒಂದೆರಡು ಅಂತಃಕರಣದ ನೆನಪುಗಳಾಗುತ್ತಿವೆ. ಅದೊಂದು ಬೇಸಿಗೆ ಕಾಲ. ಹೋಟೆಲಿಗೆ ಗಿರಾಕಿಗಳು ಕಡಿಮೆ. ಆಗ ಆತ “ಚಕ್ಕಾ, ಬಾರಾ” ಆಟಕ್ಕೆ ತಾನೇ ಮಣೆ ಬರೆದು ಹುಣಸೆ ಬೀಜಗಳ ತಾನೇ ತೆರೆದು ಬಿಳುಪು ಮಾಡಿ… ಎದುರಾ ಬದುರಾ ಕಾಯಿಗಳ ಇಟ್ಟು ಆಟ ಆಡು ಎಂದ. ನನಗಷ್ಟು ಚಾಣಾಕ್ಷತೆ ಇರಲಿಲ್ಲ. ಎಷ್ಟು ಅಂಕಗಳು ಬಿದ್ದವೊ ಅಷ್ಟನ್ನು ಸುಮ್ಮನೆ ಮುಗ್ಧತೆಯಲ್ಲಿ ನಡೆಸುವುದು. ನನಗೆಲ್ಲ ಎಂಟು, ನಾಲ್ಕು ಬಿದ್ದು ಬಿದ್ದು ನಾನೊಂದು ಅಪ್ಪನ ಕಾಯನ್ನು ಹೊಡೆದು ಹಣ್ಣು ಮಾಡುವ ಹೊತ್ತಿಗೆ ನನ್ನ ಕಾಯಿ ಹೊಡೆಯಲು ಅವಕಾಶ ಬಿಟ್ಟುಕೊಟ್ಟಿರಲಿಲ್ಲ… ಎಲ್ಲ ಕಾಯಿಗಳು ಹಣ್ಣು ಮನೆ ಸೇರಿದವು. ನನ್ನಪ್ಪ ಬಲಿಷ್ಠ ಕೋಪದಿಂದ ಕೆನ್ನೆಗೆ ಬಾರಿಸಿದ್ದ ಶುಭಾಶಯ ಎಂಬಂತೆ. ನಾನು ಕ್ಷಣ ಮಾತ್ರ ತತ್ತರಿಸಿ ಬಿದ್ದಿದ್ದೆ. ಅಪ್ಪ ಅಲ್ಲಿರಲಿಲ್ಲ. ನನ್ನ ಅಪ್ಪನನ್ನೂ ಬಾಲ್ಯದಲ್ಲಿ ಮಾತ್ರ ನಾನು ಕಂಡೆ. ಅವನು ಹಿರಿಯನಾಗುತ್ತಿದ್ದಂತೆ ದ್ವೇಷ ಬೆಳೆಯುತ್ತಿತ್ತು. ನನ್ನ ತಾಯಿಯ ಶೀಲ ಶಂಕಿಸಿ ವಿಪರೀತ ಹಿಂಸೆ ಕೊಡುತ್ತಿದ್ದ. ಅವನು ಮಾತ್ರ ವಾರಕ್ಕೆ ಒಬ್ಬಳಾದರೂ ಹೆಣ್ಣಿನ ಜೊತೆ ಕೂಡುತ್ತಿದ್ದ. ಅಪ್ಪನ ನಡತೆ ಚಟುವಟಿಕೆಯನ್ನು ಹುಡುಕುವುದೇ ನನ್ನ ಬಾಲ್ಯವಾಗಿತ್ತು. ತುಂಬ ಅಸಹ್ಯ ಭಾವನೆ ಉಂಟಾಗುತ್ತಿತ್ತು. ಹೊಳೆಯಲ್ಲಿ ಒಂಟಿಯಾಗಿ ಸ್ನಾನ ಮಾಡುವ ಯಾವ ವೋಂಮಾನದ ಹೆಣ್ಣನ್ನೂ ಆತ ಬಿಡುತ್ತಿರಲಿಲ್ಲ. ಅದನ್ನೆಲ್ಲ ಕಂಡು ತಾತನಿಗೆ ಹೇಳಿದರೆ, ಬೈಯ್ದು ಬಿಡುತ್ತಿದ್ದ. ಅಂತಾದ್ದನ್ನೆಲ್ಲ ನೋಡಬಾರದು ಎನ್ನುತ್ತಿದ್ದ… ತಾಯಿಗೆ ಹೇಳಿದಾಗಂತು ಕಣ್ಣೀರ ಕೋಡಿಯಾಗಿ… ಇನ್ನು ಮುಂದೆ ಅವನ ನೀಚ ಕಾರ್ಯಗಳ ಹುಡುಕಬೇಡ ಎಂದು ಪ್ರಮಾಣ ತೆಗೆದುಕೊಳ್ಳುತ್ತಿದ್ದಳು. ಅಂದರೆ, ತನ್ನ ಮಗ ಇದರಿಂದ ಪ್ರೇರಿತನಾಗದಿರಲಿ ಎಂದು. ಆ ಎಲ್ಲ ವಿಷಯಗಳನ್ನು ಎಷ್ಟೊಂದು ಕಣ್ಣೀರಿನಿಂದ ಹೇಳಿದ್ದಳು ಎಂದರೆ, ಈಗ ನಾನದನ್ನೆಲ್ಲ ವಿವರಿಸಲಾರೆ.
ಅಪ್ಪ ಎಂದರೆ ನನಗೊಂದು ಭೀಕರ ಭಯ. ದಾರಿಯ ಅಲ್ಲೆಲ್ಲೊ ದಪ್ಪ ಹೆಜ್ಜೆ ಮೂಡಿಸಿ ಧಪದಪನೆಂದು ಬರುತ್ತಿದ್ದಾನೆಂಬ ಸಪ್ಪಳಕ್ಕೆ ನಾನು ಮರೆಗೆ ಸರಿಯುತ್ತಿದ್ದೆ. ಮುಂದಾಗುವ ದುರಂತಗಳಿಗೆ ಒಂದು ಕಂಬಳಿಹುಳುವಿನಂತೆ ಮರೆಯಲ್ಲಿ ಅಂಟಿಕೊಂಡು ದುಃಖವ ತುಂಬಿಕೊಳ್ಳುತ್ತಿದ್ದೆ. ಬಾಲದಂತೆ ಅಂಟಿಕೊಂಡು ಅಪ್ಪ ಏನಾದರೊಂದು ಕಿತಾಪತಿ ಮಾಡುತ್ತಲೇ ಇದ್ದ.
ಜೀನ್ಸ್‌ಗಳು ಹೇಗೆ ಕೆಲಸ ಮಾಡುತ್ತವೊ ಏನೊ… ನನ್ನಪ್ಪನ ಸಾವಿನ ಸುದ್ದಿ ಬಂದಾಗಲೂ ಕೊನೆಗೊಮ್ಮೆ ಆ ಪಾಪಿಯ ಮುಖ ನೋಡಿ ಬರುವ ಎಂಬ ಮನಸ್ಸೇ ಬರಲಿಲ್ಲ. ಸಂಪ್ರದಾಯದ ಪ್ರಕಾರವಾಗಿ ಹಿರಿ ಮಗನಾಗಿ ನಾನವನಿಗೆ ತಲೆ ಬೋಳಿಸಿಕೊಂಡು ಮುಡಿ ಕೊಡಬೇಕಿತ್ತು. ಯಾವುದಕ್ಕೂ ಹೋಗಿರಲಿಲ್ಲ. ಅಷ್ಟು ದುಷ್ಟನಿಗೆ ನಾನೆಂದೂ ನಡೆದುಕೊಳ್ಳಬಾರದು ಎಂದು ದೇಹದಲ್ಲಿ ಭಾವ ನಾಟಿತ್ತು. ಆ ನೀಚ ತನ್ನ ಹೆಂಡತಿಯ ಶೀಲ ಶಂಕಿಸಿ ಉಚ್ಚೆ ಕುಡಿಸಿದ್ದ. ದಾಹದಲ್ಲಿ ನೊಂದು ನರಳಿ ಪ್ರಾಣ ಬಿಡುವ ಹಿಂಸೆಯಲ್ಲಿ ಹಾಗೆ ಅವಳ ಎದೆ ಮೇಲೆ ಕುಳಿತು ಉಚ್ಚೆ ಹುಯ್ದದ್ದನ್ನು ಈಗಲೂ ಕ್ಷಮಿಸಲಾರೆ. ಒಂದು ಬೆಕ್ಕಿನ ಮರಿಯಂತೆ ತೊಲೆ ಮೇಲೆ ಕೂತು ತಾಯ ಅವಸ್ಥೆಯನ್ನು ಕಂಡಿದ್ದೆ.
ಅಂತಹ ಅಪ್ಪ ಬೀಗ ಜಡಿದು ಆಗಾಗ ಹೋಗಿ ಬಡಿದು ಬರುತ್ತಿದ್ದ. ನನ್ನದೊಂದೇ ಕೆಲಸ… ಬಾಗಿಲು ತೆಗಿ ಎಂದು ಅರಚುತ್ತ ನಡುಗತ್ತ… ಅಕ್ಕಾ ಅಕ್ಕಾ ಎಂದು ದೀರ್ಘವಾಗಿ ರೋದಿಸುತ್ತಿದ್ದೆ. ನಮ್ಮ ಮನೆ ಆ ಕಾಲಕ್ಕೇ ಆಧುನಿಕ. ಹಾಗಾಗಿ ತಾಯಿಯನ್ನು ತಾಯಿ ಎನ್ನುತ್ತಿರಲಿಲ್ಲ. ಬ್ರಾಹ್ಮಣರ ಪ್ರಭಾವ. ತಾಯನ್ನು ಅಕ್ಕಾ ಎನ್ನುತ್ತಿದ್ದೆವು. ತಂದೆಯನ್ನು ಅಣ್ಣಾ ಎಂದು ಕರೆಯುತ್ತಿದ್ದೆವು. ಅಣ್ಣಾ, ಅಕ್ಕಾ ಎಂದು ಎಷ್ಟು ಸಲ ನನ್ನ ಬಾಯಿ ಅಂತಹ ನರಕದ ಹಿಂಸೆಯ ಗೋಳಾಟದಲ್ಲಿ ನನಗೆ ಮತ್ತೆ ಮತ್ತೆ ಬಡಿತದ ನೋವಾಗುತ್ತಿತ್ತು. ನನ್ನ ಅಪ್ಪ ನನಗೆ ಹೇಗೆ ಅಪ್ಪನೊ ಗೊತ್ತಿಲ್ಲ. ಈಗ ವಯಸ್ಸಾದ ಕಾಲದಲ್ಲಿ; ನಿಮ್ಮಪ್ಪನವರ ರೀತಿ ಕಾಣುತ್ತೀರಿ ಎನ್ನುತ್ತಾರೆ ಹಿರಿಯರು. ಮೈಯಲ್ಲ ಉರಿಯುತ್ತದೆ. ಈಗಲೂ ಆ ದುಷ್ಟ ತಂದೆ ಆಗಾಗ ನನ್ನ ಕನಸಿಗೆ ಬರುತ್ತಾನೆ. ಬಂದಾಗಲೇ ಫೈಟಿಂಗಿಗೆ ಇಳಿಯುತ್ತಾನೆ. ಆತ ಸತ್ತು ಎಷ್ಟೋ ವರ್ಷಗಳಾಗಿವೆ. ಆದರೂ ನನ್ನ ಮೇಲೇನೊ ಸೇಡು. ಹೊಡೆದುರುಳಿಸುವ ಛಲ. ನಾನು ಮಾತ್ರ ಬಿಟ್ಟುಕೊಡಲಾರೆ. ಒಂದೊಂದು ಹೊಡೆತವನ್ನೂ ನನ್ನ ತಾಯಿಯ ನೆನಪಲ್ಲಿ ಬಡಿಯುತ್ತ ಕನಸಿನಲ್ಲಿ ಬಂದ ಅವನನ್ನು ನಿದ್ದೆಯಲ್ಲೆ ಹೊಡೆದುರುಳಿಸಿ ಓಡಿಸುತ್ತಿರುತ್ತೇನೆ. ಕಾಲವೂ ನಡೆಯುತ್ತಿದೆ. ನಾನೂ ಇದ್ದೇನೆ. ನನ್ನಪ್ಪನ ದೆವ್ವದ ಬಡಿದಾಟಗಳನ್ನು ಆಗಾಗ ನನ್ನ ಮೂರು ಹೆಣ್ಣು ಮಕ್ಕಳಿಗೆ ಹೇಳಿ ಏನೋ ವಿಮೋಚನೆ ಅನುಭವಿಸುತ್ತಿರುತ್ತೇನೆ.
ಮಕ್ಕಳು, ವಿಷಾದದಲ್ಲಿ, “ಇಂತ ದೆವ್ವದ ಕನಸಿನ ಕಥೆಗಳ ಹೇಳಬೇಡ ಅಪ್ಪಾ” ಎನ್ನುತ್ತಿರುತ್ತವೆ.

× Chat with us