ಅವ್ವ, ಅರಮನೆ ಮತ್ತು ತಾಯಿ ಚಾಮುಂಡವ್ವ

-ಡಾ. ಎಸ್‌.ತುಕಾರಾಮ್

ಅವ್ವ ಅಪ್ಪ ತರಗು ಗುಡಿಸಿ ಮನೆಕಟ್ಟಿ ತಳವಾಗಿರುವ ಊರು ಅರಮನೆ ಕೂಗಳತೆಯದು. ಊರಿನ ಅಂಕ ಸೇರಿಸಿಕೊಂಡರೆ ನಿಸಾನಿ ಮೂಲೆಯಲ್ಲಿ ತುಂಬಿ ಮದನಾಡುವ ಕೆರೆ. ಊರ ಇನ್ನೊಂದು ಬಾಜುಗೆ ತೆಂಕಲೆಂದರೂ ಆದೀತು. ಅಲ್ಲಿ ಕುದುರೆ ಮಾಳವಿತ್ತು. ಈಗ ಅದು ಮಂಗಮಾಯ! ಊರು ಅಂದರೆ ಜೋಪಡಿಗಳ ಸಾಲು! ಒಂದರೊಳಗೊಂದು ಹೆಣೆದುಕೊಂಡು ಸಾಲಿಗೆ ನಿಂತಂತಿದ್ದ ಆ ಜೋಪಡಿಗಳಲ್ಲಿ ನಾವಿದ್ದ ಮನೆ ದೊಡ್ಡಂಚಿನದು. ಅದೂ ಊರಿಗೆ ಬೊಟ್ಟಿನಂತಿತ್ತು. ಉಳಿದವು ಒತ್ತೊತ್ತಿಗೆ ಏರ್ಪಟ್ಟು ಸಾಲಾಗಿ ನಿಂತಿರಲಾಗಿ ಅದೇ ಊರಿಗೊಂದು ಬೀದಿಯಂತಾಗಿತ್ತು!!

ಕೆರೆ ದಿಕ್ಕಿನಿಂದ ಬೀಸಿಕೊಂಡು ಬರುವ ಗಾಳಿಯು, ಕುದುರೆ ಮಾಳದಲ್ಲಿ ಅಂಡಾಡಿಕೊಂಡು ಬರುವ ಗಾಳಿಯೂ ಕೂಡಿಕೊಂಡು ಊರಿಗೊಂದು ತಂಪು ನೀಡಿತ್ತು. ಸಾಲಾಗಿ ನಿಂತ ಜೋಪಡಿಯ ಬೆನ್ನಿಗೆ ಮಣ್ಣಿನ ದಿಣ್ಣೆಯು ಚಾಚಿಕೊಂಡು ಮಲಗಿತ್ತು. ದಿಣ್ಣೆ ಹತ್ತಿ ನೋಡಿದರೆ ಹಾವಿನಂತೆ ನುಲಕೊಂಡು ಇದ್ದ ಕಾವಲಿ. ಈ ಕಾವಲಿಗೆ ಎಲ್ಲಿಂದ ನೀರು ಹರಕೊಂಡು ಬರುತ್ತಿತ್ತೋ, ಬಂದು ಬಂದಂಗೆ ಊರ ಮೊಗ್ಗಲ ಆ ಕೆರೆಗೆ ಸೇರಿಕೊಳ್ಳುತ್ತಿತ್ತು, ತಾಯಮೊಳ್ಳ ಮಕ್ಕಳು ಸೇರಿಕೊಂಡಂತೆ, ಈಗ ಅದೂ ಮಂಗಮಾಯ!!

ಆ ಕಾವಲಿಯೋ ಕೆರೆ ಸೇರುವ ನಡುಭಾಗಕ್ಕಿದ್ದು ಮಾರು ದೂರದಲ್ಲಿ ಮಹಾರಾಜರು ಕಟ್ಟಿಸಿದ ಸೇತುವೆಯಿತ್ತು. ಆ ಸೇತುವೆಯೋ ಮೈಸೂರನ್ನು ಮತ್ತು ಎತ್ತೆತ್ತಲಿನ ಊರುಗಳನ್ನು ತಲುಪಲು ಕೂಡಿಕೊಂಡಂತಿತ್ತು. ಕುದುರೆ ಮಾಳವಂತೂ ಕಣ್ಣು ಅಗಲಿಸಿದಷ್ಟು ಅಗಲಕ್ಕೂ ಬಟ್ಟಬಯಲು! ಆದರೂ ಸುತ್ತಲೂ ಬಗೆ ಬಗೆಯ ಮರಮುಟ್ಟುಗಳಿಂದ ಕೂಡಿದ ಜಂಗ್ಲಿಯೇ ಆಗಿತ್ತು. ಈಗಲ್ಲಿ ಬಣ್ಣ ಬಣ್ಣದ ಬಿಲ್ಡಿಂಗುಗಳು ನಾಮೇಲು, ತಾಮೇಲು ಎಂಬಂತೆ ನಿಂತಿವೆ!! ಅಂಥ ಬಯಲೊಳಗೆ ಅರಮನೆ ದಿಕ್ಕಿನಿಂದ ಹಿಂಡು ಹಿಂಡಲ್ಲಿ, ಬರುತ್ತಿದ್ದ ಕುದುರೆಗಳು ಬೀಡುಬಿಟ್ಟು ಮೇಯುತ್ತಿದ್ದವು. ಬೆರಗುಗಣ್ಣಲ್ಲಿ ಅವುಗಳ ಕಂಡು ಮಾತು ನಿಂತಂತೆ ನೋಡುತ್ತಲಿದ್ದೆವು.

ಆ ವ್ಯಾಳ್ಯಕ್ಕೆ ಸರಿಯಾಗಿ ಒಬ್ಬ ಪುಣಾತ್ಮನು ಸುಂಟರಗಾಳಿ ಬೀಸುವಂಗೆ ಬೀಸಿಕೊಂಡು ಕುದುರೆ ಸವಾರಿ ಮಾಡುತ್ತಾ ಬರುತ್ತಿದ್ದನು. ಆಗ ನಮ್ಮ ಬೆರಗುಗಣ್ಣುಗಳು ಅಂಗೈಯಗಲ ತೆರೆಕೊಳ್ಳುತ್ತಿದ್ದವು! ಆತ ಬಂದವನು ಕೆರೆ ಮೊಗ್ಗಲ ಆ ಕಿರು ದಾರಿಯಲ್ಲಿ ಆ ಸೇತುವೆಯ ಹಾರಿಸಿಕೊಂಡು ಕುದುರೆ ಮಾಳಕ್ಕೆ ಬರುತ್ತಿದ್ದನು. ಅವನು ಬರುವ ರಭಸಕ್ಕೆ ಮರಗಳ ನೆಳಲು ಹಿಡಿದು ಮಲಗಿದ್ದವರು ಛಂಗನೆ ಎದ್ದು ಅಲ್ಲಲ್ಲೇ ನಿಲ್ಲುವರಾಗಿ, ಕುದುರೆಗಳು ಬೆಚ್ಚಿ ಬೆರಗಾಗಿ, ಬಂದವನ ತೆಕ್ಕೆ ಸಿಕೊಂಡು ನೋಡುವುವು. ಆಗ ತಲೆ ಮೇಲೆ ಸರಕ್ಕನೆ ಸೆರಗೆಳೆದುಕೊಂಡು ಅವ್ವನು ಭಯಭಕ್ತಿಯಲಿ ನೋಡುತ್ತಾ ನಿಲ್ಲುತ್ತಿದ್ದಳು. ಆಗ ಅವ್ವನ ಸೆರಗ ಮರೆಯಲ್ಲಿ ನಾವು ಇಣುಕುತ್ತಿದ್ದೆವು.

ಇದೊಂದು ನೆನಪು. ಇನ್ನೊಂದು ಕಿತ್ತಿಟ್ಟಂತೆ ಇರುವ ನೆನಪೆಂದರೆ ಆ ಬಯಲಲ್ಲಿ ಒಂದು ಈಚಲು ಮರ ಇತ್ತು. ಇರುವ ನಾಕಾರು ಈಚಲಲ್ಲಿ ಇದೊಂದು ಮಾತ್ರ ಎದ್ದುನಿಂತಿತ್ತು. ನುಣ್ಣಾನೆ ನುಣುಪಿನ ಎಳೆ ಹಸಿರಿನ ಗರಿಗಳಿಂದ ತುಂಬಿ ಯಾವತ್ತೂ ಕಿರುನಗೆ ಸೂಸುತ್ತ ನಿಂತಂತೆ ತೋರುತ್ತಿತ್ತು. ಎತ್ತೆತ್ತಲೋ ಹೋಗಿದ್ದ ಹಕ್ಕಿ ಪಕ್ಷಿಗಳು ಬರುವ ಚೆಂದವ ಅದರ ನೆತ್ತಿಮೇಲೇ ನೋಡಬೇಕು. ಆ ಹಕ್ಕಿ ಪಕ್ಷಿಗಳೆಲ್ಲ ಆ ಈಚಲ ಮರದ ಚೆಂದಕ್ಕೆ ಬಂದು ಬಂದು, ನೋಡಿ ಹೋಗುವಂತೆ ತೋರುತ್ತಿತ್ತು. ಕಾಲಿಲ್ಲದವನೂ ಹತ್ತಬಹುದಾದ ಎತ್ತರಕ್ಕೆ, ಕೈಯಿಲ್ಲದವನೂ ತಬ್ಬಬಹುದಾದ ಗಾತ್ರಕ್ಕೆ ಜೀವ ತಳೆದು ನಿಂತಿದ್ದ ಈಚಲು ಮರವದು. ಅಂತಹ ಚೆಂದಗಾನದ ಮರ, ಆಸುಪಾಸಿನಲ್ಲಿ ಹತ್ತಿ ಹಣ್ಣಿನ ಮರ, ಬ್ಯಾಲದ ಮರ, ಜಂಬು ನೇರಳೆ ಮರ, ಸೀಪಿ ಮರ, ನೇರಳೆ ಮರ, ಎಲಚಿ ಮರ, ಕಸಗಟ್ಟೆ ಕಾಯಿ ಮರ, ಜಾಯಿಕಾಯಿ ಮರಗಳು ನಾಮೇಲು ತಾಮೇಲು ಎಂಬಂತೆ, ಊರ ಜೋಪಡಿಗಳು ಸಾಲಗೆ ನಿಂತಂತೆ ಆ ಬಯಲ ಆಸುಪಾಸಿನಲ್ಲಿ ಇದ್ದವು. ಇವೆಲ್ಲ ರಾಜರು ಬೀಜ ನೆಟ್ಟು ಬೆಳೆಸಿದ ಮರಗಿಡಗಳೋ, ಬಯಲೇ ಜೀವಕೊಟ್ಟು ಎದ್ದುನಿಂತವೋ ಹೇಳಲಸದಳ! ಅವ್ವ ಸೊಪ್ಪುಸೆದೆ ಓತಿಟ್ಟುಕೊಳ್ಳುತ್ತಿದ್ದರೆ, ನಾವು ಐಕ ಮಕ್ಕಳು ಮರಕೋತಿ ಆಟವಾಡುತ್ತಿದ್ದೆವು. ದಿನಕ್ಕೊಂದರಂತೆ ಈ ಮರಗಳಡಿಯಲ್ಲೇ ನಮ್ಮ ಆಟಪಾಠ ಮೈದಾಳುತ್ತಿತ್ತು.

ಅವ್ವನ ಕಲಾಪತ್ತಿನ ಸೀರೆ

ಆಗೊಂದು ದಿನ. ಊರು ಆವರೆಗೂ ಕಂಡುಕೇಳರಿಯದ ಸಂಗತಿಯೊಂದು ಜರುಗಿತು. ಆ ಊರಿಗೆ ಸುಮಾರಾಗಿದ್ದ ನಮ್ಮಟ್ಟಿಯಲ್ಲಿ ಕಳ್ಳತನವು ನಡೆದುಹೋಗುವುದು. ಆ ಕುದುರೆ ಮಾಳಕ್ಕೋ, ಅದಕ್ಕಂಟಿಕೊಂಡಿದ್ದ ಜಂಗ್ಲಿಗೋ ಬೆಳಕಲ್ಲಿ ಬರುವುದೇ ಮುಷ್ಕರವಾಗಿರುವಂಥ ವ್ಯಾಳ್ಯದಲ್ಲಿ, ಅರಮನೆ ಕುದುರೆ ಸವಾರನನ್ನು ಬಿಟ್ಟರೆ ಆ ಕೆರೆ ಮೊಗ್ಗಲಿಗೇ ಇದ್ದ ಆ ಒಂದು ಡಾಂಬರು ರಸ್ತೆಯಲ್ಲಿ, ಚೆಂದಕ್ಕೆಂಬಂತೆ ಎತ್ತೆತ್ತಲೋ ದೂರದ ಊರಿಂದ ಮಬ್ಬಿನಲ್ಲಿ ಬರುತ್ತಿದ್ದ ಸಾಲು ಸಾಲು ಗಾಡಿಗಳನ್ನೊ, ಸೇತುವೆ ತುದಿಗಿದ್ದ ಉಕ್ಕಡದಲ್ಲಿ ಇಳಕೊಳ್ಳುವಂಥ ಗಾಡಿಗಳನ್ನೊ ಹೊರತುಪಡಿಸಿದರೆ ಮತ್ಯಾರೂ ಅದುವರೆಗೂ ಆ ಕಗ್ಗತ್ತಲಲ್ಲಿ ಕಂಡವರೇ ಇಲ್ಲ. ಅರಮನೆ ಕುದುರೆ ಸವಾರರು ಬೆಳಕಲ್ಲಿ ಬರ್ರಂತ ಕುದುರೆ ಹತ್ತಿ ಬಂದ್ರೆ, ಹೊತ್ತು ಬೀಳುವುದರಲ್ಲಿ ಸರ್ರನೆ ತಿರಿಯಾಕಿ ಹೋಗಿಬಿಡುತ್ತಿದ್ದರು. ಇಂಥ ಕಾಲದಲ್ಲಿ ನಮ್ಮಟ್ಟಿಯಲ್ಲಿ ಕಳ್ಳತನವಾದುದು ಸೋಜಿಗವಾಗಿ ತೋರಿತು. ಇದು ಊರಿಗೇ ಕೇಡೆಂಬಂತೆ ತೋರಿತು. ಬೆಳಕರೆದು ನೋಡಿದರೆ ನಮ್ಮಟ್ಟಿಯಲ್ಲಿ ಒಂದು ಮೂಲೆಯಲ್ಲಿ ಕನ್ನ ಕೊರೆದು ಕಳ್ಳತನವಾಗಿತ್ತು. ಕಣ್ಣಳತೆ, ಕೈಯಳತೆ ಮಾಡಿ ಕಟ್ಟಿದ ಆ ಅಟ್ಟಿ ಊರಿಗೇ ಸುಮಾರಾಗಿದ್ದಂಥ ಅಟ್ಟಿ. ಅದಕ್ಕೆ ಒಬ್ಬ ಬಿರ್ಸಾದ ಆಳು ಇಳಿದುಬಂದು ಹೋಗುವಂಥ ಕನ್ನ ಅಲ್ಲಿ ಬಿದ್ದಿತ್ತು!

ನಮ್ಮಟ್ಟಿಯಲ್ಲಿದ್ದ, ಜಾಯಿಕಾಯಿ ಪೆಟ್ಟಿಗೆಯಲ್ಲಿ ಇಟ್ಟಿದ್ದ ಅವ್ವನ ಮದುವೆ ಸೀರೆ, ಕಲಾಪತ್ತಿನ ಸೀರೆ ಒಂದು ಬಿಟ್ಟು ಉಳಿದವು ಇದ್ದಲ್ಲೇ ಇದ್ದವು. ಆಗ ಅವ್ವ ಅಪ್ಪ ಬಹಳ ದುಃಖಗೊಂಡರು. ಅಂಥ ಕಲಾಪತ್ತಿನ ಸೀರೆಯನ್ನೂ ಅವ್ವ ವರ್ಷಕ್ಕೊಂದು ಹಬ್ಬ ದಸರಾದಲ್ಲಿ ಬಿಟ್ಟರೆ ಊರ ಯಾವ ಹಬ್ಬಕ್ಕೂ ಉಡುತ್ತಿರಲಿಲ್ಲ. ಇದ ನೆನೆದು ಬಹುವಾಗಿ ಅತ್ತಳು. ಹೋದ ಕಲಾಪತ್ತಿನ ಸೀರೆಯ ಅರಸಿ, ಅರಸಿ ಅತ್ತಳು. ನೆರೆದವರೂ ಕೂಡಿ ಅಯ್ಯೋ ಅಂದರು. ಕಣ್ಣು ಮೂಗಿಗೆ ಒತ್ತಿಕೊಂಡು ಇಟ್ಟುಕೊಂಡಿದ್ದ ತನ್ನ ಬಂಗಾರ ಹೋಯಿತಲ್ಲಾ ಎಂದು ಸಂಕಟಪಟ್ಟಳು. ಅಪ್ಪನೂ ಸೇರಿದಂತೆ ನಾವೆಲ್ಲ ದುಃಖದಲ್ಲಿ ಭಾಗಿಯಾಗಿದ್ದೆವು. ಆ ಸಲದ ದಸರಾವು ಬಹುದುಃಖದಲ್ಲಿ ಮುಳುಗಿಹೋಗಿತ್ತು.

ಅಂದು ರಾತ್ರಿ ಕಳ್ಳತನ ಆದ ಮರುದಿನ. ತಮ್ಮ ದುಃಖವ ತಾವೇ ನುಂಗಿ ಮಲಗಿದರು. ಅವ್ವ ಅಪ್ಪ ನಿದ್ದೆ ಎಂಬುದು ಬರದೆ ಹೊರಳಾಡುತ್ತ ಸೂರು ನೋಡುತ್ತಾ ಮಾತಾಡಿಕೊಳ್ಳುತ್ತಿದ್ದರು. ಕತ್ತಲಿಗೂ ಒಂದು ದಾರಿಯಂತೆ ಆ ಮನೆಗೆ ಇದ್ದ ಒಂದು ಸೊಳ್ಳು, ಮೆಳ್ಳಗಣ್ಣಿನಂತೆ ಬೆಳಕು ಬಿಟ್ಟುಕೊಂಡು ಮೂಲೆಯಲ್ಲಿ ಕೂತಿತ್ತು. ಆಗ ಅವ್ವ ಹೇಳಿದ್ದು ಅಮ್ಮನಿಗೆ ಅರಸ್ಕಂಡ್ರೆ ಎಂಗೆ ಅಂದಳು. ಆಗ ನಮ್ಮೆಲ್ಲರ ಮನದೊಳಗೆ ಅಮ್ಮ ಅವ್ವ ಚಾಮುಂಡವ್ವ ಮೂಡಿದ್ದಳು!!

ಈರೇಳೆಂಬತ್ತು ಕೋಟಿ ಜೀವರಾಸ್ಗಳ್ಗೆ ದಿಕ್ಕಾಗಿರವ್ಳು ಈ ಚಾಮುಂಡವ್ವ – ನಮ್ಮ ಕೈ ಬುಟ್ಟಳಾ, ಕಾಲದಿಂದ್ಲು ನಮ್ಮ ದುಡವ ಕಂಡವ್ಳು ನಮ್ಮ ಬುಟ್ಟಾಳಾ? ಬೇಕಾದ್ದೆ ಬರ‍್ಲಿ. ಇನ್ನೂ ಅವ್ಳು ನಮ್ಮ ಕೈ ಬುಡದಿಲ್ಲಾ, ಆ ಸತುವಂತೆ ಬಂದ್ಲು ಅಂದ್ರೆ ಮುಗಿತು. ನಾವು ಇನ್ಯಾರಿಗೂ ಲೆಕ್ಕ ಮಡ್ಗಬೇಕಿಲ್ಲ ಇತ್ಯಾದಿಯಾಗಿ ಆಡುತ್ತಾ, ಆಡುತ್ತಾ, ಕಾಲಯಾಪನೆ ಮಾಡುತ್ತಿದ್ದ ಊರೊಳಗೆ ಚಾಮುಂಡಾಂಬೆ ಕಂಡರೆ ಇನ್ನಿಲ್ಲದ ಭಕುತಿ. ಆದೇವತೆಯಾಗಿ ಊರು ಕೇರಿಗಳನ್ನು ಸಮನಾಗಿ ಕಂಡು ಇಡೀ ಮೈಸೂರು ಸೀಮೆಯನ್ನು ಸಾಕು ಸಲಹುತ್ತಿದ್ದವಳು ಈ ಚಾಮುಂಡವ್ವ. ಭಕ್ತಾದಿಗಳಲ್ಲಿ ಅವಳ ಬಗ್ಗೆ ಯಾವ ದಿಕ್ಕಿಂದ ಬರುವಳೋ, ಯಾವ ರೂಪತಾಳಿ ಬರುವಳೋ, ಯಾವ ರಾಗವ ಪಾಡಿ ಬರುವಳೋ, ಅಪ್ಪನ ಕಾಲದಿಂದಲೂ ಬರದವಳು ಇಂದು ಬಂದರೆ ಹೇಗೆ ಬಂದಳೋ ಎಂದು ಲೆಕ್ಕಹಾಕುತ್ತಾ ಪೂಜಿಸಲ್ಪಡುತ್ತಿದ್ದಳು.

ಗರಡಿ ಗೇಯ್ವ ಹೈಕಳನ್ನು ಕಂಡರೆ ಊರಿಗೇ ಎಲ್ಲಿಲ್ಲದ ಮಮಕಾರ

ಮೈಸೂರೆಂಬ ಆ ಮೈಸೂರಲ್ಲಿ, ಅರಮನೆಯೆಂಬ ಆ ಅರಮನೆಯು ಇರಲಾಗಿ, ದಸರಾವೆಂಬ ಆ ದಸರಾವು ನಡೆಯುತ್ತಲಿತ್ತು. ಆ ಒಂಬತ್ತು ದಿನಗಳ ನವರಾತ್ರಿಯಲ್ಲಿ ರಾತ್ರಿಯೆಂಬುದೇ ಇಲ್ಲವಾಗಿ ಪಟ್ಟಣವೆಂಬ ಪಟ್ಟಣವೆಲ್ಲ ಬೆಳಕಿನಿಂದ ಕೂಡಿತ್ತು. ಅದು ಏಳು ಕುದುರೆ ರಥವೇರಿ ಬರುವ ಸೂರ್ಯನು ಕಾಲೆತ್ತಿ ಕಡೆಯದೆ ಇಲ್ಲೇ ನೆಲೆನಿಂತಿದ್ದಾನೋ ಅನಿಸುತ್ತಿತ್ತು. ಆನೆ ಗಾತ್ರದ ಕಂಬಗಳು. ನಾಂದರ ಕಂಬದ ಎತ್ತರಕ್ಕೆ ಹತ್ತಾನೆ ಒಮ್ಮೈಗೆ ನುಗ್ಗುವ ಅಗಲಕ್ಕೆ ಬಾಗಿಲುಗಳು, ನವ ಚಿತ್ರದ ಕೆತ್ತನೆಗಳು ಒಂದೋ ಎರಡೋ, ನೂರಾರು ಥರದ ಕೆತ್ತನೆಗಳು. ಅಂಥ ಅರಮನೆಯಲಿ, ನವರಾತ್ರಿಯ ಒಂಬತ್ತು ದಿನಗಳು ಅರಮನೆಯೂ ಸೇರಿಕೊಂಡಂತೆ ಪಟ್ಟಣವಾದ ಪಟ್ಟಣವೆಲ್ಲ ಸುತ್ತುವರೆದಿರುವ ಒಂಬತ್ತು ದೇವತೆಗಳನ್ನೂ ದಿನಕ್ಕೊಂದರಂತೆ ಪೂಜಿಸುತ್ತ ಬರಲಾಗಿ ಆಯುಧ ಪೂಜೆಯೂ ದಾಟಿ ವಿಜಯದಶಮಿಯು ಬರಲಾಗಿ ಅಂದು ಮಹಾರಾಜರು ಜಂಬೂ ಸವಾರಿಯ ನಡೆಸುತ್ತಲಿದ್ದರು. ಕಣ್ಣಲ್ಲಿ ಕಂಡವರಾಗಲಿ, ಕಾಣದವರಾಗಲಿ, ಕೇಳಿದವರಾಗಲಿ ಅರಿಯದಂಥ ಇಂದ್ರನ ವೈಭವವೋ ಎಂಬಂತೆ ಈ ಜಂಬೂಸವಾರಿಯು ನಡೆಯುವುದು. ಆ ಒಂಬತ್ತು ದಿನಗಳಲ್ಲಿ ನಾನಾ ಬಗೆಯ ಉತ್ಸವಗಳು, ಪೂಜೆ – ಪುನಸ್ಕಾರಗಳು ನಡೆಯುವಂತೆ ಕುಸ್ತಿಗಳೂ ನಡೆಯುವುವು. ಕುಸ್ತಿಯ ಬಗ್ಗೆ ಮಮಕಾರ ಹೊಂದಿದ್ದವರು. ಒಂದು ಸಾರಿಯಾದರೂ ಅರಮನೆಯ ಅಖಾಡದಲ್ಲಿ ಕುಸ್ತಿ ಆಡಿಸುವ ಬಯಕೆ ಹೊತ್ತಿರುತ್ತಿದ್ದರು.

ಆ ಕಾಲದಲ್ಲಿ ಗರಡಿ ಗೇಯ್ಮೆ ಎಂದರೆ ಬೆಟ್ಟ ಅಗೆದಷ್ಟು ಕಸ್ತು. ಮಣ್ಣಲ್ಲಿ ಮುಳುಗಬೇಕು, ಮಣ್ಣಲ್ಲೇ ಏಳಬೇಕು. ಗೈಮೆ ಮಾಡುವವರನ್ನು ಗರಡಿಗಾಕಿಕೊಂಡು ಲಡತ್ತು ಮಾಡಿಸಿ, ತಿದ್ದಿ ತೀಡುತ್ತಿದ್ದರು. ಗರಡಿಯ ಕಾಯಕಕ್ಕೆ ನೆಲೆಯಾಗಿದ್ದ ಗರಡಿಯು ನಾಕು ಕಂಬದ ಜೋಪಡಿ ಕೆಳಗಿತ್ತು. ಆಗ ಊರಲ್ಲೇ ಐನಾತಿ ಕೈ ಎನಿಸಿಕೊಂಡಿದ್ದ ಗಾರೆ ಪೈಕಿಗಳ ಮುಂದಾಳುತನದಲ್ಲಿ ಗರಡಿಗೊಂದು ನೆಲೆಯಾಗಿತ್ತು. ಕೆರೆ ಮೊಗ್ಗಲ ಏರಿ ಮಣ್ಣನ್ನು ಕಡಿದು ತಂದು, ಕಲಸು ಮಣ್ಣು ಮಾಡಿ, ಬೊಂಬಿನಚ್ಚೆಗೆ ಮಣ್ಣು ಮೆತ್ತಿ, ಇಂಟೆ ಮೇಲೆ ಇಂಟೆ ಇಟ್ಟು ಗೋಡೆ ಎತ್ತಿ, ಎತ್ತಿದ ಗೋಡೆಗೆ ಕವಡಲಂಚನು ಕವುಚಿ… ಹೀಗೆ ಎದ್ದ ಗರಡಿಯ ದಸರಾ ಹಬ್ಬಕ್ಕೂ ಮುಂಚೆ ಬರುವ ವರಮಾಲಕ್ಷ್ಮಿ ಹಬ್ಬದಲ್ಲಿ ಮಟ್ಟಿ ತಂದು ಪೂಜಿಸುವುದು ದಸರಾ ಮಂಬಲಿ ಇರುತ್ತಿದ್ದ ಇನ್ನೊಂದು ಚೆಂಗಾನವಾದ ವಹಿವಾಟು. ಗರಡಿ ಗೇಯ್ವ ಹೈಕಳನ್ನು ಕಂಡರೆ ಊರಿಗೇ ಎಲ್ಲಿಲ್ಲದ ಮಮಕಾರ.

ಲಡತ್ತು ಮಾಡಿ ಬರುವ ಪೈಲ್ವಾನರನ್ನು ದಿನಕ್ಕೊಂದು ಮನೆಯಂತೆ ಕರೆದು ಉಪಚಾರ ಮಾಡುತ್ತಿದ್ದರು. ಕೊಬ್ಬರಿ ಬೆಲ್ಲ ಕೊಡುವವರು, ಬೆಣ್ಣೆ ಕಾಯಿಸಿದ ತುಪ್ಪದಲ್ಲಿ ರೊಟ್ಟಿ ತಟ್ಟಿಕೊಡುವವರು, ಉದ್ದಿನಕಾಳು ಬೆಲ್ಲ ಹಾಕಿ, ಬೋಸಿಯಲ್ಲಿ ತುಂಬಿ ಕೊಡುವವರು, ಊರಿಗೆ ಹೆಸರು ತರಲಿ ಎಂದು ಹರಸುವವರು – ಹೀಗೆ ನಾನಾ ಬಗೆಯಲ್ಲಿ ಕುಸ್ತಿ ಆಳುಗಳನ್ನು ವಿಶೇಷವಾಗಿ ಸಾಕುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬರುತ್ತಿತ್ತು. ಹೀಗೆ ಗರಡಿ ಹೈಕಳನ್ನು ಸಾಕೋದು ಅಂದರೆ ಆನೆ ಕುದುರೆ ಸಾಕಿದಂತೆ ಎಂಬ ವಾಡಿಕೆ ಮನೆ ಮನೆಯಲ್ಲೂ ಇತ್ತು. ಹೀಗಾಗಿ ಗರಡಿ ಹೈಕಳಿಗೆ ಎತ್ತೆತ್ತಲಿಂದಲೂ ಸರಾಗವಾಗಿ ಮೇವು ದಕ್ಕುತ್ತಿತ್ತು.

ದಸರಾ ಹಬ್ಬಕ್ಕೆ ನಡೆಯುವ ಕುಸ್ತಿಯಲ್ಲಿ ಭಾಗವಹಿಸುವ ಪೈಲ್ವಾನರಿಗೆ ಚಾಮುಂಡಿಬೆಟ್ಟ ಹತ್ತಿ, ಲಡತ್ತು ಮಾಡಿಸುವುದು ಇನ್ನೊಂದು ಪದ್ಧತಿ. ಕುಸ್ತಿಯ ಮುನ್ನಾದಿನ ಕೋಳಿ ಕೂಗುವ ಹೊತ್ತಿಗೆ ಗರಡಿ ಆಳುಗಳೆಲ್ಲಾ ಸೇರಿ ಬೆಟ್ಟ ಹತ್ತುತ್ತಿದ್ದರು. ಈಗಲೂ ಆ ಪದ್ಧತಿ ನಿಂತಿಲ್ಲ. ಬೆಟ್ಟ ಹತ್ತಿ ಬೆಟ್ಟದ ಬಸವನಿಗೆ ನಮಸ್ಕಾರ ಹಾಕಿ ಬರುತ್ತಿದ್ದರು. ಯಾರು ಮೊದಲು ಬೆಟ್ಟ ಹತ್ತಿ ಬಸವನ ಪಾದ ಮುಟ್ಟಿ ಬರುತ್ತಿದ್ದರೊ ಅವರು ಕುಸ್ತಿಯಲ್ಲಿ ಗೆಲ್ಲುವುದು ಗ್ಯಾರಂಟಿ ಎಂಬ ಮಾತಿತ್ತು.

ನವರಾತ್ರಿ ಆರಂಭವಾಗುವ ಹಿಂದಿನ ದಿನ ಕಿವಿ ಮೇಲೆ ಹೂ ಮುಡಿದಂತೆ ಟಾಂಗಾ ಗಾಡಿಯೊಂದು ಮೈಕು ಕಟ್ಟಿಕೊಂಡು ಊರಿಗೆ ಬಂದಿಳಿಯುತ್ತಿತ್ತು. ಅದರ ಒಳಗೆ ಕೂತಿದ್ದವನು ನವರಾತ್ರಿ ಪ್ರಯುಕ್ತ ಕಾಟಾ ಕುಸ್ತಿಗಳು ನಡೆಯುವ ವಿಚಾರವನ್ನು ಅರಚುತ್ತ, ಸಾರುತ್ತ ಹೋಗುತ್ತಿದ್ದ. ಟಾಂಗಾದವನು ಕೊಟ್ಟ ಸುದ್ದಿಯ ಪಡಕೊಂಡು ಗೊತ್ತಾದ ದಿನದಂದು ಗರಡಿಯ ಮುಖ್ಯಸ್ಥರನ್ನು ಕೂಡಿಕೊಂಡು ಗರಡಿಯಾಳುಗಳು ಅರಮನೆ ಅಖಾಡಕ್ಕೆ ಬಂದಿಳಿಯುತ್ತಿದ್ದರು. ಅಲ್ಲಿ ದಸರಾ ಕುಸ್ತಿಯ ಅಖಾಡವು ತನ್ನ ಮಣ್ಣ ಮೈಯ ಅರಳಿಸಿಕೊಂಡು ಸಿದ್ಧವಾಗುತ್ತಿತ್ತು. ತರಹೇವಾರಿ ಉಡುಪು ತೊಟ್ಟ ಅರಮನೆಯ ಜನ, ಆಳು – ಕಾಳುಗಳು ಅಲ್ಲಿ ನೆರೆಯುತ್ತಿದ್ದರು. ಆಕಾಶದೆತ್ತರಕ್ಕಿದ್ದ ಮಾಳಿಗೆಯಲ್ಲಿ ಅರಮನೆ ಪರಿವಾರದವರು ಕಲೆಯುತ್ತಿದ್ದರು. ಮಾರಾಜರಿಗೆ ಪ್ರತ್ಯೇಕವಾದ ಆಸನ. ವತ್ತಿಗೆ ಸರಿಯಾಗಿ ಮಾರಾಜರು ಆಸೀನವಾದ ಗಳಿಗೆಯಲ್ಲೇ ಕುಸ್ತಿಗಳು ಶುರುವಾಗುತ್ತಿದ್ದವು. ಆಗ ಸುತ್ತಲಿನವರು ಕೇಕೆ ಹಾಕುತ್ತಲೊ, ಪುಸಲಾಯಿಸುತ್ತಲೊ, ಹುರಿದುಂಬಿಸುತ್ತಲೊ, ಗಲಗು ಗದ್ದಲ ಮಾಡುತ್ತಿದ್ದರು. ಅದರ ಜೊತೆಜೊತೆಗೆ ವಿಶೇಷವಾಗಿ ಜಟ್ಟಿಗಳ ಕಾಳಗ, ಅದೂ ದಸರಾಕ್ಕೆ ಮಾತ್ರ ವಿಶೇಷ ಕಳೆಕಟ್ಟುತ್ತಿತ್ತು.

ಆಯುಧ ಪೂಜೆ ದಾಟಿ ವಿಜಯ ದಶಮಿ ಬರಲಾಗಿ ಜಂಬೂ ಸವಾರಿಯು ಏರ್ಪಡುತ್ತಿತ್ತು. ಈ ಜಂಬೂ ಸವಾರಿಯ ನೋಡಲೆಂದು ಕಂಡು ಕೇಳರಿಯದ ಊರುಗಳಿಂದಲೂ, ದೇಶ – ದೇಶಗಳಿಂದಲೂ ಜನವೆಂಬುದು ಇರುವೆಯಂತೆ ಹರಿದುಬರುವುದು. ಹಕ್ಕಿ ಪಕ್ಷಿಗಳಂತೆ ಹಾರಿ ಬರುವುವು. ದಂಡು – ದಾಳಿಗೆ ಬರುವವರಂತೆ ಹಿಂಡು, ಹಿಂಡಾಗಿ ಬಂದು ಕೂರುವುದು. ಇಂಥದರಿಂದಾಗಿ ಆಗ ಆ ಪಟ್ಟಣವಾದ ಪಟ್ಟಣವೆಲ್ಲ ಜನಗಳಿಂದ ತುಂಬಿ ತುಳುಕಾಡುವುದು. ಆಗ ನೆರೆಯಲ್ಲಿರುವ ಕೆರೆಯೂ ತುಂಬಿ ಮದನಾಡುವಂತೆ ತೋರುವುದು.

ಹೀಗೆ ಬಂದ ಜನ ಸಾಗರವು ಒಂದೆಡೆ ಕೂಡಲು ಕಣ್ಣು ರೆಪ್ಪೆಯ ಮುಚ್ಚದೆ ಭಯಭಕ್ತಿಯಿಂದ ನೆರೆದಿರುವ ವೇಳೆ ಶ್ರೀಮನ್ಮಹಾರಾಜರಿಗೆ ಸುದ್ದಿ ಹೋಗುವುದು. ಅಂಥ ವೇಳೆ ತಿದ್ದಿದ ಗೊಂಬೆಯಂತೆ ಕಾಣುವ ಮಹಾರಾಜರು ಆನೆ ನಡಿಗೆಗಿಂತಲೂ ನಿಧಾನವಾಗಿ ಆ ಊರಗಲದ ಅರಮನೆಯ ಯಾವ ಬಾಗಿಲಲ್ಲಿ ಬಂದಾರೋ ಎಂಬ ತವಕದಲ್ಲಿ ನೆರೆದ ಜನವೆಲ್ಲ ಕಣ್ಣು ಅಗಲಿಸಿದಾಗ ಆ ಕಣ್ಣ ತುಂಬೆಲ್ಲ ಅರಮನೆಯು ತುಂಬಿಹೋಗಿ ಅದೇ ರಾಜರೋಪಾದಿಯಲ್ಲಿ ಕಾಣತೊಡಗುವುದು. ಲಕ್ಷ ಲಕ್ಷ ಜನಸಾಗರದಲ್ಲಿ ಅದೇನೋ ಒಂದು ಬಗೆಯ ಜೀವಸಂಚಾರವೂ ಮೂಡಿ ಗಲಗು ಗದ್ದಲು ತುಂಬಿ, ತುಳುಕಾಡಿ ಅದರೊಳಗಿಂದ ಒಂದೇ ಥರದ ಭಾವವೂ ಮೂಡಿಕೊಂಡು, ಕೈಯೆತ್ತಿ ಮುಗಿಯುವಾಗ ಅರಮನೆಯು ಪ್ರತಿಯಾಗಿ ನಸು ನಸುನಗುವುದು. ಆ ನಸುನಗುವಿನಲ್ಲಿ ಮೂಡಿ ನಿಂತ ಆ ಆನೆ ಗಾತ್ರದ ಕಾಯವು ರಾಜರೆಂಬುದು ಅರುವಾಗಿ ಜನವೋ ನಲಿದಾಡುವುದು. ತುಸು ಗಾಳಿಗೂ ಆನೆ ಗಾತ್ರದ ಮರ, ಕುದುರೆ ಗಾತ್ರದ ಕಾಯಿ, ಮೊರದಗಲ ಎಲೆಗಳಿಂದ ತುಂಬಿ ತುಳುಕಾಡುವ ಮರಗಳೆಲ್ಲವೂ ನಲಿದಾಡುವುವು.

ಅಪ್ಪನ ಹೆಗಲ ಮೇಲೆ ದೊಡ್ಡಬೀದಿಗೆ ಬಂದು ಸಾಲುಗಟ್ಟಿ ಜಂಬೂಸವಾರಿ ನೋಡುತ್ತಿದ್ದ ಹಸುಳೆಯಾಗಿದ್ದ ನಾನು ವಾಸು ಚಡಾವು ಹತ್ತಿ ಹೋಗುವ ದಾರಿಯಲ್ಲಿ ಅಪ್ಪನ ಹೆಗಲ ಮೇಲೆಯೇ ನಿದ್ದೆ ಹೋಗುತ್ತಿದ್ದೆನು.

× Chat with us