ಮೋಟು ಬೀಡಿ ಕಹಾನಿ

ಕೋವಿಡ್ ಕೇರ್‌ ಸೆಂಟರ್ ನಲ್ಲಿ ಮೊದಲನೆಯ ಮಹಡಿಯಿಂದ ಯಾರೋ ಜಗಳವಾಡುವ ಸದ್ದು ಕೇಳಿಸಿತು. ಅರೆಬರೆ ಪಿಪಿಇ ಧರಿಸಿ ಅಲ್ಲಿಗೆ ಓಡಿದೆ. ಅಲ್ಲಿ ಇಪ್ಪತ್ತರ ಹುಡುಗನಿಗೂ, ಐವತ್ತೈದರ ವ್ಯಕ್ತಿಗೂ ಭಾರೀ ಜಗಳ. ಇಬ್ಬರೂ ಜಗಳದಲ್ಲಿ ನಿರತರಾಗಿದ್ದರಿಂದ ಜಗಳ ನೋಡುತ್ತಾ ನಿಂತಿದ್ದವರನ್ನು ಜಗಳದ ಬಗ್ಗೆ ಕೇಳಿದೆ. ಆತ, ʻಅವ್ರದ್ದು ಇದ್ದಿದ್ದೇ ಹೋಗಿ ಸರ್ʼ ಅಂದ. ಜಗಳವಾಡುತ್ತಿದ್ದವರು ಅಪ್ಪ-ಮಗ. ʻನಿನ್ನಿಂದ ಕೊರೊನಾ ಬಂತುʼ ಎಂದು ಅಪ್ಪ ಮಗನಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದ. ʻನಿನ್ನಿಂದ ನನಗೆ ಬಂತುʼ ಎಂದು ಮಗ ಅಪ್ಪನಿಗೆ ದಬಾಯಿಸುತ್ತಿದ್ದ. ವಿಷಯ ಏನೆಂದರೆ, ಅಪ್ಪನಿಗೆ ಬೀಡಿ ಸೇದುವ ಚಟ, ಮಗನಿಗೆ ಪಬ್-ಜಿ ಹುಚ್ಚು. ಅಪ್ಪ ಮಗನಿಗೆ ಹಣ ಕೊಟ್ಟು, ಮನೆಯ ಹತ್ತಿರದ ಅಂಗಡಿಯವನ ಹೆಂಡತಿಗೆ ಕೊರೊನಾ ಪಾಸಿಟಿವ್ ಇರುವ ಕಾರಣ ಪಕ್ಕದ ಬೀದಿಗೆ ಹೋಗಿ ಬೀಡಿ ತರಲು ಹೇಳಿ ದುಡ್ಡು ಕೊಟ್ಟಿದ್ದಾನೆ. ಆದರೆ ಈ ಪಬ್‌ಜಿ ಸೇನಾನಿ ಮನೆ ಹತ್ತಿರದ ಅಂಗಡಿಯಲ್ಲೇ ಬೀಡಿ ತಂದು ಪಕ್ಕದ ಬೀದಿಯಿಂದಲೇ ತಂದಿದ್ದೆಂದು ಸುಳ್ಳು ಹೇಳಿದ್ದಾನೆ. ಮಗ ಮಾತಿನ ಭರದಲ್ಲಿ ಈ ರಹಸ್ಯ ಬಿಚ್ಚಿಟ್ಟಿದ್ದರ ಪರಿಣಾಮವಾಗಿ ಈ ಜಗಳ ನಡೆಯುತ್ತಿತ್ತು. ಕೆಲ ನಿಮಿಷಗಳ ನಂತರ ಅಪ್ಪನೂ ಶಾಂತನಾದ, ಮಗನೂ ಮೌನವಾದ. ನಾನೂ ಕರ್ತವ್ಯ ಮುಗಿಸಿ ಮನೆಗೆ ಬಂದೆ. ನನಗೆ ಮಾತ್ರ ಒಂದು ಸಂದೇಹ ಕಾಡುತ್ತಲೇ ಇತ್ತು. ಜಗಳದ ಮಧ್ಯೆ ʻನಿನ್ನಿಂದ ನನಗೆ ಪಾಸಿಟಿವ್ ಬಂತುʼ ಎಂದು ಮಗ ಅಪ್ಪನಿಗೆ ಒತ್ತಿಒತ್ತಿ ಹೇಳುತ್ತಿದ್ದ. ಅಂಗಡಿಯವನಿಂದ ಬಂತು ಅಂದಿದ್ದರೆ ಒಪ್ಪಿಕೊಳ್ತಿದ್ದೆ, ಆದರೆ ಈ ಮಾತು ಯಾಕೋ ತಲೆ ಮತ್ತು ನಿದ್ದೆ ಎರಡನ್ನೂ ಕೆಡಿಸಿತ್ತು. ಮಾರನೆಯ ದಿನ ಮಧ್ಯಾಹ್ನದ ಡ್ಯೂಟಿ ಇತ್ತು. ಮಗ ಅಲ್ಲೇ ಸಿಕ್ಕು, ಹಲ್ಲು ಬಿಡುತ್ತಾ, ʻಗುಡ್ ಮಾರ್ನಿಂಗ್ ಸರ್. ಇವತ್ತು ಮಧ್ಯಾಹ್ನದ ಶಿಫ್ಟಾ?ʼ ಅಂದ. ಇವನ ಸಾಮಾನ್ಯ ಜ್ಞಾನಕ್ಕಷ್ಟು ಬೆಂಕಿಹಾಕ ಅಂತ ಮನಸ್ಸಲ್ಲೇ ಬೈದು ಹೂಂಗುಟ್ಟಿದೆ. ನಂತರ ಆತನನ್ನು ಕರೆದು ನನ್ನ ಅನುಮಾನದ ಬಗ್ಗೆ ವಿಚಾರಿಸಿದೆ. ʻಆತನಿಗೆ ನಾನು ಸ್ವಲ್ಪ ಆತ್ಮೀಯ ಅನಿಸಿದ್ದರಿಂದ, ʻಸರ್‌, ನಿಮಗೆ ಮಾತ್ರ ಹೇಳ್ತೀನಿ. ಅಪ್ಪನಿಗೇ ಆಗಲಿ, ಯಾರಿಗೇ ಆಗಲಿ ಹೇಳ್ಬಾರ್ದುʼ ಅಂತ ಷರತ್ತು ವಿಧಿಸಿದ. ನಾನೂ ತಲೆಯಾಡಿಸಿದೆ. ʻಅಪ್ಪ ಸೇದು ಬಿಟ್ಟಿದ್ದ ಮೋಟುಬೀಡಿಗಳನ್ನ ನಾನು ಯಾವಾಗ್ಲೂ ಸೇದುತ್ತಿದ್ದೆ. ಯಾವ ಸಿಗರೇಟು ಕೂಡಾ ಮೋಟುಬೀಡಿಯಷ್ಟು ಕಿಕ್ ಕೊಡಲ್ಲ. ಆದ್ರೆ ಅಪ್ಪನಿಗೆ ಈ ವಿಷಯ ಗೊತ್ತಿಲ್ಲ. ಗೊತ್ತಾದ್ರೆ ಕಥೆ ಅಷ್ಟೇʼ ಅಂದ. ʻನಿನ್ನ ಮೋಟುಬೀಡಿ ಕಹಾನಿಯಿಂದಾಗಿ ನಂಗೆ ರಾತ್ರಿಯೆಲ್ಲಾ ನಿದ್ದೆ ಇಲ್ವಲ್ಲಪ್ಪಾʼ ಅಂದೆ. ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೆದರುವ ಮಟ್ಟಕ್ಕೆ ತಿಳಿಸಿ ಇನ್ಯಾವತ್ತೂ ಧೂಮಪಾನ ಮಾಡದಂತೆ ತಿಳಿಹೇಳಿದೆ. ಅವನೂ ಹೂಂ ಎಂದ. ಅಪ್ಪ-ಮಗನ ಜಗಳ ಮಾತ್ರ ಸೆಂಟರ್‌ನಲ್ಲಿ ಇದ್ದಷ್ಟು ದಿನವೂ ಇತ್ತು. ಡಿಸ್ಚಾರ್ಜ್ ದಿನ ಮಗ ಗೇಟಿನ ಬಳಿಯಿಂದ ವಾಪಸ್ ಓಡಿಬಂದು ʻಥ್ಯಾಂಕ್ಯೂ ಫಾರ್‌ ಕೀಪಿಂಗ್‌ ದಿ ಸೀಕ್ರೆಟ್‌ ಸರ್‌ʼ ಅಂದ. ನಾನು ಮುಗುಳ್ನಕ್ಕು ಕೈಯೆತ್ತಿ ನಮಸ್ಕಾರ ಮಾಡಿದೆ.

× Chat with us