ಇಬ್ಬರು ಹೊಸ ಕವಯತ್ರಿಯರ ಕುರಿತು

ಡಾ. ಗೀತಾ ವಸಂತ
geetavasanth@gmail.com

ಈ ಇಬ್ಬರೂ ಕವಯತ್ರಿಯರು ಇಂದು ಗಂಭೀರವಾಗಿ ಬರೆಯುತ್ತಲಿರುವ ಕಾವ್ಯ ವ್ಯಾಮೋಹಿಗಳು. ಕಾವ್ಯಾ ಕಡಮೆ ಕತೆ, ನಾಟಕ, ಕಾದಂಬರಿ ಪ್ರಕಾರಗಳಲ್ಲೂ ಪ್ರಯೋಗಶೀಲರಾಗಿದ್ದರೆ, ಭುವನಾ ಅವರ ಕಾವ್ಯಧ್ಯಾನ ಅವರನ್ನು ಹೊಸ ಆಯಾಮಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತಾ ಕಾವ್ಯದ ಹೊಸ ನುಡಿಯೊಂದನ್ನು ಸೃಷ್ಟಿಸುವಂತೆ ಮಾಡುತ್ತಿದೆ.

“ಧ್ಯಾನಕೆ ತಾರೀಖಿನ ಹಂಗಿಲ್ಲ” ಎಂಬುದು ಕಾವ್ಯಾ ಅವರ ಮೊದಲ ಸಂಕಲನವಾದರೆ, “ಟ್ರಯಲ್ ರೂಮಿನ ಅಪ್ಸರೆಯರು” ಭುವನಾರ ಮೊದಲ ಸಂಕಲನ. ಈ ಸಂಕಲನದ ಕವಿತೆಗಳ ದೇಹ ಮಗ್ನತೆ, ಹೆಣ್ಣು ಗಂಡಿನ ಸಂಬಂಧಗಳನ್ನು ಅರ್ಥೈಸುವ ರೀತಿ, ಮನುಷ್ಯ ಸಂಬಂಧಗಳಿಗೆ ಬರೆವ ಭಾಷ್ಯಗಳು ವಿನೂತನವೆನಿಸುತ್ತವೆ. ನಾವು ಸ್ಥೂಲವಾಗಿ ಮಾತನಾಡುವ ಕುಟುಂಬ, ಸಮಾಜ, ಸಂಸ್ಕೃತಿ ಇತ್ಯಾದಿಗಳನ್ನು ಕಾಣಲು ಹೊಸದೇ ನೋಟವೊಂದನ್ನು ಅವು ಉತ್ಸಾಹದಿಂದ ಸೃಜಿಸುತ್ತವೆ. ತಮ್ಮೊಳಗುಟ್ಟುಗಳನ್ನು ಭಯ ಲಜ್ಜೆಗಳ ಹಂಗಿಲ್ಲದೆ ಅರುಹುತ್ತವೆ. ಕಾವ್ಯಾರ ರೂಮ್‌ಮೇಟ್ ಎಂಬ ಕವಿತೆ ಕಂಬಳಿ ಹುಳುವೊಂದು ಚಿಟ್ಟೆಯಾಗುವ ಕ್ಷಣಗಳನ್ನು ಸೆರೆಹಿಡಿಯುವಂಥ ಬೆರಗಿನದು. ಅಪ್ಪ ಅಮ್ಮನ ಬೆಚ್ಚಗಿನ ಕಕ್ಷೆಯಲ್ಲಿ ಮುಸುಕೆಳೆದುಕೊಂಡ ಭಾವವೊಂದು ನಿಧಾನವಾಗಿ ಏಕಾಂತವನ್ನು ದಾಟಿ ಲೋಕಾಂತಕ್ಕೆಳಸುವ ಪಯಣವಿದು. ಸ್ವಂತ ಕನಸು ಮತ್ತು ಸ್ವಂತ ಸಮಯಕ್ಕಾಗಿ ಹಾತೊರೆಯುತ್ತಿದ್ದ ಮನಸ್ಸು ನಿಧಾನವಾಗಿ ರೂಮ್‌ಮೇಟ್ ಆಗಿ ಒದಗಿದ ಇನ್ನೊಂದು ಮನಸ್ಸನ್ನು ತಾಕುತ್ತ ಒಳಗೊಳ್ಳುತ್ತ ಸಾಗುವ ಕ್ಷಣಗಳನ್ನು ಫೋಟೋಗ್ರಫಿಯಂತೆ ಸೆರೆಹಿಡಿಯುತ್ತದೆ.
ಮಂಚಕ್ಕೂ ಸೂಟ್‌ಕೇಸಿಗೂ ಬಿಗಿದ
ಸರಪಳಿ
ಸಡಿಲವಾಗುತ್ತಿದೆ ದಿನಗಳೆದಂತೆ
ನನ್ನ ಗುಲಾಬಿ ಚೂಡಿದಾರಕ್ಕೆ
ಅವಳ ದಾವಣಿ
ಅವಳ ಬಿಳೀ ಸ್ಕರ್ಟಿಗೆ
ನನ್ನ ಕಪ್ಪು ಟಾಪ್

ಅಮ್ಮ ಅಕ್ಕ ಎಲ್ಲವೂ ಆಗಿ ಬದಲಾಗಬಲ್ಲ ಈ ಹೊಸ ಹುಡುಗಿ ತನ್ನ ಮುಂದೆ ಹಾಸಿರುವ ಹೊಸ ಅನುಭವ ಜಗತ್ತಿಗೂ ಸಲ್ಲಬೇಕಾದವಳು. ನೋಡನೋಡುತ್ತ ತನಗಿಂತ ಕೊಂಚ ಮುಂದಿನ ತಲೆಮಾರಿಗೆ ತಾನೇ ಪರಕೀಯಳಾಗುವ ಅನುಭವವನ್ನೂ ಕಾವ್ಯಾರ ಕವಿತೆ ಎಸ್ ಕೆಫೆ ಯು ದಾಟಿಸುತ್ತದೆ. ಟಾಪ್‌ನ ಅಳತೆ ಚಿಕ್ಕದಾಗಿ ಟಿ-ಶರ್ಟ್‌ನ ನೆಕ್ ಡೀಪ್ ಆಗುತ್ತ ಹೋದಂತೆಲ್ಲ ಟ್ರೆಂಡಿಯಾಗಿ ಕಾಣುತ್ತೀ ಮಗಾ ಜಾಕೆಟ್ ಹಾಕಿಕೊಂಡು ಹೋಗೆಂದು ಕಾಳಜಿ ಮಾಡುವ ಅಮ್ಮ, ಕಪ್ಪು ಬಿಂದಿ ಇಟ್ಟದ್ದಕ್ಕೆ ಬಯ್ದ ಅಪ್ಪ ಎಲ್ಲರೂ ಒಗಟಾಗುತ್ತಾರೆ. ವಿರುದ್ಧ ಸೆಳೆತಗಳ ಹರಯ ರೋಮಾಂಚನದ ಹಿಂದೆ ಆತಂಕಗಳನ್ನೂ ಬಚ್ಚಿಟ್ಟಿದೆ.
ಭುವನಾರ “ಟ್ರಯಲ್ ರೂಮಿನ ಅಪ್ಸರೆಯರು” ಕವಿತೆ ಕೂಡ ತನ್ನನ್ನೇ ನಿಜದಲ್ಲಿ ಕಾಣಲು ಹೊರಟ ತರುಣಿೊಂಬ್ಬಳ ಉಮ್ಮಳಗಳಿಗೆ ಭಾಷ್ಯವಾಗಿದೆ. ಬೇರೆಯವರ ಕಣ್ಣಲ್ಲಿಯೇ ತನ್ನನ್ನು ನೋಡಿಕೊಂಡಿದ್ದ ಅವಳಿಗೆ ಈ ಟ್ರಯಲ್ ರೂಮ್ ಎಂಬುದು ಹೊಸ ಸತ್ಯದರ್ಶನ ಮಾಡಿಸುವ ಸ್ಥಳ. ಮನೆಯ ಕನ್ನಡಿಯಲ್ಲಿ ಎಂದೂ ಅನಾವರಣಗೊಳ್ಳದ ಸುಂದರತೆ, ತನ್ನ ದೇಹವನ್ನೇ ನೋಡಿಕೊಳ್ಳಲಾಗದ, ಮುಟ್ಟಿ ನೇವರಿಸಲಾಗಿರದ ಪರಕೀಯತೆ ಇಲ್ಲಿ ಥಟ್ಟನೆ ಅರಿವಿಗೆ ಬರುತ್ತದೆ. ಈ ಹೊಸ ಕನ್ನಡಿಯಲ್ಲಿ ತೋರುವ ತನ್ನ ಚೆಲುವಿಗೆ ತಾನೇ ಮಗ್ನಗೊಳ್ಳುವ ಧ್ಯಾನವೊಂದು ಸಂಭವಿಸುತ್ತದೆ
ಮೊಣಕಾಲು ಬಿಟ್ಟು ಮೇಲೇರುವ ಸ್ಕರ್ಟುಗಳು
ವ್ಯಾಕ್ಸ್ ಮಾಡದ ಮೀನಖಂಡ ತೊಡೆಗಳು
ಯಾವ ಮಾಡೆಲ್ಲಿಗೂ ಕಡಿಮೆಯಿಲ್ಲ ನಾನು
ಟ್ರಯಲ್ ರೂಮಿನ ರಾರಾಜಿತ ಸತ್ಯ
ಸೀಮೆಯೊಳಗೇ
ಹೊಸ ಸತ್ಯವೊಂದು ಹೊಳೆದರೂ ಸೀಮೋಲ್ಲಂಘನ ಮಾಡುವಂತಿಲ್ಲ. ತಾನು ಟ್ರಯಲ್ ರೂಮಿನಲ್ಲಿ ಮಾತ್ರ ಅಪ್ಸರೆ. ಹೊರಬಂದರೆ ಲೋಕವು ಸ್ಥಾಪಿಸಿದ ಸತ್ಯಗಳ ಹಂಗು. ಒಳಗಿನ ಸ್ವಾತಂತ್ರ್ಯ ಹಾಗೂ ವಾಸ್ತವದ ಮುಖಾಮುಖಿಯನ್ನು ಮಾಡಿಸಲು ಕವಿತೆ ರೂಪಕಗಳ ಕನ್ನಡಿ ಹಿಡಿಯುತ್ತದೆ. ಕಾರ್ಪೊರೇಟ್ ಹುಡುಗಿಯರು ಮೂಡಿಸಿದ ಫ್ಯಾಷನ್ ಜಗತ್ತಿನ ಹೊಸ ಸೌಂದರ್ಯ ಮೀಮಾಂಸೆಯ ಮುಂದೆ ತನ್ನ ಚೆಲುವನ್ನು ಒರೆಗೆ ಹಚ್ಚುವ ಕೆಚ್ಚೂ ಇಲ್ಲಿ ಧ್ವನಿಸುತ್ತದೆ
ಹೊಸಕಾಲದ ಹೊಸ ಕಂಪನಗಳನ್ನು ವಿಸ್ತರಿಸುತ್ತ ತಮ್ಮ ಕಾವ್ಯ ಧರ್ಮವೊಂದನ್ನು ತಾವೇ ಕಟ್ಟಿಕೊಳ್ಳುತ್ತಿರುವ ಈ ಕವಯತ್ರಿಯರ ಬರವಣಿಗೆ ವಿಶಿಷ್ಟವಾಗಿದೆ. ಈಗ ಮತ್ತಷ್ಟು ಪ್ರಬುದ್ಧವಾಗಿಯೂ ಸಾಂದ್ರವಾಗಿಯೂ ಬರೆಯುತ್ತಿರುವ ಇವರ ಮುಂದಿನ ಕಾವ್ಯನಡೆ ನಿಜಕ್ಕೂ ಆಸಕ್ತಿ ಹುಟ್ಟಿಸುತ್ತದೆ.

× Chat with us