ಕಾವೇರಿ ತೀರದಲ್ಲಿ ನಾಟಿ ಹಾಡು

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಶ್ರೀರಂಗದಪಟ್ಟಣದ ನಮ್ಮ ಗದ್ದೆಯ ವ್ಯವಸಾಯದಲ್ಲಿ ತೊಡಗಿದ್ದಾಗ, ಒಮ್ಮೆ ನಮ್ಮ ಗದ್ದೆಯಲ್ಲಿ ಬತ್ತದ ಪೈರಿನ ನಾಟಿ ಕಾರ‍್ಯಕ್ರಮ ನಡೆಯುವುದಿತ್ತು. ಬರಗದ್ದೆಯಲ್ಲಿ ಬತ್ತದ ಪೈರುಗಳ ಗೊಂಚಲುಗಳು ಕುಳಿತಿದ್ದವು.
ನಾನು ನಾಟಿ ಹಾಕುವ ಹೆಣ್ಣಾಳುಗಳಿಗಾಗಿ ಕಾಯುತ್ತ ಕುಳಿತಿದ್ದೆ. ಆಗೊ, ಸೇರೆಗಾತಿ ಪುಟ್ಟವ್ವನ ನೇತೃತ್ವದಲ್ಲಿ ಹೆಣ್ಣಾಳುಗಳು ದಂಡು ಆಗಮಿಸಿತು. ಗಂಡಾಳುಗಳು ಪೈರಿನ ಗೊಂಚಲುಗಳನ್ನು ಪಾಯಸದಂತಿದ್ದ ಮಣ್ಣಿನ ಗದ್ದೆಗಳಲ್ಲಿ ಅಲ್ಲಲ್ಲಿ ಹಾಕಿದ ಮೇಲೆ ಅವರ ಕೆಲಸ ಮುಗಿಯಿತು. ಗಂಡಾಳುಗಳು ಕೊಂಚ ಸುಧಾರಿಸಕೊಳ್ಳತೊಡಗಿದರು.

ನಾಟಿ ಹಾಕುವ ಹೆಂಗಸರು ತುಂಬು ತೋಳಿನ ಶರಟುಗಳನ್ನು ಧರಿಸಿ ಗದ್ದೆಗೆ ಇಳಿದರು. ಪೈರನ್ನು ನಾಟಿ ಮಾಡುವಾಗ ಕೆಸರು ಮೈ ಕೈ, ಸೀರೆಗಳಿಗೆ ತಾಗಬಾರದೆಂದು ಅವರು ಶರಟುಗಳನ್ನು ಹಾಕಿಕೊಳ್ಳುತ್ತಾರೆ. ಬತ್ತದ ಸಸಿ ನಾಟಿ ಪ್ರಾರಂಭವಾಯ್ತು. ವಡ, ವಡ ಮಾತು ಪ್ರಾರಂಭವಾಗಿ ಸೇರೆಗಾತಿ,` ಸುಮ್ನೆ ನಾಟಿ ಆಕ್ರಮ್ಮಿ’ ಎಂದು ರೇಗಿದಳು. ಗಿರಗಕ್ಕ, `ಅಕ್ಕೊ ಬಾಯ್ ಮಾತಾಡದ್ರೆ, ಕೈ ಕೆಲಸ ಮಾಡ್ತದೆ. ಸುಮ್ನಿರಕ್ಕ’ ಎಂದು ಸಮಾಧಾನ ಹೇಳಿ `ಮುತ್ತೆಲ್ಲಿ ಮಾರಿದೆನೊ ರತ್ನಾಗಿರಿ; ಮುತ್ತೆಲ್ಲಿ ಸಾರಿದೆನೊ ರತ್ನಾಗಿರಿ  ಎಂಬೊ ಪಾಗುಡ ಬಜಾರದಲ್ಲಿ ಬಂಗಾರ ಸಾರಿದೆನೊ’ ಎಂದು ಸೊಲ್ಲೆತ್ತಿ ಹಾಡಿದಳು. ಈಗ ಎಲ್ಲರೂ ಮೌನವಾಗಿ ಪೈರುಗಳನ್ನು ಕೆಸರು ಗದ್ದೆಯಲ್ಲಿ ನಾಟಿ ಮಾಡಲಾರಂಭಿಸಿದರು.

ಹಾಡಿನ ಸೊಲ್ಲಿಗೆ ನನ್ನ ಕಿವಿ ಚುರುಕಾಗಿ ಗಿರಗಕ್ಕನ್ನ ಆ ಹಾಡನ್ನ ಪೂರ್ತಿ ಹೇಳ್ರಮ್ಮ ಎಂದು ಕೇಳಿದೆ. ಗಿರಗಕ್ಕ `ಅವ್ವಾ, ನಾಳೆ ಆ ಪೆಟ್ಗೆ ತಗಂಡ್ ಬನ್ರವ್ವಾ ಆಗ ಎಲ್ರೂ ಸೇರಿ ಆಡ್ತೀವಿ’ ಎಂದಳು. ಪೆಟ್ಗೆ! ಅದೆಂತ ಪೆಟ್ಗೆ? ಇವರು ಹಾಡಕ್ಕೆ ಪೆಟ್ಗೆ ಯಾಕೆ ಬೇಕು ಅನ್ನಿಸಿ, `ಅಲ್ಲಮ್ಮಾ ನೀವು ಹಾಡ್ ಹೇಳಿದ್ರೆ ಸಾಕು, ಅದೆಂತ ಪೆಟ್ಗೆ ನೀನ್ ಕೇಳೋದು’ ಎಂದೆ. ಗಿರಗಕ್ಕ `ಅವ್ವಾ, ನಾವು ಏಳಿದ್ದ ಆಡನ್ನೆಲ್ಲ ಎಕಾರ್ಡ್ ಮಾಡ್ಕತದಲ್ಲಾ ಆ ಪೆಟ್ಗೆ ಕಣವ್ವಾ’ ಎಂದಳು! ಓಹೊ ! ಇವಳು ಕೇಳ್ತಾ ಇರೋದು ಟೇಪ್‌ರೆಕಾರ್ಡ್‌ರ್ ಎಂದು ಹೊಳೆದು, `ನನ್ನ ಹತ್ರ ಅವೆಲ್ಲಾ ಇಲ್ಲಾ, ನೀವು ಇಷ್ಟಪಟ್ಟು ಹಾಡಿದ್ರೆ ಸಂತೋಷವಾಗಿ ಕೇಳ್ತೀನಿ. ಇಲ್ಲದಿದ್ದರೆ ಇಲ್ಲಾ’ ಎಂದೆ. ಆಗ ಸೇರೆಗಾತಿ, `ನೀನೂ ಸೈಕಣಮ್ಮಿ ಗಿರ್ಗಿ, ಅವ್ರೇನೊ ಆಸೆಪಟ್ಟು ಆಡೇಳಿ ಅಂತ ಕೇಳಿದ್ರೆ ನೀನೂ ಬಲವಾದ್ದಕ್ಕೆ ಪಟ್ಟಾಗ್ತಿ. ಬಿರ್‌ಬಿರನೆ ಕೇಮೆ ನೋಡ್ರಮ್ಮಿ. ನಾಳೆಗೆ ನಾಟಿ ಉಳಿಸಿ ತಂಗಳು ನಾಟಿ ಮಾಡ್ಬೇಡಿ’ ಎಂದು ಜೋರು ಮಾಡಿದಳು.
ಇವರು ಕೆಲಸ ನಿಧಾನ ಮಾಡಿ, ನಾಳೆಗೂ ಈ ಗದ್ದೆಯ ನಾಟಿ ಕೆಲಸ ಉಳಿದರೆ ಈಗಾಗಲೆ ಒಪ್ಪಿಕೊಂಡಿರುವ ಇನ್ನೊಂದು ಗದ್ದೆಯ ನಾಟಿ ಕಥೆ ಏನು? ನನ್ನ ದುಡಿಮೆಯ ಕಥೆ ಏನು? ಎನ್ನುವುದು ಸೇರೆಗಾತಿಯ ಚಿಂತೆ.

ನಾಟಿ ಹಾಕುವ ಹೆಂಗಸರನ್ನು ನೋಡುತ್ತ ನನಗೆ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿದ್ದ ನೇಜಿ ನೆಡುವ ಹೆಂಗಸರು, ಹಳ್ಳಿಯಲ್ಲಿ ಬಡವರು. ವೀಳೆದೆಲೆಯ ಜಗಿದು ಉಗಿದು, ಗೆಳತಿಯರನು ಕರೆದು ಕರೆದು ಹಾಡು ನೆನಪಾಗಿ ಗುನಗಲಾರಂಭಿಸಿದೆ. ಅಷ್ಟರಲ್ಲಿ ಮತ್ತೆ ಗುಜುಗುಜು ಮಾತಿನ ಗುಲ್ಲು. ಒಬ್ಬಳು ಸೇರೆಗಾತಿನ ಕೇಳ್ತಾ ಇದ್ದಳು. `ಅಲ್ಲಾ ಕಣಕ್ಕಾ, ನಾವು ಬಿಸ್ಲಲ್ಲಿ ನಡಾ ಬಗ್ಗಿಸಿ, ಕೆಸರಲ್ಲಿ ನಿಂತ್ಕಂಡು ಪೈರು ನಾಟಿ ಮಾಡ್ತೀವಿ. ಇವತ್ತು ನಾಟಿ ಮುಗಿಸೇ ಓಗ್ಬೇಕು ಅಂತ ನೀನೂ ತಾಕೀತು ಮಾಡ್ತೀಯಾ, ಗಂಡಾಳುಗಳು ಅಲ್ಬೆ ಒಡ್ದು, ಬೀಡಿ ಸೇದ್ಕಂಡು ಸುಧಾರಸ್‌ಕಂಡು ಇರ‍್ತಾರೆ. ಅವರ್ಗೆ ಕೂಲಿ ಜಾಸ್ತಿ. ನಮ್ಗೆ ಕಮ್ಮಿ ಅದ್ಯಾಕೆ? ಯಾವ ವರ್ಸ, ಯಾವ ಗದ್ದೆ ಕೆಲ್ಸಕ್ಕೆ ಓಗಲಿ, ನಮ್ಗೆ ಇಟ್ಟು, ಅನ್ನ ಸಾರು ಊಟ ಆಕ್ತಾರೆ. ಒಂದ್ಸಲಿಗಾದ್ರೂ ನಮ್ಗೆ ಬಾಡೂಟ ಯಾಕೆ ಆಕಬಾರ್ದು?’ ಎಂದು ಕೇಳುತ್ತಿದ್ದಳು. `ಅದಕ್ಕೆ ನಾನೇನು ಮಾಡ್ಲಮ್ಮಿ, ನಾವೆಲ್ಲ ಸೇರ‍್ಕಂಡು ಕೇಳನಾ, ಈಗ ಕೇಮೆ ನೋಡು’ ಎಂದಳು ಸೇರೆಗಾತಿ.
ಗದ್ದೆ ಅಂಚಿನ ಮಾವಿನ ಮರದ ನೆರಳಲ್ಲಿ ನಾಟಿ ಕೆಲಸ ಮಾಡುವವರಿಗಾಗಿ ನಂಜಕ್ಕ ತಾತ್ಕಾಲಿಕ ಒಲೆ ಹೂಡಿ ಅನ್ನ, ತರಕಾರಿ ಸಾರು, ಪಾಯಸ ತಯಾರಿಸುತ್ತಿದ್ದಳು. ನಂಜಕ್ಕನಿಗೆ ಈ ಕೆಲಸಕ್ಕೆ ಒಂದಾಳಿನ ಕೂಲಿ ಕೊಡಬೇಕು. ನಾಟಿ ಹಾಕುವ ಗಡಸುಗಾತಿಯರ ಮಾತಿಗೆ ಕಿವಿ ಕೊಟ್ಟಿದ್ದ ನಾನು ಯೋಚನಾಮಗ್ನಳಾದೆ. ನಮ್ಮ ಗದ್ದೆಯ ಕೆಲಸ ನಾಳೆಗೂ ಮುಂದುವರೆಯುವುದಿತ್ತು. ಇವರು ಬಾಡ್ನೆಸರು ಹಾಕದಿದ್ದರೆ ಬಿಡುವವರಲ್ಲ ಎನ್ನುವುದು ಅರಿವಾಗಿ ಅದಕ್ಕೆ ಹೇಗೆ ಏರ್ಪಾಡು ಮಾಡಲಿ ಎಂದು ಯೋಚಿಸತೊಡಗಿದೆ. ಆಗ ಕಾವೇರಿ ನದಿಯ ಮೇಲಿಂದ ಬೀಸಿದ ಗಾಳಿಯಲ್ಲಿ ತೇಲಿ ಬಂದಿತು ಗಿರಗಕ್ಕನ ಹಾಡು

“ಮಾದಪ್ಪ ಬರುವಾಗ ಮಾಳೆಲ್ಲಾ ಘಮ್ಮೆಂದೊ
ಮಾಳದ ಗರಿಕೆ ಚಿಗುರೊಡ್ದು ………”

ಪದ್ಮಾ ಶ್ರೀರಾಮ 
× Chat with us