ಹುಣಸೂರು ಕೇಂದ್ರಿತ ಅರಸು ಜಿಲ್ಲೆಗೆ ಮತ್ತೆ ಬೇಡಿಕೆ

ಹುಣಸೂರು: ರಾಜ್ಯದಲ್ಲಿ ಹೊಸಪೇಟೆ ಕೇಂದ್ರಿತವಾಗಿ ವಿಜಯನಗರ ಜಿಲ್ಲೆ ರಚನೆಯಾದ ನಂತರ ಮತ್ತೊಮ್ಮೆ ಹುಣಸೂರು ಕೇಂದ್ರಿತ ದೇವರಾಜ ಅರಸು ಜಿಲ್ಲೆ ಬೇಡಿಕೆಗೆ ಬಲ ಬಂದಿದೆ.

ಹುಣಸೂರಿನಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೬ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕದ್ವಯರಾದ ಎಚ್.ಪಿ.ಮಂಜುನಾಥ್ ಹಾಗೂ ಎ.ಎಚ್.ವಿಶ್ವನಾಥ್ ಈ ವಿಷಯ ಪ್ರಸ್ತಾಪಿಸಿ ಹೊಸ ಜಿಲ್ಲೆ ಬೇಡಿಕೆಗೆ ಶಕ್ತಿ ತುಂಬಿದ್ಧಾರೆ.

ಹುಣಸೂರು ಎಪಿಎಂಸಿ ಬಳಿ ಇರುವ ಅರಸು ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ, ಅರಸರ ಕುರಿತ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದ ನಂತರ ವಾತನಾಡಿದ ಶಾಸಕ ಎಚ್‌ಪಿ.ಮಂಜುನಾಥ್, ʻಮೈಸೂರು ಜಿಲ್ಲಾಡಳಿತದ ಮೇಲಿನ ಒತ್ತಡ ತಗ್ಗಬೇಕಾದರೆ ಹುಣಸೂರು ಜಿಲ್ಲೆಯಾಗಬೇಕುʼಎಂದು ತಿಳಿಸಿದರು.

ʻಇದೀಗ ಎಲ್ಲದಕ್ಕೂ ಮೈಸೂರಿಗೆ ಎಡತಾಕಬೇಕಿದೆ. ಉಪವಿಭಾಗವಾದ ಹುಣಸೂರನ್ನು ಕೇಂದ್ರವಾಗಿಸಿಕೊಂಡು ಹುಣಸೂರನ್ನು ಅರಸು ಜಿಲ್ಲೆಯಾಗಿಸಲು ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸದಿಂದ ಮುಂದೆ ಬರುವ ಅಧಿವೇಶನದಲ್ಲಿ ಮನವಿ ಮಾಡಲಾಗುವುದು. ಮೊದಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದುʼ ಎಂದರು.

ದೇವರಾಜ ಅರಸರ ಆಡಳಿತದ ಅವಧಿಯಲ್ಲಿ 20 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದ್ದರೂ ಬಡವರು, ಶೋಷಿತರ ಮನೆ ಬಾಗಿಲಿಗೆ ಸವಲತ್ತು ತಲುಪುತ್ತಿತ್ತು. ಈಗ 2 ಲಕ್ಷ ರೂ. ಬಜೆಟ್ ಮಂಡಿಸಿದರೂ ಸವಲತ್ತು ಪಡೆಯಲು ಹೋರಾಟ ನಡೆಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾತನಾಡಿ, ಹುಣಸೂರನ್ನು ಜಿಲ್ಲಾ ಕೇಂದ್ರವಾಗಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಹುಡಾ ಅಧ್ಯಕ್ಷ ಗಣೇಶ್ ಕುವಾರಸ್ವಾಮಿ, ನಗರಸಭೆ ಅಧ್ಯಕ್ಷರಾದ ಅನುಷಾರಾಘು, ಉಪಾಧ್ಯಕ್ಷ ದೇವನಾಯಕ, ಸದಸ್ಯರಾದ ಸತೀಶ್ ಕುವಾರ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

ಸಿಎಂ ಬಳಿ ನಿಯೋಗ: ಎಸ್‌ಟಿಎಸ್ ಅಭಯ

ಹುಣಸೂರು: ಹುಣಸೂರು ಜಿಲ್ಲೆ ರಚನೆ ವಿಚಾರದಲ್ಲಿ ಎಲ್ಲಾ ರಾಜಕೀಯ ಮುಖಂಡರು ಒಮ್ಮತಾಭಿಪ್ರಾಯದಿಂದ ಬಂದರೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಡಿ.ದೇವರಾಜ ಅರಸು ಅವರ ಗ್ರಾಮ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಗೆ ಶುಕ್ರವಾರ ಭೇಟಿ ನೀಡಿದ ಸಹಕಾರ ಮತ್ತು ಮೈಸೂರು ಅವರು ಅರಸು ಗದ್ದಿಗೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಹುಣಸೂರು ಕಂದಾಯ ವಿಭಾಗವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್ ಮತ್ತು ವಿಧಾನಸಭೆ ಸದಸ್ಯರಾದ ಎಚ್.ಪಿ.ಮಂಜುನಾಥ್ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸಿಎಂ ಭೇಟಿ ಮಾಡಲು ನಿಯೋಗ ಕೊಂಡೊಯ್ಯಲಾಗುವುದು ಎಂದರು.

× Chat with us