ಮೈಸೂರು ಜಿಲ್ಲೆಯಲ್ಲಿ 93 ದೇವಾಲಯಗಳ ಧ್ವಂಸಕ್ಕೆ ಸರ್ಕಾರದ ದ್ವಂದ್ವ ನೀತಿಯೇ ಕಾರಣ: ಎಚ್‌ಡಿಕೆ

ಮೈಸೂರು: ಸುಪ್ರೀಂ ಕೋರ್ಟ್‌ ಆದೇಶದ ನೆಪದಲ್ಲಿ ಮೈಸೂರು ಜಿಲ್ಲೆಯಲ್ಲಿ 93 ದೇವಾಲಯಗಳ ಧ್ವಂಸಕ್ಕೆ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೇ? ಒಂದೆಡೆ ದೇಗುಲಗಳ ಧ್ವಂಸ ನಡೆಯುತ್ತಿದೆ. ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುವುದು ಬೇಡ. ದೇವಾಲಯಗಳಿಗೆ ರಕ್ಷಣೆ ನೀಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದೆ. ಜನರ ಗಮನ ಬೇರೆಡೆಗೆ ಸೆಳೆಯಲು ಸರ್ಕಾರವೇ ಈ ನಾಟಕ ಆಡುತ್ತಿದೆಯಾ ಎಂಬ ಸಂಶಯ ಉಂಟಾಗುತ್ತಿದೆ. ಇದೂ ಬಿಜೆಪಿಯ ಕಾರ್ಯಸೂಚಿಯೇ ಎಂದು ಪ್ರಶ್ನಿಸಿದ್ದಾರೆ.

ದೇವಾಲಯಗಳನ್ನೇಕೆ ನೆಲಸಮ ಮಾಡಲಾಗುತ್ತಿದೆ? ಸರ್ಕಾರವೇ ಇದಕ್ಕೆ ಉತ್ತರ ನೀಡಬೇಕು. ಸರ್ಕಾರಕ್ಕೆ ನಿಜಕ್ಕೂ ದೇಗುಲ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಎಲ್ಲ ಪಕ್ಷಗಳನ್ನು ಕರೆದು ಚರ್ಚೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

× Chat with us