ಎಚ್‌ಡಿಡಿ ಮನ್‌ಮುಲ್ ವಿಷಯಕ್ಕೂ ಧರಣಿ ಮಾಡುತ್ತೇನೆ ಎನ್ನಲಿ: ಸಿಆರ್‌ಎಸ್

ನಾಗಮಂಗಲ: ಹಾಸನದ ವಿಮಾನ ನಿಲ್ದಾಣ ಮತ್ತು ಕೆ.ಆರ್.ಪೇಟೆ ಕ್ರಷರ್ ವಿಷಯದಲ್ಲಿ ಧರಣಿ ಮಾಡುತ್ತೇವೆ ಎನ್ನುವ ಮಾಜಿ ಪ್ರಧಾನಿ ನಮ್ಮ ನಾಯಕ ಎಚ್.ಡಿ.ದೇವೇಗೌಡ ಮನ್‌ಮುಲ್ ಅವ್ಯವಹಾರದ ಬಗ್ಗೆಯೂ ತನಿಖೆ ನಡೆಸುವಂತೆ ವಿಧಾನಸೌಧದ ಮುಂದೆ ಧರಣಿ ಕೂರಲಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕೆಯೊಂದಿಗೆ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮತ್ತು ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದರ ಕುರಿತು ಅವರು ಮಾತನಾಡಿದರು.

ಅಲ್ಲಿರುವ ಧ್ವನಿ ನನ್ನದೆ ಎಂದ ಅವರು, ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವ ಎಚ್ ಡಿಕೆ ಮತ್ತು ಎಚ್ ಡಿಡಿ ಈ ವಿಷಯದಲ್ಲಿ ಯಾಕೆ ಸುಮ್ಮ ನಿದ್ದಾರೆ. ಹಾಸನ ಜಿಲ್ಲೆಯ ಬಗ್ಗೆ ಮಾತ್ರ ಮಾತನಾಡುವ ಎಚ್‌ಡಿಡಿಗೆ ಇಲ್ಲಿನ ಜನರು ಜೆಡಿಎಸ್ ಪಕ್ಷದ ಏಳು ಶಾಸಕರನ್ನು ಗೆಲ್ಲಿಸಿದ್ದಾರೆ ಎಂಬ ಅರಿವಿರಬೇಕಲ್ಲ ಎಂದು ಛೇಡಿಸಿದರು.

ತನಿಖೆಗೆ ಅಡ್ಡಿ ಪಡಿಸುವುದರಲ್ಲಿ ಜೆಡಿಎಸ್ ಪಾತ್ರವಿದರ ಎಂಬುದನ್ನು ಸಿದ್ದ ರಾಮಯ್ಯ ಮತ್ತು ನಾನು ಕೆ.ಆರ್.ಪೇಟೆಯಲ್ಲಿ ಹೇಳಿದ್ದೇವೆ. ಇವರು ತನಿಖೆ ನಿಲ್ಲಿಸಿ ಅಂತ ಹೇಳಿದ್ದರೆ ಅದು ಮಹಾಪರಾಧ.‌ ಇದು ಈ ಜಿಲ್ಲೆಯ 15 ರಿಂದ 20 ಲಕ್ಷ ಮಂದಿ ರೈತರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರಷರ್ ಉದ್ಘಾಟನೆಗೆ ಬರುತ್ತಾರೆ. ಒಂದೇಡೆ ಸಕ್ಕರೆ ಕಾರ್ಖಾನೆ ನಿಂತಿದೆ ಮತ್ತೊಂದೆಡೆ ಡೈರಿ ನಿಂತರೆ ಇವರೇ ಕಾರಣಕರ್ತರಾಗುತ್ತಾರೆ ಎಂದು ಹರಿಹಾಯ್ದರು.

ಹಗರಣಕ್ಕೂ ಹೆಚ್ ಡಿಕೆಗೂ ಸಂಬಂಧವಿದೆ ಎಂದು ನಾನು ಹೇಳುವುದಿಲ್ಲ. ಅವರ ಆಪ್ತ ಸಹಾಯಕ ರಘು ಹಸ್ತಕ್ಷೇಪ ವಿದೆ ಎನ್ನುತ್ತಾರೆ ಜೊತೆಗೆ ಅವರ ಸಂಬಂಧಿಯ ಪಾತ್ರವಿದೆ ಎನ್ನುತ್ತಾರೆ. ಟ್ಯಾಂಕರ್ ಟೆಂಡರ್ ಕೊಡಿಸಲು ಹೆಚ್ ಡಿಕೆ ಫೋನ್ ಮಾಡಿದ್ದರೂ ಅದು ತಪ್ಪಲ್ಲ ಆದರೆ ತನಿಖೆಗೆ ಹಿಂದೇಟು ಹಾಕಬಾರದು ಎಂದರು.

ಟ್ಯಾಂಕರ್‌ನಲ್ಲಿ ಹಾಲಿಗೆ ನೀರು ಬೆರೆಸುವುದು ಮಹಾಪರಾಧ, ಇದನ್ನು ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. ಕಪ್ಪು ಪಟ್ಟಿಯಲ್ಲಿದ್ದ ಟ್ಯಾಂಕರ್‌ಗೆ ಹೇಗೆ ಟೆಂಡರ್ ನೀಡಿದರು. ವಿಷಯ ಗೊತ್ತಾದ ಮೇಲಾದರೂ ಟೆಂಡರ್ ರದ್ದುಪಡಿಸಬಹುದಿತ್ತು. ಯಾರಿಂದ ನಷ್ಟದ ಹಣ ವಸೂಲಿ ಮಾಡುತ್ತಾರೋ ಗೊತ್ತಿಲ್ಲ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಅಥವಾ ಮಾಡದೆಯೇ ತನಿಖೆ ನಡೆಸುತ್ತಾರೋ ಗೊತ್ತಿಲ್ಲ ತನಿಖೆಯಾಗಬೇಕು ಅಷ್ಟೇ ಎಂದರು.

ಮುಖ್ಯಮಂತ್ರಿ ಸಿಓಡಿ ತನಿಖೆ ಘೋಷಿಸಿದ ದಿನವೇ ಆದೇಶ ಹೊರಬೀಳುತ್ತದೆ. ಆದರೆ, ಇಲ್ಲಿ ಇನ್ನೂ ಆದೇಶವಾಗಿಲ್ಲ ಎಂದರೆ ಅನುಮಾನ ಮೂಡುವುದಿಲ್ಲವೇ? ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ 24 ಗಂಟೆಯಲ್ಲಿ ಆರೋಪಿಗಳ ಬಂಧಿಸಲಾಗಿದೆ. ಆದರಿಲ್ಲಿ ಒಂದು ತಿಂಗಳಾದರೂ ಆರೋಪಿಗಳ ಬಂಧನವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.

5 ಕೋಟಿ ಮೇಲಿನ ಅವ್ಯವಹಾರವಾದರೆ ಜೊತೆಗೆ ಇಲ್ಲಿನ ಟ್ಯಾಂಕರ್‌ಗಳನ್ನು ಹೈದರಾಬಾದ್‌ನಲ್ಲಿ ತಯಾರಿಸಲಾಗಿದೆ ಎಂಬ ಮಾಹಿತಿ ಇದೆ. ಇದೊಂದು ಅಂತರರಾಜ್ಯ ಪ್ರಕರಣ ಹೀಗಿರುವಾಗ ಸಿಬಿಐಗೆ ವಹಿಸಲು ಸಂಪೂರ್ಣ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲೆಯ ಬಗ್ಗೆ ಕನಿಷ್ಠ ಮಮತೆ ಬಿಎಸ್‌ವೈಗೆ ಇದ್ದರೆ, ನನ್ನದೂ ಇದೆ ಕೊನೆ ಅವಧಿ, ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಿಸಿಕೊಡಿ ಎಂದವರಿಗೆ ಈ ಹಗರಣವನ್ನು ಸಿಬಿಐಗೆ ವಹಿಸಲು ಕಷ್ಟವೇನು ಎಂದರು.

ಕೆವಿಯಟ್ ಹಾಕಿ, ಆಡಳಿತ ಮಂಡಳಿಗೆ ನೋಟಿಸ್ ನೀಡಿ ಅವರಿಂದ ಉತ್ತರ ಪಡೆಯದೆ ಸುಮ್ಮನಾದರೆ ಇದರ್ಥವೇನು ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.

ಜಿಲ್ಲೆಯ ರೈತರ ವಿಷಯದಲ್ಲಿ ಹೋರಾಟ ಹಿರಿಯರಾದ ಜಿ.ಮಾದೇಗೌಡ ಮತ್ತು ಎಚ್.ಡಿ.ಚೌಡಯ್ಯ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು ಮನ್‌ಮುಲ್ ವಿಷಯದಲ್ಲಿ ಹೋರಾಟಕ್ಕೆ ಇಳಿಯಲಿ ಎಂದು ಕೋರಿಕೊಂಡರು.