ಜಿ.ಎಸ್.ಟಿ. ಸರಳೀಕರಣ ಎಷ್ಟು? ಹೇಗೆ?; ಪ್ರೊ.ಚಿಂತಾಮಣಿ

 

ಶೇ.೩ರ ವಿಶೇಷ ಜಿ.ಎಸ್.ಟಿ. ದರ ಬದಲಿಸಿ ಶೇ.೫ ತೆರಿಗೆ ಪಟ್ಟಿಗೆ ಸೇರಿಸುವುದು ಸೂಕ್ತ

ಹದಿನೈದನೇ ಹಣಕಾಸು ಆಯೋಗ ತನ್ನ ಅಂತಿಮ ವರದಿಯಲ್ಲಿ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಸರಕು ಮತ್ತು ಸೇವೆಗಳ ತೆರಿಗೆಯಲ್ಲಿ ಮಾಡಲೇಬೇಕಾಗಿರುವ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಿದೆ. ಅವುಗಳನ್ನು ತುರ್ತಾಗಿ ಜಾರಿಗೆ ತರುವ ಬಗ್ಗೆಯೂ ಸ್ಪಷ್ಟ ಮಾತುಗಳಲ್ಲಿ ಒತ್ತಿ ಹೇಳಲಾಗಿದೆ. ಇದರ ಪರಿಣಾಮವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಫೆಬ್ರವರಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದು ಮುಂದಿನ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅರುಣ್ ಜೇಟ್ಲಿಯವರು ಅರ್ಥ ಮಂತ್ರಿಯಾಗಿದ್ದಾಗ ಅವರ ೨೦೧೮ರ ಬಜೆಟ್ ಮಂಡನೆ ಸಂದರ್ಭದಲ್ಲಿ ಜಿ.ಎಸ್.ಟಿ. ತೆರಿಗೆ ದರಗಳನ್ನು ನಾಲ್ಕರಿಂದ ಮೂರಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯಿತು. ಹಲವು ಕಾರಣಗಳಿಂದ ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ. ಜೇಟ್ಲಿಯವರ ಆರೋಗ್ಯ ಕೆಟ್ಟಿತು. ಅರ್ಥ ಮಂತ್ರಿ ಬದಲಾಗಿ ತಾತ್ಕಾಲಿಕವಾಗಿ ಪಿಯೂಷ್ ಗೋಯಲ್ ವಹಿಸಿಕೊಂಡರು. ಲೋಕಸಭೆ ಚುನಾವಣೆಗಳು ಬಂದವು. ನಂತರ ನಿರ್ಮಲಾಜಿ ವಿತ್ತ ಮಂತ್ರಿಯಾದರು. ಪೂರ್ಣಾವಧಿ ಬಜೆಟ್ ಮಂಡನೆ. ಕೆಲವೇ ತಿಂಗಳುಗಳಲ್ಲಿ ಕೋವಿಡ್- ೧೯ ರೋಗದ ಆಪತ್ತು. ಹೀಗಾಗಿ ಜಿ.ಎಸ್.ಟಿ. ಸುಧಾರಣೆಗಳು ನೆನೆಗುದಿಗೆ ಬಿದ್ದವು. ಆಯೋಗದ ಸಲಹೆಗಳು

ಮುಖ್ಯವಾಗಿ ಶೇ.೧೨ ಮತ್ತು ಶೇ.೧೮ರ ತೆರಿಗೆ ದರಗಳನ್ನು ವಿಲೀನ ಮಾಡಿ ಒಂದೇ ದರ ನಿಗದಿ ಮಾಡಬೇಕಾಗಿದೆ. ಈ ಮಾದರಿ ದರವು ಶೇ.೧೪,೧೫ ಮತ್ತು ೧೬ರಲ್ಲಿ ಯಾವುದಾದರೊಂದು ಆಗಬಹುದು. ಇದನ್ನು ನಿರ್ಧರಿಸುವಾಗ ತೆರಿಗೆ ಸಂಗ್ರಹ, ಒಟ್ಟಾರೆ ಸರಾಸರಿ ತೆರಿಗೆ ಭಾರ ಮತ್ತು ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮಗಳು ಮುಂತಾದವುಗಳನ್ನು ಪರಿಗಣಿಸಬೇಕಾಗುತ್ತದೆ. ಈಗ ಜಿ.ಎಸ್.ಟಿ.ಯ ಒಟ್ಟಾರೆ ಸರಾಸರಿ ತೆರಿಗೆ ಭಾರ (Incidence of GST) ಶೇ.೧೧.೮ ಇದ್ದು ಇದನ್ನು ಸ್ವಲ್ಪವಾದರೂ ಹೆಚ್ಚಿಸುವ ಸಾಧ್ಯತೆಗಳು ಸಾಕಷ್ಟಿವೆ. ಶೇ.೧೪ಕ್ಕೆ ನಿಲ್ಲಿಸಿದರೆ ತೆರಿಗೆ ಸಂಗ್ರಹ ಹಿಂದಿನ ಮಟ್ಟದಲ್ಲಿ ಮುಂದುವರಿಯಬಹುದು. ಶೇ.೧೫ ನಿಗದಿಯಾದರೆ ಜನರಿಗೆ ತೆರಿಗೆ ಭಾರ ಅಷ್ಟೇನು ಹೆಚ್ಚಾಗದೆ ತೆರಿಗೆ ಸಂಗ್ರಹ ಸಾಕಷ್ಟು ಹೆಚ್ಚಬಹುದು.

ತೆರಿಗೆಮುಕ್ತ ಉತ್ಪನ್ನಗಳು ಮತ್ತು ಸೇವೆಗಳ ಪಟ್ಟಿಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ರಾಜ್ಯಗಳಲ್ಲಿ ಮೌಲ್ಯವರ್ಧಿತವಾಗಿದ್ದವು. ಜಿ.ಎಸ್.ಟಿ. ಜಾರಿ ಮಾಡುವ ಸಮಯದಲ್ಲಿ (೨೦೧೭ರಲ್ಲಿ) ೨೯೫ಕ್ಕೂ ಹೆಚ್ಚು ಉತ್ಪನ್ನಗಳು ಸೆಂಟ್ರಲ್ ಎಕ್ಸೈಜ್ (ಕೇಂದ್ರ ಉತ್ಪಾದನಾ) ತೆರಿಗೆ ಮುಕ್ತ ಮತ್ತು ಹಲವು ಸೇವೆಗಳು ಸೇವಾ ತೆರಿಗೆ ಮುಕ್ತ ಪಟ್ಟಿಗಳಲ್ಲಿದ್ದವು. ಆಗ ನಡೆದ ಚರ್ಚೆಗಳು ಮತ್ತು ಒಟ್ಟಾಭಿಪ್ರಾಯದ ಪಟ್ಟಿಯನ್ನಷ್ಟೇ ಜಿ.ಎಸ್.ಟಿ. ಯಲ್ಲಿಯೂ ಮುಂದುವರಿಯಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಇತರ ಹಲವು ಸರಕಗುಳು ಮತ್ತು ಸೇವೆಗಳು ತೆರಿಗೆ ರಿಯಾಯಿತಿ ಪಟ್ಟಿಯಲ್ಲಿ ಉಳಿದುಕೊಂಡವು. ಈಗ ಬದಲಾದ ಸ್ಥಿತಿಯಲ್ಲಿ ಇವುಗಳಲ್ಲಿ ಹಲವನ್ನಾದರೂ ಶೇ.೫ರ ತೆರಿಗೆ ಪಟ್ಟಿಯಲ್ಲಿ ಸೇರಿಸುವುದು ತೆರಿಗೆ ನ್ಯಾಯ ಸಿದ್ಧಾಂತ ಮತ್ತು ತೆರಿಗೆ ಸಂಗ್ರಹ ಎರಡೂ ದೃಷ್ಟಿಯಿಂದ ಒಳ್ಳೆಯದು ಎನ್ನುವ ವಾದವನ್ನು ಆಯೋಗ ಸಲಹೆ ಮಾಡಿರುವುದು ಗಮನಾರ್ಹ.

ಚಿನ್ನ ಮತ್ತು ಚಿನ್ನಾಭರಣಗಳ ಮೇಲಿನ ಈಗಿರುವ ಶೇ.೩ ರ ವಿಶೇಷ ಜಿ.ಎಸ್.ಟಿ. ದರವನ್ನು ಬದಲಾಯಿಸಿ ಶೇ.೫ ತೆರಿಗೆ ದರದ ಪಟ್ಟಿಯಲ್ಲಿ ಸೇರಿಸುವುದು ಸೂಕ್ತ. ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷಾ ಸಂಸ್ಥೆಯ (National Sample Survey Organisation) ಸಮೀಕ್ಷಯ ಅಂಕಿ ಸಂಖ್ಯೆಗಳ ಪ್ರಕಾರ ಭಾರತದಲ್ಲಿ ಮಾರಾಟವಾಗುವ (ಉಪಯೋಗಿಸು) ಒಟ್ಟು ಚಿನ್ನ ಮತ್ತು ಚಿನ್ನಾಭರಣಗಳಲ್ಲಿ ಶೇ.೪೦ ರಷ್ಟನ್ನು ಜನಸಂಖ್ಯೆಯ ಮೇಲ್ಮಟ್ಟದ (ಶ್ರೀಮಂತ ವರ್ಗದ) ಶೇ.೩೦ ರಷ್ಟು ಜನರೇ ಖರೀದಿಸುತ್ತಾರೆ. ಮತ್ತು ಜನಸಂಖ್ಯೆಯ ತಳಮಟ್ಟದ ಶೇ.೨೦ ರಷ್ಟು ಜನರು (ಬಡವರ, ಕಡುಬಡವರು) ಕೇವಲ ಶೇ.೦.೬ರಷ್ಟು ಚಿನ್ನ ಮತ್ತು ಚಿನ್ನಾಭರಣಗಳನ್ನು ಮಾತ್ರ ಖರೀದಿಸುತ್ತಾರೆ. ಉಳಿದಂತೆ ಮಧ್ಯದ ಶೇ.೬೦ ರಷ್ಟು ಜನರು ಕೇವಲ ಶೇ.೧೯.೪ ಚಿನ್ನ, ಚಿನ್ನಾಭರಣಗಳಲ್ಲಿ ತೃಪ್ತಿಪಟ್ಟುಕೊಳ್ಳುತ್ತಾರೆ. ಇದು ಜಿ.ಎಸ್.ಟಿ. ಸಮಿತಿಗೂ ಗೊತ್ತು. ಚಿನ್ನ ಕೊಳ್ಳುವ ಆಗರ್ಭ ಶ್ರೀಮಂತರು ಒಂದಿಷ್ಟು ಹೆಚ್ಚು ತೆರಿಗೆ ಕೊಟ್ಟರೆ ಅವರಿಗೇನು ತೊಂದರೆಯಾಗುವುದಿಲ್ಲ. ಒಮ್ಮೆ ಜೇಟ್ಲಿ ಕೇಳಿದ್ದರು. ‘ಸಾಬೂನನ್ನು ಶೇ.೧೮ರ ದರದಲ್ಲಿಟ್ಟಿದ್ದೇವೆ. ಚಿನ್ನವನ್ನು ಶೇ.೫ರ ದರದಲ್ಲಿಟ್ಟರೆ ತಪ್ಪೇನು? ಆದ್ದರಿಂದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತದಂತೆಯೂ ಇದು ಸಮರ್ಪಕವಾಗಿಯೇ ಆಗುತ್ತದೆ.

ತಂಬಾಕು ಮತ್ತು ಅದರ ಉತ್ಪನ್ನಗಳ ಜಿ.ಎಸ್.ಟಿ.ಯಲ್ಲಿ ಸುಧಾರಣೆ ಬೇಕಾಗಿದೆ. ಸದ್ಯ ಕಚ್ಚಾ ತಂಬಾಕಿಗೆ ಶೇ.೫, ಶೇ.೨೮ ಜಿ.ಎಸ್.ಟಿ. ಇದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ೪೨೦ ಮಿಲಿಯನ್ ಕೆ.ಜಿ. ತಂಬಾಕಿನಲ್ಲಿ ೭೨ ಮಿಲಿಯನ್ ಕೆ.ಜಿ. ಮಾತ್ರ ಸಿಗರೇಟ್ ತಯಾರಿಕೆಗೆ ಉಪಯೋಗವಾಗುತ್ತದೆ. ಉಳಿದದ್ದು ಇತರ ಉತ್ಪನ್ನಗಳಾದ ಬೀಡಿ, ನಶ್ಯ, ಗುಟಕಾ ಮತ್ತು ಅಗಿಯುವ ತಂಬಾಕು ಮುಂತಾದವುಗಳಿಗೆ ಬಳಸಲ್ಪಡುತ್ತದೆ. ಇವುಗಳೂ ಆರೋಗ್ಯಕ್ಕೆ ಹಾನಿಕಾರಕವೇ. ಸ್ವಲ್ಪ ಕಡಿಮೆ ಇರಬಹುದು. ಅತ್ಯಲ್ಪ ಭಾಗ ಔಷಧಿ ತಯಾರಿಕೆಗೆ ಹೋಗಬಹುದು. ಅದನ್ನು ಮಾತ್ರ ತೆರಿಗೆ ಮುಕ್ತ ಮಾಡಬಹುದು. ಇನ್ನು ಮುಂದೆ ಶೇ.೫ರ ದರವನ್ನು ರದ್ದುಗೊಳಿಸಿ ವಿಲೀನಗೊಂಡ ಮಾದರಿ ದರ ಮತ್ತು ದಂಡನೆ ಎನ್ನಲಾಗುವ ಅತಿ ಹೆಚ್ಚಿನ ದರ ಹೀಗೆ ಎರಡೇ ದರಗಳಿಗೆ ತಂಬಾಕು iತ್ತು ಅದರ ಉತ್ಪನ್ನಗಳನ್ನು ಒಳಪಡಿಸಬಹುದು. ಇದರಿಂದ ತಂಬಾಕು ಉಪಯೋಗ ಕಡಿಮೆ ಮಾಡು ತೆರಿಗೆ ನೀತಿಯ ಉದ್ದೇಶವೂ ಈಡೇರುತ್ತದೆ. ತೆರಿಗೆ ಆದಾಯವೂ ಹೆಚ್ಚಾಗುತ್ತದೆ.
ಪೆಟ್ರೋಲಿಯಂ ಮತ್ತು ಮಾದಕ ಪೇಯಗಳು

‘ಒಂದು ದೇಶ, ಒಂದೇ ಪರೋಕ್ಷ ತೆರಿಗೆ’ ಎಂದು ಘೋಷಣೆ ಮಾಡಿ ನಾಲ್ಕು ವರ್ಷಗಳಾದರೂ ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು ಮತ್ತು ಮಾದಕ ಪೇಯಗಳು ಜಿ.ಎಸ್.ಟಿ.ಯಿಂದ ಹೊರಗೇ ಉಳಿದಿವೆ. ಕೇಂದ್ರ ಪೆಟ್ರೋಲಿಯಂ ಮೇಲೆ ಸೆಂಟ್ರಲ್ ಎಕ್ಸೈಜ್ ಆಕರಿಸುತ್ತಿದ್ದರೆ ರಾಜ್ಯಗಳಲ್ಲಿ ಮಾರಾಟವಾಗುವ ಈ ಉತ್ಪನ್ನಗಳಿಗೆ ಆಯಾ ರಾಜ್ಯಗಳು ಮಾರಾಟ(ವ್ಯಾಟ್) ತೆರಿಗೆ ವಿಧಿಸುತ್ತಿವೆ. ಮಾದಕ ಪೇಯಗಳ ಮೇಲಿನ ತೆರಿಗೆ ಸಂಪೂರ್ಣ ರಾಜ್ಯಗಳ ಹಕ್ಕು ಆಗಿರುವುದರಿಂದ ಅವು ಸ್ಟೇಟ್ ಎಕ್ಸೈಜ್ ಹಾಕುತ್ತಿವೆ. ಇದು ಅವುಗಳ ಪ್ರಮುಖ ಆದಾಯ ಮೂಲವೂ ಹೌದು. ಇದಲ್ಲದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಕೆಲವು ಸೆಸ್‌ಗಳನ್ನು ಹಾಕುತ್ತಿದ್ದು ಅದು ರಾಜ್ಯಗಳಿಗೆ ಹಂಚಿಕೆಯಾಗದ ಕೇಂದ್ರದ ಆದಾಯ ಮಾತ್ರ.

ಇವೆರಡನ್ನೂ ಈ ಕೂಡಲೆ ಜಿ.ಎಸ್.ಟಿ. ವ್ಯಾಪ್ತಿಗೆ ತರುವುದು ಸ್ವಲ್ಪ ಕಷ್ಟವಾದೀತು. ಮಧ್ಯಮಾವಧಿಯಿಂದ ದೀರ್ಘಾವಧಿ ಯೋಜನೆಯನ್ನು ರೂಪಿಸಿಕೊಂಡು ಜಿ.ಎಸ್.ಟಿ. ಕೌನ್ಸಿಲ್ ಚರ್ಚೆ ಮತ್ತು ಹೊಂದಾಣಿಕೆಗಳ ಮೂಲಕ ಕೇಂದ್ರ ಮತ್ತು ರಾಜ್ಯಗಳ ಒಟ್ಟಾಭಿಪ್ರಾಯ ರೂಪಿಸಿ ಹಂತ ಹಂತವಾಗಿಯಾದರೂ ವ್ಯಾಪ್ತಿಗೆ ತರಬೇಕು.
ಆರಂಭದಲ್ಲಿ ನೈಸರ್ಗಿಕ ಅನಿಲ ಮತ್ತು ಏವಿಯೇಶನ್ ಟರ್ಬೈನ್‌ಫ್ಯೂಯಲ್(ಂಖಿಈ) ಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಪ್ರಯೋಗ ಮಾಡಬಹುದು ಎ.ಟಿ.ಎಫ್. ವಿಷಯದಲ್ಲಿ ಆಯಾತ ಸುಂಕದ ಬದಲಾಗಿ ಜಿ.ಎಸ್.ಟಿ. ಬರುವುದರಿಂದ ತೊಂದರೆಯಾಗಲಾರದು. ನೈಸರ್ಗಿಕ ಅನಿಲ ನಮ್ಮ ನಿಯಂತ್ರಣದಲ್ಲಿರುವುದರಿಂದ ಸಮಸ್ಯೆಯಾಗಲಿಕ್ಕಿಲ್ಲ.

ಮಾದಕ ಪೇಯಗಳ ಸ್ಟೇಟ್ ಎಕ್ಸೈಜ್ ಸುಂಕದ ಬದಲಾಗಿ ಜಿ.ಎಸ್.ಟಿ. ತಂದರೆ ರಾಜ್ಯಗಳು ಸಂಗ್ರಹಿಸುವ ಹಕ್ಕು ಮತ್ತು ಪೂರ್ಣವಾಗಿ ಬಳಸುವ ಅಧಿಕಾರವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಪ್ರತಿರೋಧ ಬಂದೀತು. ಎಲ್ಲ ರಾಜ್ಯಗಳ ಅಬಕಾರಿ ಸುಂಕದ ಕಳೆದ ಐದು ಅಥವಾ ಹತ್ತು ವರ್ಷಗಳ ಸಂಗ್ರಹ ಮತ್ತು ಬೆಳವಣಿಗೆ ಬಗ್ಗೆ ಅಧ್ಯಯನ ಮಾಡಿ ಜಿ.ಎಸ್.ಟಿ.ಗೆ ಹೋಗುವುದರಿಂದ ಆಗುವ ಅನನುಕೂಲಗಳನ್ನು ಪಟ್ಟಿ ಮಾಡಿ ಸರಿಪಡಿಸುವ ಭರವಸೆಯನ್ನು ಕೇಂದ್ರ ಕೊಡಬೇಕಾಗುತ್ತದೆ. ಆಡಳಿತಾತ್ಮಕ ತೊಡಕುಗಳನ್ನೂ ಸರಿಪಡಿಸಬೇಕಾಗುತ್ತದೆ. ಇಲ್ಲಿ ಕೇಂದ್ರ ಮತ್ತು ರಾಜ್ಯಗಳ ಹೊಂದಾಣಿಕೆ ಬಹು ಮುಖ್ಯವಾಗುತ್ತದೆ. ಕೇಂದ್ರ ಉದಾರ ನೀತಿ ಅನುಸರಿಸಬೇಕು.

ಕೊನೆಯದಾಗಿ ಮೇಲೆ ವಿವರಿಸಿದ ಎಲ್ಲ ಬದಲಾವಣೆಗಳನ್ನು ತಂದ ನಂತರ ಅತಿ ಹೆಚ್ಚಿನ ತೆರಿಗೆದರವನ್ನು ಈಗಿನ ಶೇ.೨೮ರಿಂದ ಕನಿಷ್ಠ ಶೇ.೩೦ಕ್ಕಾದರೂ ಹೆಚ್ಚಿಸುವ ಸಾಧ್ಯತೆ ಇದೆ. ರಾಜ್ಯಗಳಿಗೆ ಕೊಡಬೇಕಿರುವ ಜಿ.ಎಸ್.ಟಿ. ಪರಿಹಾರ (ತೆರಿಗೆ ನಷ್ಟ ಪರಿಹಾರ)ಕ್ಕಾಗಿ ಕೇಂದ್ರವು ಜಿ.ಎಸ್.ಟಿ ಮೇಲೆ ಸೆಸ್ ಸಂಗ್ರಹಿಸುತ್ತಿದೆ. ಇದು ೨೦೨೨ಕ್ಕೆ ರದ್ದಾಗಬೇಕಿತ್ತು. ಕೋವಿಡ್- ೧೯ ವಿಶೇಷ ಸಂದರ್ಭದಿಂದಾಗಿ ಇನ್ನಷ್ಟು ದಿನ ಮುಂದುವರಿಯಬಹುದು ಎಂದಿದ್ದರೂ ಅದು ರದ್ದಾಗಲೇಬೇಕು. ಆಗ ಈ ದಂಡನೆಯ ದರವನ್ನು ಶೇ.೩೫ಕ್ಕಾದರೂ ಖಂಡಿತವಾಗಿ ಹೆಚ್ಚಿಸಬಹುದು. ಒಟ್ಟಿನಲ್ಲಿ ಮೂರೇ ದರಗಳ ಮತ್ತು ಆಡಳಿತಾತ್ಮಕವಾಗಿ ಸರಳವಾದ ರಾಜ್ಯಗಳ ತೆರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳನ್ನು ತೆರೆದಿಡಲಿದೆ. ಮೂಲ ಆಶಯದಂತೆ ತೆರಿಗೆದಾರರಿಗೆ ಭಾರವೂ ಕಡಿಮೆಯಾಗುವುದಲ್ಲದೆ ಆಡಳಿತ ವೆಚ್ಚಗಳು ಕಡಿಮೆಯಾಗುವುವೆಂದು ಆಶಿಸಲಾಗಿದೆ.
ಒಂದು ಮಾತು: ತೆರಿಗೆ ಕಾಯ್ದೆ, ನಿಯಮಗಳು ಮತ್ತು ವ್ಯವಸ್ಥೆಯ ಜೊತೆಗೆ ತೆರಿಗೆ ಆಡಳಿತವೂ ಸರಳ, ಪಾರದರ್ಶಕ ಮತ್ತು ತೆರಿಗೆದಾರ ಸ್ನೇಹಿಯಾಗಿರುವಂತೆ ಸರ್ಕಾರ ಎಚ್ಚರವಹಿಸಬೇಕು. ವ್ಯಾಜ್ಯಗಳಿಗೆ ಅವಕಾಶವಾಗದಂತೆ ತಕರಾರುಗಳು ಮತ್ತು ದೂರುಗಳ ಸಮಾಧಾನಕರ ಸರಿಪಡಿಸುವಿಕೆ ತೆರಿಗೆದಾರರು ಸ್ವ ಇಚ್ಛೆಯಿಂದ ನಿಯಮ ಪಾಲನೆ ಮಾಡಲು ಪೂರಕ ವಾತಾವರಣ ನಿರ್ಮಿಸುತ್ತದೆ.

ಪ್ರೊ.ಆರ್.ಎಂ.ಚಿಂತಾಮಣಿ
× Chat with us