ಜಾತ್ಯಾತೀತ ಶಿಕ್ಷಣ ನೀಡುವ ಅಪರೂಪದ ಮದ್ರಸಾಗಳು !


ಈ ಜೀವ ಈ ಜೀವನ
– ಪಂಜುಗಂಗೊಳ್ಳಿ

ಮೂರು ವರ್ಷಗಳ ಹಿಂದೆ ಪಿಯೂಪಿಯಾ ಸಾಹ, ಸಾಥಿ ಮೋಡಕ್ ಮತ್ತು ಅರ್ಪಿತಾ ಸಾಹ ಮೂವರು ಹಿಂದೂ ಹುಡುಗಿಯರು ಪಶ್ಚಿಮ ಬಂಗಾಳದ ಮದ್ರಸಾ ಸೆಕೆಂಡರಿ ಪರೀಕ್ಷೆಯಲ್ಲಿ 800 ರಲ್ಲಿ ಕ್ರಮವಾಗಿ 730(91.25%), 730 ಮತ್ತು 739 (92.38%) ಅಂಕಗಳನ್ನು ಪಡೆದು ಪಾಸಾದಾಗ ಕೇತು ಗ್ರಾಮದ ಜನ ತಮ್ಮ ಹೆಣ್ಣುಮಕ್ಕಳ ಸಾಧನೆಗೆ ಸಹಜವಾಗಿಯೇ ಸಂತೋಷ ಪಟ್ಟರು. ಆದರೆ, ಮುಸ್ಲಿಮರ ಮದ್ರಸಾಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಹೀಗೆ ಉನ್ನತ ದರ್ಜೆಯಲ್ಲಿ ಪಾಸಾಗುವುದು ಅವರ್ಯಾರಿಗೂ ವಿಶೇಷ ಸಂಗತಿಯಲ್ಲ. ಏಕೆಂದರೆ, ಪಶ್ಚಿಮ ಬಂಗಾಳದ ಬುಧ್ರ್ವಾನ್, ಕಾಸ್ಬಾ, ಓರ್ಗ್ರಾಂ, ಚಂದ್ರಕೋಣ ಮತ್ತು ಏಕ್ಮುಖ ಮೊದಲಾದ ಪ್ರದೇಶಗಳ ಮದ್ರಸಾಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಜೊತೆ ಹಿಂದೂ ವಿದ್ಯಾರ್ಥಿಗಳು ಕಲಿಯುವುದು ಮಾತ್ರವಲ್ಲ, ಮುಸ್ಲಿಂ ವಿದ್ಯಾರ್ಥಿಗಳಿಗಿಂತ ಹಿಂದೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಒಂದು ಸಾಮಾನ್ಯ ಸಂಗತಿ. ಕಾಸ್ಬಾ ಮದ್ರಸಾದಲ್ಲಿನ 1000 ವಿದ್ಯಾರ್ಥಿಗಳಲ್ಲಿ 600ಕ್ಕು ಹೆಚ್ಚು ವಿದ್ಯಾರ್ಥಿಗಳು ಹಿಂದೂಗಳು. ಓರ್ಗ್ರಾಂ ಮದ್ರಸಾದ 800 ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಿಂದುಗಳು. ಚಂದ್ರಕೋಣದ ಮದ್ರಸಾದ 300 ವಿದ್ಯಾರ್ಥಿಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದೂಗಳು. ಏಕ್ಮುಕದ ಮದ್ರಸಾದಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದು, ಅದರಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ 300ಕ್ಕೂ ಅಧಿಕ. ಇದರ ಜೊತೆ, ಈ ಮದ್ರಸಾಗಳಲ್ಲಿ ಹಿಂದೂ ಶಿಕ್ಷಕರೂ ಇರುವುದು ಇನ್ನೊಂದು ವಿಶೇಷ.

ಮದ್ರಸಾ ಅಂದರೆ ಮೌಲ್ವಿಗಳು ಕುರಾನ್ ಕಲಿಸುವ, ಮೂಲಭೂತವಾದಿ ಮುಸ್ಲಿಂ ತತ್ವಗಳನ್ನು ಹರಡುವ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರವೇ ಹೋಗುವ ಮುಸ್ಲಿಂ ಸಾಂಪ್ರದಾಯಿಕ ಶಾಲೆ ಎಂಬುದು ಹೆಚ್ಚಿನವರ ನಂಬಿಕೆ. ಬದಲಾದ ಕಾಲದೊಂದಿಗೆ ಮದ್ರಸಾಗಳು ಬದಲಾಗಿರುವುದು ಹೆಚ್ಚಿನವರ ಗಮನಕ್ಕೆ ಬಂದಂತಿಲ್ಲ. ಮುಸ್ಲಿಮ್ ಮಕ್ಕಳು ಇತರ ಧರ್ಮೀಯರ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಾಗ ನನ್ನ ಮಗಳು ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುವುದರಲ್ಲಿ ಅಸಹಜತೆ ಏನಿದೆ? ಎಂದು ಪಿಯೂಪಿಯಾಳ ತಂದೆ, ರೇಶನ್ ಅಂಗಡಿಯೊಂದನ್ನು ನಡೆಸುತ್ತಿರುವ ರಾಮೇಶ್ವರ್ ಕೇಳುತ್ತಾರೆ. 739 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮಳಾಗಿ ಬಂದ ಅರ್ಪಿತಾಳಿಗೆ ಮುಂದೆ ನರ್ಸ್ ಆಗುವ ಗುರಿ.
ಮದ್ರಸಾದಲ್ಲಿ ಕಲಿತ ಕಾರಣ ನನಗೆ ನನ್ನ ಹಿಂದೂ ಧರ್ಮದ ಧಾರ್ಮಿಕ ವಿಧಿವಿಧಾನಗಳ ಜೊತೆ ಇನ್ನೊಂದು ಧರ್ಮದ ವಿಧಿವಿಧಾನಗಳ ಬಗ್ಗೆ ಕೂಲಂಕಷವಾಗಿ ತಿಳಿಯಲು ಸಾಧ್ಯವಾಗಿ, ನನ್ನ ಧಾರ್ಮಿಕ ದೃಷ್ಟಿಕೋನ ವಿಶಾಲಗೊಳ್ಳಲು ಸಾಧ್ಯವಾಗಿದೆ ಎಂದು ಅವಳು ಹೇಳುತ್ತಾಳೆ. ಅವಳು ಕಲಿಯುತ್ತಿರುವ ಮದ್ರಸಾದಲ್ಲಿನ 900 ವಿದ್ಯಾರ್ಥಿಗಳಲ್ಲಿ 60% ವಿದ್ಯಾರ್ಥಿಗಳು ಹಿಂದೂಗಳು. ಪಿಯೂಪಿಯಾ ಮತ್ತು ಸಾಥಿಗೆ ಮುಂದೆ ಸಿವಿಲ್ ಸರ್ವೆಂಟ್ಸ್ ಆಗುವ ಗುರಿಯಿದೆ. ಈ ಮದ್ರಸಾಗಳಲ್ಲಿ ಇಸ್ಲಾಮ್ ಪರಿಚಯ್ ಎಂಬ ವಿಷಯವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳು ಇತರ ಸಾಮಾನ್ಯ ಶಾಲೆಗಳಲ್ಲಿ ಕಲಿಸುವ ಕಂಪ್ಯೂಟರ್, ವಿಜ್ಞಾನ, ಕಲೆ, ಚರಿತ್ರೆ, ಗಣಿತ ಮೊದಲಾದ ಸಾಮಾನ್ಯ ವಿಷಯಗಳೇ.
ಅನ್ವರ್ ಹುಸೇನ್ ಎಂಬುವವರು ಪಶ್ಚಿಮ ಬಂಗಾಲದ ಬುರ್ಧ್ವಾನ್ ಜಿಲ್ಲೆಯ ಓರ್ಗ್ರಾಮ್ ಚಾತುಸ್ಪಲ್ಲಿ ಸರ್ಕಾರೀ ಮದ್ರಸಾದ ಹೆಡ್ ಮಾಸ್ಟರ್ ಆಗಿದ್ದಾಗ ಅದು ನಾಲ್ಕು ಕೋಣೆಗಳ ಒಂದು ಚಿಕ್ಕ ಕಟ್ಟಡವಾಗಿದ್ದು, ಅದರಲ್ಲಿ ಕೇವಲ ೩೪ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅನ್ವರ್ ಹುಸೇನ್ ಹಳ್ಳಿಹಳ್ಳಿಗಳಲ್ಲಿ ತಿರುಗಿ, ಬಡತನದ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಕಳಿಸಲಾಗದ ಹೆತ್ತವರನ್ನು ಭೇಟಿಯಾಗಿ, ಅವರ ಮಕ್ಕಳನ್ನು ತಮ್ಮ ಮದ್ರಸಾಗೆ ಸೇರಿಸಿ, ಉಚಿತ ಶಿಕ್ಷಣದ ಜೊತೆ ಅವರಿಗೆ ಉಚಿತವಾಗಿ ಪುಸ್ತಕಗಳನ್ನೂ ನೀಡಿದರು. ಈಗ ಈ ಮದ್ರಸಾ ಆಟದ ಮೈದಾನ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ಡಜನುಗಟ್ಟಳೆ ಕಂಪ್ಯೂಟರ್‌ಗಳು ಮೊದಲಾದವುಗಳನ್ನು ಹೊಂದಿ, ಒಂದು ಸುಸಜ್ಜಿತ ಶಿಕ್ಷಣ ಕೇಂದ್ರವಾಗಿದೆ. ಈಗ ಅದರಲ್ಲಿ 1320 ವಿದ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲಿ 65% ವಿದ್ಯಾರ್ಥಿಗಳು ಹಿಂದುಗಳು. 1320ರಲ್ಲಿ ಹುಡುಗರ ಸಂಖ್ಯೆ 600 ಆಗಿದ್ದರೆ, ಹುಡುಗಿಯರು 720. ಈ ಮದ್ರಸಾದ ಇನ್ನೊಂದು ವಿಶೇಷತೆ ಏನೆಂದರೆ, ಇದರ ಸಹಾಯಕ ಹೆಡ್ ಮಾಸ್ಟರ್ ತುಷಾರ್ ಕಾಂತಿ ಘೋಷ್ ಅನ್ನುವ ಒಬ್ಬ ಹಿಂದೂ.
ಚಾತುಸ್ಪಲ್ಲಿಯಲ್ಲಿ ಇತರ ಸರ್ಕಾರೀ ಶಾಲೆಗಳಿದ್ದರೂ ಆ ಗ್ರಾಮದ ಜನ ತಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸದೆ ಈ ಮದ್ರಸಾಗೆ ಕಳಿಸಲು ಕಾರಣ ಅದರ ಶೈಕ್ಷಣಿಕ ಗುಣಮಟ್ಟ, ಅದರಲ್ಲಿರುವ ಸೌಲಭ್ಯಗಳು ಮತ್ತು ಅದರ ಸಾಮಾಜಿಕ ಕಳಕಳಿ. ರುಮ್ಕಿ ಹಲ್ದಾರ್ ಎನ್ನುವ ವಿದ್ಯಾರ್ಥಿನಿ ಒಬ್ಬ ದಿನಗೂಲಿಯ ಮಗಳು. ಅವಳ ಹೆತ್ತವರು ಮದುವೆ ಮಾಡಿಸುವ ಕಾರಣಕ್ಕೆ ಅವಳನ್ನು ಎರಡು ಬಾರಿ ಶಾಲೆಯಿಂದ ಬಿಡಿಸಿದ್ದರು. ಆದರೆ, ರುಮ್ಕಿಗೆ ಮುಂದೆ ಕಲಿಯುವ ಆಸೆ. ಅವಳು ಈ ಮದ್ರಸಾದ ಹೆಡ್ ಮಾಸ್ಟರನ್ನು ಭೇಟಿಯಾಗಿ, ಅವರು ಅವಳ ತಂದೆಯನ್ನು ಒಪ್ಪಿಸಿದ ಕಾರಣ ಅವಳು ಈ ಮದ್ರಸಾದ ಹಾಸ್ಟೆಲಿನಲ್ಲಿದ್ದು ಕಲಿಯುತ್ತಿದ್ದಾಳೆ.
ಇದರರರ್ಥ ಮದ್ರಸಾಗಳಲ್ಲಿ ಈ ರೀತಿಯ ಆಧುನಿಕ ಶೈಕ್ಷಣಿಕ ವಾತಾವರಣವಿರುವುದಕ್ಕೆ ಧಾರ್ಮಿಕ ಮೂಲಭೂತವಾದಿಗಳಿಂದ ವಿರೋಧವಿಲ್ಲ ಎಂದರ್ಥವಲ್ಲ. ಅವರುಗಳ ವಿರೋಧದ ನಡುವೆಯೇ ಈ ಮದ್ರಸಾಗಳು ತಮ್ಮ ಜಾತ್ಯಾತೀತ ಶೈಕ್ಷಣಿಕ ವಾತಾವರಣವನ್ನು ಕಾಪಾಡಿಕೊಳ್ಳುತ್ತಿವೆ.
ಈ ಮದ್ರಸಾದಲ್ಲಿ ಕೆಲಸ ಮಾಡುವುದು ತುರ್ಷಾ ಕಾಂತಿ ಘೋಘ್‌ಗೆ ಎಷ್ಟು ಇಷ್ಟ ಎಂಬುದನ್ನು ಅವರ ಮಾತಲ್ಲೆ ಕೇಳಬೇಕು-ಮೊದಲಿಗೆ, ನನ್ನನ್ನುಈ ಮದ್ರಸಾಕ್ಕೆ ನಿಯೋಜಿಸಿದಾಗ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವರ್ಗ ಮಾಡಿಸಿಕೊಂಡು ಬೇರೆಡೆ ಹೋಗಬೇಕೆಂದು ಆಲೋಚಿಸಿದ್ದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಲಿಸುತ್ತ ನಾನೀಗ ಈ ಮದ್ರಸಾವನ್ನು ಎಷ್ಟು ಹಚ್ಚಿಕೊಂಡಿದ್ದೇನೆಂದರೆ, ಇಲ್ಲಿಂದ ಬೇರೆಡೆ ಹೋಗಲು ನನಗೀಗ ಮನಸ್ಸಾಗುವುದಿಲ್ಲ.