ಗ್ರಾಪಂ ಸ್ಥಾಯಿ ಸಮಿತಿ, ಉಪ ಸಮಿತಿಗಳಿಗೆ ಜೀವ ಕೊಡಿ

ಅಧಿಕಾರ ವಿಕೇಂದ್ರೀಕರಣ ಎನ್ನುವುದು ಗ್ರಾಮ ಪಂಚಾಯಿತಿ ಹಂತದಲ್ಲಿ ಕೊನೆಗೊಳ್ಳುವುದಿಲ್ಲ. ಅದು ಇನ್ನಷ್ಟು ತಳ ಹಂತಕ್ಕೆ ಇಳಿಯಬೇಕು. ಜನಾಧಿಕಾರದ ಹಂತಕ್ಕೂ ಇಳಿದು ಪ್ರಜಾಪ್ರಭುತ್ವದ ಆಶಯಗಳು ಈಡೇರಬೇಕು.
ಇಂತಹ ಮಾತುಗಳು ಕೇವಲ ಆದರ್ಶವಾಗಿ ಉಳಿಯದೆ ಜೀವನದ ನಿಜ ವಾಸ್ತವಗಳಾಗಬೇಕು. ಅದಕ್ಕಾಗಿಯೇ ಸಂವಿಧಾನ ಮತ್ತು ಕಾಯಿದೆಗಳು ಅನೇಕ ಅವಕಾಶಗಳನ್ನು ಕಲ್ಪಿಸಿವೆ. ಗ್ರಾಮ ಪಂಚಾಯಿತಿ ಎನ್ನುವ ಚುನಾಯಿತ ಗ್ರಾಮ ಸರ್ಕಾರದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಕಾಯಿದೆ ಬದ್ಧವಾದ ಅನೇಕ ಅವಕಾಶಗಳಿವೆ. ಗ್ರಾಮ ಪಂಚಾಯಿತಿಯ ಹಂತದಲ್ಲಿ ಸ್ಥಾಯಿ ಸಮಿತಿಗಳು ಮತ್ತು ಉಪ ಸಮಿತಿಗಳ ರಚನೆ ಮತ್ತು ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಅವಕಾಶವನ್ನು ಸದುಪಯೋಗ ಪಡಿಸುವ ವಿವೇಕದ ಕೊರತೆ ನಮ್ಮ ಗ್ರಾಮ ಪಂಚಾಯಿತಿಗಳನ್ನು ಕಾಡುತ್ತಿದೆ.
ಸ್ಥಾಯಿ ಸಮಿತಿಗಳ ರಚನೆ: ಗ್ರಾಮ ಪಂಚಾಯಿತಿಯಲ್ಲಿ ೩ ಸ್ಥಾಯಿ ಸಮಿತಿಗಳನ್ನು ರಚಿಸುವುದು ಕಡ್ಡಾಯವಾಗಿದೆ. ಕಾಯಿದೆಯ ಪ್ರಕರಣ ೬೧, ಸ್ಥಾಯಿ ಸಮಿತಿಗಳ ರಚನೆ, ಸದಸ್ಯತ್ವ, ಕಾರ್ಯವ್ಯಾಪ್ತಿಯ ಕುರಿತು ವಿವರಣೆ ನೀಡುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ರಚಿಸಬೇಕಾದ ಮೂರು ಸ್ಥಾಯಿ ಸಮಿತಿಗಳ ವಿವರ ಕೆಳಗಿನಂತಿದೆ.
* ಸಾಮಾನ್ಯ ಸ್ಥಾಯಿ ಸಮಿತಿ
* ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
* ಸಾಮಾಜಿಕ ನ್ಯಾಯ ಸಮಿತಿ
ಸ್ಥಾಯಿ ಸಮಿತಿಗಳ ಸಂರಚನೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಅಂಶಗಳು ಹೀಗಿವೆ:
* ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ನಂತರ ನಡೆಯುವ ಮೊದಲ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗಳ ರಚನೆಗೆ ಕ್ರಮ ವಹಿಸಬೇಕು. ಇದರಿಂದ ಸಮಿತಿಗಳ ಸದಸ್ಯರಿಗೆ ೩೦ ತಿಂಗಳ ಪೂರ್ಣಾವಧಿಯ ಕಾರ್ಯನಿರ್ವಹಣಾ ಅವಕಾಶ ಸಿಗುತ್ತದೆ
* ಪ್ರತಿ ಸ್ಥಾಯಿ ಸಮಿತಿಗೆ ಪದ ನಿಮಿತ್ತ ಅಧ್ಯಕ್ಷರೂ ಸೇರಿದಂತೆ ಕನಿಷ್ಠ ಮೂವರು, ಗರಿಷ್ಠ ಐವರು ಸದಸ್ಯರನ್ನು ಆಯ್ಕೆ ಮಾಡಬೇಕು
ಪ್ರತಿಯೊಂದು ಸ್ಥಾಯಿ ಸಮಿತಿಗೆ ರೈತರ ಕ್ಲಬ್, ಮಹಿಳಾ ಮಂಡಲ, ಯುವ ಮಂಡಳಿಗಳ ಪ್ರತಿನಿಧಿಗಳನ್ನು ಸಹ ಸದಸ್ಯರಾಗಿ ನೇಮಕ ಮಾಡಬಹುದು. ಆದರೆ ಹೀಗೆ ನೇಮಕಗೊಂಡ ಸದಸ್ಯರಿಗೆ ಮತದಾನದ ಅವಕಾಶ ಇರುವುದಿಲ್ಲ
* ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಕಾರಿ ಸಂಘಗಳ ಪ್ರತಿನಿಧಿಯನ್ನು ಸಾಮಾನ್ಯ ಸ್ಥಾಯೀ ಸಮಿತಿಯ ಸಹ ಸದಸ್ಯರಾಗಿ ನೇಮಕ ಮಾಡಬೇಕು
* ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಒಬ್ಬರು ಮಹಿಳಾ ಸದಸ್ಯೆ ಮತ್ತು ಹೆಚ್ಚಿನ ಸಂಖ್ಯೆ ಹೊಂದಿದ ಅನುಸೂಚಿತ ಜಾತಿ ಮತ್ತು ಪಂಗಡದ ಸದಸ್ಯರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು
* ಗಣಕ ಯಂತ್ರ ನಿರ್ವಹಣೆಯಲ್ಲಿ ಹೆಚ್ಚಿನ ಕೌಶಲ ಹೊಂದಿರುವ ಒಬ್ಬ ಸದಸ್ಯರನ್ನು ಸಹ ಸದಸ್ಯರಾಗಿ ನೇಮಿಸಬಹುದು
* ಸದಸ್ಯರ ಅಧಿಕಾರಾವಧಿ ಅವರು ಆಯ್ಕೆಗೊಂಡ ದಿನದಿಂದ ೩೦ ತಿಂಗಳುಗಳಾಗಿರುತ್ತದೆ
* ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಯ ಪದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಾಮಾನ್ಯ ಸ್ಥಾಯೀ ಸಮಿತಿಯ ಒದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಅನುಸೂಚಿತ ಜಾತಿ ಅಥವಾ ಪಂಗಡದ ಒಬ್ಬ ಸದಸ್ಯರನ್ನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು.
ಈ ಮೂರು ಸ್ಥಾಯಿ ಸಮಿತಿಗಳಿಗೆ ನಿರ್ದಿಷ್ಟ ಪ್ರಕಾರ್ಯಗಳನ್ನು ನಿಗದಿಪಡಿಸಿದ್ದು, ಗ್ರಾಮ ಪಂಚಾಯಿತಿಯ ನಿರ್ದೇಶನದಂತೆ ಈ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವುಗಳ ಹೊಣೆಗಾರಿಕೆಯಾಗಿದೆ.
ಉಪಾಧ್ಯಕ್ಷರಿಗೆ ವಿಶೇಷ ಅವಕಾಶ:
ಸಾಮಾನ್ಯವಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಿಗೆ ಸಾಮಾನ್ಯ ಸದಸ್ಯರನ್ನು ಮೀರಿದ ಯಾವುದೇ ಅಧಿಕಾರಗಳು ಇಲ್ಲ. ಅಧ್ಯಕ್ಷರ ಗೈರು ಹಾಜರಿ, ಅನಾರೋಗ್ಯ ಮುಂತಾದ ಕಾರಣದಿಂದ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಆಗದೆ ಇರುವ ಸಂದರ್ಭದಲ್ಲಿ ಮಾತ್ರ ಅವರು ಅಧ್ಯಕ್ಷರ ಹೊಣೆಗಾರಿಕೆ ನಿರ್ವಹಿಸುವ ಅಧಿಕಾರ ಪಡೆಯುತ್ತಾರೆ. ಇಂತಹ ಸಂದರ್ಭಗಳು ತುಂಬ ವಿರಳ.
ಆದರೆ ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅವರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವ ಅವಕಾಶವಿದೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ, ತೋಟಗಾರಿಕೆ, ಗುಡಿ ಕೈಗಾರಿಕೆ, ವ್ಯಾಪಾರ ಮುಂತಾದ ಉತ್ಪಾದನಾ ಚಟುವಟಿಕೆಗಳು ಸಾಮಾನ್ಯ ಸ್ಥಳೀಯ ಸಮಿತಿಯ ವ್ಯಾಪ್ತಿಗೆ ಬರುತ್ತವೆ. ಅಲ್ಲದೆ ಬಡತನ ನಿರ್ಮೂಲನೆ ಕಾರ್ಯಕ್ರಮಗಳು, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಮತ್ತು ಸಾರ್ವಜನಿಕ ಕಾಮಗಾರಿಗಳ ಮೇಲ್ವಿಚಾರಣೆ, ಇದಕ್ಕೆ ಸಂಬಂಧಿಸಿದ ದೂರುಗಳ ತನಿಖೆ ಮಾಡಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ಸಾಮಾನ್ಯ ಸ್ಥಾಯಿ ಸಮಿತಿಗೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಹೆಚ್ಚುವರಿಯಾಗಿ ಲಭ್ಯವಾಗುವ ಈ ಅಧಿಕಾರವನ್ನು ಸಮರ್ಥವಾಗಿ ಬಳಸುವ ಮೂಲಕ ಉತ್ತಮ ನಾಯಕನಾಗಿ ಬೆಳೆಯಲು ಸಾಧ್ಯವಿದೆ.
ಸಾಮಾಜಿಕ ನ್ಯಾಯ ಸಮಿತಿ ಮತ್ತು ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಗಳಿಗೂ ಇದೇ ರೀತಿಯಲ್ಲಿ ಪ್ರಕಾರ್ಯಗಳನ್ನು ವಹಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ಥಾಯಿ ಸಮಿತಿಗಳು ಅಸಡ್ಡೆಗೆ ಒಳಗಾಗಿವೆ. ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿಲ್ಲ.
ಉಪ ಸಮಿತಿಗಳು ಮತ್ತು ಜಂಟಿ ಸಮಿತಿ:
ಕಾಯಿದೆಯ ಪ್ರಕರಣ ೬೨- ಎ ನಲ್ಲಿ ಉಪಸಮಿತಿಗಳು ಪ್ರಕರಣ ೭೯ ರಲ್ಲಿ ಜಂಟಿ ಸಮಿತಿಗಳ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಕ್ಕಾಗಿ ಇಂತಹ ಉಪ ಸಮಿತಿಗಳನ್ನು ರಚಿಸುವ ಅಧಿಕಾರ ಹೊಂದಿದೆ. ವಿಪರ್ಯಾಸವೆಂದರೆ ಕರ್ನಾಟಕದ ಯಾವ ಗ್ರಾಮ ಪಂಚಾಯಿತಿಯೂ ಈ ಅಧಿಕಾರವನ್ನು ಬಳಸಿಕೊಂಡ ನಿದರ್ಶನ ಸಿಗುವುದಿಲ್ಲ. ಅದರ ಬದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ಪ್ರಮುಖ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಪಸಮಿತಿಗಳನ್ನು ರಚಿಸಿವೆ. ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಲ ವಿಕಾಸ ಸಮಿತಿ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ, ಪಡಿತರ ಜಾಗೃತಿ ಸಮಿತಿ, ಆಹಾರ ಖಾತರಿ ಸಮಿತಿ, ಜೀವ ವೈವಿಧ್ಯತೆ ನಿರ್ವಹಣಾ ಸಮಿತಿ ಮುಂತಾದ ೧೩ ಉಪಸಮಿತಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವೆ. ಈ ಸಮಿತಿಗಳು ೩ ಸ್ಥಾಯಿ ಸಮಿತಿಗಳ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಿಷ್ಠ ತಿಳಿವಳಿಕೆ ನಮ್ಮ ಗ್ರಾಮ ಪಂಚಾಯಿತಿಗಳಿಗೆ ಇಲ್ಲ. ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಉಪ ಸಮಿತಿಗಳು ಗ್ರಾಮ ಪಂಚಾಯಿತಿಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
ಸ್ಥಾಯಿ ಸಮಿತಿಗಳು ಮತ್ತು ಉಪಸಮಿತಿಗಳು ಅಧಿಕಾರ ವಿಕೇಂದ್ರೀಕರಣ ಮತ್ತು ಆಡಳಿತದಲ್ಲಿ ಜನರ ಭಾಗವಹಿಸುವಿಕೆಯನ್ನು ಖಾತರಿಪಡಿಸುವ ಕಾಯಿದೆಬದ್ಧ ಅವಕಾಶಗಳಾಗಿವೆ. ಅವುಗಳನ್ನು ಬಲಪಡಿಸುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಇನ್ನಷ್ಟು ಶಕ್ತಗೊಳಿಸಲು ಸಾಧ್ಯವಿದೆ. ನೂತನವಾಗಿ ಆಯ್ಕೆ ಆಗಿರುವ ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು, ಯೋಜಿಸಬೇಕು ಮತ್ತು ಕಾರ್ಯಪ್ರವೃತ್ತವಾಗಬೇಕು.

ನಿಯಮಿತ ಸಭೆಗಳು ನಡೆಯಲಿ:
ಸಾಮಾಜಿಕ ನ್ಯಾಯ ಸಮಿತಿ ಮತ್ತು ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಗಳಿಗೂ ಇದೇ ರೀತಿಯಲ್ಲಿ ಪ್ರಕಾರ್ಯಗಳನ್ನು ವಹಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ಥಾಯಿ ಸಮಿತಿಗಳು ಅಸಡ್ಡೆಗೆ ಒಳಗಾಗಿವೆ. ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿಲ್ಲ.

– ವಿಲ್ಫ್ರೆಡ್ ಡಿಸೋಜ

× Chat with us