ಫೆ.೧೮ಕ್ಕೆ ಪುಟ್ಟಣ್ಣಯ್ಯ ನೆನಪು: ರೈತಸಂಘಕ್ಕೆ ಸಿಗಲಿದೆ ಹೈಟೆಕ್ ಸ್ಪರ್ಶ!

ಮೈಸೂರು: ರೈತಸಂಘದ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಿ ಯುವ ಸಮೂಹವನ್ನು ಹೆಚ್ಚಿನ ರೀತಿಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಫೆ.೧೮ರ ಮಾಜಿ ಶಾಸಕ ಹಾಗೂ ರೈತ ಮುಖಂಡ ದಿ.ಪುಟ್ಟಣಯ್ಯ ಅವರ ನೆನಪು ಕಲಾಮಂದಿರದ ಕಾರ್ಯಕ್ರಮದಲ್ಲಿ ಸಂಘದ ನೂತನ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಸೇರಿ ನಾನಾ ರೀತಿಯ ಸಾಮಾಜಿಕ ಜಾಲತಾಣಗಳ ಅನಾವರಣಕ್ಕೆ ಸಿದ್ಧತೆ ನಡೆಸಿದೆ.

ನಗರದ ಹುಣಸೂರು ರಸ್ತೆಯಲ್ಲಿ ಇರುವ ಕೃಷಿ ಮಾರಾಟ ಅಧ್ಯಯನನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ಫೆ.೧೮ರ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಧ್ಯೇಯೋದ್ದೇಶ ಮತ್ತು ಹೋರಾಟಗಳು ಮುಂದಿನ ಪೀಳಿಗೆ ಅವರಿಗೂ ತಿಳಿಯುವ ನಿಟ್ಟಿನಲ್ಲಿ ಫೆ.೧೮ರ ಕಾರ್ಯಕ್ರಮದಲ್ಲಿ ಕೆಲವು ವಿಷಯಗಳು ಘೋಷಣೆಯಾಗಲಿವೆ ಎಂದು ಹೇಳಿದರು.

ಕೃಷಿ ವಿರೋಧಿ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ಹಿಮ್ಮೆಟ್ಟಿಸಲು ಸರ್ಕಾರ ನಡೆಸುತ್ತಿರುವ ಹುನ್ನಾರಗಳ ಬಗ್ಗೆ ವಿಷಯ ಮಂಡನೆಯಾಗಲಿದೆ. ಸಂಘದ ಹೆಸರು, ಚಿಹ್ನೆ, ಬಾವುಟ ಮತ್ತು ಹಸಿರು ಟವಲ್ ಮಾರ್ಪಾಡಾಗುವ ಘೋಷಣೆಯಾಗಲಿದೆ. ಸಂಘಕ್ಕೆ ಯುವ ಸಮೂಹವನ್ನು ಸೆಳೆಯಬೇಕಿದ್ದು, ಸಂಘದ ಸಂವಿಧಾನದ ಕರಡು, ಪತ್ರಿಕೆ, ವೆಬ್‌ಸೈಟ್ ಮತ್ತು ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳ ಖಾತೆ ಬಿಡುಗಡೆಯಾಗಲಿದೆ. ರಾಜ್ಯ ಸಮಿತಿ ಪುನರ್ ರಚನೆ ಮತ್ತು ಘೋಷಣೆಯಾಗಲಿದೆ ಎಂದರು.

ಸಭೆಯಲ್ಲಿ ಸಂಘದ ವಿವಿಧ ಘಟಕಗಳ ರಚನೆ, ಸದಸ್ಯ ನೋಂದಾವಣಿ ಇದೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಟಿ.ನೊರೆನೂರು ಎಂ.ಶಂಕರಪ್ಪ, ಕಾರ್ಯದರ್ಶಿ ರವಿಕಿರಣ್ ಪುಣಚ, ಪಿ.ಗೋಪಾಲ್, ಮುಖಂಡರಾದ ವೀರ ಸಂಗಯ್ಯ, ಚನ್ನಪಟ್ಟಣ ರಾಮಣ್ಣ, ರಾಮಸ್ವಾಮಿ, ತುಮಕೂರು ಗೋವಿಂದರಾಜು, ಬನ್ನೂರು ಕೃಷ್ಣ, ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು, ಮರಂಕಯ್ಯ, ಹೊಸೂರು ಕುಮಾರ್, ಕೆಂಪುಗೌಡ ಇತರರು ಇದ್ದರು.

× Chat with us