ಕೊನೆಗೂ ಉಳಿಯುವುದು ಕೆಲವು ಸ್ನೇಹಿತರು ಮಾತ್ರ (ಇಂದು ವಿಶ್ವ ಸ್ನೇಹಿತರ ದಿನ)

ಡಿಗ್ರಿ ಕಾಲೇಜಿಗೆ ಸೇರಿದ ಮೊದಲ ದಿನಗಳವು. ನಾನು ಯಾರೊಂದಿಗೇ ಆದರೂ ಬೆರೆಯುವುದು ಕಡಿಮೆ. ಇದೇ ಗುಣದಿಂದ ಹೊಸ ಸ್ನೇಹಿತರು ಸಿಗುವ ನಿರೀಕ್ಷೆಯೂ ಇರಲಿಲ್ಲ. ದಿನಕಳೆದಂತೆ ಡ್ಯಾನ್ಸ್, ಡ್ರಾಮಾ ಮತ್ತಿತರ ಕಾಂಪಿಟೇಶನ್ ಗಳಿಗೆ ಸೇರಿಕೊಂಡಿದ್ದಾಯಿತು. ಆಗ ಒಂದಷ್ಟು ಸೀನಿಯರ್ಸ್, ಇಬ್ಬರು ನನ್ನ ತರಗತಿಯಲ್ಲೇ ಓದುವ ಹುಡುಗಿಯರು ಸ್ನೇಹಿತರಾದರು. ನೋಡನೋಡುತ್ತಿದ್ದಂತೆಯೇ ಕಾಂಪಿಟೇಶನ್ ಗೆ ತಾಲೀಮು, ತಾಲೀಮಿನ ನಂತರ ಸುತ್ತಾಟ, ವಾಟ್ಸಾಪ್ ಗ್ರೂಪ್ ಚಾಟಿಂಗ್ ಮತ್ತಿತರ ಹೊಸ ಬೆಳವಣಿಗೆಗಳಿಂದಾಗಿ ಸುಮಾರು 15-16 ಜನರುಳ್ಳ ನಮ್ಮ ಗುಂಪು ಅತ್ಯಾಪ್ತವಾಯಿತು. ‘ಫ್ರೆಂಡ್ಸ್ ಎಂದರೆ ಇವರಂತಿರಬೇಕು, ಇಷ್ಟು ಮೋಜು ಮಾಡಬೇಕು’ ಎಂದು ಇಡೀ ಕಾಲೇಜು ಮಾತನಾಡಿಕೊಳ್ಳುತ್ತಿತ್ತು.

ದಿನಗಳು ಕಳೆದವು. ಕಾಂಪಿಟೇಶನ್ ಗಳು ಮುಗಿದವು. ಸಣ್ಣಪುಟ್ಟ ಜಗಳಗಳು ಪ್ರಾರಂಭವಾದವು. ಮನಸ್ತಾಪಗಳು ಕಾಣಿಸಿಕೊಂಡವು. ಬೆನ್ನ ಹಿಂದಿನ ಮಾತು, ಅಸೂಯೆ, ಅನಾವಶ್ಯಕ ವಾದ-ವಿವಾದಗಳು ಸಾಮಾನ್ಯವಾಯಿತು. ಗುಂಪಿನಲ್ಲಿದ್ದ ಸೀನಿಯರ್ಸ್ ಒಬ್ಬೊಬ್ಬರಾಗಿ ಓದು ಮುಗಿಸಿ ಹೊರಹೋದರು. ಕೆಲವರು ಮನಸ್ತಾಪಗಳಿಂದ ಮಾತು ಬಿಟ್ಟರೆ ಇನ್ನು ಕೆಲವರು ಅಹಂನಿಂದ ಮಾತು ಬಿಟ್ಟರು. ಹೀಗೆ ಕೇವಲ ಒಂದೇ ವರ್ಷದಲ್ಲಿ ಇಡೀ ಗುಂಪು (ವಾಟ್ಸಾಪ್ ಗ್ರೂಪ್ ಸಹಿತ) ಸಚಿವ ಸಂಪುಟದಂತೆ ವಿಸರ್ಜನೆಯಾಗಿ ಒಬ್ಬೊಬ್ಬರು ಒಂದು ಮೂಲೆ ಸೇರಿಕೊಂಡರು.

ಕೊನೆಗೆ ನನಗೆ ಸ್ನೇಹಿತರೆಂದು ಉಳಿದಿದ್ದು ನನ್ನದೇ ತರಗತಿಯಲ್ಲಿದ್ದ ಅಕ್ಷರಶಃ ಒಂದಿಬ್ಬರು ಮಾತ್ರ ಆದರೆ ಹತ್ತಾರು ಜನರ ಗುಂಪು ಅಸ್ತಿತ್ವದಲ್ಲಿದ್ದಾಗ ಇರದ ಖುಷಿ, ನೆಮ್ಮದಿ ಎಲ್ಲವೂ ಒಟ್ಟಿಗೆ ಬಂದು ನನ್ನನ್ನಪ್ಪಿದ್ದವು. ತರಗತಿಯಲ್ಲಿ ಜೊತೆಗೆ ಕುಳಿತಿರುತ್ತಿದ್ದ ಒಂದೇ ಕಾರಣಕ್ಕೆ ಮಾತನಾಡುತ್ತಿದ್ದ  ಒಂದಷ್ಟು ನಾಮಕಾವಸ್ಥೆಯ ಸ್ನೇಹಿತರು ಸಹ ಕಾಲೇಜು ಮುಗಿದ ನಂತರ ಮಾತು ಬಿಟ್ಟುಬಿಟ್ಟರು. ಶಾಲೆ, ಕಾಲೇಜುಗಳಲ್ಲಿ ಇರುತ್ತಿದ್ದ ದೊಡ್ಡ ದೊಡ್ಡ ‘ಫ್ರೆಂಡ್ಸ್ ಗ್ಯಾಂಗ್’ನಲ್ಲಿ  ಸೇರಿಕೊಳ್ಳದೆ 2-3 ಸ್ನೇಹಿತರೊಂದಿಗೆ ಮಾತ್ರ ಆಪ್ತವಾಗಿರುತ್ತಿದ್ದ ನನಗೆ ಜೀವನಕ್ಕೆ ಒಳ್ಳೆಯ ಸ್ನೇಹಿತರು ಮುಖ್ಯವೇ ಹೊರತು ಹೆಚ್ಚಿನ ಸಂಖ್ಯೆಯ ಸ್ನೇಹಿತರು ಮುಖ್ಯವಲ್ಲ ಎಂಬ ಸಂಗತಿ ಮತ್ತೆ ಮತ್ತೆ ಮನದಟ್ಟಾಗುತ್ತಿದೆ. ಕಳೆದ ಬಾರಿ ಈ ಸಂಗತಿ ಮನದಟ್ಟಾಗಿದ್ದು ಈ ಘಟನೆಗಳ ನಂತರವೇ.

ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳುವಂತೆ ಒಂದೊಳ್ಳೆ ಪುಸ್ತಕ ಒಬ್ಬ ಸ್ನೇಹಿತನಿಗೆ ಸಮವಾದರೆ ಒಂದೊಳ್ಳೆ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ. ಇದಕ್ಕೆ ಪೂರಕವಾಗಿ ಹೇಳುವುದಾದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ದೊಡ್ಡ ಸ್ನೇಹಿತರ ಗುಂಪಿಗೆ ಸಮ. ಅಂದರೆ, ನಮ್ಮನ್ನು ಎಷ್ಟು ಜನ ಸ್ನೇಹಿತರು ಸುತ್ತುವರಿದಿದ್ದಾರೆ, ಎಷ್ಟು ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತೇವೆ, ಎಷ್ಟು ಜನರೊಂದಿಗೆ ಪಾರ್ಟಿ ಮಾಡುತ್ತೇವೆ, ಟ್ರಿಪ್ ಹೋಗುತ್ತೇವೆ ಎಂಬುದು ಸ್ನೇಹದ ಮಾನದಂಡವಲ್ಲ. ಯಾರೊಂದಿಗೆ ನಾವು ಮುಜುಗರವಿಲ್ಲದೆ, ಮುಖವಾಡ ಹಾಕದೆ ಇದ್ದಂತೆಯೇ ಇರುತ್ತೇವೆ, ಯಾರೊಂದಿಗೆ ನಮಗೆ ಅನಿಸಿದ್ದನ್ನೆಲ್ಲಾ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇವೆ, ಯಾರೊಂದಿಗೆ ನಾಟಕೀಯವಾಗಿ ನಗದೆ ಮನಸ್ಸಿನ ತುಮುಲಗಳನ್ನು ಬಿಚ್ಚಿಡುತ್ತೇವೆ ಎಂಬುದು ನಿಜವಾದ ಸ್ನೇಹದ ಮಾನದಂಡ.

ಹದಿಹರೆಯದಲ್ಲಿ, ಶಾಲೆ-ಕಾಲೇಜಿನಲ್ಲಿ ದೊಡ್ಡ ದೊಡ್ಡ ಸ್ನೇಹಿತರ ಗುಂಪು ಆಕರ್ಷಕವಾಗಿ ಕಾಣಬಹುದು, ನಾವು ಅದರ ಭಾಗವಾಗಿರಬಾರದಿತ್ತಾ ಎಂಬ ಬೇಸರ ಕಾಡಬಹುದು. ಆದರೆ ವಯಸ್ಸು ಹೆಚ್ಚಿದಂತೆಲ್ಲಾ ಪ್ರಬುದ್ಧತೆ ಹೆಚ್ಚುತ್ತದೆ. ನಿಜವಾಗಿಯೂ ಬೇಕಿರುವುದು ಕಷ್ಟದಲ್ಲಿ ಹೆಗಲು ಕೊಡಬಲ್ಲ, ಒಟ್ಟಿಗೆ ಕುಳಿತು ನಗಬಲ್ಲ, ತಬ್ಬಿಕೊಂಡು ಅಳಬಲ್ಲ ಸ್ನೇಹಿತರೇ ಹೊರತು ತೋರ್ಪಡಿಕೆಯ ಸ್ನೇಹಿತರಲ್ಲ ಎಂಬ ಅರಿವು ಮೂಡಲು ಸ್ವಲ್ಪ ಸಮಯ ಬೇಕು. ಆ ಅರಿವು ಮೂಡುವ ಮುನ್ನವೇ ತಮಗೆ ಸ್ನೇಹಿತರಿಲ್ಲ ಎಂಬ ಕೀಳರಿಮೆಯಿಂದ ಬಳಲಿ ಖಿನ್ನತೆಗೆ ಹೋದ ಮುಗ್ಧ ಮನಸ್ಸುಗಳು ನಮ್ಮ ನಡುವೆ ಇರುವುದು ಬೇಸರದ ಸಂಗತಿ.
ಸ್ವಭಾವತಃ ಅಂತರ್ಮುಖಿಯಾದ ನಾನು ಯಾರೊಂದಿಗೇ ಆದರೂ ಬೆರೆಯುವುದು ಕಡಿಮೆ. ಈಗಲೂ ನನಗಿರುವ ಸ್ನೇಹಿತರ ಸಂಖ್ಯೆ ಲೆಕ್ಕ ಹಾಕಲು ಹೊರಟರೆ ಐದು ದಾಟುವುದಿಲ್ಲ. ಗಾಳಿ ಬೀಸಿ ಬೀಸಿ ಜೊಳ್ಳುಗಳೆಲ್ಲಾ ಹಾರಿಹೋಗಿ ಗಟ್ಟಿ ಮಾತ್ರ ಉಳಿದುಕೊಳ್ಳುವಂತೆ ಕಾಲದ ಗಾಳಿ ಬೀಸಿ ಕೆಲವರು ಕ್ರಮೇಣ ದೂರವಾಗಿದ್ದಾರೆ. ಗಟ್ಟಿ ಬಂಧ-ಬಾಂಧವ್ಯ ಉಳ್ಳವರು ಜೊತೆಗಿದ್ದಾರೆ. ಬಹುತೇಕರ ರೀತಿ ನನಗೆ ಬಾಲ್ಯದ ಸ್ನೇಹಿತರಿಲ್ಲ, ಇರುವ ಸ್ನೇಹಿತರನ್ನು ದಿನವೂ ಭೇಟಿಯಾಗುವ, ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುವ ರೂಢಿ ಇಲ್ಲ. ಆದರೆ ಆ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ. ಏಕೆಂದರೆ ತಿಂಗಳುಗಳು ಬಿಟ್ಟು ಭೇಟಿಯಾದರೂ ಮಾತಿನ ವರಸೆ ಸ್ವಲ್ಪವೂ ಬದಲಾಗಿರುವುದಿಲ್ಲ, ಆತ್ಮೀಯತೆ ಕಡಿಮೆಯಾಗಿರುವುದಿಲ್ಲ.

ನಮಗೆ ಎಷ್ಟು ಮಂದಿ ಸ್ನೇಹಿತರಿದ್ದಾರೆ ಎಂಬುದಕ್ಕಿಂತ ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವ, ನಮ್ಮ ಹುಚ್ಚುತನವನ್ನು ಸಹಿಸಿಕೊಳ್ಳುವ, ನಮ್ಮನ್ನು ನಾವಿದ್ದಂತೆಯೇ ಸ್ವೀಕರಿಸುವ ಸ್ನೇಹಿತರು ಎಷ್ಟಿದ್ದಾರೆಂಬ ಸಂಗತಿ ಮುಖ್ಯ ಎಂಬುದು ಈ ಸ್ನೇಹಿತರ ದಿನಾಚರಣೆಯೆಂದು ನಾವೆಲ್ಲರೂ ಅರಿತುಕೊಳ್ಳಬೇಕಾದ ಸಂಗತಿ. ಸ್ನೇಹಕ್ಕೆ ಯಾವ ಮಾನದಂಡಗಳೂ ಇಲ್ಲ. ನಿರ್ವಿವಾದವಾಗಿ ಭೂಮಿ ಮೇಲಿನ ಅತ್ಯಂತ ನಿಷ್ಕಲ್ಮಶ ಸಂಬಂಧವಾದ ಸ್ನೇಹಕ್ಕೆ ಮಾನದಂಡಗಳನ್ನಿಟ್ಟು ‘ಹೀಗಿರುವುದು ಮಾತ್ರ ನಿಜವಾದ ಸ್ನೇಹ’ ಎಂದರೆ ಆ ಪದಕ್ಕೇ ಅಪಮಾನವಾದೀತು!

ಸಿರಿ ಮೈಸೂರು
sirimysuru18@gmail.com  
× Chat with us