ವಿದ್ಯಾರ್ಥಿನಿಗೆ ಜಾತಿನಿಂದನೆ: ಮೂವರ ವಿರುದ್ಧ ಕೇಸ್‌

ಮೈಸೂರು: ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ನರ್ಸಿಂಗ್ ವಿದ್ಯಾರ್ಥಿನಿಗೆ ರಕ್ಷಣೆ ಕೊಡಬೇಕಾದ ಮಹಿಳಾ ಅಧಿಕಾರಿಯೊಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಸೇರಿಕೊಂಡು ಮಾನಸಿಕ ಹಿಂಸೆ, ಜಾತಿನಿಂದನೆ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಮೂವರ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೋಗಾದಿ ಎರಡನೇ ಹಂತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸ್ನಾತಕೋತ್ತರ ಪದವಿ ಮಹಿಳಾ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಮೇರೆಗೆ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೇಘ, ಅಪರಿಚಿತ ವ್ಯಕ್ತಿಗಳಾದ ಅರುಣ್ ಕುಮಾರ್, ಸುರೇಶ್ ವಿರುದ್ಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ನಿಲಯದ ಮೋಟರ್ ರಿಪೇರಿಯಾಗಿದ್ದು, ದುರಸ್ತಿ ಮಾಡಿಸಿಕೊಂಡುವಂತೆ ವಿದ್ಯಾರ್ಥಿನಿಯೊಬ್ಬರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೇಘ ಅವರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ನಿಲಯಕ್ಕೆ ಅಪರಿಚಿತ ವ್ಯಕ್ತಿಗಳಾದ ಅರುಣ್ ಮತ್ತು ಸುರೇಶ್ ಎಂಬವರೊಂದಿಗೆ ಭೇಟಿ ನೀಡಿದ ಮೇಘ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡರು.

‘ಮೇಘ ಮೇಡಂಗೆ ಕರೆ ಮಾಡಿ ಕಾಲ್ ರೆಕಾರ್ಡ್ ಮಾಡಲು ನೀನು ಯಾರು? ನಿಮಗೆ ನಿಲಯದಲ್ಲಿ ಸೀಟು ನೀಡಿದ್ದೇ ಹೆಚ್ಚು. ನಿಮ್ಮ ಜಾತಿ ಬುದ್ಧಿ ತೋರಿಸುತ್ತೀರಾʼ ಎಂದು ಅಪಮಾನ ಮಾಡಿ, ನಂತರ ಸುರೇಶ್ ಎಂಬವರೊಂದಿಗೆ ಸೇರಿ ನನ್ನನ್ನು ಖಾಲಿ ಕೊಠಡಿಯಲ್ಲಿ ಕೂಡಿ ಹಾಕಿ ಮಾನಸಿಕ ಹಿಂಸೆ ನೀಡಿದರು. ಪರೀಕ್ಷೆ ಇದೆ, ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡರೂ ಸ್ಪಂದಿಸಲಿಲ್ಲ. ʻನೀನು ವಾರ್ಡನ್ ವಿರುದ್ಧ ದೂರು ಬರೆದುಕೊಡು ಇಲ್ಲದೆ ಇದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದರು’ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ.