58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಡಿ.27ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇದು ಮೂರೂ ಪಕ್ಷಗಳಿಗೆ ಬಹಳ ಮುಖ್ಯವಾಗಿದೆ. ತಳಮಟ್ಟದಲ್ಲಿ ಪಕ್ಷದ ಬಲಾಬಲವನ್ನು ಈ ಫಲಿತಾಂಶವೇ ಹೇಳಲಿರೋದ್ರಿಂದ, ಬಿಜೆಪಿ, ಕಾಂಗ್ರೆಸ್ ನಡುವೆ ನಾನಾ ಲೆಕ್ಕಾಚಾರಗಳು ಶುರುವಾಗಿವೆ. ಆದ್ರೆ ಜೆಡಿಎಸ್ ಮಾತ್ರ ಈ ಬಾರಿಯೂ ತನ್ನದೇ ಆದ ಗೇಮ್ ಪ್ಲ್ಯಾನ್ನಲ್ಲಿದೆ.

ಲೋಕಲ್ವಾರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯಾರ ಕೈ ಮೇಲಾಗುತ್ತೆ, ಯಾರು ಮಕಾಡೆ ಮಲಗ್ತಾರೇ ಅನ್ನೋ ಲೆಕ್ಕಾಚಾರ ನಡೀತಿದೆ. ಪರಿಷತ್ ಕದನದ ಬಳಿಕ ನಡೆದಿರೋ ಸ್ಥಳೀಯ ಸಂಸ್ಥೆಗಳ ಫಲಿತಾಂಶದತ್ತ ಪಕ್ಷಗಳ ಗಮನ ಕೇಂದ್ರೀಕೃತವಾಗಿದೆ.

ಇಂದು ಹೊರಬೀಳಲಿರೋ ರಾಜ್ಯದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದತ್ತಲೇ ಮೂರೂ ಪಕ್ಷಗಳ ಚಿತ್ತ ನೆಟ್ಟಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಪಲಿತಾಂಶ ನೇರ ಪರಿಣಾಮ ಬೀರದಿದ್ರೂ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಬಲಾಬಲ ಇದರ ಆಧಾರದಲ್ಲೇ ನಿರ್ಧಾರವಾಗಲಿದೆ. ಹೀಗಾಗಿ ಲೋಕಲ್ ಫೈಟ್ನ ರಿಸಲ್ಟ್ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೂ ಪ್ರತಿಷ್ಠೆ ಪ್ರಶ್ನೆಯಾಗಿದೆ.