ಸರ್ಕಾರದಿಂದ ಬಂದ ಹೆಚ್ಚುವರಿ ಹಣವನ್ನು ವಾಪಸ್‌ ಮಾಡಲು ಹೆಣಗಾಡುತ್ತಿದ್ದಾನೆ ರೈತ!

-ಪಂಜು ಗಂಗೊಳ್ಳಿ

ನೆರೆ, ಬರ, ಬೆಳೆ ನಾಶ ಮೊದಲಾದ ಸಂದರ್ಭಗಳಲ್ಲಿ ಸರ್ಕಾರಗಳು ಪರಿಹಾರ ನೀಡಲು ಮುಂದೆ ಬರುವುದು ಬಹಳ ಕಡಿಮೆ. ಹೀಗೆ ಪರಿಹಾರ ನೀಡಲು ಮುಂದೆ ಬಂದರೂ ಅವುಗಳು ಘೋಷಿಸುವ ಪರಿಹಾರ ಮೊತ್ತಗಳು ನಾಶವಾದ ಆಸ್ತಿಪಾಸ್ತಿ ಬೆಳೆಗಳ ನಿಜವಾದ ಮೌಲ್ಯವಾಗಿರುವುದೂ ಇಲ್ಲ. ಹೀಗೆ ಘೋಷಿಸಲ್ಪಟ್ಟ ಪರಿಹಾರ ಧನವನ್ನು ಪಡೆಯಲು ಸಂತ್ರಸ್ತರು ತಿಂಗಳಲ್ಲ, ವರ್ಷಗಳ ತನಕ ಕಾಯಬೇಕಾಗುತ್ತದೆ. ಮತ್ತು, ಇದಕ್ಕಾಗಿ ಅವರು ಸಾಲು ಸಾಲು ಸರ್ಕಾರಿ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ, ರಾಜ್ಯ ಸರ್ಕಾರವೊಂದು ಬೆಳೆ ಕಳೆದುಕೊಂಡ ಒಬ್ಬ ರೈತನಿಗೆ ಆತ ಕಳೆದುಕೊಂಡ ಬೆಳೆಯ ಮೌಲ್ಯದ ನಾಲ್ಕು ಪಟ್ಟು ಹೆಚ್ಚು ಪರಿಹಾರ ಹಣ ನೀಡುತ್ತದೆ ಎಂದರೆ ನಂಬಲು ಸಾಧ್ಯವೇ? ಅದಕ್ಕೂ ಹೆಚ್ಚಾಗಿ, ಹೀಗೆ ಸಿಕ್ಕ ನಾಲ್ಕು ಪಟ್ಟು ಹೆಚ್ಚುವರಿ ಪರಿಹಾರ ಧನದಿಂದ ಸಂತೋಷ ಪಡುವ ಬದಲು, ಅದನ್ನು ಸರ್ಕಾರಕ್ಕೆ ವಾಪಾಸು ಮಾಡಲು ಆ ರೈತ ಕಳೆದ ಐದು ವರ್ಷಗಳಿಂದ ಬ್ಲಾಕ್ ಆಫೀಸಿನಿಂದ ಹಿಡಿದು ಮುಖ್ಯಮಂತ್ರಿಯ ಮನೆಯ ತನಕ ತಾಕಲಾಡುತ್ತಿದ್ದಾರೆ ಎಂದರೆ ನಂಬಬಹುದೇ?
ಸೂರಜ್‌ಮಲ್ ನೈನ್ ಎಂಬುವವರು ಹರಿಯಾಣದ ಜಿಂದ್ ಜಿಲ್ಲೆಯ ಖಾರೈಂತಿ ಎಂಬಲ್ಲಿನ ಹತ್ತಿ ಬೆಳೆಯುವ ಒಬ್ಬ ರೈತ. ಅವರು ಮತ್ತು ಅವರ ಸಹೋದರ ಜಂಟಿಯಾಗಿ ಕೃಷಿ ಚಟುವಟಿಕೆ ನಡೆಸುತ್ತಾರೆ.

2016ರಲ್ಲಿ ಕೀಟಗಳ ಹಾವಳಿಯಿಂದ ಅವರ ಎರಡು ಎಕರೆ ಹತ್ತಿ ಬೆಳೆ ನಾಶವಾದಾಗ ಸಹೋದರರು ಪರಿಹಾರಕ್ಕಾಗಿ ಸರ್ಕರಕ್ಕೆ ಮನವಿ ಮಾಡುತ್ತಾರೆ. ಸರ್ಕಾರ ಪ್ರತೀ ಎಕರೆಗೆ 8,000 ರೂ.ಗಳಂತೆ ಪರಿಹಾರ ಧನ ಘೋಷಿಸಿಸುತ್ತದೆ. ಆ ಪ್ರಕಾರ ಸೂರಜ್‌ಮಲ್ ನೈನ್‌ರಿಗೆ ಎರಡು ಎಕರೆ ಬೆಳೆ ನಾಶಕ್ಕೆ 16,000 ರೂ.ಗಳ ಪರಿಹಾರ ಧನ ಸಿಗಬೇಕಿತ್ತು. ಆದರೆ, ಅದರ ಬದಲಿಗೆ ಅವರ ಬ್ಯಾಂಕ್ ಖಾತೆಗೆ 34,735 ರೂ.ಗಳ ಪರಿಹಾರ ಧನ ಜಮಾ ಆಗುತ್ತದೆ! ಅಷ್ಟೇ ಅಲ್ಲ, ಅವರ ಸಹೋದರನ ಬ್ಯಾಂಕ್ ಖಾತೆಗೂ ಅಷ್ಟೇ ಮೊತ್ತದ ಹಣ ಜಮಾ ಆಗುತ್ತದೆ! ಸೂರಜ್‌ಮಲ್ ನೈನ್‌ಗೆ ಸಿಗಬೇಕಾದ ಒಟ್ಟು ಪರಿಹಾರ 16,550 ರೂ.ಗಳು. ಆದರೆ, ಅವರಿಗೆ ಲಭಿಸಿದ್ದು 69,470 ರೂ.ಗಳು. ಅಂದರೆ, 52,920 ರೂ.ಗಳು ಹೆಚ್ಚುವರಿಯಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಯಿತು.

ಬಹುಶಃ ಬೇರೆ ಯಾರಾದರಾಗಿದ್ದಿದ್ದರೆ ‘ಸರ್ಕಾರ ಪರಿಹಾರ ಕೊಡುವುದೇ ಅಪರೂಪಕ್ಕೆ. ಕೊಟ್ಟರೂ ಅದು ಅಲ್ಪ ಪ್ರಮಾಣದ್ದು. ಅಂತಹ ಸರ್ಕಾರ ಈಗ ಕಣ್ತಪ್ಪಿನಿಂದಲೋ, ಬೇರೇನೋ ಕಾರಣಕ್ಕೋ ನಾಲ್ಕು ಪಟ್ಟು ಹೆಚ್ಚು ಪರಿಹಾರ ಧನವನ್ನು ನೀಡಿದೆ’ ಎಂದು ಆಲೋಚಿಸಿ ಹೆಚ್ಚುವರಿ ಪರಿಹಾರ ಹಣ ಸಿಕ್ಕಿದ್ದಕ್ಕೆ ಖುಷಿಪಡುತ್ತಿದ್ದರೋ ಏನೋ. ಆದರೆ, ರೈತರಾದ ಸೂರಜ್‌ಮಲ್ ನೈನ್ ಮತ್ತು ಅವರ ಸಹೋದರ ಅಂತಹವರಲ್ಲ. ಅವರು ‘ತಮಗೆ ಸರ್ಕಾರದ ಘೋಷಣೆಯ ಪ್ರಕಾರ ಎಷ್ಟು ಸಿಗಬೇಕಾಗಿತ್ತೋ ಅಷ್ಟಕ್ಕೆ ಮಾತ್ರ ತಾವು ಅರ್ಹರು’ ಎಂದು ಆಲೋಚಿಸಿ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವಾಪಾಸು ಮಾಡಲು ಮುಂದಾಗುತ್ತಾರೆ. ಅದರಂತೆ ಅವರು ಆ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವಾಪಾಸು ಮಾಡುವ ಕ್ರಮ ಏನು ಎಂದು ಕೇಳಿ ಜುಲ್ನಾ ತಹಸಿಲ್ದಾರ್ ಕಚೇರಿಗೆ ಪತ್ರ ಬರೆಯುತ್ತಾರೆ.

ಆದರೆ, ತಹಸಿಲ್ದಾರ್ ಕಚೇರಿಯಿಂದ ಅವರ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇದರಿಂದ ಸಿಟ್ಟಾದ ಸೂರಜ್ ಮಲ್ ತನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಸಲುವಾಗಿಯೇ ತಹಸಿಲ್ದಾರ್ ತಮ್ಮ ಬ್ಯಾಂಕ್ ಖಾತೆಗೆ ಹೀಗೆ ಹೆಚ್ಚುವರಿ ಪರಿಹಾರ ಧನವನ್ನು ಜಮಾ ಮಾಡಿದ್ದಾರೆ ಎಂದು ಡೆಪ್ಯುಟಿ ಕಮಿಷನರಿಗೆ ದೂರು ನೀಡುತ್ತಾರೆ. ಆ ದೂರಿಗೆ ಅವರು ‘ಕಂಪ್ಲೈಂಟ್ ನಂಬರ್’ ಕೂಡ ಪಡೆಯುತ್ತಾರೆ. ಆ ದೂರಿನಿಂದಲೂ ಏನೂ ಪ್ರಯೋಜನವಾಗುವುದಿಲ್ಲ. ಆ ದೂರು ಹಿಡಿದು ಸೂರಜ್ ಮಲ್ ಚಂಡಿಗಢದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಹೋಗಿ ಮತ್ತೊಂದು ದೂರು ನೀಡುತ್ತಾರೆ. ಆಗಲೂ ಅವರಿಗೆ ಆ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಹೇಗೆಂದು ಯಾರೂ ಹೇಳುವುದಿಲ್ಲ.

2016ರಿಂದ ಸೂರಜ್ ಮಲ್ ಹೀಗೆ ಬ್ಲಾಕ್ ಆಫೀಸರಿಂದ ಹಿಡಿದು ಮುಖ್ಯಮಂತ್ರಿಯ ಮನೆ ತನಕ ತಾಕಲಾಡುತ್ತಿದ್ದರು ಇನ್ನೂ ಆ ಹೆಚ್ಚುವರಿ ಹಣವನ್ನು ಹಿಂದಿರುಗಿಸಲಾಗಲಿಲ್ಲ.

“ಕಳೆದು ಹೋದ ಒಂದು ಪರ್ಸನ್ನು ಯಾರಾದರು ಹಿಂತಿರುಗಿಸಿದರೆ ನಾವು ಅವರನ್ನು ಪ್ರಶಂಸಿಸುತ್ತೇವೆ. ಆದರೆ ಈ ಹರಿಯಾಣ ಸರ್ಕಾರ, ತಾನು ಕಣ್ತಪ್ಪಿನಿಂದಲೋ ಮತ್ತೇನೋ ಕಾರಣಕ್ಕೋ ನನಗೆ ಹೆಚ್ಚುವರಿಯಾಗಿ ಕೊಟ್ಟ ಹಣವನ್ನು ವಾಪಾಸು ಮಾಡಲು ನಾನು ಐದು ವರ್ಷಗಳಿಂದ ಒದ್ದಾಡುತ್ತಿದ್ದರೂ ಕ್ಯಾರೇ ಅನ್ನುತ್ತಿಲ್ಲ” ಎಂದು ಸೂರಜ್‌ಮಲ್ ತನ್ನ ಅಳಲನ್ನು ತೋಡಿಕೊಳ್ಳುತ್ತಾರೆ.

× Chat with us