ನಕಲಿ ಮತದಾರರ, ಆಧಾರ್‌ ಕಾರ್ಡ್‌ ಪತ್ತೆ: ಮಂಡ್ಯ ವಿಳಾಸದಲ್ಲಿ ಚೋಟಾ ರಾಜನ್‌ ನಕಲಿ ಪಾಸ್‌ಪೋರ್ಟ್‌ ಮಾಡಿಸಿದ್ನಂತೆ!

ಮಂಡ್ಯ: ಇದು ಹೆಸರಿಗೆ ಮಾತ್ರ ಸೇವಾ ಕೇಂದ್ರ. ಆದರೆ, ಇಲ್ಲಿ ಕಾಸು ಕೊಟ್ಟರೆ ಸಿಗುತ್ತದೆ ನಕಲಿ ಮತದಾರರ ಚೀಟಿ, ಆಧಾರ್‌ ಕಾರ್ಡ್‌.

ಈ ನಕಲಿ ದಂಧೆಯ ಕರಾಳ ಮುಖವೆಲ್ಲವೂ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆರೆಯ ರಾಮನಗರ ಜಿಲ್ಲೆಯ ಮತದಾರರ ನಕಲಿ ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ಇವುಗಳಲ್ಲಿ ಒಬ್ಬ ವ್ಯಕ್ತಿಯ ಎರಡೆರಡು ಮತದಾರರ ಗುರುತಿನ ಚೀಟಿ ಪತ್ತೆಯಾಗಿವೆ.

ನಗರದ ಹೊಳಲು ವೃತ್ತದಲ್ಲಿರುವ ಡಿ.ಕೆ.ಎಚ್. ಅಸೋಸಿಯೇಟ್ ಹೆಸರಿನ ಸೇವಾ ಕೇಂದ್ರದಲ್ಲಿ ಈ ದಂಧೆ ನಡೆಯುತ್ತಿತ್ತು. ತೌಸಿಫ್ ಉ. ದಡಕನ್, ಹೀನಾ ಕೌಸರ್ ದಂಪತಿ ಇದರ ಮಾಲೀಕರು.

ತೌಸಿಫ್ ಉ. ದಡಕನ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದನು ಎನ್ನಲಾಗಿದೆ. ಈ ಸೇವಾ ಕೇಂದ್ರದಲ್ಲಿ ೫೦೦- ೧೦೦೦ ರೂ. ಕೊಟ್ಟರೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್, ಪಾಸ್‌ಪೋರ್ಟ್ ಎಲ್ಲವೂ ಸಿಗುತ್ತದೆ.

ಚೋಟಾ ರಾಜನ್, ರವಿ ಪೂಜಾರಿಗೆ ನಕಲಿ ಪಾಸ್‌ಪೋರ್ಟ್

ನರಹಂತಕರಾದ ಚೋಟಾ ರಾಜನ್, ರವಿ ಪೂಜಾರಿ ಅವರು ಮಂಡ್ಯ ವಿಳಾಸದಲ್ಲೇ ನಕಲಿ ಪಾಸ್‌ಪೋರ್ಟ್ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸದ್ಯ ತಹಸಿಲ್ದಾರ್ ಚಂದ್ರಶೇಖರ್ ಶಂ.ಗಾಳಿ ಮತ್ತು ಅಧಿಕಾರಿಗಳ ತಂಡ ಡಿ.ಕೆಎಚ್. ಅಸೋಸಿಯೇಟ್ ಸೇವಾ ಕೇಂದ್ರವನ್ನು ಮುಚ್ಚಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

× Chat with us