ಗೋಮಾಂಸ ತಿನ್ನುವವರ ಡಿಎನ್‌ಎ ಹಿಂದೂಗಳಲ್ಲಿ ಕಂಡುಬರಲ್ಲ: ಭಾಗವತ್‌ ಹೇಳಿಕೆಗೆ ಸಾಧ್ವಿ ತಿರುಗೇಟು

ಜೈಪುರ: ʻಗೋಮಾಂಸ ತಿನ್ನುವವರ ಡಿಎನ್‌ಎ ಹಿಂದೂಗಳಲ್ಲಿ ಎಂದಿಗೂ ಕಂಡುಬರುವುದಿಲ್ಲʼ ಎನ್ನುವ ಮೂಲಕ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸದಸ್ಯೆ ಸಾಧ್ವಿ ಪ್ರಾಚಿ ತಿರುಗೇಟು ನೀಡಿದ್ದಾರೆ.

ʻಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲʼ ಎಂದು ಮೋಹನ್‌ ಭಾಗವತ್‌ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಧ್ವಿ, ʻಬಹುಶಃ ಎಲ್ಲ ಭಾರತೀಯರು ಒಂದೇ ಡಿಎನ್‌ಎ ಹಂಚಿಕೊಂಡಿರಬಹುದು. ಆದರೆ, ಗೋಮಾಂಸ ತಿನ್ನುವವರ ಡಿಎನ್‌ಎ ನಮ್ಮ ನಡುವೆ ಕಂಡುಬರಲು ಎಂದಿಗೂ ಸಾಧ್ಯವಿಲ್ಲ’ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ʻದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತ ಚಲಾಯಿಸುವ ಹಕ್ಕೂ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ʻರಾಜಸ್ಥಾನದಲ್ಲಿ ಪ್ರೇಮದ ಹೆಸರಿನಲ್ಲಿ ಲವ್‌ ಜಿಹಾದ್‌ ಇದ್ದು, ಹೆಣ್ಣು ಮಕ್ಕಳನ್ನು ಮೋಸ ಹಾಗೂ ಮತಾಂತರಗೊಳಿಸಲಾಗುತ್ತಿದೆʼ ಎಂದು ಆರೋಪಿಸಿರುವ ಸ್ವಾಧ್ವಿ, ಮತ ರಾಜಕೀಯವನ್ನು ಪಕ್ಕಕ್ಕಿಡಿ ಮತ್ತು ಹಿಂದೂ ಹೆಣ್ಣುಮಕ್ಕಳ ರಕ್ಷಣೆಯತ್ತ ಗಮನಹರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

× Chat with us