ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ: ಸಚಿವ ಸೋಮಶೇಖರ್

ಮೈಸೂರು: ಕೇರಳ ಗಡಿಯಿಂದ ಜನರು ಮೈಸೂರು ಜಿಲ್ಲೆಗೆ ಬರಬೇಕೆಂದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಶನಿವಾರ ಮೈಸೂರು ಜಿಲ್ಲೆಯ ಗಡಿಭಾಗ ಬಾವಲಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿ, ನಿನ್ನೆ ಚಾಮರಾಜನಗರದಲ್ಲಿ ಕೋವಿಡ್ ಸಭೆ ನಡೆಸಿ, ಅಲ್ಲಿನ ಗಡಿ ಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಇಲ್ಲಿನ ಸಮಸ್ಯೆಗಳನ್ನು ಮನಗಂಡು ಶೆಡ್ ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ ಫಲವಾಗಿ ವೈದ್ಯರಿಗಾಗಿ ಶೆಡ್ ಅನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಕೋವಿಡ್ 3ನೇ ಅಲೆ ಬರಬಹುದೆಂಬ ದೃಷ್ಟಿಯಿಂದ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲೆ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಕಡಿಮೆ ಮಾಡಿಲ್ಲ. ಪ್ರತಿನಿತ್ಯ 10 ಸಾವಿರ ಕೋವಿಡ್ ಟೆಸ್ಟ್ ನಡೆಯುತ್ತಿದೆ ಎಂದರು.