ಹಿರಿಯ ನಟ ಜಿ.ಕೆ.ಗೋವಿಂದರಾವ್‌ ನಿಧನ

ಹುಬ್ಬಳ್ಳಿ: ಖ್ಯಾತ ವಿಚಾರವಾದಿ, ಚಿಂತಕ, ರಂಗಭೂಮಿ ಕಲಾವಿದ, ನಟ ಮತ್ತು ಸಾಹಿತಿ ಡಾ. ಜಿ.ಕೆ. ಗೋವಿಂದರಾವ್ (86) ಇನ್ನಿಲ್ಲ. ಹುಬ್ಬಳ್ಳಿಯ ಮಗಳ ಮನೆಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ಅವರು ಕೊನೆಯುಸಿರೆಳೆದರು.

ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು ಲೇಖಕ, ಕಾದಂಬರಿಕಾರ ಮತ್ತು ಕವಿಯಾಗಿಯೂ ಹೆಸರು ಮಾಡಿದ್ದರು. ಸಂಪನ್ಮೂಲ ವ್ಯಕ್ತಿಯೂ ಆಗಿ ಅನೇಕರಿ ಮಾರ್ಗದರ್ಶನ ನೀಡಿದ್ದ ಪೊ.ಜಿಕೆ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ.

ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲೂ ವೈವಿಧ್ಯ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದರು. ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ಧ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ ಮೊದಲಾದ ಸಿನಿಮಾಗಳಲ್ಲಿ ಜನಮನ ಸೆಳೆಯುವ ಪಾತ್ರಗಳನ್ನು ನಿರ್ವಹಿಸಿದ್ದರು.

ಶಂಕರ್‌ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಮತ್ತು ಮಹಾ ಪರ್ವ ಟೆಲಿವಿಷನ್ ಧಾರಾವಾಹಿಗಳು ಇವರ ಮನೋಜ್ಞ ಅಭಿನಯಕ್ಕೆ ಸಾಕ್ಷಿಯಾಗಿವೆ.

ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದ ಅವರು ಹಲವಾರು ಜನಪರ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೂಢನಂಬಿಕೆ ಮತ್ತು ಕಂದಚಾರಗಳನ್ನು ವಿರೋಧಿಸಿ ಜನಜಾಗೃತಿ ಮೂಡಿಸಲು ಪ್ರೊ. ಜಿಕೆ ಶ್ರಮಿಸಿದ್ದರು. ಮಡೇ ಸ್ನಾನದ ವಿರುದ್ಧ ಧನಿ ಎತ್ತಿ ಹೋರಾಡಿದ ಹೋರಾಟಗಾರರಲ್ಲಿ ಇವರು ಮುಂಚೂಣಿಯಲ್ಲಿದ್ದರು. ತೀಕ್ಷ್ಣ ನಾಲಗೆಯವರಾದ ಇವರು ಕೆಲವೊಮ್ಮೆ ತಮ್ಮ ಹೇಳಿಕೆಗಳಿಂದ ವಿವಾದಗಳಿಗೂ ಗುರಿಯಾಗಿದ್ದರು.

× Chat with us