ಅ.1ರಿಂದ ಥಿಯೇಟರ್‌ಗಳಲ್ಲಿ ಹೌಸ್‌ಫುಲ್‌: ಚಿತ್ರಮಂದಿರಕ್ಕೆ ಬರುವವರಿಗೆ ಈ ಷರತ್ತುಗಳು ಅನ್ವಯ

ಬೆಂಗಳೂರು: ಅಕ್ಟೋಬರ್‌ 1ರಿಂದ ಥಿಯೇಟರ್‌ಗಳಲ್ಲಿ ಹೌಸ್‌ಫುಲ್‌ಗೆ ಸರ್ಕಾರ ಅನುಮತಿ ನೀಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶುಕ್ರವಾರ ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ನಡೆಯಿತು.

ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ ಶೇ. 0.66 ಇದೆ. ಕೋವಿಡ್‌ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅಕ್ಟೋಬರ್‌ 1ರಿಂದ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಕ್ರಮವಹಿಸಲಾಗುವುದು. ಶೇ. 1ಕ್ಕಿಂತ ಹೆಚ್ಚಿದ್ದರೆ ಶೇ. 50 ಸೀಟು ಭರ್ತಿ ಹಾಗೂ ಶೇ. 2ಕ್ಕಿಂತ ಹೆಚ್ಚಿದ್ದರೆ ಅಂತಹ ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗುವುದು. ಪಬ್‌ಗಳಿಗೂ ಇದೇ ಮಾನದಂಡ ಅನುಸರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚಿತ್ರಮಂದಿರಗಳಿಗೆ ಬರುವವರು ಒಂದು ಡೋಸ್‌ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು. ಗರ್ಭಿಣಿಯರು, ಮಕ್ಕಳಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾತ್ರಿ ಕರ್ಫ್ಯೂವನ್ನು ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ನಿಗದಿಪಡಿಸಲಾಗಿದೆ.

6ರಿಂದ 12ನೇ ತರಗತಿವರೆಗೆ ಶೇ. 100ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು. ವಾರದಲ್ಲಿ ಐದು ದಿನ ಶಾಲಾ-ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಯಿತು.

ಯಾದಗಿರಿ, ರಾಯಚೂರು, ಕಲಬುರ್ಗಿ, ಮೈಸೂರು ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಯಿತು.

× Chat with us