ಈ ಬಾರಿ ಯಕ್ಷಗಾನ ರೂಪದಲ್ಲಿ
ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ದಲ್ಲಿ ಬರುವ ಪ್ರಸಂಗವನ್ನು ಆಧರಿಸಿ ಎರಡು ಬಾರಿ ‘ಚಂದ್ರಹಾಸ’ ತೆರೆಯ ಮೇಲೆ ಬಂದಿದ್ದಾನೆ. ೧೯೪೭ರಲ್ಲಿ ಶಾಂತೇಶ್ ಕುಮಾರ್ ನಿರ್ಮಿಸಿ ನಿರ್ದೇಶಿಸಿದ ಈ ಚಿತ್ರದಲ್ಲಿ ವಿಸಾಸ್ ಷಾ ಚಂದ್ರಹಾಸನಾಗಿ, ಹಂದಿಗನೂರು ಸಿದ್ದರಾಮಪ್ಪ ದುಷ್ಟಬುದ್ಧಿಯಾಗಿ ನಟಿಸಿದ್ದರು. ಅಮೀರ್‌ಬಾಯಿ ಕರ್ನಾಟಕಿ ಕೂಡ ನಟಿಸಿದ್ದ ಈ ಚಿತ್ರಕ್ಕೆ ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ಸಂಯೋಜಿಸಿದ್ದರು. ಇದೇ ಕಥೆಯನ್ನು ೧೯೬೫ರಲ್ಲಿ ಬಿ.ಎಸ್.ರಂಗ ನಿರ್ಮಿಸಿ, ನಿರ್ದೇಶಿಸಿದ್ದರು. ಇದರಲ್ಲಿ ರಾಜಕುಮಾರ್ ಚಂದ್ರಹಾಸನಾಗಿ, ಉದಯಕುಮಾರ್ ದುಷ್ಟಬುದ್ಧಿಯಾಗಿ ನಟಿಸಿದ್ದರು. ಅದರ ಸಂಗೀತ ಸಂಯೋಜನೆ ಎಸ್.ಹನುಮಂತರಾವ್ ಅವರದಿತ್ತು. ಇದೀಗ ೬೦ ವರ್ಷಗಳ ನಂತರ ಕನ್ನಡದಲ್ಲಿ ಮತ್ತೊಮ್ಮೆ ಚಂದ್ರಹಾಸನ ಕಥೆ ತೆರೆಗೆ ಬರುತ್ತಿದೆ.
ಚಂದ್ರಹಾಸನ ಕಥೆಯನ್ನು ಈ ಬಾರಿ ತೆರೆಗೆ ತರುತ್ತಿರುವವರು ಹೆಸರಾಂತ ಸಂಗೀತ ಸಂಯೋಜಕರು ಎನ್ನುವುದು ವಿಶೇಷ. ರವಿ ಬಸ್ರೂರು. ಅವರು ಯಕ್ಷಗಾನದ ಮೂಲಕ ಚಂದ್ರಹಾಸನ ಕಥೆಯನ್ನು ಹೇಳಲು ಹೊರಟಿದ್ದಾರೆ. ‘ವೀರ ಚಂದ್ರಹಾಸ’ ಹೆಸರಿನಲ್ಲಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದು, ಮುಂದಿನವಾರ ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಆನಂತರ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕನ ಸನ್ನಿಧಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಯಕ್ಷಗಾನ ಕಲಾವಿದರನ್ನು ಗೌರವಿಸುವ ಕೆಲಸವನ್ನು ಚಿತ್ರ ತಂಡ ಮಾಡಿದೆ.
ಕನ್ನಡದ ಕೆಲವು ಚಿತ್ರಗಳಲ್ಲಿ ಯಕ್ಷಗಾನದ ನೃತ್ಯ ಮತ್ತು ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಯಕ್ಷಗಾನದ ಹಿನ್ನೆಲೆಯಲ್ಲಿ ಅನನ್ಯ ಕಾಸರವಳ್ಳಿ ಕೆಲವು ವರ್ಷಗಳ ಹಿಂದೆ ‘ಹರಿಕಥಾ ಪ್ರಸಂಗ’ಎಂಬ ಚಿತ್ರ ನಿರ್ದೇಶಿಸಿದ್ದರು. ಅದಕ್ಕೂ ಮೊದಲು ಗಿರೀಶ್ ಕಾಸರವಳ್ಳಿಯವರು ‘ವೇಷ’ ಚಿತ್ರ ನಿರ್ದೇಶಿಸಿದ್ದರು. ಅವು ಯಕ್ಷಗಾನ ಕಲಾವಿದರ ಕುರಿತ ಕಥೆ. ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ಯಕ್ಷಗಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ‘ವೀರ ಚಂದ್ರಹಾಸ’ ಚಿತ್ರವನ್ನು ರೂಪಿಸಲಾಗಿದೆ. ಯಕ್ಷಗಾನ ಪ್ರಸಂಗ, ಕಲಾವಿದರು, ವೇಷಭೂಷಣವನ್ನೇ ಸಂಪೂರ್ಣವಾಗಿ ಇಟ್ಟುಕೊಂಡು, ‘ವೀರ ಚಂದ್ರಹಾಸ’ ಚಿತ್ರವನ್ನು ರವಿ ಬಸ್ರೂರು ನಿರ್ದೇಶಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ರವಿ ಬಸ್ರೂರು, ‘ಯಕ್ಷಗಾನ ಸಾಕಷ್ಟು ವಿಷಯ ಭಂಡಾರ ಇರುವಂತಹ ಕಲೆ. ಸುಮಾರು ೧೨ ವರ್ಷಗಳಿಂದ ಇಂಥದ್ದೊಂದು ಚಿತ್ರ ಮಾಡಬೇಕು ಎಂಬ ಆಸೆ ಇತ್ತು. ಅದೀಗ ಕೈಗೂಡಿದೆ. ಚಿತ್ರದಲ್ಲಿ ಸಾಕಷ್ಟು ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಈ ಪ್ರಸಂಗದ ಅವಧಿ ಐದು ತಾಸಿನಷ್ಟಿದ್ದು, ಅದರಲ್ಲಿ ಆಯ್ದ ಕೆಲವು ಮುಖ್ಯ ಭಾಗಗಳನ್ನಷ್ಟೇ ಬಳಸಿಕೊಂಡಿದ್ದೇವೆ. ಚಿತ್ರದ ಅವಧಿ ೨ ಗಂಟೆ ೩೬ ನಿಮಿಷ ಇದೆ. ಈ ಕಥೆಯಲ್ಲಿ ಎಲ್ಲಾ ಕಮರ್ಷಿಯಲ್ ಅಂಶಗಳು ಇವೆ. ಒಬ್ಬ ಭಿಕ್ಷುಕ ಒಂದು ರಾಜ್ಯದ ದೊರೆ ಆಗುತ್ತಾನೆ ಎನ್ನುವುದು ಚಿತ್ರದ ಕಥೆ. ಅದು ಹೇಗೆ ಸಾಧ್ಯವಾಯಿತು ಎನ್ನುವುದೇ ಚಿತ್ರ’ ಎನ್ನುತ್ತಾರೆ ರವಿ ಬಸ್ರೂರು.
ಚಿತ್ರ ರೂಪುಗೊಂಡಿದ್ದರ ಕುರಿತು ಮಾತನಾಡಿರುವ ಅವರು, ‘ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರ ಮಾಡಲು ಹೊರಟಾಗ ನಾಗರಾಜ್ ಎನ್.ಐ ಕಂಬ್ಳಿ, ನವೀನ್ ಶೆಟ್ಟಿ ಮುಂತಾದವರು ನನ್ನ ಬೆನ್ನಿಗೆ ನಿಂತರು. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ, ದುಷ್ಟಬುದ್ಧಿಯಾಗಿ ಪ್ರಸನ್ನ ಶೆಟ್ಟಿಗಾರ್, ಅಲ್ಲದೆ ಪ್ರತಿಯೊಬ್ಬರೂ ಚಿತ್ರಕ್ಕಾಗಿ ತೊಡಗಿಸಿಕೊಂಡ ರೀತಿ ಅದ್ಭುತ. ಚಿತ್ರದ ಎಲ್ಲಾ ಪಾತ್ರಗಳನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿದ್ದಾರೆ. ಹಿಂದೆಂದೂ ನೋಡಿರದ ಅದ್ಭುತವಾದ ಸಾಹಿತ್ಯ ಚಿತ್ರದಲ್ಲಿದ್ದು, ಹಿನ್ನೆಲೆ ಸಂಗೀತಕ್ಕಾಗಿ ೬೦೦ ರಿಂದ ೭೦೦ ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ. ೪೦೦ ರಿಂದ ೫೦೦ ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಲಾ ನಿರ್ದೇಶಕಪ್ರಭು ಬಡಿಗೇತರ್ ನಮ್ಮ ಕಲ್ಪನೆಗೂ ಮೀರಿ ಕಲಾ ನಿರ್ದೇಶನ ಮಾಡಿಕೊಟ್ಟರು. ವಿಶೇಷವಾಗಿ, ಸಿನಿಮಾದಲ್ಲಿ ಸೆಟ್‌ಲೈಟ್ ಬಳಸದೆ, ನೈಜ ಬೆಳಕಲ್ಲೇ ಚಿತ್ರೀಕರಣ ಮಾಡಿದ್ದೇವೆ. ೮ ರಿಂದ ೧೦ ಕೋಟಿ ಬಜೆಟ್‌ನಲ್ಲಿ ಹೆಬ್ಬಾಳದ ಬಳಿ ಒಂದು ಮೈದಾನದಲ್ಲಿ ಬೇರೆ ಬೇರೆ ಸೆಟ್ ಹಾಕಿ ೩೫ ರಿಂದ ೪೦ ದಿನ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ಕೊಡುತ್ತಾರೆ.
ಈ ಚಿತ್ರದ ವಿಶೇಷತೆಯೆಂದರೆ, ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಈ ಕುರಿತು ಮಾತನಾಡುವ ರವಿ, ‘ವೀರ ಕಾಳಗದ ವಿಜೇತರಿಗೆ ಪ್ರಶಸ್ತಿ ನೀಡುವ ಪಾತ್ರವದು. ಅನಾರೋಗ್ಯವಿದ್ದರೂ, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಶಿವಣ್ಣ ತಮ್ಮ ಕೆಲಸವನ್ನು ಮುಗಿಸಿಕೊಟ್ಟರು. ಹೆಬ್ಬಾಳದ ಸೆಟ್‌ನಲ್ಲಿನಮ್ಮ ಜತೆ ಸಂಜೆಯವರೆಗೂ ಇದ್ದರು. ಚಂದನ್ ಶೆಟ್ಟಿ, ‘ಗರುಡ’ ರಾಮ್ ಅವರ ಪಾತ್ರಗಳುಪ್ರಮುಖ ಘಟ್ಟದಲ್ಲಿ ಬರುತ್ತವೆ’ ಎಂದು ಹೇಳಿದ್ದಾರೆ.
‘ವೀರ ಚಂದ್ರಹಾಸ’ ಚಿತ್ರದಲ್ಲಿ ೪೫೦ಕ್ಕೂ ಹೆಚ್ಚು ನಿಜ ಯಕ್ಷಗಾನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಈ ಚಿತ್ರವನ್ನು ಓಂಕಾರ್ ಮೂವೀಸ್ ಬ್ಯಾನರ್ ಅಡಿ ಎನ್.ಎಸ್.ರಾಜಕುಮಾರ್ ನಿರ್ಮಿಸಿದ್ದು, ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್.ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ರವೀಂದ್ರ ದೇವಾಡಿಗ, ಉದಯ್ ಕಡಬಾಲ್ ಮುಂತಾದವರುಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ಅರ್ಪಿಸುತ್ತಿದೆ.
ಮುಖ್ಯಮಂತ್ರಿಗಳಿಗೆ ಮನವಿ
‘ವೀರ ಚಂದ್ರಹಾಸ’ ಚಿತ್ರವನ್ನು ಹೊಂಬಾಳೆ ಫಿಲಂಸ್ ಅರ್ಪಿಸುವುದರ ಜೊತೆಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಚಿತ್ರ ರಾಜ್ಯಾದ್ಯಂತ ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಯಕ್ಷಗಾನ ಕಲೆ ಆಂಧ್ರದ ಕಡೆಯೂ ಹೋಲಿಕೆಯಿದೆ ಎಂದು ತೆಲುಗು ನಿರ್ಮಾಪಕರೊಬ್ಬರು ತೆಲುಗು ಹಕ್ಕುಗಳನ್ನು ಪಡೆದುಕೊಂಡಿದ್ದಾರಂತೆ. ಇನ್ನು, ಈ ಚಿತ್ರದ ಟ್ರೇಲರನ್ನು ಮುಖ್ಯಮಂತ್ರಿಗಳಿಂದ ಬಿಡುಗಡೆ ಮಾಡಿಸಿದ ಸಂದರ್ಭದಲ್ಲಿ, ಚಿತ್ರ ನೋಡುವುದಕ್ಕೆ ಅವರನ್ನು ಆಹ್ವಾನಿಸುವುದರ ಜೊತೆಗೆ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…
ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ…
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…
ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…