ಬೆಂಗಳೂರು: ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುವ ಸಮುದಾಯವು ಮಾತ್ರ ಇಂದಿನ ಜಾಗತೀಕರಣದ ಯುಗದಲ್ಲಿ ಬದುಕುಳಿಯಲಿದೆ. ಜ್ಞಾನಾಧಾರಿತ ಯುಗದಲ್ಲಿ ಶಿಕ್ಷಣವು ಮಾತ್ರ ಸಬಲೀಕರಣಕ್ಕೆ ಅತ್ಯುತ್ತಮ ಸಾಧನವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಯಾದವ (ಗೊಲ್ಲ) ನೌಕರರ ಕ್ಷೇಮಾಭಿವೃದ್ಧಿ ಸಂಘವು ಕೆ.ಆರ್.ಪುರಂನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕೆಎಎಸ್ ವೃಂದಕ್ಕೆ ನೂತನವಾಗಿ ಆಯ್ಕೆಯಾಗಿರುವ ಸಮುದಾಯದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮೋದಿಯವರ ನೇತೃತ್ವದ ಸರಕಾರವು ಸಮಾಜದ ಸಕಲ ಸಮುದಾಯಗಳ ಏಳ್ಗೆಯನ್ನೂ ಸಾಧಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಘೋಷಣೆಯ ಮೂಲಕ ಯಾರೊಬ್ಬರಿಗೂ ತಾರತಮ್ಯ ಮಾಡದಂತಹ, ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆ ಈಗ ಅನುಷ್ಠಾನಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಗೊಲ್ಲ ಸಮುದಾಯದ ಪ್ರಗತಿಗೆ ಸರ್ಕಾರವು ಎಲ್ಲ ನೆರವನ್ನೂ ನೀಡುತ್ತಿದೆ. ದನಿ ಇಲ್ಲದಂತಹ ಸಮುದಾಯಗಳನ್ನು ಗುರುತಿಸಿ, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲೂ ಯಾದವ ಸಮುದಾಯದ ಮಕ್ಕಳು ಗುಣಮಟ್ಟ, ತಂತ್ರಜ್ಞಾನ, ಆವಿಷ್ಕಾರ ಮತ್ತು ಕೌಶಲ್ಯಗಳಿಗೆ ಇರುವ ಮಹತ್ವವನ್ನು ಅರಿತುಕೊಂಡು, ಇವೆಲ್ಲವನ್ನೂ ಕಲಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೋದ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬಂದಿದೆ. ಇದರಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ಆದ್ಯತೆ ನೀಡಲಾಗಿದೆ. ಇನ್ನುಮುಂದೆ ಅಂಕಗಳಿಗೆ ಮಾತ್ರ ಮಹತ್ತ್ವವಿರುವುದಿಲ್ಲ. ಸಮಾಜಕ್ಕೆ ಪೂರಕವಾದ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಗಮನ ಹರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಯಾದವ ಸಮುದಾಯದ ಸ್ವಾಮೀಜಿಗಳು, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮುಖಂಡರಾದ ನಾಗರಾಜ ಯಾದವ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.