ಚೆನ್ನೈ : ಮಕ್ಕಳಿಗೆ ಬೆಳಗಿನ ತಿಂಡಿಯನ್ನು ಉಚಿತವಾಗಿ ವಿತರಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯನ್ನು ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ನೀಡುವ ಮೊದಲ ಹಂತದ ಅನುಷ್ಠಾನವು ಸೆಪ್ಟೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಮೊದಲ ಹಂತದ ಈ ಅನುಷ್ಠಾನದಲ್ಲಿ 1.14 ಲಕ್ಷ ಮಕ್ಕಳಿಗೆ ಪ್ರಯೋಜನವಾಗಲಿದ್ದು, 1,545 ಸರ್ಕಾರಿ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗಿನ ತಿಂಡಿಯನ್ನು ಬಿಸಿಯಾಗಿ ನೀಡಲು ಸರ್ಕಾರ ಉದ್ದೇಶಿಸಿದ್ದು. ಇನ್ಮುಂದೆ ಪ್ರತಿದಿನವೂ ಉಪ್ಪಿಟ್ಟು, ಕಿಚಡಿ, ಪೊಂಗಲ್ ನಂತಹ ಬೇರೆ ಬೇರೆ ತಿಂಡಿಗಳನ್ನು ಮಕ್ಕಳಿಗೆ ನೀಡಲಾಗುವುದು. ಶುಕ್ರವಾರದಂದು ರವಾ ಕೇಸರಿ ಬಾತ್ ಅಥವಾ ಶಾವಿಗೆ ಕೇಸರಿ ಬಾತ್ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರವು ಒಟ್ಟು 33.56 ಕೋಟಿ ಮೀಸಲಿರಿಸಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರವು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಘೋಷಿಸಿರುವ ಪ್ರಮುಖ ಐದು ಹೊಸ ಯೋಜನೆಗಳಲ್ಲಿ ಇದು ಸಹ ಒಂದಾಗಿದೆ.