ಎಡಿಟೋರಿಯಲ್

ನಿನ್ನೆ ಮೊನ್ನೆ ನಮ್ಮ ಜನ: ವೀರಪ್ಪನ್ ಕೊಡಿಸಿದ ಉಪ್ಪಿಟ್ಟು ತಿಂದೆ!

ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದ. ಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದ. ನಮ್ಮ ಕೆಲಸ ಸುಸೂತ್ರವಾಯಿತು.

“ಏನು ಕೆಲಸ ಮಾಡ್ತಿದ್ದೀರಿ?” ಕೇಳಿದೆ.

“ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ” ಅವನೆಂದ.

ಹೆಸರು, ವೀರಪ್ಪನ್ !

ಎರಡು ಗಂಟೆ ವೇಳೆಗೆ ನನ್ನ ಕೆಲಸ ಮುಗಿಯಲು ಬಂದಿತ್ತು. ಶವಗಳನ್ನು ಪೋಸ್ಟ್‌ಮಾರ್ಟಂ ಮಾಡಲು ಡಾಕ್ಟರಿಗೆ ಒಪ್ಪಿಸಬೇಕಿತ್ತು. ಪೋಸ್ಟ್‌ಮಾರ್ಟಂ ಮಾಡಿಸಿಯಾದ ಮೇಲೆ ಶವಗಳನ್ನು ಅವರವರ ರಕ್ತಸಂಬಂಧಿಗಳಿಗೆ ನೀಡಿ ರಸೀತಿ ಪಡೆಯಬೇಕಿತ್ತು. ಅಷ್ಟಾದರೆ ನಮ್ಮ ಮುಖ್ಯ ಕೆಲಸ ಮುಗಿದಂತೆ.

ಹೆಣಗಳ ಬಳಿಗೆ ಊಟ ತರಕೂಡದೆಂದು ಅಲ್ಲೇ ಹತ್ತಿರದಲ್ಲಿ ನಮ್ಮಗಳ ಊಟದ ಪ್ಯಾಕೆಟ್ ಇರಿಸಿದ್ದಾರಂತೆ.

“ಪೊಲೀಸ್ನೋರಿಗೆಲ್ಲಾ ಇಲ್ಲೇ ಊಟ ಬಂದೈತೆ. ಬೇಗ ಹೊಂಡಿ ಸಾಮಿ. ಮುಗಿದೋಯ್ತದೆ!” ಎಂದು ನಮ್ಮ ತೊಳಿಲಾಳಿ ಒಂದೇ ಸಮನೆ ವರಾತ ಹಚ್ಚಿದ್ದ. ಮೃತರ ಕಡೆಯವರ ಆಕ್ರಂದನ ನಡೆಯುತ್ತಿರುವಾಗ ಊಟಕ್ಕೆ ಹೋಗುವುದಾದರೂ ಹೇಗೆ?

ಶವ ಸಂದ ರಸೀತಿ ಪತ್ರವೂ ರೆಡಿಯಾಯಿತು. ಪೋಸ್ಟ್ ಮಾರ್ಟಂ ನಡೆಸಲು ಇನ್ನೂ ಸಮಯವಿತ್ತು. ಬಂದಿದ್ದ ಹತ್ತಾರು ಡಾಕ್ಟರುಗಳು ಒಂದೊಂದೇ ಹೆಣವನ್ನು ಪರೀಕ್ಷಿಸುತ್ತಿದ್ದರು.

ನಿಂತ ನಿಲುವಿನಲ್ಲಿ ಬಂದಿದ್ದರಿಂದ ಪ್ರಾತಃರ್ವಿಧಿಗಳೇ ಆಗಿರಲಿಲ್ಲ. ಬೇಲಿ ಮರೆಯಲ್ಲಿ ಮುಗಿಸೋಣವೆಂದರೆ, ಎಲ್ಲೂ ನೀರೇ ಇಲ್ಲ. ಬೃಹತ್ ಕೆರೆ ಬಗಾಲೆದ್ದು ಬರಿದಾಗಿ ಹೋಗಿದೆ.

ವೀರಪ್ಪನ್ ಬಳಿ ಕಷ್ಟ ಹೇಳಿಕೊಂಡೆ. “ಬನ್ನಿ ಸಾರು. ಕರಕೊಂಡು ಹೋಗ್ತೀನಿ” ಎಂದು ಅದೆಲ್ಲಿಂದಲೋ ಮೊಪೆಡ್ ತಂದ.

ನಮ್ಮ ಪೊಲೀಸರಿಗೆ ಊಟ ಮಾಡಿಕೊಳ್ಳುವಂತೆ ಹೇಳಿ ಮೊಪೆಡ್ ಹತ್ತಿದೆ. ಅವನು ನೀರಿನ ಬಳಿಗೆ ಬಿಟ್ಟ. ಹೊರೆ ಇಳಿಸಿದ ಮೇಲೆ ಹೊಟ್ಟೆಯ ಚಿಂತೆ. ಬೆಳಗಿನಿಂದ ಏನೂ ತಿಂದಿರಲಿಲ್ಲ. “ಹತ್ತಿರದಲ್ಲಿ ಹೋಟೆಲಿದೆಯೇ? ಊಟ ಸಿಗದಿದ್ದರೂ ಪರವಾಗಿಲ್ಲ. ಬಾಳೆಹಣ್ಣು, ಬನ್ನು ಸಿಕ್ಕಿದರೂ ಸಾಕು. ಜನ ಗೋಳಾಡ್ತಾ ಇದ್ದಾರೆ. ಈ ಟೈಮಲ್ಲಿ ಹೆಣಗಳ ಹತ್ತಿರ ಹೋಗಿ ಊಟಮಾಡೋದು ಸರಿಯಾಗಲ್ಲ” ಎಂದೆ.

“ನೀವ್ಯಾಕೆ ಯೋಸ್ನೆ ಮಾಡ್ತೀರಿ ಸಾರು. ತಿಂಡಿ ಮೊದ್ಲೇ ರೆಡಿ ಮಾಡ್ಸಿದ್ದೀವಿ” ಎಂದು ಪಕ್ಕದ ಹಳ್ಳಿಗೆ ಕರೆದೊಯ್ದ. ಅಲ್ಲೊಂದು ಮನೆಯಲ್ಲಿ ಉಪ್ಪಿಟ್ಟು ಮಾಡಿಸಿದ್ದರು. ನಾಲ್ಕಾರು ಅಧಿಕಾರಿಗಳು ಆಗಲೇ ಮೆಲ್ಲುತ್ತಿದ್ದಾರೆ. ಉಪ್ಪಿಟ್ಟಿನ ಜೊತೆಗೆ ಗಟ್ಟಿ ಮೊಸರು ಬೇರೆ !

ತಿಂಡಿ ತಿನ್ನುವಾಗಲೇ ಇನ್‌ಸ್ಪೆಕ್ಟರ್ ಜೀಪಿಗೆ ಮೆಸೇಜ್ ಬಂತು. ಇನ್‌ಕ್ವೆಸ್ಟ್ ಕೆಲಸ ಮುಗಿಸಿದ್ದವರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್ ಬಳಿಗೆ ಹೋಗತಕ್ಕದ್ದು. ಮುಖ್ಯಮಂತ್ರಿ ಗುಂಡೂರಾವ್ ಬರುತ್ತಿದ್ದಾರೆ ಎಂಬ ಕರೆ.

ಅದು ನಾವಿದ್ದ ಜಾಗದ ಹತ್ತಿರದಲ್ಲೇ ಇತ್ತು.

ಅಲ್ಲಿಗೇ ವೀರಪ್ಪನ್ ನನ್ನನ್ನು ಕರೆದೊಯ್ದು ಬಿಟ್ಟ. ಮುಖ್ಯಮಂತ್ರಿಗಿಂತ ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ತುಂಬಿದ್ದರು.

ಹೆಲಿಕಾಪ್ಟರ್ ಬರಲು ಸಮಯವಿತ್ತು. ಅವನೊಡನೆ ಅದೂ ಇದೂ ಮಾತಾಡುತ್ತಿರುವಾಗ ಗುಂಡೂರಾಯರು ಬಂದರು.

ಅಂತ್ಯಸಂಸ್ಕಾರ ಮಾಡಿಸಬೇಕೆಂದು ಹೇಳಿದ ವೀರಪ್ಪನ್ ಹಾಗೇ ಅದೃಶ್ಯನಾದ.

ಅದೇ ಕೊನೆ. ಮತ್ತೆಂದೂ ಅವನ ಭೆಟ್ಟಿಯಾಗಲಿಲ್ಲ. ಆದರೆ ತಮಿಳು ಕೇಡಿ ನಟ ವೀರಪ್ಪನ್ ಹೆಸರು ಪ್ರಸ್ತಾಪವಾದಾಗಲೆಲ್ಲ ಅವನ ಉಪ್ಪಿಟ್ಟಿನ ಆತಿಥ್ಯ, ದೊಡ್ಡ ಮೂಗು, ಅಚ್ಚ ಬಿಳಿ ಹಲ್ಲು ಆಗಾಗ್ಗೆ ನೆನಪಾಗುತ್ತಿತ್ತು.

1986ರ ನಂತರ ವೀರಪ್ಪನ್ ಹೆಸರು ಸುದ್ದಿಯಾಗತೊಡಗಿತು. ಬೂದಿಪಡಗ ಗೆಸ್ಟ್ ಹೌಸಿನಿಂದ ಪರಾರಿಯಾದ ಸುದ್ದಿ ತಿಳಿದಾಗ ಚಿಕ್ಕ ಅನುಮಾನ ಮೂಡಿತು. ಅಂದು ನೆರವಿತ್ತ ಉಪ್ಪಿಟ್ಟು ವೀರಪ್ಪನ್ ಇವನೇ ಇರಬಹುದೇ? ಯಾಕೆಂದರೆ ಇಬ್ಬರ ಊರೂ ಅದೇ ಗೋಪಿನಾಥಂ ! ಅಲ್ಲದೆ ಆ ದಿನಗಳಲ್ಲಿ ಅವನದೊಂದು ಫೋಟೋ ಎಲ್ಲ ಪತ್ರಿಕೆಗಳಲ್ಲೂ ಬರುತ್ತಿತ್ತು. ಎಲ್ಲರ ಬಳಿ ಇದ್ದದ್ದು ಅದೊಂದೇ ಫೋಟೋ. ನಾನು ನೋಡಿದ್ದ ವೀರಪ್ಪನ್‌ಗೆ ಹೋಲುತ್ತಿದ್ದ ಫೋಟೋ.

1988ರ ವೇಳೆಗೆ ವೀರಪ್ಪನ್ ಹಾವಳಿ ಮಿತಿಮೀರಿ ಅವನನ್ನು ಹಿಡಿಯಲು ಮೈಸೂರಿನ ಅಧಿಕಾರಿಗಳನ್ನು ಸರದಿಯಲ್ಲಿ ನಿಯೋಜಿಸತೊಡಗಿದರು. ಅದರಂತೆ ನನಗೂ ತಿಂಗಳಿಗೊಮ್ಮೆ ಡ್ಯೂಟಿ ಬೀಳುತ್ತಿತ್ತು. ನಾಲ್ಕಾರು ಸಬ್ ಇನ್‌ಸ್ಪೆಕ್ಟರ್‌ಗಳು ಒಟ್ಟಿಗೆ ಹೋಗಿ ವಾರವಿದ್ದು ಬರುತ್ತಿದ್ದೆವು. ಅವನನ್ನು ಹೇಗೆ ಹಿಡಿಯಬೇಕು? ಮಾಡಿರುವ ಕೃತ್ಯಗಳೇನು? ಕಾರ್ಯಾಚರಣೆಯ ತಂತ್ರಗಳೇನು? ಒಂದೂ ಗೊತ್ತಾಗುತ್ತಿರಲಿಲ್ಲ. ಬಂದವ ರಾಮನೋ? ಹೋದವ ಭೀಮನೋ? ಗೊತ್ತಿಲ್ಲ. ಎಲ್ಲವೂ ಗುಪ್ತ್ ಗುಪ್ತ್! ಗಪ್ ಚುಪ್! 30-40 ಮಂದಿ ಸೇರಿ ಕೂಂಬಿಂಗ್ ತೀವ್ರ ತಲಾಶ್ ಮಾಡುತ್ತಿದ್ದೆವು. ಅದೆಷ್ಟು ದುರ್ಗಮ ದಟ್ಟ ಕಾಡೆಂದರೆ ಆರೇಳು ಅಡಿ ದೂರದ ಪೊದೆಯಲ್ಲಿ ಒಬ್ಬ ಅವಿತಿದ್ದರೂ ಕಾಣಿಸುತ್ತಿರಲಿಲ್ಲ. ಬೆಕ್ಕನ್ನು ಹುಡುಕುವವರಂತೆ ಮೌನವಾಗಿ ಹುಶ್ ಹುಶ್ ಎನ್ನುತ್ತಾ ಹುಡುಕುತ್ತಿದ್ದೆವು. ಒಬ್ಬರಿಗೂ ಒಂದು ಸ್ಪಷ್ಟ ಗುರಿ, ಹೀಗೇ ಹಿಡಿಯಬೇಕೆಂಬ ಛಲ ಇರಲಿಲ್ಲ. ಹಂಗೇ ಹುಡುಕಿಕೊಂಡು ಹೋದ್ರೆ ಅವನಾಗಿಯೇ ಸಿಕ್ತಾನೆ. ಆಗ ಶತಾಯ ಗತಾಯ ಮುಗಿಬಿದ್ದು ಹಿಡ್ಕೊಳ್ಳೋದು! ಇದಿಷ್ಟೇ ನಮಗಿದ್ದ ಆದೇಶ. ಅವನೊಬ್ಬ ದಂತಚೋರ. ಫಾರೆಸ್ಟ್ ಇಲಾಖೆಯ ಕೆಲವರನ್ನು ಕೊಂದಿದ್ದಾನೆ ಎಂಬುದನ್ನು ಬಿಟ್ಟರೆ, ಬೇರಾವ ಮಾಹಿತಿಯ ಉಸಿರನ್ನೂ ಆಗಿನ ಅಧಿಕಾರಿಗಳು ಬಿಡುತ್ತಿರಲಿಲ್ಲ. ಮಾಹಿತಿ ಲೀಕಾದರೆ ಸಿಕ್ಕುವ ಕಳ್ಳನೂ ನುಣುಚಿಕೊಳ್ಳುತ್ತಾನೆ ಎಂಬ ಮುಂಜಾಗ್ರತೆ. ಆದರೆ ನನಗಿದ್ದದ್ದು ಒಂದೇ ಕುತೂಹಲ. ಗೋಪಿನಾಥಂನಲ್ಲಿ ಸಿಕ್ಕು ಸಹಾಯ ಮಾಡಿದ್ದವನು ಇದೇ ವೀರಪ್ಪನ್ ಇರಬಹುದೇ?

ವೀರಪ್ಪನ್ ಕಾರ್ಯಾಚರಣೆ ಎಂದರೆ ದೂರದ ದಿಂಬಂ, ಹೊಗೇನಕಲ್ ಜಲಪಾತ, ಸತ್ತಿ ತನಕ ಜೀಪಿನಲ್ಲಿ ಹೋಗಿ ವಾಪಸ್ ಬರುವುದು. ಅವನೇನು ಬಸ್ಸಿಗಾಗಿ ಕಾದು ಕುಳಿತಂತೆ ರಸ್ತೆ ಬದಿ ಕೂತಿರುತ್ತಾನಾ? ಎಂದು ನಮ್ಮ ನಮ್ಮಲ್ಲೇ ಹುಡುಗಾಟಿಕೆ ಮಾತಾಡಿಕೊಂಡು ಜಾಲಿ ಟ್ರಿಪ್ ಮಾಡುತ್ತಿದ್ದೆವು.

ಎಲ್ಲಿ ಮಾಹಿತಿ ಸೋರಿಕೆಯಾದೀತೋ ಎಂಬುದು ಆಗಿನ ಅಧಿಕಾರಿಗಳ ಭಯ, ಆತಂಕ. ಪ್ರತಿಯೊಂದನ್ನೂ ಅತಿ ಗೋಪ್ಯತೆ ಮಾಡುತ್ತಿದ್ದರು. ಸಲಹೆ ಸೂಚನೆಗಳ ಮಾರ್ಗದರ್ಶನವೇ ಇಲ್ಲದಿದ್ದಾಗ ನಮಗಾದರೂ ಗಂಭೀರತೆ ಹೇಗೆ ತಾನೇ ಬಂದೀತು?

ಆದರೆ, ಹೊಗೇನಕಲ್ ಫಾಲ್ಸ್ ತನಕ ಹೋಗುವುದೆಂದರೆ ಖುಶಿಯೋ ಖುಷಿ. ಜಲಪಾತದ ದಭೆ ದಭೆಗೆ ತಲೆಯೊಡ್ಡಿ ನಿಂತರೆ ಮೈಕೈ ನೋವೆಲ್ಲಾ ಮಾಯವಾಗುತ್ತಿತ್ತು. ಮೈ ಮನಸ್ಸು ನಿರಾಳವಾಗುತ್ತಿತ್ತು. ಈ ಜಲಕ್ರೀಡೆಯ ನಂತರ ವಿವಿಧ ಜಾತಿ ಮೀನಿನ ಸುಖ ಭೋಜನ. ವಾಪಸಾಗುವಾಗ ರಸ್ತೆಯೂದ್ದಕ್ಕೂ ಗಡದ್ದು ನಿದ್ದೆ. ವಾರಕ್ಕೆ ಯಾಂತ್ರಿಕ ಡ್ಯೂಟಿ ಮುಗಿಯುತ್ತಿತ್ತು. ಮುಂದಿನ ಬ್ಯಾಚಿನವರದೂ ಇದೇ ಕತೆ.

ಹಿಡಿಯುವಿಕೆಯ ನಮ್ಮ ವಿಧಾನವೇ ತುಂಬ ಬಾಲಿಶವಾಗಿರುತ್ತಿತ್ತು ಎನ್ನದೆ ವಿಧಿಯಿಲ್ಲ. ಯಾವನೋ ತಲೆ ಮಾಸಿದವನ ಮಾಹಿತಿ ನಂಬಿಕೊಂಡು ಗುಡ್ಡವನ್ನೆಲ್ಲಾ ಹತ್ತಿ ಹುಡುಕಿ ಜಾಲಾಡಿದ್ದುಂಟು. ಆಗಿನ ಕಾರ್ಯಾಚರಣೆ ನೆನೆದರೆ ನಗು ಬರುತ್ತದೆ.

ವೀರಪ್ಪನ್ ಯಾವುದೋ ಪೊಟರೆಯಲ್ಲೋ, ಗುಹೆಯಲ್ಲೋ ಅವಿತು ಕೂತಿರುತ್ತಾನೆ. ಒಳನುಗ್ಗಿದರೆ ಸಾಕು. ಇಲಿ ಮರಿಯಂತೆ ಮುದುರಿ ಕೂತಿರುವ ಅವನನ್ನು ಇಕ್ಕಳದಲ್ಲಿ ಸಿಕ್ಕಿಸಿದಂತೆ ಎತ್ತಿಕೊಂಡು ಬರುವುದು. ಏನೇ ಮಾರಕಾಸ್ತ್ರ ಇದೆ ಎಂದರೂ, ಪೊಲೀಸ್ ಪಡೆ ನೋಡಿದರೆ ಸಾಕು ಹೆದರಿ ಸರಂಡರ್ ಆಗುತ್ತಾನೆ. ನಮ್ಮನ್ನು ಕಂಡರೆ ಅಷ್ಟು ಭಯ ಭೀತಿ ಇರುವುದರಿಂದಲೇ ಬಡ್ಡಿಮಗ ಎಲ್ಲೋ ಅವಿತಿದ್ದಾನೆ ಎಂಬ ದೃಢ ನಂಬಿಕೆ. ಅವನು ವೀರನಲ್ಲ, ಹೇಡಿ ಶುದ್ಧ ಹೇಡಿ ಎಂದು ಅನೇಕ ಅಧಿಕಾರಿಗಳು, ಮಂತ್ರಿಗಳು ಹೇಳಿಕೆ ಸಹ ಕೊಟ್ಟಿದ್ದರು.

ಅದೇನೋ ವೀರಪ್ಪನ್ ಡ್ಯೂಟಿ ಎಂಬುದು ಎಲ್ಲರಿಗೂ ನಾಮ್ಕಾವಾಸ್ತೆ ಕೆಲಸ. ಎಲ್ಲೋ ಹೆದರಿ ಮುದುರಿ ಕೂತಿರುತ್ತಾನೆ. ಹೆಡೆಮುರಿ ಕಟ್ಟಿ ತರುವುದು ಎಂಬ ಲಘು ಧೋರಣೆ. ಅವನು ನಮ್ಮ ಮೇಲೆ ಫೈರ್ ಮಾಡಬಹುದು ಎಂಬುದೂ ಮುಖ್ಯವಾಗಿರಲಿಲ್ಲ. ನನ್ನನ್ನೂ ಸೇರಿದಂತೆ ಎಷ್ಟೋ ಬಾರಿ ಪಿಸ್ತೂಲನ್ನೇ ಕೊಂಡೊಯ್ಯುತ್ತಿರಲಿಲ್ಲ. ಅದೊಂದು ಅನಗತ್ಯ ಹೊರೆ. ತಂಡದ ಪೊಲೀಸರು ರೈಫಲ್‌ಧಾರಿಗಳಾಗಿರುತ್ತಿದ್ದರು. ಒಬ್ಬರ ಬಳಿ ಪಿಸ್ತೂಲ್ ಇದ್ದರೆ ಸಾಕಲ್ಲಾ ಎಂಬ ಉಡಾಫೆ!

ತಂಡ ಕಟ್ಟಿಕೊಂಡಿದ್ದಾನೆ ಎಂದರೆ ಎಷ್ಟು ಜನರ ತಂಡ? ಬೆರಳೆಣಿಕೆಯ ಹತ್ತಾರು ಜನ. ಎಲ್ಲರೂ ಹಳ್ಳಿ ಗಾಮಾಡುಗಳು. ತರಬೇತಿ ಪಡೆದು ಆಧುನಿಕ ಶಸ್ತಾಸ್ತ್ರ ಹೊಂದಿರುವ ಪೊಲೀಸರಿಗೆ ಕೈಯಲ್ಲಿ ಕಾಡುತೂಸಿನ ಬಂದೂಕ ಇದ್ದರೆ ಸಾಕೇ? ಪೊಲೀಸರನ್ನು ಹೊಡೆಯುವ ತಂತ್ರಗಾರಿಕೆ ಅವಕ್ಕೆಲ್ಲಿ ಬರಬೇಕು? ನಮ್ಮನ್ನು ಕಂಡೊಡನೆ ಸರಂಡರ್ ಆಗ್ತಾನೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲೇ ನಾವೆಲ್ಲಾ ಇದ್ದದ್ದು. ಕೈಗೊಮ್ಮೆ ಸಿಕ್ಕಲಿ ಏನು ಮಾಡ್ತೀವಿ ನೋಡ್ತಿರಿ ಎಂಬ ಒಣ ಹಮ್ಮು ನಮ್ಮೆಲ್ಲರಲ್ಲೂ ಇತ್ತು.

ಯಾವಾಗ ನಾಲ್ಕು ಜನ ಸಬ್‌ಇನ್‌ಪ್ಸೆಕ್ಟರ್‌ಗಳು, ಒಬ್ಬ ಡಿಸಿಎಫ್‌ರ ರುಂಡ ಕತ್ತರಿಸಿ ಚೆಂಡಾಡಿದನೋ ಆಗ ಕೊಂಚ ಸೀರಿಯಸ್‌ನೆಸ್ ಬಂತು. ಹಾಗೆಯೇ ಯಾವಾಗ ಷಕೀಲ್, ಹರಿಕೃಷ್ಣ ಹತ್ಯೆಯಾದರೋ ಮತ್ತು ತಮಿಳುನಾಡಿನ 23 ಜನ ಪೊಲೀಸರಿದ್ದ ವ್ಯಾನನ್ನು ಸ್ಛೋಟಿಸಿದನೋ ಆಗ ಪೊಲೀಸರ ದಪ್ಪ ಚರ್ಮ ಅದುರಿತು. ಆದರೂ ನಮ್ಮ ಒಣಜಂಭ ಕರಗಿರಲಿಲ್ಲ. ಅವನಿಂದ ಹತ್ಯೆಯಾದವರ ವೈಫಲ್ಯಗಳನ್ನೇ ಎತ್ತಿ ಆಡಿಕೊಂಡು, ವೀರಪ್ಪನ್‌ನ ಶಕ್ತಿ ಸಾಮರ್ಥ್ಯವನ್ನು ಕಳಪೆ ಮಾಡಿ ನೋಡುತ್ತಿದ್ದೆವು.

ಕೊನೆಗೂ ಗಂಭೀರತೆ ಬಂದದ್ದು ಶಂಕರ ಬಿದರಿ ನೇತೃತ್ವದ stf ಅಸ್ತಿತ್ವಕ್ಕೆ ಬಂದಾಗ. ಅಲ್ಲೀವರೆಗೂ ಕಾಡು ಬಿಟ್ಟು ಅವನೆಲ್ಲಿ ಹೋಗ್ತಾನೆ? ಸಿಕ್ಕೇ ಸಿಕ್ತಾನೆ ಎಂಬ ಕುರುಡು ನಂಬಿಕೆ ಮಾತ್ರವಿತ್ತು.

(ಮುಂದುವರಿಯುವುದು)

 

andolanait

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

17 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

19 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

19 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

19 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

19 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

23 hours ago