ಎಡಿಟೋರಿಯಲ್

ನಿನ್ನೆ ಮೊನ್ನೆ ನಮ್ಮ ಜನ: ವೀರಪ್ಪನ್ ಕೊಡಿಸಿದ ಉಪ್ಪಿಟ್ಟು ತಿಂದೆ!

1981ರ ಅಕ್ಟೋಬರ್ ತಿಂಗಳು. ನಾನಾಗ ನಜರ್‌ಬಾದ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್. ಬೆಳಗಿನ ಜಾವ ಕಂಟ್ರೋಲ್ ರೂಮಿನಿಂದ ತುರ್ತು ಕರೆ ಬಂತು.

“ಸಾರ್, ಸಾರ್ ಗೋಪಿನಾಥಂನಲ್ಲಿ ಕೆರೆ ಏರಿ ಒಡೆದು 70-80 ಜನ ಸತ್ತಿದ್ದಾರಂತೆ. ಇಡೀ ಊರಿಗೆ ಊರೇ ಕೊಚ್ಚಿ ಹೋಗಿದೆಯಂತೆ. ನೀವೆಲ್ಲಾ ಬ್ಯಾಗ್ ಅಂಡ್ ಬ್ಯಾಗೇಜಿನೊಂದಿಗೆ ತಕ್ಷಣ ಹೋಗಬೇಕಂತೆ. ಇಬ್ಬಿಬ್ಬರು ಕಾನ್ಸ್ ಟೇಬಲ್‌ಗಳೊಂದಿಗೆ ನೀವೆಲ್ಲಾ ಆಫೀಸರ್ಸ್ ರೆಡಿಯಾಗಿ With in hour ಕಂಟ್ರೋಲ್ ರೂಂ ಬಳಿ ಬರತಕ್ಕದ್ದು.”

1980ರ ದಶಕದಲ್ಲಿ ಇಂತಹ ದಿಢೀರ್ ಕರೆಗಳು ಸಾಮಾನ್ಯ. ಎಲ್ಲೋ ಗುಂಪು ಘರ್ಷಣೆ, ಕೋಮು ಗಲಭೆ, ರೈತ ಚಳವಳಿ, ಹೆದ್ದಾರಿ ದರೋಡೆ, ಮಂತ್ರಿ ಸಮಾವೇಶ ಎಂದು ಒಂದಲ್ಲ ಒಂದು ಹೊರಗಡೆಯ ಡ್ಯೂಟಿಗೆ ದಿಢೀರ್ ಕರೆ ಬರುತ್ತಿತ್ತು. ಒಂದು ಜೊತೆ ಬಟ್ಟೆ, ಟ್ರ್ಯಾಕ್ ಸೂಟ್, ಶೇವಿಂಗ್ ಸೆಟ್, ಲುಂಗಿ ಬೆಡ್ ಶೀಟುಗಳಿದ್ದ ಹ್ಯಾವರ್ ಸ್ಯಾಕ್ ಬ್ಯಾಗು ಯಾವಾಗಲೂ ರೆಡಿ ಇರುತ್ತಿತ್ತು. ಆಗಿನ ಟ್ರ್ಯಾಕ್ ಸೂಟ್ ಎಂದರೆ ಒಂದು ಬಗೆಯ ಸಿವಿಲ್ ಯೂನಿಫಾರಮ್. ತಕ್ಷಣ ತಯಾರಾಗಿ ಕಂಟ್ರೋಲ್ ರೂಂ ತಲುಪಿದೆ. ಅದಾಗಲೇ ಮೈಸೂರು ನಗರದ ಏಳೆಂಟು ಅಧಿಕಾರಿಗಳಿಗೆ ಕರೆ ನೀಡಲಾಗಿತ್ತು. ಅವರು ತಮ್ಮೊಂದಿಗೆ ಇಬ್ಬಿಬ್ಬರು ರೈಟರ್ ಕಾನ್ಸ್ ಟೇಬಲ್‌ಗಳನ್ನು ಕರೆ ತಂದಿದ್ದರು.

ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿರುವ ಗೋಪಿನಾಥಂ ಎಂಬ ಹಳ್ಳಿಯ ಕೆರೆ ಒಡ್ಡು ಒಡೆದಿತ್ತು. ಕೇವಲ ನಾಲ್ಕು ವರ್ಷಗಳ ಹಿಂದೆ 1976ರಲ್ಲಿ ಕಟ್ಟಿದ್ದ ಚಿಕ್ಕ ಡ್ಯಾಂ ಅದಂತೆ. ಮಳೆ ಜೋರಾಗಿ ಸುರಿದ ರಭಸಕ್ಕೆ ಗೋಪಿನಾಥಂ ಎಂಬ ಹಳ್ಳಿಗೆ ಹಳ್ಳಿಯೇ ಕೊಚ್ಚಿ ಹೋಗಿದೆಯಂತೆ. ನೀರು ಹರಿದ ರಭಸಕ್ಕೆ ನೂರಾರು ಜನ ಕೊಚ್ಚಿಹೋಗಿದ್ದು ಈಗಾಗಲೇ 30-35 ಹೆಣಗಳು ಸಿಕ್ಕಿವೆಯಂತೆ. ತಕ್ಷಣ ಪೊಲೀಸರು ಹೋಗಿ ಶವದ ಮೇಲಿನ inquest ತನಿಖೆ ಮಾಡಿ, ನಂತರ ಪೋಸ್ಟ್ ಮಾರ್ಟಂ ಮಾಡಿಸಿ ಹೆಣಗಳನ್ನು ವಿಲೇವಾರಿ ಮಾಡಬೇಕಿತ್ತು. ಅದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಮೈಸೂರಿನಿಂದ ಹತ್ತಾರು ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಲಾಗಿತ್ತು. ಅವರು ಒಬ್ಬೊಬ್ಬರೂ ತಮ್ಮ ಸಹಾಯಕರಾಗಿ ಇಬ್ಬಿಬ್ಬರು ರೈಟರ್ ಕಾನ್ಸ್ ಟೇಬಲ್‌ಗಳನ್ನು ಕರೆದುಕೊಂಡು ಬಂದಿದ್ದರು. ಆಗಲೇ ರೆಡಿಯಾಗಿ ಬಂದುನಿಂತಿದ್ದ ಎರಡು ದೊಡ್ಡ ಪೊಲೀಸ್ ವ್ಯಾನುಗಳಲ್ಲಿ ಎಲ್ಲರೂ ಹತ್ತಿಕೊಂಡೆವು.

ಮಲೈ ಮಹದೇಶ್ವರ ಬೆಟ್ಟಕ್ಕೆ ಆ ದಿನಗಳಲ್ಲಿ ಹೋಗಲು ಹಿಡಿಯುತ್ತಿದ್ದ ಸಮಯ ನಾಲ್ಕಾರು ಗಂಟೆಗೂ ಹೆಚ್ಚು. ದುರ್ಗಮವಾದ ಕಾಡು ಪ್ರದೇಶ. ಕೊರಕಲು ರಸ್ತೆಗಳು. ಅಲ್ಲಿ ಹೋಗಿ ನೋಡಿದರೆ ಗೋಪಿನಾಥಂನ ದೊಡ್ಡ ಕೆರೆ ಏರಿ ಒಡೆದು ಹೋಗಿ ನೀರೆಲ್ಲಾ ಖಾಲಿಯಾಗಿತ್ತು. ಫರ್ಲಾಂಗ್ ಗಟ್ಟಲೆ ಪ್ರದೇಶ ಬಟ್ಟ ಬಯಲಾಗಿತ್ತು. ಕೆರೆಯ ಮಣ್ಣು ಕರ್ರಗೆ ಮಿಂಚುತ್ತಿತ್ತು. ಗೊಳೋ ಎಂದು ರೋದಿಸುತ್ತಿದ್ದ ಸಾವಿರಾರು ಜನ ಗ್ರಾಮಸ್ಥರ ಕಿರುಚಾಟ, ಆಕ್ರಂದನ ಆಕಾಶ ಮುಟ್ಟಿತ್ತು. ಸುದ್ದಿ ತಿಳಿದು ಸುತ್ತ ಮುತ್ತಲ ಗ್ರಾಮಗಳಿಂದ ಜನ ಮೆದೆ ಮೆದೆಯಾಗಿ ಬಂದು ತುಂಬಿದ್ದರು.

ಅಲ್ಲೊಂದೆಡೆ 25-30 ಶವಗಳನ್ನು ಸಾಲಾಗಿ ಮಲಗಿಸಿದ್ದರು. ಕೆಲವಾರು ಹೆಣಗಳು ಫರ್ಲಾಂಗ್‌ಗಟ್ಟಲೇ ದೂರ ಕೊಚ್ಚಿ ಹೋಗಿದ್ದವು. ಇನ್ನಷ್ಟು ಶವಗಳನ್ನು ಹುಡುಕಿ ಹೊತ್ತು ತರುತ್ತಿದ್ದ ಕಾರ್ಯ ನಡೆದಿತ್ತು. ಜನಗಳು ಹತ್ತಿರ ಬಾರದಂತೆ ಲೋಕಲ್ ಪೊಲೀಸರು ಶ್ರಮವಹಿಸಿ ತಡೆ ಹಿಡಿದಿದ್ದರು. ಸತ್ತಿರುವ ತಮ್ಮ ಕಡೆಯ ಜನರನ್ನು ನೋಡುವ ದುಃಖದ ತವಕ ಅಲ್ಲಿಯ ಜನರದ್ದು.

“ಒಂದೊಂದೇ ಹೆಣ ಗುರ್ತಿಸಿದ ಮೇಲೆ ಅವರವರ ಮನೆಯವರನ್ನು ನೋಡಲು ಬಿಡುತ್ತೇವೆ. ಎಲ್ಲರೂ ಒಟ್ಟಿಗೇ ನುಗ್ಗಿದರೆ ಅನಾಹುತವಾಗುತ್ತೆ. ಯಾರ‍್ಯಾರ ಮನೆಯವರು ಕಾಣೆಯಾಗಿದ್ದಾರೋ, ಅವರೆಲ್ಲ ಒಂದು ಸಾಲಿನಲ್ಲಿ ನಿಂತುಕೊಳ್ಳಿ” ಎಂದು ಪೊಲೀಸರು ಅವರನ್ನೆಲ್ಲಾ ಒಂದೆಡೆ ನಿಲ್ಲಿಸಿದ್ದರು. ಅದರೇನು ಆಯಾ ಮನೆಯವರ ದುಃಖ ಅವರವರದೇ. ಕಾಯುವ ತಾಳ್ಮೆ ಯಾರಿಗೂ ಇಲ್ಲ. ಪೊಲೀಸರ ಸಂತೈಕೆ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಬೋರಾಡುತ್ತಾ, ಕೀರಾಡುತ್ತಾ ಅಲ್ಲೇ ನೆಲದ ಮೇಲೆ ಹೊರಳಾಡುತ್ತಿದ್ದರು.

ಎಸ್ಪಿ ರೇವಣಸಿದ್ದಯ್ಯನವರು ಮೈಸೂರಿಂದ ಹೋಗಿದ್ದ ನಾವುಗಳು ಮತ್ತು ತಮಿಳುನಾಡಿನಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳು ಮಾಡಬೇಕಾದ ಕೆಲಸಗಳನ್ನು ಮನದಟ್ಟು ಮಾಡಿಸಿದರು.

“ಒಂದೈವತ್ತು ಅರವತ್ತಕ್ಕೂ ಹೆಚ್ಚು ಜನ ಸತ್ತಿದ್ದಾರೆ ಅನ್ನಿಸುತ್ತೆ. ನೀವೆಲ್ಲಾ ಎರಡೆರಡು ಹೆಣಗಳ inquest ಬೇಗ ಶುರು ಮಾಡಬೇಕು. ಲೋಕಲ್ ಪೊಲೀಸರು ಶವದ ಬಂಧು-ಮಿತ್ರರನ್ನು ಹುಡುಕಿ ಕರೆತರುತ್ತಾರೆ. ಅಷ್ಟರಲ್ಲಿ ನೀವುಗಳು ಸರಿಯಾಗಿ ವಿವರಗಳನ್ನು ಸಂಗ್ರಹಿಸಿಕೊಂಡು ತನಿಖಾ ರಿಪೋರ್ಟ್ ಬರೆಯಬೇಕು. ಮುಂದೆ ಇದೆಲ್ಲಾ ದೊಡ್ಡ ಎನ್‌ಕ್ವೈರಿ ಆಗುತ್ತೆ. ಒಂದೊಂದು ಹೆಣಕ್ಕೂ ಪರಿಹಾರ ಅದೂ ಇದೂ ಕೊಡಬೇಕಿರುತ್ತೆ. ಯಾವ ಪಾಯಿಂಟನ್ನೂ ಬಿಡದಂತೆ ಎಚ್ಚರಿಕೆಯಿಂದ inquest ಮಾಡಬೇಕು. ನೀವು ಬರೆಯುವ ಪ್ರತಿಯೊಂದು ಶಬ್ದಕ್ಕೂ ನಾನಾ ಅರ್ಥ ಕೊಟ್ಟು ತರಲೆ ಮಾಡುತ್ತಾರೆ ಎಚ್ಚರ! ನಿಮ್ಮ ರಿಪೋರ್ಟು ಕನ್ನಡಿಯಂತೆ ಸ್ವಚ್ಛವಾಗಿರಬೇಕು. ಯಾವುದೇ ambiguity -ಸಂದಿಗ್ಧತೆ ಇರಕೂಡದು. ಹೆಣ ಗುರುತಿಸುವಲ್ಲಿ ಕಿಂಚಿತ್ತೂ ಎಡವಟ್ಟಾಗ ಕೂಡದು” ಎಂದರು.

ರಿಪೋರ್ಟು ಬರೆಯಲು ಅದಾಗಲೇ ರೀಂ ಗಟ್ಟಲೆ ಪೇಪರ್, ಪೆನ್ನು, ಕಾರ್ಬನ್ ಪೇಪರ್, ಬರೆಯಲು ಪ್ಯಾಡು, ಗುಂಡುಸೂಜಿ ದಾರ ಎಲ್ಲವನ್ನೂ ತರಿಸಿಟ್ಟಿದ್ದರು.

ನನ್ನ ಸಹಾಯಕ ಪೊಲೀಸರಾದ ಪಾಂಡು, ಸುಂದರ್ ಅವರೊಂದಿಗೆ ತನಿಖೆ ಶುರುಮಾಡಿದೆ. ಎರಡು ಹೆಣಗಳನ್ನು ನನಗೆ ನಿಗದಿಗೊಳಿಸಿದ್ದರು. ಶವದ ಮೇಲಿನ ಪ್ರತಿಯೊಂದು ವಿವರವನ್ನೂ ನಾನು, ಪಾಂಡು ಪ್ರತ್ಯೇಕವಾಗಿ ಎಚ್ಚರಿಕೆಯಿಂದ ಗುರುತು ಹಾಕಿಕೊಂಡೆವು. ನಂತರ ತಾಳೆ ಹಾಕಿದರೆ ಇಬ್ಬರ observation ಗಳೂ ಪಕ್ಕಾ ಇರಬೇಕಿತ್ತು. ಯಾರೋ ಫೋಟೋಗ್ರಾಫರ್ ಬಂದು ಹೆಣದ ಜೊತೆಗೆ ನಮ್ಮದೂ ಫೋಟೋ ಕ್ಲಿಕ್ಕಿಸಿಕೊಂಡು ಹೋದ. ಮೃತರ ಕಡೆಯವರು ಅನತಿ ದೂರದಲ್ಲಿ ರೋದಿಸುತ್ತಾ ಕುಳಿತಿದ್ದರು. ಅವರೋ ಕನ್ನಡ ಭಾಷೆ ಗೊತ್ತಿಲ್ಲದ ಹಳ್ಳಿಗರು. ನಾಗರಿಕ ಪ್ರಪಂಚದ ಅರಿವೇ ಇಲ್ಲದವರು. ದಟ್ಟ ಕಾಡಿನ ನಡುವೆ ಇದ್ದ ಕುಗ್ರಾಮ ಗೋಪಿನಾಥಂ. ಕರ್ನಾಟಕ-ತಮಿಳುನಾಡಿನ ಗಡಿಭಾಗದಲ್ಲಿರುವ ಕಟ್ಟಕಡೆಯ ಗ್ರಾಮ ಅದು. ತಮಿಳೇ ಪ್ರಧಾನ. ಮೂರು ದಿನಗಳಿಗೊಮ್ಮೆ ಬಸ್ಸು ಬರುತ್ತಿತ್ತು.

ನಮಗೆ ನೆರವು ನೀಡಲು ಲೋಕಲ್ ಮನುಷ್ಯನೊಬ್ಬನನ್ನು ನೇಮಿಸಿದ್ದರು. ಅವನೋ ಮನುಷ್ಯ ಜಾತಿಯ ಸಂಪರ್ಕವೇ ಇಲ್ಲದವನಂತಿದ್ದ. ಶುದ್ಧ ಗಾಗ (ಜಾಣಪೆದ್ದು) ಬೇರೆ. ಅವನ ತಮಿಳ್ಗನ್ನಡ ಕಾಡುಭಾಷೆ ಸುತರಾಂ ಅರ್ಥವಾಗುತ್ತಿರಲಿಲ್ಲ.

“ಹೆಸರೇನಯ್ಯಾ?” ಕೇಳಿದೆ.

“ನಾಂದಾ? ತೊಳಿಲಾಳಿ!” ಎಂದ. ಅವನಿಂದ ಮಾಹಿತಿ ಪಡೆಯುವಲ್ಲಿ ಸಾಕು ಬೇಕಾಯ್ತು. ತೊಳಿಲಾಳಿ ಅಂದರೆ ಓ ಅನ್ನುತ್ತಿದ್ದ ಹಸೀ ದಡ್ಡ ಶಿಖಾಮಣಿ. ಇವನನ್ನೇ ಕಟ್ಟಿಕೊಂಡು ರಿಪೋರ್ಟ್ ತಯಾರಿಸಿದರೆ ಎಸ್ಪಿ ರೇವಣ ಸಿದ್ದಯ್ಯನವರು ರೌರವ ರಾವಣ ಆಗಿ ಬಿಡುತ್ತಿದ್ದುದರಲ್ಲಿ ಅನುಮಾನವೇ ಇರಲಿಲ್ಲ.

ಅಲ್ಲೊಬ್ಬ ಯುವಕ ಚುರುಕಾಗಿ ಓಡಾಡುತ್ತಾ ಪೊಲೀಸರಿಗೆ ನೆರವಾಗುತ್ತಿದ್ದ. ಮೃತರ ಬಂಧುಗಳನ್ನು ಕರೆತಂದು ಕರಾರುವಾಕ್ಕಾಗಿ ಗುರ್ತಿಸುವುದು, ಅವರಿಗೆ ತಮಿಳಿನಲ್ಲಿ ಸಮಾಧಾನ ಹೇಳಿಕೊಂಡು ನಮ್ಮವರ ಜತೆ ಕನ್ನಡದಲ್ಲಿ ಮಾತಾಡಿಕೊಂಡು ಉಸ್ತುವಾರಿ ಮಾಡುತ್ತಿದ್ದ. 25-30ರ ಆಕರ್ಷಕ ಯುವಕ. ಕಪ್ಪಗಿದ್ದರೂ ಹೊಳೆಯುವ ಅವನ ಕಣ್ಣುಗಳು, ಉದ್ದನೆ ಮೂಗು, ಬಿಳುಪಾದ ಹಲ್ಲುಗಳು ಗಮನ ಸೆಳೆಯುವಂತಿದ್ದವು. ಸಾವಿನ ಆಕ್ರಂದನದ ನಡುವೆ ಅಡ್ಡಾಡುತ್ತಿದ್ದರೂ ಆ ಮುಖದಲ್ಲೊಂದು ಲಗುಬಗೆಯ ಉತ್ಸಾಹವಿತ್ತು. ಪೊಲೀಸರ ಕೆಲಸದಲ್ಲಿ ನೆರವಾಗುತ್ತಾ ಸಂಬಂಧಪಟ್ಟವರಿಗೆ ಬೇಗ ಹೆಣ ಕೊಡಿಸಲು ನೆರವಾಗುತ್ತಿದ್ದ.

ನಾನು ಶವ ತನಿಖೆ ಮಾಡುತ್ತಿದ್ದ ಎರಡೂ ಹೆಣಗಳು ಅವನ ಹತ್ತಿರದ ಬಂಧುಗಳದ್ದು. ಹೆಣಗಳನ್ನು ಕರಾರುವಾಕ್ಕಾಗಿ ಗುರ್ತಿಸಿಕೊಂಡೇ ಶವ ತನಿಖೆ ನಡೆಸಬೇಕಿತ್ತು. ಒಬ್ಬೊಬ್ಬ ರಕ್ತ ಸಂಬಂಧಿಯನ್ನೂ ವಿಚಾರಣೆ ಮಾಡಿ ಖಚಿತಪಡಿಸಿಕೊಂಡು ಮುಂದುವರಿಯಬೇಕು. ಅವರಿಗೆ ಬರುವ ಭಾಷೆ ಎಂದರೆ ತಮಿಳ್ಗನ್ನಡದ ಕಾಡುಭಾಷೆ! ಅವರು ಮಾತಾಡುವ ಭಾಷೆ ನನಗೆ ಗೊತ್ತಾಗುತ್ತಿರಲಿಲ್ಲ. ಜೊತೆಗೆ ದುಃಖಿಸುತ್ತಾ ರಾಗವಾಗಿ ಹೇಳುವ ಹೇಳಿಕೆ ಬೇರೆ.

ಜೊತೆಯಿದ್ದ ತೊಳಿಲಾಳಿಯಿಂದ ವಿಷಯ ಗ್ರಹಿಸಲು ತೊಳಲಾಡುತ್ತಿದ್ದೆವು. ಆ ಯುವಕನಿಗೆ ಸ್ವಲ್ಪ ಸಹಾಯ ಮಾಡುವಂತೆ ಕೋರಿಕೊಂಡೆ. “ನಂ ಸೆಲ್ವಂ ಇದ್ದಾನಲ್ಲಾ ಮಾಡ್ತಾನೆ ಬಿಡಿ. ನಾನೂ ಹೇಳ್ತೀನಿ” ಎಂದ.

“ಸೆಲ್ವಂ ಯಾರೋ ಗೊತ್ತಿಲ್ಲ. ಈ ತೊಳಿಲಾಳಿ ಕೈಲಿ ಏನೂ ಆಗ್ತಿಲ್ಲ”

“ಅಯ್ಯೋ? ಇವನೇ ಸಾರೂ ಸೆಲ್ವಂ. ತೊಳಿಲಾಳಿ ಅಂದ್ರೆ ಕೂಲಿಯಾಳು” ಎಂದ. “ಇರಲಿ ಬಿಡು ರಾಜ. ನೀನೇ ಹೆಲ್ಪ್ ಮಾಡಬೇಕು. ನಾನು ಹೊರಗಡೆ ಮೈಸೂರಿಂದ ಬಂದಿದ್ದೇನೆ. ನೀವುಗಳಾದ್ರೆ ವಿವರಗಳನ್ನು ಸರಿಯಾಗಿ ಕೊಡ್ತೀರಾ. ಈಗ ಒಂದು ಸಾರಿ ರಿಪೋರ್ಟ್ ಬರೆದ ಮೇಲೆ ಬದಲಾಯಿಸೋದಿಕ್ಕೆ ಆಗೊಲ್ಲ. ತಿದ್ದಿಯೂ ಬರೆಯುವಂತಿಲ್ಲ. ನೀನೇ ಇದ್ದು ಬಿಡಣ್ಣಾ” ಏಕವಚನ ಹೊಡೆದು ಗೋಗರೆದೆ.

ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದ. ಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದ. ನಮ್ಮ ಕೆಲಸ ಸುಸೂತ್ರವಾಯಿತು.

“ಏನು ಕೆಲಸ ಮಾಡ್ತಿದ್ದೀರಿ?” ಕೇಳಿದೆ.

“ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ” ಅವನೆಂದ.

ಹೆಸರು, ವೀರಪ್ಪನ್ !

(ಮುಂದುವರಿಯುವುದು)

andolanait

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

35 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

1 hour ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

3 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago