1974ರ ಫಿಲಂಫೇರ್ ಪ್ರಶಸ್ತಿ ಸಮಾರಂಭ. ಆ ವರ್ಷದ ಅತ್ಯುತ್ತಮ ಗಾಯಕಿ ಪ್ರಶಸ್ತಿ ಆಶಾಭೋಸ್ಲೆ ಅವರಿಗೆ. ಪ್ರಾಣ್ ಜಾಯೆ ಪರ್ ವಚನ್ ನ ಜಾಯೆ ಚಿತ್ರಕ್ಕಾಗಿ ಹಾಡಿದ್ದ ಗೀತೆ “ಚೈನ್ ಸೆ ಹಮ್ ತೊ ಕಭೀ” ಗೀತೆಗಾಗಿ ಆ ಪ್ರಶಸ್ತಿ.
ಹೆಸರು ಕೂಗಿದಾಗ ಪ್ರಶಸ್ತಿ ಸ್ವೀಕರಿಸಲು ಆಶಾ ಗೈರಾಗಿದ್ದರು. ಆ ಗೀತೆಯನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ಅವರನ್ನೇ ವೇದಿಕೆಗೆ ಕರೆದರು. ನಯ್ಯರ್ ಆ ಪ್ರಶಸ್ತಿಯನ್ನು ಆಶಾ ಪರವಾಗಿ ಪಡೆದು ಏನೂ ಮಾತಾಡದೆ ಬಂದುಬಿಟ್ಟರು.
ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದಾಗ ನಯ್ಯರ್ ಫಿಲಂಫೇರ್ ಪ್ರಶಸ್ತಿಯ ವಿಗ್ರಹವನ್ನೇ ಮುರಿದು ಹಾಕುವವರಂತೆ ಕೈಗಳಿಂದ ಹಿಂಡುತ್ತಿದ್ದರು. ಜೊತೆಯಲ್ಲಿ ಕುಳಿತು ಗಮನಿಸುತ್ತಿದ್ದ ಗೀತಕಾರ ಎಸ್.ಹೆಚ್.ಬಿಹಾರಿಗೆ ಆಶ್ಚರ್ಯವೇನೂ ಆಗಲಿಲ್ಲ. ನಯ್ಯರ್ ಅವರ ಉರಿಗೋಪ, ಹಾರಾಟ, ಕೀರಾಟ ತಿಳಿದದ್ದೇ.
ಉದ್ದೇಶಪೂರ್ವಕವಾಗಿ ಪ್ರಶಸ್ತಿ ಸ್ವೀಕರಿಸಲು ಆಶಾ ಬರಲಿಲ್ಲವೆಂಬ ಬೇಸರ ಬಿಹಾರಿ ಅವರದ್ದೂ. ಇತ್ತೀಚಿನ ನಯ್ಯರ್ ಆಶಾ ವಿರಸವೂ ಗೊತ್ತಿತ್ತು. ಈ ಮೂವರ ಒಗ್ಗೂಡುವಿಕೆಯಲ್ಲಿ ಅರಳಿದ ಅನುಪಮ ಗೀತೆಗಳೆಷ್ಟೋ. ಒಂದಕ್ಕಿಂತ ಮತ್ತೊಂದು ಸೂಪರ್ ಹಿಟ್ ಗೀತೆಗಳಾಗಿದ್ದವು. ಪ್ರತಿವರ್ಷದ ಫಿಲಂಫೇರ್ ಸಮಾರಂಭಗಳಲ್ಲೂ ಆಶಾ-ಓಪಿ ಕಾಂಬಿನೇಷನ್ನಿನ ಒಂದಲ್ಲಾ ಒಂದು ಗೀತೆ ನಾಮಿನೇಟ್ ಆಗುತ್ತಿತ್ತು. ಆದರೆ ಅಂತಿಮವಾಗಿ ಪ್ರಶಸ್ತಿ ಕೈತಪ್ಪುತ್ತಿತ್ತು. ಜಾಯಿಯೇ ಆಪ್ ಕಹ್ಞಾ ಜಾಯೆಂಗೆ, ಅರೆ ಹೊಲ್ಲೊ ಹೊಲ್ಲೊ ಚಲ್ಲೊ ಮೇರೆ, ಆವೋ ಹುಜೂರ್ ತುಮ್ ಕೋ, ವೊ ಹಸೀನ್ ದರ್ದ್ ದೇದೋ, ಕಶ್ಮೀರ್ ಕಿ ಕಲಿ, ಮೇರೆ ಸನಮ್, ಫಿರ್ ವೊಹಿ ದಿಲ್ ಲಾಯಾ ಹೂಂ ಒಂದೇ ಎರಡೇ? ಎಲ್ಲವೂ ಅಜರಾಮರ ಗೀತೆಗಳು.
1974ರ ಫಿಲಂಫೇರ್ ಆಯ್ಕೆಯಲ್ಲಿ ‘ಚೈನ್ ಸೆ ಹಂತೊ ಕಭೀ’ ಗೀತೆ ಪ್ರಶಸ್ತಿ ಗೆದ್ದಿತ್ತು. ಬಹುಮಾನ ಸ್ವೀಕರಣೆಗೆ ಬರಬೇಕೆಂದು ಆಯೋಜಕರು ಮೊದಲೇ ಆಶಾರನ್ನು ಆಹ್ವಾನಿಸಿದ್ದರು. ಆ ಗೀತೆಗೆ ಕಾರಣರಾದ ಸಂಗೀತಗಾರ ಓ.ಪಿ.ನಯ್ಯರ್ ಮತ್ತು ಗೀತಕಾರ ಎಸ್.ಹೆಚ್.ಬಿಹಾರಿ ಅವರನ್ನೂ ಕರೆದಿದ್ದರು. ಬಹು ವರ್ಷಗಳ ಕಾಯುವಿಕೆಯ ನಂತರ ಅರಸಿ ಬಂದಿದ್ದ ಪ್ರತಿಷ್ಠಿತ ಗಾಯಕಿ ಪ್ರಶಸ್ತಿ. ಆ ವೇಳೆಗೆ ನಯ್ಯರ್ ಆಶಾ ಸಂಬಂಧ ಹಳಸಿತ್ತು. ಆಶಾ ಬರಲಿಲ್ಲ.
ಮುಂಬೈ ಮೆರೀನ್ ಡ್ರೈವ್ ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ನಿಲ್ಲಿಸಲು ಹೇಳಿದರು ನಯ್ಯರ್. ಜೊತೆಯಲ್ಲಿ ಬಿಹಾರಿ ಕೂಡ ಇಳಿದರು.
ತಂಗಾಳಿಯಲ್ಲಿ ಕಲರವ ಮಾಡುತ್ತಿದ್ದ ಸಮುದ್ರ. ನಾಲ್ಕಾರು ನಿಮಿಷಗಳು ಹಾಗೇ ನೋಡುತ್ತಿದ್ದ ನಯ್ಯರ್ ತಮ್ಮ ಕೈಯಲ್ಲಿದ್ದ ಫಿಲಂಫೇರ್ ಬೆಡಗಿಯನ್ನು ಸಮುದ್ರದತ್ತ ಬೀಸಿ ಜೋರಾಗಿ ಒಗೆದರು. ಹತ್ತಿರದ ಒಡ್ಡಿಗೆ ರಪ್ಪನೆ ಬಡಿದ ಪ್ರಶಸ್ತಿ ಚೂರು ಚೂರಾಯಿತು.
“ಅಯ್ಯಯ್ಯೋ ಇದೇಕೆ ಹೀಗೆ ಮಾಡಿದಿರಿ?” ಬಿಹಾರಿಯ ಪ್ರಶ್ನೆ.
ಉತ್ತರಿಸಿದ ನಯ್ಯರ್ ಕೊನೆಗೆ ಹೇಳಿದರು. “ಈ ವಿಗ್ರಹದಂತೆಯೇ ನನ್ನ ಹೃದಯವೂ ಚೂರು ಚೂರಾಯಿತು. ಇನ್ನು ಆಶಾ ನನ್ನ ಜೀವನದಲ್ಲಿ ಇರೋದಿಲ್ಲ. ಇರಲು ಸಾಧ್ಯವೂ ಇಲ್ಲ”.
ಇಪ್ಪತ್ತೆರಡು ವರ್ಷಗಳ ಸುದೀರ್ಘ ಪ್ರೇಮ ಸಂಬಂಧ ಕೊನೆಗೊಂಡಿತು. ಕೀರಲು ದನಿಯಲ್ಲಿ ಹಾಡುತ್ತಿದ್ದ ಆಶಾಭೋಸ್ಲೆಯ ಕಂಠವನ್ನು ಹದಗೊಳಿಸಿ ಮಾದಕ ಇಂಪು ತಂದವರು ನಯ್ಯರ್ ಎಂಬುದರಲ್ಲಿ ಎರಡನೇ ಮಾತಿಲ್ಲ. ಅನುರಾಗವಿದ್ದೆಡೆ ಅಮೃತ ಹರಿಯುವುದು ಅಸಂಭವವೇ? ನಾನಾ ಬಗೆಯ ರಾಗತರಂಗಗಳು ಆಶಾ ಕಂಠದಲ್ಲಿ ಸ್ಛುರಿಸಿದವು. ಆಕೆಗಾಗಿ ಒಂದೊಂದು ಗೀತೆಯ ಪೂರ್ವ ತಯಾರಿ ತಿಂಗಳಿಡೀ ನಡೆಯುತ್ತಿತ್ತು. ಅಂತಿಮವಾಗಿ ನಯ್ಯರ್ ಕಲ್ಪಿಸಿದ್ದಕ್ಕಿಂತ ಉತ್ತಮವಾಗಿ ಹಾಡಿಬಿಡುತ್ತಿದ್ದರು ಆಶಾ. ಎರಡು ಮಹೋನ್ನತ ಪ್ರತಿಭೆಗಳ ಸಂಗಮ ಅದು.
ಅವರಿಬ್ಬರ ಹೊಂದಾಣಿಕೆ ಹೇಗಿತ್ತೆಂದರೆ, ಓಪಿಗಾಗಿ ಆಶಾ ಹುಟ್ಟಿದರೋ ಅಥವಾ ಆಶಾಗಾಗಿ ನಯ್ಯರ್ ಜನಿಸಿದರೋ ಎಂಬಷ್ಟರ ಮಟ್ಟಿಗೆ ಅವರ ಜೋಡಿ ಇತ್ತು. ಪ್ರತಿ ಗೀತೆಯ ಉತ್ಕೃಷ್ಟತೆಗಾಗಿ ತುಡಿದ ಜೀವಗಳು ಅವು. ನಯ್ಯರ್ ದೃಷ್ಟಿಯಲ್ಲಿ ಆಶಾ ಕಂಠವೇ ಸರ್ವಶ್ರೇಷ್ಠ! ಅದನ್ನು ಮೀರಿಸಿದ ಮತ್ತೊಂದು ಕಂಠವಿಲ್ಲ. ನಯಾದೌರ್ ಚಿತ್ರಕ್ಕೆ ವೈಜಯಂತಿಮಾಲಾರಿಗಾಗಿ ಆಶಾರಿಂದ ಹಾಡಿಸಿದರು ನಯ್ಯರ್.
“ನಾಯಕಿಗೂ ಗಾಯಕಿಗೂ ಹೊಂದುವುದಿಲ್ಲ, ಲತಾರ ಕಂಠವೇ ಹೆಚ್ಚು ಸೂಕ್ತ” ಎಂದರು ನಿರ್ಮಾಪಕರು. ಪ್ರೇಮದ ಪ್ರಮತ್ತತೆಯಲ್ಲಿದ್ದ ನಯ್ಯರ್ ಕೇಳಬೇಕಲ್ಲಾ, ಆಶಾಳೇ ಆಗಬೇಕೆಂದರು. ಮಾಂಗ್ ಕೆ ಸಾಥ್ ತುಮ್ಹಾರಾ ಹೀಗೆ ಒಂದೊಂದು ಗೀತೆಯೂ ಜಯಭೇರಿ ಬಾರಿಸಿದವು.
ಅಂದಿನ ದಿನಗಳಲ್ಲಿ ಲತಾ ಮಂಗೇಷ್ಕರ್ ಮಾತ್ರವೇ ಮೊದಲ ಆಯ್ಕೆ. ಲತಾ ಹಾಡಿದರೆ ಮಾತ್ರ ಚಿತ್ರ ಹಿಟ್ ಎಂಬ ನಂಬಿಕೆ. “ನಾನು ಕಂಪೋಸ್ ಮಾಡಿದರೆ ಆಶಾಗಾಗಿ ಮಾಡುತ್ತೇನೆ. ನಿಮಗೆ ಒಪ್ಪಿಗೆ ಇಲ್ಲವೆಂದರೆ ಕಾಂಟ್ರಾಕ್ಟನ್ನೇ ರದ್ದು ಮಾಡಬಹುದು” ಇದು ನಯ್ಯರ್ ಹಠ.
“ಆದರೆ ಲತಾ ಕಂಠ ಓಡುವ ಕುದುರೆ. ಜನ ಇಷ್ಟಪಡುತ್ತಾರೆ. ವೈಯಕ್ತಿಕತೆ ಬೇಡ. ವೃತ್ತಿವಂತಿಕೆಯಿಂದ ನಡೆದುಕೊಳ್ಳಿ. ನೀವ್ಯಾಕೆ ಲತಾರಿಂದ ಹಾಡಿಸಬಾರದು?” ನಿರ್ಮಾಪಕರ ಮರು ಪ್ರಶ್ನೆ. “ಆಕೆಯ ಕಂಠಕ್ಕೆ ಮಾಧುರ್ಯ, ಸೊಗಸಿಲ್ಲವೇ ?”.
“ಲತಾರೂ ಚೆನ್ನಾಗಿ ಹಾಡುತ್ತಾರೆ” ಎನ್ನುತ್ತಿದ್ದ ನಯ್ಯರ್ ಎಲ್ಲ ಕಾಲಕ್ಕೂ ನಿಲ್ಲುವಂತಹ ಮಾತೊಂದನ್ನು ಲತಾ ಬಗ್ಗೆ ಹೇಳಿದ್ದರು. “ಆ ಕಂಠ ದೈವಿಕವಾದದ್ದು! Its devine. ಆದರೆ ನನ್ನ ಶೈಲಿಗೆ ಹೊಂದಿಕೆಯಾಗೋದಿಲ್ಲ. ಆಶಾ ಕಂಠದಲ್ಲಿ ಮಾದಕತೆ ಇದೆ. ಮಾರ್ದವ ಮೋಹಕತೆ ಇದೆ. ನಾನಂದುಕೊಂಡದ್ದಕ್ಕಿಂತ ಆಶಾ ಚೆನ್ನಾಗಿ ಹಾಡುತ್ತಾರೆ. ನನ್ನ ಸಂಗೀತ ಸೃಷ್ಟಿಯಾಗುವುದೇ ಆಕೆಗಾಗಿ. ಅವರನ್ನು ಬಿಟ್ಟು ಬೇರೆಯವರಿಂದ ಹಾಡಿಸಲಾರೆ”.
ನಯ್ಯರ್‌ರ ಹುಚ್ಚು ಹಠದಿಂದಾಗಿ ಅನೇಕ ಉತ್ತಮ ಚಿತ್ರಗಳು ಕೈಬಿಟ್ಟವು. ಪ್ರಮುಖ ಬ್ಯಾನರ್‌ಗಳು ಅವರಿಂದ ದೂರ ಸರಿದವು. ಆಶಾ ಧ್ವನಿಯ ಬಗ್ಗೆ ನಿರ್ಮಾಪಕರಿಗೆ ಅನಾದರವೇನೂ ಇರಲಿಲ್ಲ. ಆದರೆ ಲತಾ ಕಂಠಕ್ಕೆ ಮಾರ್ಕೆಟ್ ಇದೆ. ನಾಯಕ ನಟಿಯರೂ ಲತಾರನ್ನೇ ಇಷ್ಟಪಡುತ್ತಾರೆ. ಆದ್ದರಿಂದಾಗಿ ಅವರ ಆದ್ಯತೆ ಲತಾಗೆ. ಆಶಾರಿಗಲ್ಲ. ನಯ್ಯರ್‌ರನ್ನು ನಿರ್ದೇಶಕ ಪತಿ ಗುರುದತ್‌ಗೆ ಶಿಫಾರಸು ಮಾಡಿದ್ದವರೇ ಗಾಯಕಿ ಗೀತಾ ದತ್. ನಯ್ಯರ್ ಸಂಗೀತದಿಂದಾಗಿ ಗುರುದತ್ ಚಿತ್ರಗಳು ಇನ್ನಿಲ್ಲದಷ್ಟು ಜನಪ್ರಿಯವಾದವು. ಗೀತಾರಿಂದ ನಯ್ಯರ್ ಮೆರಾ ನಾಮ್ ಚಿನ್ ಚಿನ್ ಚಿವ್, ಥಂಡಿ ಹವಾ ಕಾಲಿ ಘಟಾ, ಬಾಬೂಜಿ ಧಿರೆ ಚಲ್ ನಾ ಮುಂತಾದ ಸೂಪರ್ ಡೂಪರ್ ಗೀತೆಗಳನ್ನು ಹಾಡಿಸಿದ್ದರು.
ಯಾವಾಗ ಆಶಾ ಬಂದರೋ ಗೀತಾ ಮಸುಕಾಗಿ ಮರೆಯಾದರು. ಹೊಸ ನೀರು ಹಳೆಯದನ್ನು ಕೊಚ್ಚಿಕೊಂಡು ಹೋಯಿತು. ತನ್ನ ಗಂಡ ಗುರುದತ್ತನ ಸ್ವಂತ ಚಿತ್ರ ಬಹಾರೇಂ ಫಿರ್ ಭಿ ಆಯೇಂಗೀ ಚಿತ್ರದಲ್ಲಿ ಹಾಡಲೂ ಗೀತಾಗೆ ಅವಕಾಶ ನೀಡಲಿಲ್ಲ ನಯ್ಯರ್. ಈ ತಿಕ್ಕಲುತನಕ್ಕೆ ಕೊನೆ ಮೊದಲಿರಲಿಲ್ಲ. ಪ್ರೇಮದ ಹುಚ್ಚು ಗುಂಗೋ? ಕುರುಡು ಪ್ರಮತ್ತತೆಯೋ? ನಯ್ಯರ್‌ಗೆ ಆಶಾರೇ ಸರ್ವಸ್ವ. ತನ್ನ ವೃತ್ತಿ ಬದುಕನ್ನು ಪಣಕ್ಕಿಟ್ಟು ಆಶಾರಿಗೆ ಆದ್ಯತೆ ನೀಡಿದರು. ಲತಾರಿಂದ ಸ್ಯಾಂಪಲ್ಲಿಗೂ ಒಂದೇ ಒಂದು ಗೀತೆ ಹಾಡಿಸದೆ ಇಡೀ ಚಿತ್ರರಂಗದಲ್ಲಿ ಬಲವಾಗಿ ನಿಂತವರು ಅವರೊಬ್ಬರೇ.
ಈ ತಿಕ್ಕಲು, ದಾಷ್ಟೀಕತೆ ಬಹಳ ದಿನ ನಿಲ್ಲುವಂತಿರಲಿಲ್ಲ. ವೈಯಕ್ತಿಕವಾಗಿ, ವ್ಯಾವಹಾರಿಕವಾಗಿ ಆಶಾರೇ ಸರ್ವಸ್ವ ಎಂದರೆ ಮನೆಯಲ್ಲಿ ಶಾಂತಿ ನೆಮ್ಮದಿ ಉಳಿದೀತೇ? ನಯ್ಯರ್ ಕುಟುಂಬದಲ್ಲಿ ವಿಪ್ಲವವೆದ್ದಿತು. ಆ ಕಾಲಕ್ಕೇ ನಯ್ಯರ್ ಐಷಾರಾಮಿ ಕ್ಯಾಡಿಲಾಕ್ ಕಾರು ಹೊಂದಿದ್ದರು. ಅದರಲ್ಲಿ ಆಶಾರ ದಿವಿನಾದ ಓಡಾಟ. ಪತ್ರಿಕೆಗಳಲ್ಲಿ ಅದೇ ಗಾಸಿಪ್. ಈ ಎಲ್ಲ ಹಳವಂಡದಿಂದಾಗಿ ನಯ್ಯರ್ ಪತ್ನಿ ಕವಯಿತ್ರಿ ಸರೋಜ್ ಮೋಹಿನಿ ಕ್ಯಾಡಿಲಾಕ್‌ನಲ್ಲಿ ಕೂರಲಿಲ್ಲ.
ಎಲ್ಲ ಸ್ನೇಹಕ್ಕೂ, ಪ್ರೇಮಕ್ಕೂ ಅಂತ್ಯವೆನ್ನುವುದು ಇದ್ದೇ ಇದೆ. ಅದಕ್ಕೆ ಅಸೂಯೆ ಬೆರೆತರೆ ಆಯುಸ್ಸೇ ಮುಗಿದಂತೆ. ಯುವ ಸಂಗೀತಗಾರ ರಾಹುಲ್ ದೇವ್ ಬರ್ಮನ್ ಜೊತೆ ಆಶಾ ಸಲುಗೆಯಾಗಿದ್ದಾರೆಂದು ನಯ್ಯರ್ ಘಾಸಿಗೊಂಡರು.
(ಮುಂದುವರಿಯುವುದು)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…