ಎಡಿಟೋರಿಯಲ್

ದ್ವೇಷ ಕಾರುವವರಿಗೆ ಬೀಳಲಿದೆಯೇ ಕಡಿವಾಣ?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-೨೦೨೫ವನ್ನು ಧ್ವನಿಮತದ ಆಧಾರದ ಮೇಲೆ ಅಂಗೀಕರಿಸಿದೆ.

ವಿಧೇಯಕ ಇದೀಗ ‘ಲೋಕಭವನ’ದ ಅಂಗಳ ತಲುಪಲಿದ್ದು, ರಾಜ್ಯಪಾಲರು ಅಂಕಿತ ಹಾಕಿದ ದಿನದಿಂದ ಮಸೂದೆಯಾಗುವ ಮೂಲಕ ಜಾತಿ, ಮತ, ಧರ್ಮ,ಲಿಂಗ, ಲಿಂಗತ್ವ, ಜನ್ಮ ಸ್ಥಳ, ಭಾಷೆ, ಪಂಗಡ, ರಾಜಕೀಯ ಕಾರಣಗಳಿಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಕಾರುವವರಿಗೆ ಕಾನೂನಿನ ಮೂಲಕ ಮೂಗುದಾರ ಹಾಕುವ ಅಸವನ್ನು ಪೊಲೀಸರಿಗೆ ನೀಡಲಿದೆ.

ದ್ವೇಷ ಭಾಷಣ ಎಂಬುದು ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು ಬದುಕಿರುವ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮು ದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ವೈರತ್ವದ ಅಥವಾ ದ್ವೇಷದ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ ಅಥವಾ ಲಿಖಿತ ರೂಪದ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯ ರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಮಾಡಲಾದ, ಪ್ರಕಟಿಸಲಾದ, ಪರಿಚಯಿಸಲಾದ ಯಾವುದೇ ಅಭಿವ್ಯಕ್ತಿಯನ್ನು ಒಳಗೊಳ್ಳುವುದು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ, ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ, ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆ ವಿಧಿಸುವ ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯವೆಂದು ಪರಿಗಣಿಸಿ ಈ ವಿಧೇಯಕ ತರಲಾಗಿದೆ. ಬಹುತ್ವದ ಭಾರತದಲ್ಲಿ ಜಾತಿ, ಮತ, ಧರ್ಮಗಳ ನಡುವಿನ ವೈಮನಸ್ಯ, ಮತಾಂಧರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಸೂದೆಯ ಅನುಷ್ಠಾನವಾಗಬೇಕು. ಆದರೆ, ಯಾವುದೇ ಒಂದು ಸಮಾಜ, ಸಮುದಾಯ, ವ್ಯಕ್ತಿ, ಸಂಸ್ಥೆಗಳನ್ನು ಹಣಿಯಲು ಆಳುವ ಸರ್ಕಾರಕ್ಕೆ ಈ ಮಸೂದೆ ಅಸವಾಗಬಾರದು.

ಇದನ್ನು ಓದಿ: ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಈ ವಿಧೇಯಕ ಕಾಯಿದೆಯಾಗಿ ಜಾರಿಯಾದರೆ ಸರ್ಕಾರದ ನೀತಿಗಳ ವಿರುದ್ಧದ ಟೀಕೆ, ಸಾಮಾಜಿಕ ಚರ್ಚೆ, ಹಾಸ್ಯ ಅಥವಾ ಸತ್ಯವನ್ನು ಪ್ರತಿಪಾದನೆ ಮಾಡುವುದು ಕೂಡ ದ್ವೇಷವೆಂದು ಪರಿಗಣಿಸುವ ಅಪಾಯವಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಹಾನಿ ಮಾತ್ರವಲ್ಲ, ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಆ ಮೂಲಕ ಪ್ರಜಾಪ್ರಭುತ್ವದ ಕತ್ತುಹಿಸುಕುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಧೇಯಕವು ಕಾಯಿದೆಯಾಗಿ ಜಾರಿಯಾದಲ್ಲಿ ಯಾವುದೇ ಸಮು ದಾಯದ ಮತಾಂಧರ ಬಾಯಿಗೆ ಕಡಿವಾಣ ಹಾಕುವ ಜತೆಗೆ ಪ್ರಗತಿಪರರ ಬಾಯಿಗೂ ಬೀಗಹಾಕಲಿದೆ. ಮೈಕು ಸಿಕ್ಕ ಕೂಡಲೇ ಇನ್ನೊಂದು ಸಾಮುದಾಯದವರನ್ನು ಹೊಡಿ, ಬಡಿ, ಕೊಲ್ಲು ಎಂದು ಪ್ರಚೋದಿಸುವವರ, ಆಳುವ ನಾಯಕರನ್ನು ಪರೋಕ್ಷವಾಗಿ, ವ್ಯಂಗ್ಯ ಮಾಡುವವರ ಪಾಲಿಗೂ ಮುಳ್ಳಾಗುವುದು ಸಹಜ. ವಿರೋಧಪಕ್ಷಗಳಾದ ಬಿಜೆಪಿ-ಜಾ.ದಳ ಶಾಸಕರು ವಿಧಾನ ಮಂಡಲದ ಒಳ- ಹೊರಗೆ ಈ ವಿಧೇಯಕದ ವಿರುದ್ಧ ಧ್ವನಿ ಎತ್ತಿದ್ದರೂ ಸರ್ಕಾರ ತನಗಿರುವ ಸಂಖ್ಯಾ ಬಲದ ಆಧಾರದ ಮೇಲೆ ವಿಧೇಯಕ ವನ್ನು ಅಂಗೀಕರಿಸಿದೆ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಯಾವುದೇ ಕಾರಣಕ್ಕೂ ಈ ವಿಧೇಯಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬಿಜೆಪಿ-ಜಾ.ದಳ ನಾಯಕರು ಸೇರಿದಂತೆ ಬೇರೆ ಬೇರೆ ಸಂಘಟನೆಗಳವರೂ ಸರ್ಕಾರ ತರಲು ಹೊರಟಿರುವ ಈ ಮಸೂದೆಗೆ ಆಕ್ಷೇಪ ಎತ್ತಿದ್ದಾರೆ.

ಕರ್ನಾಟಕ ಸರ್ಕಾರವು ತರಲು ಹೊರಟಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿ ಬಂಧಕ) ವಿಧೇಯಕ- ೨೦೨೫’ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಈ ವಿಧೇಯಕವು ಕಾನೂನಾಗಿ ಜಾರಿಗೆ ಬಂದರೆ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಲಿದೆ. ಭಾರತದ ಸಂವಿಧಾನದ ಅನುಚ್ಛೇದ ೧೯(೧) (ಎ)ಯಲ್ಲಿ ಮಾತನಾಡುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಇದನ್ನು ಓದಿ: ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಆದರೆ ಈ ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯೆಯೇ ಅಸ್ಪಷ್ಟವಾಗಿದ್ದು, ಸರ್ಕಾರದ ಉದ್ದೇಶವೇ ಅನುಮಾನ ಹುಟ್ಟಿಸುವಂತಿರುವುದರಿಂದ ಯಾವುದೇ ಕಾರಣಕ್ಕೂ ಈ ವಿಧೇಯಕ ಕಾನೂನಾಗಿ ಜಾರಿಯಾಗಬಾರದು, ಸರ್ಕಾರ ಕೂಡಲೇ ಈ ವಿಧೇಯಕವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗ್ರಹಿಸಿದ್ದಾರೆ.

ಸಮಾಜದ ಆಗ್ರಹಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಧೇಯಕವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ರಾಜ್ಯಸರ್ಕಾರಕ್ಕೆ ವಾಪಸ್ ಕಳಿಸಬಹುದು. ಇಲ್ಲವೇ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಸರ್ಕಾರಗಳು ಕಳುಹಿಸುವ ವಿಧೇಯಕಗಳಿಗೆ ಅಂಕಿತ ಹಾಕಲು ರಾಜ್ಯಪಾಲರುಗಳಿಗೆ ಕಾಲಮಿತಿ ಹೇರುವಂತಿಲ್ಲ ಎಂದು ಹೇಳಿರುವುದರಿಂದ ರಾಜ್ಯಪಾಲರು ಆ ಅಸವನ್ನು ಬಳಸಿಕೊಳ್ಳಬಹುದು, ಇಲ್ಲವೇ ರಾಷ್ಟ್ರಪತಿಗಳಿಗೆ ವಿಧೇಯಕವನ್ನು ಹೊತ್ತು ಹಾಕಿ ಕೂರಬಹುದು.

” ಅಸಾಮರಸ್ಯ ದ್ವೇಷವನ್ನುಂಟು ಮಾಡುವ, ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆ ವಿಧಿಸುವ ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯವೆಂದು ಪರಿಗಣಿಸಿ ಈ ವಿಧೇಯಕ ತರಲಾಗಿದೆ”

ಆಂದೋಲನ ಡೆಸ್ಕ್

Recent Posts

T 20 World Cup : ನಮೀಬಿಯ ವಿರುದ್ಧ ಭಾರತಕ್ಕೆ 93 ರನ್‌ಗಳ ಭರ್ಜರಿ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ…

35 mins ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಅನುಮತಿ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟ…

55 mins ago

ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ರಾಜ್ಯ ಬಜೆಟ್‌ಗೆ ದಿನಾಂಕ ನಿಗದಿ

ಬೆಂಗಳೂರು : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಚ್ 6 ರಂದು ದಾಖಲೆಯ 17ನೇ ಹಾಗೂ ಪ್ರಸಕ್ತ…

2 hours ago

ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್ ಬಣ್ಣನೆ

ನ್ಯೂಯಾರ್ಕ್ : ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕವು ದೇಶಕ್ಕೆ ಮತ್ತು…

4 hours ago

ಬಿಕ್ಲು ಶಿವ ಕೊಲೆ ಪ್ರಕರಣ : ಪೊಲೀಸರ ವಶವಾದ ಬೈರತಿ ಬಸವರಾಜು

ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ (ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರಂ ಕ್ಷೇತ್ರದ…

4 hours ago

ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಶಾಕ್‌ : ಮೈಸೂರು ಸೇರಿ ಹಲವೆಡೆ ದಾಳಿ

ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ…

5 hours ago