ಎಡಿಟೋರಿಯಲ್

ವೈಡ್ ಆಂಗಲ್ : ‘ಕಿರಿಕ್ ಪಾರ್ಟಿ’ಯಿಂದ ‘ಬ್ಯಾಚುಲರ್ ಪಾರ್ಟಿ’ ವೇಳೆ ‘ಇಬ್ಬನಿತಬ್ಬಿದ ಇಳೆ’

ಒಂದು ಕೋಟಿ ರೂ.ಒಳಗಿನ ಬಂಡವಾಳ ಬೇಡುವ ಚಿತ್ರಗಳು, ಒಳ್ಳೆಯ ಕಥೆ, ಸ್ಕ್ರಿಪ್ಟ್ ಇದ್ದರೆ ಅಂತಹವರಿಗೆ ಪರಂವಃ ಸಂಸ್ಥೆ ನೆರವಾಗಲಿದೆ!

ಕಳೆದ ವಾರ ಪರಂವಃ ಸ್ಟುಡಿಯೊದ ಎರಡು ಚಿತ್ರಗಳ ಮುಹೂರ್ತವಿತ್ತು. ಪರಂವಃ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾಲೀಕತ್ವದ ನಿರ್ಮಾಣ ಸಂಸ್ಥೆ. ಅವರ ಚಿತ್ರಕಥಾ ವಿಭಾಗದ ಹೆಸರು ‘ದ ಸೆವೆನ್‌ಆಡ್ಸ್’. ರಕ್ಷಿತ್‌ಶೆಟ್ಟಿ, ರಿಷಭ್‌ಶೆಟ್ಟಿ , ಅಭಿಜಿತ್ ಮಹೇಶ್, ಚಂದ್ರಜಿತ್, ಕಿರಣ್‌ರಾಜ್, ಧನಂಜಯರಂಜನ್ ಇದರಲ್ಲಿದ್ದಾರೆ. ‘ಕಿರಿಕ್ ಪಾರ್ಟಿ’ ಚಿತ್ರದೊಂದಿಗೆ ಪರಂವಃ ನಿರ್ಮಾಣಕ್ಕೆ ಕೈಹಾಕಿತು.
ರಕ್ಷಿತ್ ಶೆಟ್ಟಿ ಅವರ ಈ ಸಾಹಸಕ್ಕೆ ಒತ್ತಾಸೆಯಾಗಿರುವವರಲ್ಲಿ ಮುಖ್ಯವಾಗಿ ರಿಷಭ್ ಸೇರಿದಂತೆ ಹಲವರಿದ್ದಾರೆ.
ಬಹುಶಃ ‘ಅವನೇಶ್ರೀಮನ್ನಾರಾಯಣ’ ಚಿತ್ರದ ಅನುಭವದ ನಂತರ ಇರಬೇಕು, ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕವೇ ಚಿತ್ರ ನಿರ್ಮಿಸುವ ನಿರ್ಧಾರ ಮಾಡಿದರು. ಮೊನ್ನೆ ಸೆಟ್ಟೇರಿದ ಚಿತ್ರಗಳು ‘ಬ್ಯಾಚುಲರ್‌ಪಾರ್ಟಿ’ ಮತ್ತು ‘ಇಬ್ಬನಿತಬ್ಬಿದ ಇಳೆಯಲಿ’. ಅಭಿಜಿತ್ ಮಹೇಶ್ ಬ್ಯಾಚುಲಪಾರ್ಟಿಯ ನಿರ್ದೇಶಕರಾದರೆ, ಚಂದ್ರಜಿತ್ ಬೆಳ್ಳಿಯಪ್ಪ ಅವರು ಇಬ್ಬನಿತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇವರಿಬ್ಬರೂ, ಸೆವೆನ್ ಆಡ್ಸ್‌ನಲ್ಲಿರುವವರು. ಈಗಾಗಲೇ ಕಿರಣರಾಜ್ ‘೭೭೭ ಚಾರ್ಲಿ’ಯ ಮೂಲಕ ಬಂದಿದ್ದಾರೆ.
ರಿಷಭ್ ಶೆಟ್ಟಿ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಕಿರಿಕ್ ಪಾರ್ಟಿ’ ಮುಂದೆ ಕನ್ನಡಚಿತ್ರರಂಗದಲ್ಲಿ ತನ್ನದೇ ಆದ ದಾರಿಯನ್ನು ಅದರ ನಿರ್ಮಾಣ ಸಂಸ್ಥೆ ಪರಂವಃಕ್ಕೆ ತೋರಿಸಿತು. ಅದರ ಯಶಸ್ಸು, ಗಳಿಕೆ ಎರಡೂ ಮುಂದೆ ಚಿತ್ರೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಲು ಸಂಸ್ಥೆಗೆ ನೆರವಾಯಿತು.
ಸಿನಿಮಾಸಕ್ತ ಬರಹಗಾರರು, ತಂತ್ರಜ್ಞರನ್ನು ರೂಪಿಸುವಲ್ಲಿ ಈ ತಂಡದ ದಾರಿ, ಉಳಿದವರಿಗೂ ಮಾದರಿ ಎಂದರೆ ತಪ್ಪಿಲ್ಲ. ತನ್ನ ಸದಸ್ಯರ ಪ್ರತಿಭೆಯನ್ನು ಗುರುತಿಸುವ, ಅದಕ್ಕೆ ಹೊಸ ದಾರಿ ತೋರುವ ಕೆಲಸವನ್ನು ಮಾಡುವುದರ ಜೊತೆಗೆ, ಕನ್ನಡ ಚಿತ್ರರಂಗಕ್ಕೆ ಅದು ನಡೆಯಬೇಕಾದ ದಾರಿಗೆ ತೋರುಬೆರಳಾಗುವ ಕೆಲಸವನ್ನೂ ಮಾಡುತ್ತಿದೆ.
ನಷ್ಟವಾದರೆ ನನ್ನದು, ಲಾಭವಾದರೆ ಎಲ್ಲರದು’ ಎನ್ನುವ ಮನೋಭಾವ ವ್ಯವಹಾರದಲ್ಲಿ ಸರಿಅಂತ ನನಗೆ ಅನಿಸಲಿಲ್ಲ. ಅದಕ್ಕೇ ಲಾಭವಾಗಲಿ, ನಷ್ಟವಾಗಲಿ ನನ್ನದೇ ಇರಲಿ ಅಂತ ಚಿತ್ರಗಳನ್ನು ಪರಂವಃ ಸ್ಟುಡಿಯೊ ಮೂಲಕ ನಿರ್ಮಿಸುತ್ತಿದ್ದೇನೆ. ನಮ್ಮ ತಂಡದಲ್ಲಿ ಕಿರಣ್‌ರಾಜ್ ಚಿತ್ರ ನಿರ್ಮಿಸಿದರು. ಈಗ ಅಭಿಜಿತ್ ಮಹೇಶ್ ಮತ್ತು ಚಂದ್ರಜಿತ್ ಬೆಳ್ಳಿಯಪ್ಪ. ಎರಡೂ ಚಿತ್ರಗಳನ್ನು ಜೊತೆಯಲ್ಲಿ ಆರಂಭಿಸಿದ್ದೇನೆ. ಅನಿರುದ್ಧ ಕೊಡ್ಗಿ ಅವರ ಚಿತ್ರಕಥೆ ಸಿದ್ಧವಿದೆ. ಸಿನಿಮಾ ಜೊತೆಜೊತೆ ವೆಬ್‌ಸರಣಿಗಳ ನಿರ್ಮಾಣದ ಯೋಚನೆಯೂ ಇದೆ. ಎಲ್ಲ ಸರಿ ಹೋದರೆ ವರ್ಷಕ್ಕೆ ಹತ್ತು ಚಿತ್ರಗಳನ್ನು ನಿರ್ಮಿಸುವ ಯೋಚನೆ ಇದೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ತಮ್ಮ ಪರಂವಃ ಸ್ಪಾಟ್‌ಲೈಟ್ ಸಂಸ್ಥೆಯ ಮೂಲಕ ಕಡಿಮೆ ವೆಚ್ಚದ, ಉತ್ತಮ ಚಿತ್ರಗಳ ನಿರ್ಮಾಣಕ್ಕೆ ನೆರವಾಗುವ ಕೆಲಸವನ್ನೂ ಮಾಡುವ ಇರಾದೆ ಅವರದು.
ಒಂದು ಕೋಟಿ ರೂ. ಒಳಗಿನ ಬಂಡವಾಳ ಬೇಡುವ ಚಿತ್ರಗಳು, ಒಳ್ಳೆಯ ಕಥೆ, ಸ್ಕ್ರಿಪ್ಟ್ ಇದ್ದರೆ ಅಂತಹವರಿಗೆ ಈ ಸಂಸ್ಥೆ ನೆರವಾಗಲಿದೆ.
ಪರಂವಃ, ಇಂದಿನ ಡಿಜಿಟಲ್ ತಾಂತ್ರಿಕತೆಯ ಬೇಡಿಕೆಗನುಗುಣವಾಗಿ, ಕಾರ್ಪೊರೇಟ್ ಸಂಸ್ಥೆಯಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಸ್ಕ್ರಿಪ್ಟ್‌ಗಳು ಬಂದಿವೆ. ಅವುಗಳು ಎರಡು ಮೂರು ಹಂತಗಳನ್ನು ದಾಟಿ, ಆಯ್ಕೆಯಾದರೆ ಮುಂದಿನ ಅಂತಿಮ ಹಂತ ತಲುಪುತ್ತದೆ.
ನಟ, ನಿರ್ದೇಶಕ ರಕ್ಷಿತ್‌ಗೆ ನಿರ್ಮಾಪಕನಾಗಿ ಎಷ್ಟು ಸಮಯ ನೀಡಲು ಸಾಧ್ಯ? ಯಾವುದೇ ಚಿತ್ರವನ್ನು ಕೈಗೆತ್ತಿಕೊಳ್ಳುವ ಮೊದಲು, ಅದರ ಒಟ್ಟು ನಿರ್ಮಾಣ ವೆಚ್ಚ, ಮತ್ತಿತರ ವೆಚ್ಚಗಳ ಕುರಿತಂತೆ ನಿರ್ಧಾರವಾಗಿರುತ್ತದೆ. ಅದರಂತೆ ಒದಗಿಸಲಾಗುತ್ತದೆ. ಇಲ್ಲಿ ಚಿತ್ರದಲ್ಲಿ ತೊಡಗಿರು ಎಲ್ಲ ವಿಭಾಗಗಳ ಮಂದಿಗೂ ಅವರವರ ಜವಾಬ್ದಾರಿಯ ಅರಿವಿರುತ್ತದೆ. ಹಾಗಾಗಿ ಅಲ್ಲೇ ಪೂರ್ಣಾವಧಿ ಇರಬೇಕಾಗಿಲ್ಲ. ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ.
ರಕ್ಷಿತ್ ಪ್ರಕಾರ, ಈಗ ಒಳ್ಳೆಯ ಚಿತ್ರಗಳಿಗೆ ಒಟಿಟಿ ತಾಣ, ಟಿವಿ ಪ್ರಸಾರ ಮತ್ತು ಡಬ್ಬಿಂಗ್ ಹಕ್ಕುಗಳ ಮಾರಾಟದಿಂದಲೇ ಸಾಕಷ್ಟು ದುಡ್ಡು ಬರುತ್ತದೆ. ಒಳ್ಳೆಯ ಸಿನಿಮಾಗಳು ಬೇಕು. ಹಾಗಾಗಿ, ಒಳ್ಳೆಯ ನಿರ್ದೇಶಕರು, ನಿರ್ಮಾಪಕರಿಗೆ ಇದು ಒಳ್ಳೆಯ ಸಮಯ.

‘ಪ್ರತಿಯೊಬ್ಬ ನಿರ್ದೇಶಕರಿಗೂ ಅವರದೇ ಆದ ಆಸೆ, ಕನಸುಗಳಿರುತ್ತವೆ. ಕೆಲವೊಮ್ಮೆ ಅವರ ಆಸೆಯಂತೆ ಆಗುವುದಿಲ್ಲ. ನಿರ್ಮಾಪಕರ ಕಾರಣಕ್ಕೆ ಹಾಡು, ಹೊಡೆದಾಟ ಇತ್ಯಾದಿ ಸೇರಿಸಬೇಕಾಗುತ್ತದೆ. ನಿರ್ಮಾಪಕರು ಅವರದೇ ಆದ ರೂಢಿಗತ ವಿಚಾರದ ಹೊರತು ಬೇರೆ ರೀತಿ ಗ್ರಹಿಸುವುದು ಕಷ್ಟವಾಗಿ, ಚಿತ್ರದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸಹಜವಾಗಿ ತಂಡಕ್ಕೆ ಬೇಸರವಾಗುತ್ತದೆ. ಹಾಗಾಗಬಾರದು ಎಂದು ಈ ಸಂಸ್ಥೆ ಆರಂಭಿಸಿದೆ’ – ಅವರು ಪರಂವಃ ಸಂಸ್ಥೆ ಆರಂಭಿಸಲು ಇದು ಕಾರಣ.
ಸಿನಿಮಾ ಪ್ಯಾಶನ್ ಆಗಿರುವ ಯುವ ಸಮೂಹಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಪರಂವಃದಂತಹ ಸಂಸ್ಥೆಗಳು, ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ನಿರ್ಮಾಣ ಸಂಸ್ಥೆಗಳು ಇನ್ನಷ್ಟು ಬೇಕಾಗಿವೆ.
‘ಕೆಜಿಎಫ್ ಚಾಪ್ಟರ್ ೨’ ಮೂಲಕ ಈ ವರ್ಷ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿ ಹೊಂಬಾಳೆ ಸಂಸ್ಥೆ ಇದೇ ರೀತಿಯ ನಿಲುವನ್ನು ಇಟ್ಟುಕೊಂಡಿರುವ ನಿರ್ಮಾಣ ಸಂಸ್ಥೆ. ಅದು ಕನ್ನಡ ಮಾತ್ರವಲ್ಲದೆ, ಇದೀಗ ತೆಲುಗು, ಮಲಯಾಳ ಚಿತ್ರರಂಗಗಳತ್ತಲೂ ತನ್ನ ಬಾಹುಗಳನ್ನು ಚಾಚಿದೆ. ಅದು ತನ್ನ ನಿರ್ಮಾಣದ ಚಿತ್ರಗಳಲ್ಲಿ ವರ್ಚಸ್ವೀ ತಾರೆಯರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಅದು ಅಲ್ಲಿನ ವ್ಯಾವಹಾರಿಕ ಬೇಡಿಕೆಯೂ ಆಗಿರಬಹುದು.
ತಮ್ಮ ಚೊಚ್ಚಲ ಚಿತ್ರ ‘ಸೀತಾರಾಮ್ಬಿನೋಯ್, ಕೇಸ್ನಂ ೧೮’ ಯಶಸ್ಸಿನ ನಂತರ ಅದೇ ತಂಡ ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದೆ. ‘ಕೇಸ್ ಆಫ್ ಕೊಂಡಾಣ, ೦೯/೨೦೧೮’ ಚಿತ್ರದ ಹೆಸರು. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಅವರು ಸಾತ್ವಿಕ್ ಹೆಬ್ಬಾರ್ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ವಿಜಯರಾಘವೇಂದ್ರ ಈ ಚಿತ್ರದ ಕೇಂದ್ರ ಪಾತ್ರಧಾರಿ.
ಕಳೆದ ಬಾರಿಯ ಚಿತ್ರದ ಗೆಲುವಿಗೆ ಅವರ ಸಲಹೆ ಕಾರಣ, ನನಗಾಗಿ ಚಿತ್ರಕಥೆ ಬದಲಾಯಿಸಬೇಡಿ, ಚಿತ್ರಕಥೆ ಏನು ಕೇಳುತ್ತದೋ ಅದನ್ನು ಮಾಡುತ್ತೇನೆ ಎಂದಿದ್ದರಂತೆ ವಿಜಯ ರಾಘವೇಂದ್ರ. ಈ ಬಾರಿ ಕೂಡಾ. ಸಿನಿಮಾ ಕಾಳಜಿಯ ಕಾರಣದಿಂದ ಮಾತ್ರ ಜೊತೆಯಾದವರ ನಡುವೆ ಅಹಮಿಕೆಯ ಸಾಧ್ಯತೆ ಕಡಿಮೆ ಎನ್ನುವುದು ಆ ತಂಡದ ಅಂಬೋಣ.
ಡಾ.ರಾಜಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್‌ಕುಮಾರ್ ಯಾರದೇ ಅಭಿನಯದ ಚಿತ್ರವಾದರೂ ಸರಿ, ನಿರ್ಮಾಣದಲ್ಲಿ ಪೂರ್ವಸಿದ್ಧತೆಗೆ ಆದ್ಯತೆ. ಅದಕ್ಕಾಗಿಯೇ ಸಾಕಷ್ಟು ಸಮಯ ವಿನಿಯೋಗಿಸಲಾಗುತ್ತಿತ್ತು. ಗಮನಿಸಿ, ರಾಜ್ ಸಂಸ್ಥೆಯಲ್ಲಿ ತಯಾರಾದ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋತವು ಕಡಿಮೆ. ಲಾಭ ಕಡಿಮೆಯಾಗಿರಬಹುದು. ಅದಕ್ಕೆ ಮುಖ್ಯಕಾರಣ ಪೂರ್ವಸಿದ್ಧತೆಗೆ ಸಾಕಷ್ಟು ಕಾಲಾವಕಾಶ, ಕಥೆಗಳ ಆಯ್ಕೆ ಮತ್ತು ಚಿತ್ರಕಥೆಯತ್ತ ಗಮನ. ಮನರಂಜನೋದ್ಯಮ ಹಲವು ಟಿಸಿಲುಗಳ ಮೂಲಕ ಪ್ರೇಕ್ಷಕ/ವೀಕ್ಷಕರನ್ನು ತಲುಪುತ್ತಿರುವ ದಿನಗಳಲ್ಲಿ ಗುಣಮಟ್ಟದ ಸಿನಿಮಾ, ವೆಬ್‌ಸರಣಿಗಳ ಬೇಡಿಕೆ ಹೆಚ್ಚು. ಕನ್ನಡ ಚಲನಚಿತ್ರಗಳು, ವೆಬ್ ಸರಣಿಗಳು ಹೆಚ್ಚು ಹೆಚ್ಚು ಜನರನ್ನು ತಲುಪಲು ಆ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಲಿ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

46 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

56 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago