ಎಡಿಟೋರಿಯಲ್

ನಾವೇಕೆ ಹಿಂದಿ ಕಲಿಯಬೇಕು ನಿರ್ಮಲಾ ಸೀತಾರಾಮನ್ ಅವರೇ ?

ಲೋಕೇಶ್ ಕಾಯರ್ಗ

ಬ್ಯಾಂಕುಗಳಲ್ಲಿ ಬಡವರಿಗೆ ಪ್ರವೇಶವಿಲ್ಲ ಎಂಬ ಕಾಲವೊಂದಿತ್ತು. ಇಂದಿರಾ ಗಾಂಧಿ ಸರಕಾರದಲ್ಲಿ ಹಣಕಾಸು ಖಾತೆ ಸಹಾಯಕ ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ‘ಸಾಲಮೇಳ’ ಏರ್ಪಡಿಸಿ ಬಡವರಿಗೆ ಸಾಲ ಕೊಟ್ಟಾಗ ಟೀಕೆಗಳ ಜತೆಗೆ ಸಾಲಮೇಳದ ಕಾರಣದಿಂದ ಬಡವರು ಬ್ಯಾಂಕುಗಳ ಮುಖ ನೋಡುವಂತಾಯಿತು ಎಂಬ ಮೆಚ್ಚುಗೆಯ ಮಾತುಗಳೂ ಕೇಳಿ ಬಂದಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ವಿದ್ಯಾವಂತರೆನಿಸಿಕೊಂಡವರಿಗೆ ಕೈಯಲ್ಲಿರುವ ಮೊಬೈಲೇ ಬ್ಯಾಂಕ್ ಆಗಿದೆ. ಆದರೆ ತಮ್ಮ ಪಿಂಚಣಿ ಬಂದಿಲ್ಲ ಎಂದು ಅಲವತ್ತುಕೊಳ್ಳುವ ಹಿರಿಯ ನಾಗರಿಕರು, ವಿಧವೆಯರು, ಉದ್ಯೋಗ ಖಾತರಿ ಹಣ ಬಂದಿಲ್ಲ ಎಂದು ಪರಿತಪಿಸುವ ಕೂಲಿ ಕಾರ್ಮಿಕರು, ಬೆಳೆವಿಮೆಯ ಹಣಕ್ಕಾಗಿ ಕಾಯುವ ರೈತರು ಬ್ಯಾಂಕಿನತ್ತ ಮುಖ ಮಾಡುವುದು ಅನಿವಾರ‌್ಯ. ಇವರ್ಯಾರೂ ಹೆಚ್ಚು ಓದಿದವರಲ್ಲ. ಓದಿದರೂ ಬಹುಭಾಷಾ ಪ್ರವೀಣರಲ್ಲ. ವಿಪರ್ಯಾಸ ಎಂದರೆ ಈಗ ಬ್ಯಾಂಕ್‌ಗೆ ಹೋದರೆ ಅಲ್ಲಿನ ಸಿಬ್ಬಂದಿಗೆ ಗೊತ್ತಿರುವ ಭಾಷೆಯಲ್ಲಿ ಗ್ರಾಹಕರು ಮಾತನಾಡಬೇಕಾಗಿದೆ. ಗೊತ್ತಿಲ್ಲವೆಂದರೆ ‘ಭಾಷೆ ಇಲ್ಲದವರು’ ಎಂಬ ನೋಟ, ಕೆಲವೊಮ್ಮೆ ಬೈಗುಳ, ನಿಂದನೆಯ ಪ್ರಸಾದ.

ಕಳೆದ ಕೆಲವು ವರ್ಷಗಳಿಂದ ಇದು ನಮ್ಮ ಗ್ರಾಮೀಣ ಭಾಗದ ನಿತ್ಯನೋಟ. ದೇಶದ ೭೫ನೇ ಸ್ವಾತಂತ್ರ್ಯ ಸಂಭ್ರಮವನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಎಂದು ನಮಗೆ ಗೊತ್ತಿಲ್ಲದ ಭಾಷೆಯಲ್ಲಿ ಹೇಳಿಕೊಂಡು ಸಂಭ್ರಮಿಸುತ್ತಿರುವ ನಾವು, ಬ್ಯಾಂಕು, ಪಿಎಫ್ ಕಚೇರಿ, ರೈಲು ನಿಲ್ದಾಣ ಸೇರಿದಂತೆ ಕೇಂದ್ರ ಸರಕಾರದ ಅಧೀನಕ್ಕೊಳಪಟ್ಟ ಕಚೇರಿಗಳಲ್ಲಿ, ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ, ನಮ್ಮದೇ ಮಕ್ಕಳು ಓದುತ್ತಿರುವ ಆಂಗ್ಲಮಾಧ್ಯಮ ಶಾಲೆಗಳಲ್ಲಿ ನಮಗೆ ಗೊತ್ತಿಲ್ಲದ ಭಾಷೆಯಲ್ಲಿ ವ್ಯವಹರಿ–ಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದೇವೆ.

ತಿಳಿದೋ ತಿಳಿಯದೆಯೋ ಈ ವ್ಯವಸ್ಥೆಗೆ ನಾವು ಒಗ್ಗಿಕೊಂಡಿದ್ದೇವೆ. ಅಲ್ಲಲ್ಲಿ ಒಂದಷ್ಟು ವಿರೋಧ, ಪ್ರತಿಭಟನೆಗಳು ನಡೆದರೂ ಅದನ್ನು ‘ಕೇಂದ್ರಸ್ಥಾನ’ಕ್ಕೆ ತಲುಪಿಸುವ ಧೈರ್ಯ ಮತ್ತು ಕಿಚ್ಚು ನಮಗಿನ್ನೂ ಬಂದಿಲ್ಲ. ಇದರ ನಡುವೆ ‘ಭಾರತೀಯರೆಲ್ಲರೂ ಹಿಂದಿ ಕಲಿಯಬೇಕು, ಹಿಂದಿ ದೇಶವನ್ನು ಜೋಡಿಸುವ ಭಾಷೆ’ ಎಂದು ಕೇಂದ್ರ ಗೃಹಸಚಿವರೇ ಅಪ್ಪಣೆ ಕೊಡಿಸಿದ್ದಾರೆ. ಇನ್ನೂ ಶಾಲೆಗೆ ಕಾಲಿಡದ ಮಕ್ಕಳು ಟಿ.ವಿ. ಕಾರ್ಟೂನ್ ನೋಡಿ ಹಿಂದಿ ಕಲಿತಿದ್ದಾರೆ. ನಾವೂ ಯಾಕೆ ಕಲಿಯಬಾರದು ಎಂಬ ಪ್ರಶ್ನೆಗಳನ್ನು ಮುಂದಿಡುವವರಿದ್ದಾರೆ. ಆದರೆ ತಮ್ಮ ನೆಲದ ಭಾಷೆಯನ್ನು ಬಿಟ್ಟು ಯಾವುದೇ ಇತರ ಭಾಷೆಯನ್ನು ಕಲಿಯುವುದು ಅವರವರ ಇಚ್ಛೆ ಮತ್ತು ಅವಶ್ಯಕತೆಗೆ ಸಂಬಂಧಿಸಿದ್ದು. ಅದನ್ನು ಹೇರುವುದು ನಮ್ಮ ಸಂವಿಧಾನದತ್ತ ಹಕ್ಕಿಗೆ ವಿರುದ್ಧವಾದುದು.

ಪದೇ ಪದೇ ಚರ್ಚೆಗೆ ಬರುತ್ತಿರುವ ಈ ಪ್ರಶ್ನೆಗಳನ್ನು ಇಲ್ಲಿ ಮತ್ತೆ ಪ್ರಸ್ತಾಪಿಸಲು ಕಾರಣವಿದೆ. ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಗೊತ್ತಿರುವ ಸಿಬ್ಬಂದಿಗಳನ್ನೇ ನೇಮಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬೈನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಬ್ಯಾಂಕ್ ಅಸೋಸಿಯೇಷನ್ ವಾರ್ಷಿಕ ಮಹಾ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಒಂದಷ್ಟು ಕನ್ನಡ ಸಂಘಟನೆಗಳು ಈ ಹೇಳಿಕೆಯನ್ನು ಸ್ವಾಗತಿಸಿ ಟ್ವೀಟ್ ಮಾಡಿವೆ. ಆದರೆ ಇದು ನಾವು ಖುಷಿಪಡುವ ವಿಚಾರವೇ ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದು. ಈ ಹಕ್ಕಿನ ಚಲಾವಣೆಗೆ ಭಾಷೆಯೇ ಸಾಧನ. ಯಾವುದೋ ಬ್ಯಾಂಕು ಅಥವಾ ಇನ್ನಾವುದೋ ಸಂಸ್ಥೆಯ ಸಿಬ್ಬಂದಿ ಆಯಾ ನೆಲದ ಭಾಷೆಯನ್ನು ಬಿಟ್ಟು ಇಂತದ್ದೇ ಭಾಷೆಯಲ್ಲಿ ವ್ಯವಹರಿಸಬೇಕೆಂದು ಒತ್ತಾಯಿಸುವುದು ಈ ಹಕ್ಕಿನ ಉಲ್ಲಂಘನೆ ಎನ್ನುವುದು ಸ್ಪಷ್ಟ. ಕೇಂದ್ರ ಸಚಿವರು ಇಲ್ಲಿ ಸಲಹೆ ನೀಡುವ ಬದಲು ನಾಗರಿಕರ ಮೂಲಭೂತ ಹಕ್ಕುಗಳನ್ನು ಗೌರವಿಸಿ ಎಂದು ಬ್ಯಾಂಕುಗಳ ಒಕ್ಕೂಟಕ್ಕೆ ಎಚ್ಚರಿಕೆ ನೀಡಬೇಕಿತ್ತು. ‘‘ಗ್ರಾಹಕರಿಗೆ ಅನುಕೂಲವಾಗುವ ಭಾಷೆಗಳಲ್ಲಿ ಸೇವೆ ಸಲ್ಲಿಸುವುದು ವ್ಯಾಪಾರ ದೃಷ್ಟಿ. ನಿಮ್ಮ ಹಿತದೃಷ್ಟಿಯಿಂದ ಸ್ಥಳೀಯರನ್ನು ನೇಮಿಸಿಕೊಳ್ಳಿ’’ ಎಂಬ ಹಣಕಾಸು ಸಚಿವರ ಹೇಳಿಕೆಯಲ್ಲಿ ವ್ಯವಹಾರದ ಕಾಳಜಿ ಇದೆಯೇ ವಿನಾ ಸ್ಥಳೀಯ ಭಾಷೆಗಳ ಮೇಲೆ ಗೌರವ ಕಾಣುವುದಿಲ್ಲ.

ಇದೇ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ‘ದಕ್ಷಿಣದವರಿಗೆ ಹಿಂದಿ ಕಲಿಯಲು ಏನು ಅಡ್ಡಿ’ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಇದೇ ಧಾಟಿಯಲ್ಲಿ ‘‘ದಕ್ಷಿಣದ ಭಾಷೆಗಳನ್ನು ಕಲಿಯಲು ನಿಮಗೇನು ಅಡ್ಡಿ? ಎಂಬ ಪ್ರಶ್ನೆಯನ್ನು ಕೇಂದ್ರ ಗೃಹಸಚಿವರು ಸೇರಿದಂತೆ ಉತ್ತರದ ಮಂದಿಗೂ ಕೇಳಬೇಕಾಗಿದೆ. ಎಲ್ಲಕ್ಕಿಂತ ಮೊದಲು ‘ನಾವೇಕೆ ಹಿಂದಿಯನ್ನು ಕಲಿಯಬೇಕು’ ಎನ್ನುವುದನ್ನು ಅವರು ಮನವರಿಕೆ ಮಾಡಿಕೊಡಬೇಕಾಗಿದೆ. ವಿವಿಧತೆಯಲ್ಲಿ ಏಕತೆ ಎಂಬ ಘೋಷಾ ವಾಕ್ಯದಡಿಯಲ್ಲಿಯೇ ಭಾರತ ಒಕ್ಕೂಟ ರಾಷ್ಟ್ರವಾಗಿರುವುದು. ದೇಶದ ಅನನ್ಯವಾದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಿಕ ವೈವಿಧ್ಯತೆಗೆ ಪರಸ್ಪರ ಗೌರವ ಇರುವ ಕಾರಣದಿಂದಲೇ ಭಾರತ ಒಂದಾಗಿ ಉಳಿದಿದೆ. ಆದರೆ ಇತ್ತೀಚೆಗೆ ಈ ವೈವಿಧ್ಯತೆಯನ್ನು ಕಡೆಗಣಿಸಿ ಒಂದು ಭಾಷೆಗೆ ಹೆಚ್ಚು ಆದ್ಯತೆ ನೀಡುವ, ಎಲ್ಲೆಡೆ ಪ್ರಚಾರ ಮಾಡುವ, ಶ್ರೇಷ್ಠವೆಂದು ಬಿಂಬಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ.

ಕೇಂದ್ರ ಸರ್ಕಾರ ತನ್ನ ಆಡಳಿತಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಆಯ್ಕೆ ಮಾಡಿ–ಕೊಳ್ಳಲು ಸಂವಿ–ಧಾನ ಅವಕಾಶ ಕಲ್ಪಿಸಿದೆ. ಆದರೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ೨೨ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ಇನ್ನೂ ನೂರಾರು ಆಡು ಭಾಷೆಗಳೂ ನಮ್ಮ ವೈವಿಧ್ಯತೆಯ ಭಾಗವಾಗಿವೆ. ಇವುಗಳನ್ನು ಉಳಿಸಿ ಬೆಳೆಸುವುದು ಕೂಡ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ‘ ಹಿಂದಿ ದಿವಸ್’ ಆಚರಿಸಲು ಕೋಟ್ಯಂತರ ರೂ. ವ್ಯಯಿಸುವ ಸರಕಾರ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುತ್ತಲೇ ವಿಷವಿಕ್ಕುವ ಕೆಲಸ ಮಾಡುತ್ತಿದೆ.

ಕೇಂದ್ರ ಸರಕಾರ ತ್ರಿಭಾಷಾ ಸೂತ್ರ ಜಾರಿಗೆ ಬಂದಾಗ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಪ್ರಾದೇಶಿಕ ಭಾಷೆಗಳೂ ಬೆಳೆಯಲಿವೆ ಎಂಬ ಕೇಂದ್ರದ ವಾದ ಸರಿಯೆಂದು ನಂಬಿದ ನಾವು ಈ ಸೂತ್ರಕ್ಕೆ ಜೋತು ಬಿದ್ದೆವು. ಕುವೆಂಪು ಸೇರಿದಂತೆ ಅನೇಕ ಗಣ್ಯರ ಎಚ್ಚರಿಕೆ ಮಾತನ್ನು ನಾವು ಕೇಳಲಿಲ್ಲ. ಈ ಸೂತ್ರ ಕನ್ನಡಿಗರು ಹಿಂದಿ ಪಂಡಿತರಾಗಲು ನೆರವಾಯಿತೇ ಹೊರತು ಅನ್ಯಭಾಷಿಕರಿಗೆ ಕನ್ನಡ ಕಲಿಸಲು ನೆರವಾಗಲಿಲ್ಲ. ಮೊದಲು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಎಲ್ಲ ಉದ್ಯಮಗಳು, ಇಲಾಖೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಯಿತು. ನಂತರ ಈ ನೆಲದಲ್ಲಿ ಕಾರ್ಯಾಚರಿಸುತ್ತಿದ್ದರೂ ಇವುಗಳ ವ್ಯವಹಾರದಲ್ಲಿ ಕನ್ನಡವನ್ನು ದೂರವಿಡಲಾಯಿತು. ಈಗ ನೀವೇ ಕನ್ನಡ ಕಲಿಯಿರಿ ಎಂಬ ಆದೇಶಗಳು ಬರಲಾರಂಭಿಸಿವೆ. ತಮ್ಮ ಪಿಂಚಣಿ ಹಣದ ಬಗ್ಗೆ ವಿಚಾರಿಸಲು ಬರುವ ಅನಕ್ಷರಸ್ಥ ಹಿರಿಯರೂ ಈ ಮಾತನ್ನು ಕೇಳಬೇಕಾಗಿದೆ. ಒಟ್ಟಿನಲ್ಲಿ ತ್ರಿಭಾಷಾ ಸೂತ್ರದಡಿ ಕನ್ನಡ ತಮಾಷೆಯ ವಸ್ತುವಾಗಿದೆ.

ರಾಜ್ಯದ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ಅನ್ಯಭಾಷಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರು ತಿಂಗಳ ಒಳಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಹಿಂದಿ ಭಾಷಾ ಅನುಷ್ಠಾನಕ್ಕೆ ಹಿಂದಿ ಘಟಕ ತೆರೆ ದಂತೆ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಕನ್ನಡ ಘಟಕವನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ೨೦೧೭ರಲ್ಲಿ ಎಸ್.ಜಿ. ಸಿದ್ದರಾಮಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದ್ದಾಗ ಆದೇಶವೊಂದನ್ನು ಹೊರಡಿಸಿದ್ದರು. ಈ ಆದೇಶಕ್ಕೆ ಸಿಕ್ಕ ಬೆಲೆ ಏನೆನ್ನುವುದು ನಮ್ಮ ಕಣ್ಣೆದುರಿಗಿದೆ. ನಾವು ಈಗಲಾದರೂ ಸಂವಿಧಾನದತ್ತವಾದ ನಮ್ಮ ಹಕ್ಕನ್ನು ಚಲಾಯಿಸಬೇಕು.

andolana

Recent Posts

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

9 mins ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ಡಿಕೆಶಿ ಆಪ್ತ ಇನಾಯತ್‌ ಅಲಿಗೆ ದಿಲ್ಲಿ ಪೊಲೀಸರಿಂದ ನೋಟಿಸ್‌

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…

28 mins ago

ಇಂಡಿಗೋ ಬಿಕ್ಕಟ್ಟು : ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ : ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು…

36 mins ago

ಜನವರಿಯಿಂದ ಇಂದಿರಾ ಕಿಟ್‌ ವಿತರಣೆ

ಬೆಳಗಾವಿ : ಮುಂಬರುವ ಜನವರಿಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯಾದ್ಯಂತ ಇಂದಿರಾ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು…

1 hour ago

ಲ್ಯಾಂಡ್‌ ಲಾರ್ಡ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ನಟ ದುನಿಯಾ ವಿಜಯ್‌ ಅಭಿನಯದ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನಟ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ…

1 hour ago

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು.!

ಬೆಳಗಾವಿ: ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪ್ರಾಥಮಿಕ…

2 hours ago