ನಾನು ಮುಂಬಯಿಯ ಸಾಂತಾಕ್ರೂಜ್ ವಿಮಾನ ನಿಲ್ದಾಣ ಬಿಟ್ಟು ಜಪಾನಿನ ಟೋಕಿಯೋ ಶಹರ ತಲ್ಪಿದೆ. ಅಲ್ಲಿ ಒಂದು ದಿವಸ ಅನಿವಾರ್ಯವಾಗಿ ತಂಗಬೇಕಿತ್ತು. ಶಹರದ ಟೂರಿಸ್ಟ್ ಸ್ಥಳಗಳಿಗೆ ಭೇಟಿ ನೀಡಲಿಕ್ಕೆ ಏರ್ ಇಂಡಿಯಾದವರೇ ವ್ಯವಸ್ಥೆ ಮಾಡಿದ್ದರು. ಅದನ್ನೆಲ್ಲಾ ಸುತ್ತಿ ಬಂದೆ. ಅಲ್ಲಿಂದ ಅಮೇರಿಕೆಯ ಸಂಯುಕ್ತ ಸಂಸ್ಥಾ ನದ ರಾಜ್ಯ, ಹವಾಯಿಯ ಹೊನೊಲು ಲುವಿನಲ್ಲಿ ಕೆಲವು ಗಂಟೆಗಳು ತಂಗ ಬೇಕಾಯ್ತು. ಅಲ್ಲಿಂದ ಲಾಸ್ ಏಂಜಲಿಸ್‌ಗೆ ಸಾಯಂಕಾಲ 6 ಗಂಟೆಗೆ ತಲುಪಿದೆ. ಗೆಳೆಯ ಶರಣ್ ನಂದಿ ಏರ್‌ಪೋರ್ಟಿಗೆ ಬಂದು ನನ್ನನ್ನ ತಮ್ಮ ಮನೆಗೆ ಕರ‍್ಕೊಂಡು ಹೋದ. ಅವನೇ ನನಗೆ ‘ಅಮೇರಿಕಾಕ್ಕೆ ಬಾ, ಎಂ.ಎಸ್. ಓದಲು ಅರ್ಜಿ ಹಾಕು’ ಅಂತ ಮಾರ್ಗದರ್ಶನ, ಬೆಂಬಲ ನೀಡ್ದವಾ. ಹಿಂಗಾಗಿ ನನ್ನ ಮುಂದಿನ ಹೆಚ್ಚಿನೆಲ್ಲಾ ಸಿದ್ಧತೆ ಅವನೇ ಮಾಡಿದ್ದ. ಎರಡು ದಿನಗಳನ್ನ ಅವನೊಂದಿಗೆ ಕಳೆದು ನಂತರ ಕಾನ್ಸಸ್ ಸ್ಟೇಟ್‌ಗೆ ಹೋಗಿ ಎಂ.ಎಸ್.ಗೆ ಸೇರಲು ಕಾನ್ಸಸ್‌ನ ಮ್ಯಾನ್ ಹಟನ್‌ಗೆ ಹೋದೆ. ಅಲ್ಲಿ ಎಲ್ಲೆಡೆ ಹಿಮ ಸುರಿಯುವಂಥ ದೃಶ್ಯ ಅಪೂರ್ವವಾಗಿತ್ತು. ಯೂನಿವರ್ಸಿಟಿಗೆ ಸೇರ್ಕೊಂಡೆ. ಅಲ್ಲಿ ಹೋದ ಕೂಡ್ಲೆ ವಿದೇಶಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶ ಕರನ್ನ ನೇಮಿಸ್ತಾರ. ಅವರು ನಮ್ಗೆ ಬೇಕಾದ ಎಲ್ಲಾ ಅನುಕೂಲ ಗಳನ್ನ ಮಾಡಿ ಕೊಡ್ತಾರ. ನಂಗೆ ಫೆಲೋಶಿಪ್ ಕೂಡ ಇತ್ತು. ಯಾರನ್ನ ಭೆಟ್ಟಿಯಾಗ್ಬೇಕು ಎಲ್ಲಾ ಮೊದ್ಲೆ ತಿಳಿಸಿದ್ರು. ನನಗಾಗಿ ಅಪಾರ್ಟ್‌ಮೆಂಟ್ ಕೂಡ ಸಿದ್ಧ ಇತ್ತು. ಅದರಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಕೂಡೆ ರೂಮ್‌ಮೇಟ್ ಆಗಿ ನನ್ನ ಹೊಸ ಬದುಕು ಪ್ರಾರಂಭವಾಯ್ತು. ಅಲ್ಲಿಗೆ ಹೋದ್ಮೇಲೆ ಶರಣ್ ನಂದಿ- ಸುರೇಶ್ ಗಡದ್ ಎಂಬುವವ ರೊಬ್ಬರನ್ನ ನನಗೆ ಭೇಟಿ ಮಾಡಿಸ್ದ. ಅವರೂ ತುಂಬಾ ಆತ್ಮೀಯರಾದ್ರು.
ಅಪಾರ್ಟ್‌ಮೆಂಟ್‌ನಲ್ಲಿ ಉಳ್ಕೊಂಡ ಮೇಲೆ ಸಮಸ್ಯೆ ಶುರು ಆಯ್ತು ನೋಡಿ. ಹಿಂದೆ ನನ್ಗೆ ಕಷ್ಟ ಗೊತ್ತಿದ್ದಿಲ್ಲ. ಯಾಕಂದ್ರ, ಬಡತನ ಇದ್ರೂ ನನ್ನ ಅವ್ವ, ದೊಡ್ಡವ್ವ ಭಾರಿ ಮುದ್ದು ಮಾಡಿ ಬೆಳೆಸಿಬಿಟ್ಟಿದ್ದರು. ಅಡ್ಗೆ ಕೆಲ್ಸ ಕಲಿಸ್ದೆ ಕೆಡಿಸಿಟ್ಟಿದ್ರು! ಬರೇ ಚಹಾ ಅಷ್ಟು ಮಾಡೂದ್ನ ಕಲಿಸಿ ಕೊಟ್ಟಿದ್ರು. ಇನ್ನೇನೂ ಮಾಡ್ಲಿಕ್ಕೆ ಬರ‍್ತಾ ಇರ‍್ಲಿಲ್ಲ ನನ್ಗೆ. ಆದರೆ ಆ ಬ್ರೆಡ್ಡು-ಜಾಮು! ಒಂದು ವಾರಕ್ಕೆ ವಾಕ್ರಿಕೆ ಆಗೋಯ್ತು. ಜ್ವಾಳದ ರೊಟ್ಟಿ ತಿಂದು ಬೆಳೆದವ್ರು ನಾವು. ಸುಮ್ನೆ ಭಾರತಕ್ಕೆ ವಾಪಸ್ ಹೋಗ್ಬಿಡೋಣ ಅನಿಸ್ತಿತ್ತು. ಒಂದು ದಿವಸ ಮೋಹನ್ ಭಂಡಿವಾಳ ಎನ್ನೋ ಗೆಳೆಯ ನೊಬ್ಬ ಕೇಳ್ದ ‘ಏನ್ ತಿಂದಿ?’ ಅಂತ. ನಾನಂದೆ ‘ಏನಿಲ್ಲ. ಊಟ ಇಲ್ಲ ಏನಿಲ್ಲ!’ ‘ಬಾ ಇವತ್ತು ಪೂರಿ ಮಾಡ್ತಿನಿ’ ಅಂದ. ಎಷ್ಟು ಚಂದ ಪೂರಿ ಮಾಡಿದ್ದ ಅಂದ್ರೆ…
ಬಾಯಿ ಚಪ್ಪರಿಸಿ ಹೊಟ್ಟೆ ಬರ‍್ತಿ ತಿಂದೆ! ಅವನ ರೂಮ್ ಮೇಟ್ ರಾಮದಾತೆ ಅಂತಿದ್ದ. ತುಂಬಾ ಒಳ್ಳೆಯವನಷ್ಟೇ ಅಲ್ಲ, ಅಡುಗೆಯನ್ನೂ ಅಗ್ದಿ ಚೆನ್ನಾಗಿ ಮಾಡ್ತಿದ್ದ. ನಿಧಾನಕ್ಕ ನಾನೂ ಕೆಲವು ಅಡ್ಗಿ ಮಾಡೋದನ್ನ ಅವರಿಂದ ಕಲ್ತೆ. ಆದ್ರೆ ಮನಸ್ಸಿಗೆ ತುಂಬಾ ಕಷ್ಟ ಆಗಿದ್ದೆಂದರೆ, ಮೊದ್ಲ ಬಾರಿಗೆ ಅಷ್ಟು ದೂರಕ್ಕೆ ಅವ್ವ, ದೊಡ್ಡವ್ವನನ್ನು ಬಿಟ್ಟು ಬಂದಿದ್ದು! ಈಗಿನಂಗ ಆ ಕಾಲದಾಗೇನು ಬೇಕಂದಂಗೆಲ್ಲಾ ಫೋನ್ ಮಾಡೂಹಂಗಿರ‍್ಲಿಲ್ಲ. ಆಗಾಗ್ಗೆ ಪತ್ರ ಬರೀತಿದ್ದೆ ಅಷ್ಟೆ. ನಮ್ಮಂತಹ ಈ ವಿದೇಶಿ ವಿದ್ಯಾರ್ಥಿಗಳನ್ನ, ಇಷ್ಟಪಟ್ಟ ವರ ಮನ್ಯಾಗೆ ಅತಿಥಿಗಳಾಗಿ ಉಳೀಲಿಕ್ಕೆ ಈ ಫಾರಿನ್ ಸ್ಟೂಡೆಂಟ್ಸ್ ಅಡ್ವೈಸರ್‌ಗಳು ಗೊತ್ತು ಮಾಡಿ ಕೊಟ್ಟಿರ‍್ತಾರ. ಹಬ್ಬಗಳು ಬಂದಾಗ ನಮ್ಮನ್ನ ಅವ್ರ ಮನೀಗೆ ಆತಿಥ್ಯಕ್ಕಂತ ಕರೀತಾರ. ಅವರ ಸಂಸ್ಕೃತಿ ನಮಗೆ ಪರಿಚಯ ಮಾಡಿ ಕೊಡುವಂತಾ ಒಂದು ಆಪ್ತ ವಿಧಾನ ಇದು. ನಾನು ಸೆಪ್ಟೆಂಬರ್‌ದಾಗ ಅಮೇರಿಕಾಕ್ಕೆ ಹೋದೆ. ನವೆಂಬರ್ ತಿಂಗಳ ಕೊನೆಗೆ ‘ಥ್ಯಾಂಕ್ಸ್ ಗೀವಿಂಗ್’ ಹಬ್ಬಕ್ಕೆ ಅಂತಹ ದ್ದೊಂದು ಮನೆಯಲ್ಲಿ ನಂಗೆ ಅದ್ಭುತವಾದ ಅನು ಭವವಾಯ್ತು. ಅವರು, ತಮ್ಮದೇ ಕುಟುಂಬದ ಸದಸ್ಯ ನಂಗೆ ನನ್ನ ನೋಡ್ಕೊಂಡ್ರು.
ಅಲ್ಲಿ ಮಲಗುವ ಮುನ್ನ ಜಲ್ದಿ ಏಳ್ಬೇಕಂತ ಅಲಾರಾಂ ಇಟ್ಕೊಂಡು ಎದ್ದಿದ್ದೆ. ಮನೆಯ ಗ್ರ್ಯಾಂಡ್ಮದರ್(ಅಜ್ಜಿ) ಒಬ್ರು ‘ವಾಟ್ ಆರ್ ಯು ಡೂಯಿಂಗ್ ಹಿಯರ್? ಯಾಕಿಷ್ಟು ಬೇಗ ಎದ್ದೀ?’ ಅಂದ್ರು. ನಾನು ಹೇಳ್ದೆ ‘ನಿಮ್ಗೆ ಸಹಾಯ ಮಾಡೂಣಾಂತ ಬೇಗ ಎದ್ದೆ.’ ಅದಕ್ಕವರು ಒಂದು ಲೋಟ ಕಾಫಿ ನನ್ನ ಕೈಗಿಟ್ಟು, ‘ನೀ ಏನು ಸಹಾಯ ಮಾಡ್ತಿ? ಹೋಗು ಕಾಫಿ ಕುಡ್ದು ಮಲಗು’ ಅಂತ ಗದರಿದ್ರು. ನನ್ನ ಊರ‍್ನಾಗ ಹಿರಿಯರು ಹಿಂಗೇ ಪ್ರೀತಿಯಿಂದ ಗದರೋದು ನೆನಪಾಯ್ತು. ಅವಾಗ ನನಗೇನನ್ನಿಸ್ತು ಅಂದ್ರ, ಎಲ್ಲೇ ಇದ್ರೂ ಎಲ್ಲಾ ಮನುಷ್ಯರು… ಮನುಷ್ಯರೆ! ಎಲ್ಲಾದ್ಕಿಂತ ಒಳ್ಳೆಯ ಹೊಸ ಅನುಭವ ಅಂದ್ರೆ ಊಟದ್ದು! ನಾನು ಹುಟ್ಟಿದ್ದು ಸಸ್ಯಾಹಾರಿಯಾಗಿ. ಅದು ಇಲ್ಲಿಗೆ ಬಂದ ಮೇಲೂ ಮುಂದುವರಿದಿತ್ತು. ಊಟಕ್ಕೆ ಅವರು ಡಿನ್ನರ್ ಅಂತಾರ. ಅದು ರಾತ್ರಿ ಇರ‍್ತದ. ಡಿನ್ನರ್ರು ಅಂದಾಗ, ನಾ ಅಲ್ಲಿ ಆಸೆಯಿಂದ ಹೋಗಿ ಊಟಕ್ಕೆ ಕುಂತೆ. ನನಗೆ ಆ ಮನೆಯ ಗ್ರ್ಯಾಂಡ್‌ಮದರ್ ಎಲ್ಲ ನಿಧಾನವಾಗಿ ಕಲಿಸಿದ್ರು, ಹೆಂಗೆ ಸ್ಪೂನ್, ಫೋರ್ಕ್ ಬಳಸ್ಬೇಕು? ಅದರಿಂದ ಕೆಳಗೆ ಬೀಳಿಸದಂಗೆ ಹೆಂಗೆ ತಿನ್ಬೇಕು?… ಎಲ್ಲಾ. ಅವರ ಜೊತೆ ಮೂರು ದಿನ ಇದ್ದೆ. ಅವತ್ತೇನೊ ಹಬ್ಬ ಇತ್ತು. ಅವ್ರು ಹಬ್ಬದ ಮಹತ್ವ ಏನೇನೋ ಹೇಳ್ತಿದ್ರು. ಆದ್ರೆ ನನ್ನ ಲಕ್ಷ ಆ ಕಡೆಗಿಲ್ಲ. ಯಾಕಂದ್ರೆ ಟೇಬಲ್ ಮೇಲೆ ಒಂದು ದೊಡ್ಡ ಪಕ್ಷಿ ಕುಂತಿತ್ತು! ನೋಡಲು ಚಿಕನ್ ಇದ್ದಂಗೆ ಇತ್ತು. ಆದರೆ ಬಹಳ ದೊಡ್ಡದಿತ್ತು. ಸುಮ್ನೆ ನೋಡ್ದೆ. ಏನು ಮಾಡ್ಬೇಕು ಗೊತ್ತಾಗ್ಲಿಲ್ಲ.
ಯಾಕಂದ್ರೆ ಅಲ್ಲೀವರ್ಗೂ ನಾ ಎಂದೂ ಮಾಂಸಾ ಹಾರ ತಿಂದವನಲ್ಲಾ! ಏನು ಊಟ ಮಾಡೋದು? ಎದುರಿಗೆ ಪಕ್ಷಿ ಕೂತದೆ! ಅಲ್ಲಿ ಅದನ್ನ ಟರ್ಕಿ ಚಿಕನ್ ಅಂತಾರ. ನನ್ನ ಪರಿಸ್ಥಿತಿ ಕಂಡು ‘ನೀನೇನು ತಿಂತೀ?’ ಅಂದ್ರು ಮನೆಯವ್ರು. ‘ನಾನು ಸಸ್ಯಾಹಾರಿ’ ಅಂದೆ. ಸರಿ, ಅವರು ನನಗೆ ಟೊಮೇಟೋ ಸೂಪ್, ಸಲಾಡ್(ಸೌತೆಕಾಯಿ, ಟೊಮೇಟೋ, ಸೇಬು, ದ್ರಾಕ್ಷಿಹಣ್ಣುಗಳ ಮಿಶ್ರಣ) ಇಟಾಲಿಯನ್ ವೆಜ್ ಪಾಸ್ತಾ, ಹೀಗೇ ಏನೋ ಒಂದಿಷ್ಟು ತಿಂಡಿ ತಿನಿಸು ಕೊಟ್ರು.
ಕೊನೆಗೆ ಅಮೇರಿಕೆಯ ಪ್ರಸಿದ್ಧ ಸ್ವೀಟ್ ಆಪಲ್ ಐಸ್ಕ್ರೀಮಿನೊಂದಿಗೆ ಊಟ ಮುಗೀತು! ಜೀವನದಾಗ ಮೊದಲ ಬಾರಿಗೆ ವೈನ್ ರುಚಿ ಇಲ್ಲಿ ನೋಡ್ದೆ. ಆಮೇಲೆ ಅಮೇರಿಕಾ ಬದುಕು ರೂಢಿ ಆಗ್ತಾ ಹೋದ ಹಾಗೆ, ನಿಧಾನ ವಾಗಿ ಕೆಲವು ಮಾಂಸಾಹಾರ ಖಾದ್ಯಗಳನ್ನ ತೆಗೆದು ಕೊಳ್ಳಿಕ್ಕೆ ಶುರು ಮಾಡಿದೆ. ಆದರೆ ಈವತ್ತಿನವರೆಗೆ ಎಲ್ಲ ಖಾದ್ಯಗಳನ್ನೂ ತಿಂದಿಲ್ಲ. ಕೆಲವು ಇಷ್ಟ ಆಗೂದಿಲ್ಲ. ಆದ್ರೆ ಈ ಕರಿ ಐಟಮ್ ಗಳು ನನಗಿಷ್ಟ. ಚಿಕನ್ ಕರಿ, ಎಗ್ ಕರಿ ಇವೆಲ್ಲಾ ಸೇರ‍್ತದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…