ಎಡಿಟೋರಿಯಲ್

ನಿಷೇಧಿಸಬೇಕಿರುವುದು ದ್ವೇಷಾಸೂಯೆಗಳ ಮನಸ್ಥಿತಿಯನ್ನು

ನಾ ದಿವಾಕರ

ಶಾಂತಿ, ಸೌಹಾರ್ದತೆ, ಸಮನ್ವಯತೆ, ಸಹಿಷ್ಣುತೆ ಮತ್ತು ಸಮ ಸಮಾಜದ ಕನಸು ಕಂಡ ಗಾಂಧಿ ವರ್ತಮಾನದ ಭಾರತಕ್ಕೆ ಬಿ ಆರ್ ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಅವರಷ್ಟೇ ಪ್ರಸ್ತುತ ಎನಿಸುತ್ತಾರೆ. ಪೂನಾ ಒಪ್ಪಂದ ಮತ್ತಿತರ ರಾಜಕೀಯ ಬೆಳವಣಿಗೆಗಳನ್ನು ಬದಿಗಿಟ್ಟು ನೋಡಿದಾಗ, ಡಾ ಬಿ ಆರ್ ಅಂಬೇಡ್ಕರ್ ಭಾರತವನ್ನು ಸಮ ಸಮಾಜವಾಗಿ ರೂಪಿಸುವಲ್ಲಿ ಗಾಂಧಿ ಅನುಸರಿಸಿದ ಅಹಿಂಸಾ ಮಾರ್ಗವನ್ನು ಪ್ರತಿರೋಧದ ನೆಲೆಯಲ್ಲಿ ಅನುಸರಿಸುವುದನ್ನು ಗುರುತಿಸಬಹುದು. ಮಹಾತ್ಮ ಗಾಂಧಿಯಲ್ಲಿ ಕಾಣದ ತಳಸ್ಪರ್ಶಿ ಸಂವೇದನೆ ಅಂಬೇಡ್ಕರ್ ಅವರಲ್ಲಿ ಪ್ರಧಾನವಾಗಿ ಕಾಣುವುದರಿಂದಲೇ, ಶತಮಾನಗಳ ಶೋಷಣೆಗೊಳಗಾದ ಭಾರತದ ಬಹುಸಂಖ್ಯಾತ ಜನಸಮುದಾಯಗಳ ಸಾಮಾಜಿಕ- ಆರ್ಥಿಕ ಮತ್ತು ಸಾಂಸ್ಕೃತಿಕ ಅಭ್ಯುದಯಕ್ಕಾಗಿ ಅಂಬೇಡ್ಕರ್ ಸಾಂವಿಧಾನಿಕ ಮಾರ್ಗಗಳನ್ನು ಸೂಚಿಸಿ, ಸಂವಿಧಾನದ ಚೌಕಟ್ಟಿನ ಒಳಗೇ ಪ್ರತಿರೋಧದ ನೆಲೆಗಳನ್ನು ಕಾಪಾಡಿಕೊಳ್ಳುವ ಮೂಲಕ ನೈಜ ಪ್ರಜಾಸತ್ತೆಗೆ ಅಡಿಪಾಯ ಹಾಕುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಿ, ಇಬ್ಬರ ನಡುವೆ ಗೋಡೆಗಳನ್ನು ಕಟ್ಟುವುದಕ್ಕಿಂತಲೂ ಮುಖ್ಯವಾಗಿ ಇಂದು ಈ ಇಬ್ಬರೂ ನಾಯಕರು ಅನುಕರಿಸಲಿಚ್ಛಿಸಿದ ಶಾಂತಿ-ಸಹಿಷ್ಣುತೆಯ ಮಾರ್ಗಗಳ ಪುನರಾವಲೋಕನ ಮಾಡುವುದು ಅತ್ಯವಶ್ಯವಾಗಿದೆ. ಕಳೆದ ಮೂರು ನಾಲ್ಕು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ವಾತಾವರಣವು ಬೆಳೆದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ವಿಸ್ಮೃತಿಯ ಸೆರೆಮನೆಯಲ್ಲಿ ಬಂಧಿಸಿದ್ದೇವೆ ಎನಿಸುತ್ತದೆ. ವ್ಯಕ್ತಿ ಜೀವನದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಮತ್ತು ಸಹಿಷ್ಣುತೆಯನ್ನು ಬಯಸಿದ ಗಾಂಧಿ, ಸಾಮಾಜಿಕ ನೆಲೆಯಲ್ಲಿ ಇದೇ ಆದರ್ಶಗಳೊಂದಿಗೆ ಸಾಂವಿಧಾನಿಕ ನಿಷ್ಠೆ ಮತ್ತು ನೈತಿಕತೆಯನ್ನು ಬಯಸಿದ ಅಂಬೇಡ್ಕರ್ ಇಂದು ನಮ್ಮ ನಡುವೆ ಇರುವುದೇ ಆದರೆ ನಾವು ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ. ಅಧಿಕಾರ ರಾಜಕಾರಣದ ಲಾಲಸೆಗಳಿಗೆ ಬಲಿಯಾಗಿ ವ್ಯಕ್ತಿನಿಷ್ಠೆಯನ್ನು ಪಕ್ಷನಿಷ್ಠೆಯಾಗಿ ಮಾರ್ಪಡಿಸಿರುವ ಪ್ರಾತಿನಿಧಿಕ ಆಡಳಿತ ವ್ಯವಸ್ಥೆಯನ್ನು ನಾವು ಪೋಷಿಸಿಕೊಂಡು ಬಂದಿದ್ದೇವೆ. ತತ್ಪರಿಣಾಮ ಸಾಂಸ್ಕೃತಿಕವಾಗಿ ವ್ಯಷ್ಟಿ ಮತ್ತು ಸಮಷ್ಟಿಯ ನಡುವಿನ ಅಂತರ ಕಡಿಮೆಯಾಗುತ್ತಿದೆ.

ಸಮಾಜದ ಒಳಿತು ಕೆಡಕುಗಳು ಯಾವುದೋ ಒಂದು ನಿರ್ದಿಷ್ಟ ಜಾತಿ, ಧರ್ಮ, ಮತ ಅಥವಾ ಭಾಷಿಕ ನೆಲೆಗಳಲ್ಲಿ ನಿಷ್ಕರ್ಷೆಗೊಳಪಡುತ್ತಿರುವುದರಿಂದ ‘ಸಮಾಜಘಾತುಕತೆ’ ಎನ್ನುವುದೂ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದೆ.

ಸಮಾಜ ಏನು ಬಯಸುತ್ತಿದೆ ಮತ್ತು ಈ ದೇಶದ ಆಡಳಿತ ವ್ಯವಸ್ಥೆ ಎಂತಹ ಸಮಾಜವನ್ನು ಅಪೇಕ್ಷಿಸುತ್ತಿದೆ ಎಂಬ ಜಟಿಲ ಪ್ರಶ್ನೆಗಳು ಎದುರಾದಾಗ ನಮಗೆ ವಿಘಟಿತ ಭಾರತದ ಚಿತ್ರಣ ಎದುರಾಗುತ್ತದೆ. ಗಾಂಧಿ ಮತ್ತು ಅಂಬೇಡ್ಕರ್ ಬಯಸಿದ ಬಹುತ್ವ ಭಾರತದ ಆಶಯಗಳು ಹಂತಹಂತವಾಗಿ ಮಣ್ಣುಪಾಲಾಗುತ್ತಿರುವುದರೊಂದಿಗೇ, ಜಾತಿ ದ್ವೇಷ, ಮತದ್ವೇಷ ಮತ್ತು ಲಿಂಗ ತಾರತಮ್ಯಗಳು ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ. ವ್ಯಕ್ತಿ ದ್ವೇಷದ ನೆಲೆಗಳು ವಿಸ್ತರಿಸುತ್ತಾ, ಸಂಘಟಿತ ರೂಪ ಪಡೆದಂತೆಲ್ಲಾ ದೇಶದ ಸಾಂಸ್ಕೃತಿಕ ನೆಲೆಗಳು ಸಾಂಸ್ಥಿಕವಾಗಿಯೇ ದ್ವೇಷಾಸೂಯೆಗಳ ನೆಲೆಬೀಡುಗಳಾಗಿ ಪರಿವರ್ತನೆ ಹೊಂದುತ್ತಿವೆ. ವರ್ಣಾಶ್ರಮ ಧರ್ಮದ ಕಠಿಣ ಬೇಲಿಗಳನ್ನು ಭೇದಿಸಲು ನಿರಾಕರಿಸಿ, ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಂಡೇ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯನ್ನು ವಿರೋಧಿಸುವ ಮೂಲಕ ಗಾಂಧಿ, ಸಮಾಜದಲ್ಲಿ ಸ್ವಯಂಪ್ರೇರಿತ ಸಹಿಷ್ಣುತೆ ಮತ್ತು ಸಮನ್ವಯತೆಯನ್ನು ಸಾಧಿಸಲು ಪ್ರಯತ್ನಿಸಿದ್ದರು. ಅಂಬೇಡ್ಕರ್ ಜಾತಿವ್ಯವಸ್ಥೆಯ ಮೂಲವನ್ನೇ ಪ್ರಶ್ನಿಸುವುದರ ಮೂಲಕ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನೇ ಧಿಕ್ಕರಿಸಿ, ಅಸ್ಪೃಶ್ಯತೆಯ ವಿರುದ್ಧ ಮತ್ತು ಜಾತಿ ವಿನಾಶಕ್ಕಾಗಿ ಸಾಮಾಜಿಕ ಕ್ರಾಂತಿಯ ಮಾರ್ಗವನ್ನು ಅನುಸರಿಸಿದ್ದರು. ಪ್ರತಿ ವರ್ಷ ನಾವು ಗಾಂಧಿ ಸ್ಮರಣೆ ಮಾಡುವಾಗ ಈ ಉದಾತ್ತ ಆಶಯಗಳು ಮತ್ತು ನಿರೀಕ್ಷೆಗಳು ನಮ್ಮ ಮನದಲ್ಲಿರಬೇಕು.

ಈ ಎರಡೂ ಆಶಯಗಳಲ್ಲಿ ನಾವು ಕಾಣಬೇಕಿರುವುದು ಮನುಜ ಸೂಕ್ಷ್ಮತೆ, ಮಾನವೀಯ ಸ್ಪಂದನೆ ಮತ್ತು ಸಾಮಾಜಿಕ ಸಂವೇದನೆಯನ್ನು. ಈ ಉದಾತ್ತ ಲಕ್ಷಣಗಳನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಿರುವ ಭಾರತ ಇಂದು ದ್ವೇಷಾಸೂಯೆಗಳ ಆಗರವಾಗುತ್ತಿದೆ. ಮನುಜ ಪ್ರೀತಿಯನ್ನು ಪೋಷಿಸಿ ಬೆಳೆಸಬೇಕಾದ ಸಾಂಸ್ಥಿಕ ಸಾಂಸ್ಕೃತಿಕ ನೆಲೆಗಳು ಜಾತಿ- ಧರ್ಮಗಳ ಸಂಕುಚಿತತೆಗೆ ಒಳಗಾಗಿ ಮನುಷ್ಯರ ನಡುವೆ ಶಾಶ್ವತ ಗೋಡೆಗಳನ್ನು ನಿರ್ಮಿಸುವ ಒಂದು ವಿಕೃತ ಪ್ರಕ್ರಿಯೆಗೆ ನಾವು ಸಾಕ್ಷಿಯಾಗಿ ನಿಂತಿದ್ದೇವೆ. ಕಳೆದ ಹಲವು ದಶಕಗಳ ರಾಜಕಾರಣ ಮತ್ತು ಸಾಮಾಜಿಕ ಬೆಳವಣಿಗೆಗಳು ಜನಸಾಮಾನ್ಯರಿಗೆ ದ್ವೇಷಿಸುವ ಕಲೆಯನ್ನು ಕಲಿಸುತ್ತಾ ಬಂದಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸಲು ಯಾವುದೇ ಕಾರಣಗಳು ಬೇಕಿಲ್ಲ. ಮಾನವತೆ ಒಂದಿದ್ದರೆ ಸಾಕು. ಆದರೆ ದ್ವೇಷಿಸಲು ಕಾರಣಗಳು ಬೇಕಾಗುತ್ತವೆ. ಈ ಕಾರಣಗಳನ್ನು ‘ಅನ್ಯ’ ಮತ್ತು ‘ಬಾಹ್ಯ’ದ ಪರಿಕಲ್ಪನೆಗಳ ಮೂಲಕ ಜಾತಿ-ಮತಗಳಲ್ಲಿ ಶೋಧಿಸುತ್ತಿದ್ದೇವೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯನ್ನು ಇನ್ನೂ ಜೀವಂತವಾಗಿರಿಸಿದೆ. ಮತಧರ್ಮ ಶ್ರೇಷ್ಠತೆಯ ಮೇಲರಿಮೆ ‘ಅನ್ಯಮತ ದ್ವೇಷ’ದ ನೆಲೆಗಳನ್ನು ವಿಕೇಂದ್ರೀಕರಣಗೊಳಿಸಿ, ದ್ವೇಷ ಭಾವನೆಗಳನ್ನು ಸಾಂಸ್ಥೀಕರಿಸಿ, ಘನೀಕರಿಸಿ ತಳಮಟ್ಟದ ಜನಸಮುದಾಯಗಳ ನಡುವೆಯೂ ಮನೆ ಮಾಡಿದೆ.

ಹಾಗಾಗಿಯೇ ಇಂದು ‘ಸಾವು ಮತ್ತು ನೋವು’ ಎರಡೂ ಸಾಪೇಕ್ಷತೆಯನ್ನು ಪಡೆದಿವೆ. ನಮ್ಮ ನಡುವೆ ನಿರಂತರವಾಗಿ ನಡೆಯುತ್ತಿರುವ ಸಾವುಗಳು ನಮ್ಮನ್ನು ವಿಚಲಿತಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕವಾಗಿ ವಿಘಟಿತಗೊಳಿಸುತ್ತಿವೆ. ಏಕೆಂದರೆ ನಮಗೆ ಸಾವು ಪ್ರಧಾನ ಎನಿಸುವುದಿಲ್ಲ, ಸಾವಿಗೀಡಾದ ಅಥವಾ ಸಾವಿಗೆ ಕಾರಣನಾದ ವ್ಯಕ್ತಿಯ ‘ಜಾತಿ-ಮತದ ಅಸ್ಮಿತೆ’ ಪ್ರಧಾನ ಎನಿಸುತ್ತದೆ. ಸಾವು ಸಂಭ್ರಮಿಸಲ್ಪಡುತ್ತದೆ. ಹತ್ಯೆಗಳು ಸ್ವೀಕಾರಾರ್ಹವಾಗುತ್ತವೆ. ಅತ್ಯಾಚಾರ, ದೌರ್ಜನ್ಯ, ಥಳಿತ ಮತ್ತು ಹಿಂಸಾತ್ಮಕ ದಾಳಿಗಳು ಅಪೇಕ್ಷಿತವಾಗಿಬಿಡುತ್ತವೆ. ಹಂತಕರು, ಅತ್ಯಾಚಾರಿಗಳು, ದೌರ್ಜನ್ಯದ ಹರಿಕಾರರು ಆರಾಧನೆಗೊಳಪಡುತ್ತಾರೆ. ವೈಭವೀಕರಿಸಲ್ಪಡುತ್ತಾರೆ. ಹತ್ಯೆಗೀಡಾಗುವ ವ್ಯಕ್ತಿ, ಅತ್ಯಾಚಾರಕ್ಕೀಡಾಗುವ ಮಹಿಳೆ, ಅಸ್ಪೃಶ್ಯತೆಗೀಡಾಗುವ ಸಮುದಾಯ ಇವೆಲ್ಲವೂ ಸಾಮಾಜಿಕವಾಗಿ ಒಪ್ಪಿತವಾಗುವಂತಹ ಒಂದು ವಿಷಮ ಸನ್ನಿವೇಶದಲ್ಲಿ ನಾವಿದ್ದೇವೆ.

ಅಮಾಯಕ ವ್ಯಕ್ತಿಯ ಹತ್ಯೆ ಅಥವಾ ಮಹಿಳೆಯ ಮೇಲಿನ ಅತ್ಯಾಚಾರ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಲಕುವುದೇ ಅಲ್ಲದೆ, ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು. ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಮತ್ತು ಸಾಂಸ್ಥಿಕ ಸಾಂಸ್ಕೃತಿಕ ನೆಲೆಗಳು ಈ ಪ್ರಶ್ನೆಗೆ ಉತ್ತರವನ್ನು ಶೋಧಿಸುವಂತಾಗಬೇಕು. ದುರಂತ ಎಂದರೆ ಇಂದು ನಮಗೆ ‘ಯಾರು ಅಥವಾ ಯಾರಿಂದ’ ಎಂಬುದೇ ಪ್ರಧಾನವಾಗಿ ಕಾಣುತ್ತಿದೆ. ಒಂದು ಹತ್ಯೆಯಿಂದ, ಅತ್ಯಾಚಾರದಿಂದ ಸೃಷ್ಟಿಯಾಗುವ ಸಂತ್ರಸ್ತರು ನಗಣ್ಯರಾಗುತ್ತಾರೆ, ಫಲಾನುಭವಿಗಳು ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಂಘಟನಾತ್ಮಕವಾಗಿ ಮುನ್ನೆಲೆಗೆ ಬರುತ್ತಾರೆ. ಈ ಸಾಮಾಜಿಕ ಕ್ರೌರ್ಯ ಮತ್ತು ಸಾಂಸ್ಕೃತಿಕ ಅಸೂಕ್ಷ್ಮತೆಗೆ ಕಾರಣ ನಾವೇ ಪೋಷಿಸಿಕೊಂಡು ಬಂದಿರುವ ದ್ವೇಷಾಸೂಯೆಗಳ ಸಾಂಸ್ಥಿಕ ನೆಲೆಗಳು.

(ಮುಂದುವರಿಯುತ್ತದೆ.)

andolana

Share
Published by
andolana

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

5 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

6 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

8 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

8 hours ago