ಎಡಿಟೋರಿಯಲ್

ಬಳ್ಳಾರಿ ವಿಮ್ಸ್ ವಿದ್ಯುತ್ ವ್ಯತ್ಯಯ ದುರಂತದಿಂದ ಸರ್ಕಾರ ಕಲಿಯಬೇಕಾದ ಪಾಠವೇನು?

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ವಿದ್ಯುತ್ ಸ್ಥಗಿತಗೊಂಡ ಕಾರಣ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ಮೃತ ಪಟ್ಟಿರುವ ಸಂಗತಿ ಆಘಾತಕಾರಿಯಾದುದು. ವಿದ್ಯುತ್ ಸ್ಥಗಿತಗೊಂಡಾಗ ತುರ್ತು ನಿರ್ವಹಣೆಗಾಗಿ ಜನರೇಟರ್‌ಬಳಸಲಾಗುತ್ತದೆ. ವಿಮ್ಸ್‌ನಲ್ಲಿ ಜನರೇಟರ್ ಗಳು ಕೂಡಾ ಕೆಟ್ಟು ನಿಂತಿದ್ದವು. ಈ ಕಾರಣದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ವರದಿ.

ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದ ದುರಂತವೂ ಸೇರಿದಂತೆ ರಾಜ್ಯ, ದೇಶದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ನೈಸರ್ಗಿಕವಾಗಿ ಹರಡಿದ್ದೋ, ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದೋ ಎಂಬ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ, ಆಕ್ಸಿಜನ್ ಕೊರತೆಯು ಮಾನವ ನಿರ್ಮಿತ ಮಹಾದುರಂತ ಎಂಬುದರಲ್ಲಿ ಎರಡು ಮಾತಿಲ್ಲ.

ಆ ಮಹಾ ದುರಂತದ ನಂತರವೂ ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಎಂಬುದೇ ವ್ಯವಸ್ಥೆಯ ದೊಡ್ಡ ಲೋಪ. ವಿದ್ಯುತ್ ಕಡಿತವಾದಾಗ ತುರ್ತು ನಿರ್ವಹಣೆಗಾಗಿ ಬಳಸುವ ಜನರೇಟರ್ ಕೂಡಾ ಕೆಟ್ಟು ನಿಂತಿದ್ದವು. ಅವುಗಳನ್ನು ದುರಸ್ತಿ ಮಾಡಿಸಿರಲಿಲ್ಲ ಎಂಬುದು ಆಸ್ಪತ್ರೆ ಮುಖ್ಯಸ್ಥರ ಅತಿದೊಡ್ಡ ಲೋಪ. ಇಂತಹ ಲೋಪಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಜನರು ಹಿಂದೇಟು ಹಾಕುವುದೇ ಇಂತಹ ದಿವ್ಯನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪಗಳಿಂದ. ಇಂತಹ ಗಂಭೀರ ಲೋಪ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಏನೇ ಲೋಪದೋಷಗಳಾದರೂ ನಡೆಯುತ್ತದೆ, ಯಾರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂಬ ನಂಬಿಕೆ ಬೇರೂರಿಬಿಟ್ಟಿದೆ. ಈ ನಂಬಿಕೆಯನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಆಯಾ ಆಸ್ಪತ್ರೆಗಳ ಮುಖ್ಯಸ್ಥರನ್ನು ಉತ್ತರದಾಯಿಗಳನ್ನಾಗಿ ಮಾಡಬೇಕಿದೆ.

ಇವತ್ತು ಬಳ್ಳಾರಿಯಲ್ಲಿ ಆದ ದುರಂತ ನಾಳೆ ಇನ್ನೊಂದು ಜಿಲ್ಲಾಸ್ಪತ್ರೆಯಲ್ಲಿ ಆಗುವುದಿಲ್ಲ ಎಂದು ಹೇಳುವುದು ಹೇಗೆ? ಇಂತಹ ಲೋಪಗಳು ಮರುಕಳಿಸುವುದಿಲ್ಲ ಎಂದು ಸರ್ಕಾರ ಜನತೆಗೆ ಭರವಸೆ ನೀಡಬೇಕು. ಜನರು ಸರ್ಕಾರದ ಭರವಸೆಯನ್ನು ನಂಬಬೇಕಾದರೆ, ಸರ್ಕಾರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜತೆಗೆ ತುರ್ತು ಚಿಕಿತ್ಸಾ ಘಟಕಗಳಿಗೆ ವಿದ್ಯುತ್ ಸಂಪರ್ಕ, ಆಕ್ಸಿಜನ್ ಸರಬರಾಜು ಮತ್ತು ಸಿಬ್ಬಂದಿ ನಿಯೋಜನೆ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳಬೇಕು.

ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಶಿಕ್ಷಿಸಿದಾಗ ಮಾತ್ರ ಬೇರೆಲ್ಲೋ ಇಂತಹ ಲೋಪಗಳಾಗುವುದು ತಪ್ಪುತ್ತದೆ.

ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳು ಈ ನಿಟ್ಟಿನಲ್ಲಿ ರಚನಾತ್ಮಕ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ದುರದೃಷ್ಟವಶಾತ್, ಬಳ್ಳಾರಿ ವಿಮ್ಸ್ ವಿದ್ಯುತ್ ವ್ಯತ್ಯಯ ದುರಂತವು ಸಮಸ್ಯೆಯೊಂದರ ಬಗ್ಗೆ ಆಮೂಲಾಗ್ರ ಚರ್ಚೆ ನಡೆದು, ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹಾದಿಯಾಗುವ ಬದಲು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ವಿಮ್ಸ್ ದುರಂತ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇದು ಸರ್ಕಾರಿ ಪ್ರಾಯೋಜಿತ ಕೊಲೆ’ ಎಂದು ಬಣ್ಣಿಸಿದ್ದು, ನಂತರ ಆಡಳಿತ ಪಕ್ಷ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆ ವಿಷಯವೇ ಚರ್ಚೆಯ ಮುನ್ನೆಲೆಗೆ ಬಂದು, ವಿಮ್ಸ್ ದುರಂತಗಳು ಮರುಕಳಿಸದಂತೆ ಸರ್ಕಾರ ಕೈಗೊಳ್ಳಬೇಕಾದ ರಚನಾತ್ಮಕ ಕ್ರಮಗಳ ಕುರಿತ ಚರ್ಚೆಯೇ ಹಿನ್ನೆಲೆಗೆ ಸರಿದಿದೆ. ಇದು ನೈತಿಕ ದುರಂತ.

ಸಾವು, ನೋವುಗಳು ಎಲ್ಲವೂ ಈಗ ರಾಜಕೀಯ ದಾಳಗಳಾಗುತ್ತಿರುವ ವಿಷಮ ಪರಿಸ್ಥಿತಿ ತಲೆದೋರಿದೆ. ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷಗಳೇ ಇರಲಿ, ಸಾವು ನೋವುಗಳ ವಿಷಯದಲ್ಲಿ ಸೂಕ್ಷ್ಮತೆ ಮತ್ತು ಸಂವೇದನೆಯೊಂದಿಗೆ ವ್ಯವಹರಿಸುವ ಪ್ರವೃತ್ತಿಯನ್ನು ಮರುರೂಢಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಯಾವುದೇ ದುರಂತದ ಸಂದರ್ಭದಲ್ಲಿ ಪಕ್ಷಗಳು ರಾಜಕೀಯ ಬದಿಗೊತ್ತಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಒಮ್ಮತದಿಂದ ಚರ್ಚಿಸಿದಾಗ ಮಾತ್ರ, ಆಡಳಿತ ಯಂತ್ರವು ಮತ್ತೆ ಲೋಪಗಳೆಸಗುವುದನ್ನು ತಡೆಯಲು ಸಾಧ್ಯ. ದುರಂತಗಳ ವಿಷಯಗಳಲ್ಲೂ ಪಕ್ಷಗಳು ರಾಜಕೀಯ ಬೆರೆಸಿದಾಗ ಆಡಳಿತ ವರ್ಗಕ್ಕೆ ತಪ್ಪಿನ ಅರಿವಾಗುವುದೂ ಇಲ್ಲ, ಆಡಳಿತ ಯಂತ್ರ ಸುಧಾರಿಸುವುದೂ ಇಲ್ಲ. ಬಳ್ಳಾರಿ ವಿಮ್ಸ್ ದುರಂತವು ಒಂದು ಪಾಠವಾಗಬೇಕಿದೆ. ರಾಜ್ಯ ಸರ್ಕಾರ ಕೂಡಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ಮತ್ತು ಜನರೇಟರ್ ಸೌಲಭ್ಯ ಕುರಿತಂತೆ ಆಮೂಲಾಗ್ರವಾಗಿ ಪರಿಶೀಲನೆ ನಡೆಸಬೇಕು. ಎಲ್ಲೆಲ್ಲಿ ತೊಂದರೆ ಇದೆಯೋ ಅಲ್ಲೆಲ್ಲಾ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಿರ್ವಹಿಸಬೇಕು.

ಇಂತಹ ದುರಂತಗಳು ನಡೆದಾಗ ಪರಿಹಾರ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ಸಹಾನುಭೂತಿ ಸಿಗುವುದಿಲ್ಲ. ಪರಿಹಾರ ನೀಡುವ ಮೊತ್ತವನ್ನೇ ದುರಸ್ತಿ ಕಾರ್ಯಗಳಿಗೆ ಬಳಸಿ, ದುರಂತಗಳೇ ನಡೆಯದಂತೆ ನಿಗಾ ವಹಿಸುವ ಜವಾಬ್ದಾರಿಯುತ ಸರ್ಕಾರದ ಮಾನವೀಯ ನಡೆಗೆ ಯಾವತ್ತೂ ಮೆಚ್ಚುಗೆ ಇರುತ್ತದೆ.

andolana

Recent Posts

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…

36 mins ago

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

58 mins ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

1 hour ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

1 hour ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

3 hours ago