ಮೈಸೂರು ರಾಜ್ಯವು ಕರ್ನಾಟಕವೆನಿಸಿಕೊಂಡು ಈ ನವೆಂಬರ್ ಒಂದಕ್ಕೆ ಐವತ್ತು ವರ್ಷಗಳು ಪೂರ್ಣಗೊಳ್ಳಲಿದೆ. ಈ ಸಂದರ್ಭವನ್ನು ಸ್ಮರಣೀಯಗೊಳಿಸಲು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಯೋಜಿಸಿದೆ. ಕನ್ನಡದ ಐದು ಪ್ರಾತಿನಿಧಿಕ ಗೀತೆಗಳನ್ನು ಕಲಿತು ಸಮಾರಂಭಗಳಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ.
ಕರ್ನಾಟಕ ಸಂಭ್ರಮ 50 ರ ಹಿನ್ನೆಲೆಯಲ್ಲಿ , ನವೆಂಬರ್ ಒಂದರಿಂದ ಇಡೀ ವರ್ಷ ಕರ್ನಾಟಕದ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿವೆ. ಯುವಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಅಭಿಮಾನ, ಹೆಮ್ಮೆ ಮೂಡಿಸುವ ಯೋಜನೆ ಹಮ್ಮಿಕೊಂಡಿದೆ. ಇದೊಂದು ಶ್ಲಾಘನೀಯ ನಡೆ. ಕನ್ನಡವೆಂದರೆ ಕುಣಿ ಕುಣಿದಾಡುವುದು ಎನ್ನೆದೆ.
ಮುಂದಿನ ವಾರ ನವೆಂಬರ್ ಒಂದರ ರಾಜ್ಯೋತ್ಸವ ಸಮಾರಂಭಗಳಲ್ಲಿ ಕನ್ನಡ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ ಮತ್ತು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಬೇಕು. ನಂತರ ಕನ್ನಡದ ಈ ಐದು ಪ್ರಾತಿನಿಧಿಕ ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು.
1) ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲುಗೋಳ ನಾರಾಯಣರಾಯರು)
2) ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು (ಕುವೆಂಪು)
3) ಒಂದೇ ಒಂದೇ ಕರ್ನಾಟಕವೊಂದೇ (ದ.ರಾ.ಬೇಂದ್ರೆ)
4) ಹೊತ್ತಿತೋ ಹೊತ್ತಿತು ಕನ್ನಡದ ದೀಪ (ಕಾವ್ಯಾನಂದ)
5) ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ (ಚನ್ನವೀರ ಕಣವಿ)
ಹೇಗೂ ಐದಾಗಿವೆ. ಆರನೆಯದಾಗಿ ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ (ಡಿ.ಎಸ್.ಕರ್ಕಿ)ವನ್ನೂ ಸೇರಿಸಬಹುದಿತ್ತು. ಸಂಭ್ರಮ ಸಡಗರದಿಂದ ಹಾಡಬಲ್ಲ ಸ್ಛೂರ್ತಿ ಈ ಗೀತೆಗಿದೆ.
ಇವೆಲ್ಲವೂ ಸರಿ. ಆದರೆ ಇನ್ನೊಂದು ಮುಖ್ಯ ಅಂಶವನ್ನು ಸರ್ಕಾರ ಮರೆತಂತೆ ತೋರುತ್ತಿದೆ. ಮೈಸೂರು ರಾಜ್ಯಕ್ಕೆ ಪುನರ್ ನಾಮಕರಣ ಮಾಡಬೇಕು ಎಂದಾಗ ಎದುರಾದ ಅಡಚಣೆ, ಪ್ರತಿರೋಧಗಳು ಒಂದೆರಡಲ್ಲ. ಈ ಹೆಸರೇ ಬೇಕು. ಅದು ಬೇಡ. ಇದೇ ಹೆಸರಿರಲಿ ಎಂದು ವಾದ ವಿವಾದ ಮಾಡಿದವರ ಸಂಖ್ಯೆ ಅಗಣಿತ. ಕರ್ಣಾಟ, ಕರ್ನಾಟಕ, ಕರುನಾಡು, ಕನ್ನಡ ನಾಡು, ಕರ್ಣಾಟಕ ಹೀಗೆ ನಾನಾ ಹೆಸರುಗಳು. ಎಂದಿಗೂ ಮೂಡದ ಒಮ್ಮತ. 1956ರಿಂದಲೂ ಶಾಸನ ಸಭೆಯಲ್ಲಿ ನಾನಾ ಪ್ರಸ್ತಾವಗಳನ್ನು ಮಂಡಿಸುತ್ತಲೇ ಇದ್ದರು. ಆದರೆ ಆ ಹೆಸರು ಬೇಡ. ಇದೇ ಹೆಸರಿರಲಿ ಎಂಬ ವಿರೋಧಗಳು ಬರಲಾಗಿ ಪ್ರಸ್ತಾವಗಳು ಬರಿಯ ಒಣ ಚರ್ಚೆಯಲ್ಲಿ ಮುಕ್ತಾಯವಾಗುತ್ತಿದ್ದವು. ಎರಡು ದಶಕಗಳಿಂದ ಚರ್ಚೆ ಜಾರಿಯಲ್ಲಿತ್ತೇ ಹೊರತು ಅನುಷ್ಠಾನಕ್ಕಂತೂ ಬರಲಿಲ್ಲ. ಇನ್ನೆಂದೂ ಹೊಸ ಹೆಸರು ಬರಲಾರದು ಎಂದು ಜನ ಉತ್ಸಾಹ ಕಳೆದುಕೊಂಡಿದ್ದರು. ಗಟ್ಟಿ ದನಿಯಲ್ಲಿ ಹೊಸ ಹೆಸರನ್ನು ಒತ್ತಾಯಿಸುತ್ತಿದ್ದ ಕನ್ನಡದ ಕಟ್ಟಾಳುಗಳಾದ ಅನಕೃ, ಮ.ರಾಮಮೂರ್ತಿ ಮುಂತಾದವರು ಅಸ್ತಂಗತರಾಗಿದ್ದರು. ದನಿ ಎತ್ತುವ ಽರರೂ ಇರಲಿಲ್ಲ.
ಅದೊಂದು ದಿನ ಮುಖ್ಯಮಂತ್ರಿ ದೇವರಾಜ ಅರಸರು ಮೈಸೂರಿನ ಜಲದರ್ಶಿನಿಯಲ್ಲಿ ತಂಗಿದ್ದರು. ವಿಷಯ ತಿಳಿದ ಸಾಹಿತಿ ತರಾಸು ಅವರು ಲೇಖಕ ಡಾ.ಎಂಜಿಆರ್ ಅರಸ್‌ರೊಂದಿಗೆ ಮುಖ್ಯಮಂತ್ರಿಗಳನ್ನು ಖುದ್ದಾಗಿ ಕಂಡು ಮನವಿ ಪತ್ರ ಕೊಟ್ಟರು. ‘ಇನ್ನೇನು ಕೆಲವಾರು ತಿಂಗಳಲ್ಲಿ ಸ್ವಾತಂತ್ರ್ಯ ಬಂದು ಇಪ್ಪತ್ತೈದು ವರ್ಷಗಳು ತುಂಬುತ್ತಿದೆ. ಈ ವೇಳೆಯಲ್ಲಾದರೂ ಮೈಸೂರು ರಾಜ್ಯಕ್ಕೆ ಹೊಸ ಹೆಸರಾಗಬೇಕು. ಈಗ ಆಗದಿದ್ದರೆ ಇನ್ನೆಂದೂ ಆಗುವುದಿಲ್ಲ. ಒಣ ಚರ್ಚೆಯ ಪ್ರಹಸನಗಳು ಮುಂದುವರಿಯುತ್ತಾ ಹೋಗುತ್ತವೆ. ನಿಮ್ಮ ಸಂಪುಟಕ್ಕೆ ಸರಿತೋರಿದ ಯಾವ ಹೆಸರನ್ನಾದರೂ ಚರ್ಚಿಸಿ ಇಡಿ. ಅಭ್ಯಂತರವಿಲ್ಲ. ಒಟ್ಟಾರೆ 1973ರ ಆಗಸ್ಟ್ 15 ರೊಳಗೆ ನಿಮ್ಮ ತೀರ್ಮಾನ ಪ್ರಕಟವಾಗಬೇಕು. ಈ ಕೆಲಸವು ನಿಮ್ಮಿಂದಲ್ಲದೆ ಬೇರಾರಿಂದಲೂ ಸಾಧ್ಯವಾಗದು’ ಎಂದು ಕೇಳಿಕೊಂಡರು. ನಾಲ್ಕಾರು ಪುಟಗಳಿದ್ದ ಮನವಿ ಪತ್ರವನ್ನು ಓದಿ ಅರಸ್ ಚಕಿತಗೊಂಡರು. ಎಲ್ಲ ಹೊಸ ಹೆಸರುಗಳನ್ನೂ ಪ್ರಸ್ತಾಪಿಸಿದ್ದ ತರಾಸು ಯಾವ ಹೆಸರಿಟ್ಟರೆ ಸೂಕ್ತ ಮತ್ತು ಬಳಕೆಗೆ ಸುಲಭ ಎಂಬುದನ್ನು ನಿರೂಪಿಸಿದ್ದರು. ಅರಸು ಅವರ ಮನದಲ್ಲಿ ಸಂಕಲ್ಪವೊಂದು ಮೂಡಿತ್ತು. ತರಾಸುರೊಂದಿಗೆ ಕೆಲ ಕಾಲ ಚರ್ಚಿಸಿ ‘ನೀವು ಸೂಚಿಸಿರುವ ಎರಡು ಹೆಸರುಗಳಲ್ಲಿ ಒಂದನ್ನು ಅಂತಿಮಗೊಳಿಸುವುದಂತೂ ನಿಶ್ಚಿತ’ ಎಂದು ಹೇಳಿ ಬೀಳ್ಕೊಂಡರು.
ಈ ವಿವಾದವನ್ನು ಬೇಗನೆ ಕೊನೆಗೊಳಿಸಿ ಶಾಶ್ವತವಾದ ಹೆಸರನ್ನಿಡುವುದು ಅತ್ಯಗತ್ಯವಾಗಿತ್ತು. ಇಪ್ಪತ್ತೈದನೇ ಸ್ವಾತಂತ್ರ್ಯೋತ್ಸವ ಬೇರೆ ಹತ್ತಿರವಾಗುತ್ತಿದೆ. ತಡ ಮಾಡುವಂತಿಲ್ಲ. ಆದರೆ ಶಾಸನ ಸಭೆಯ ಒಪ್ಪಿಗೆ ಪಡೆಯದೆ ಮುಂದುವರಿಯುವಂತಿಲ್ಲ.
ಒಂದೆರಡು ತಿಂಗಳಲ್ಲಿ ಅಂದರೆ ದಿನಾಂಕ 27-07-1972ರಂದು ಶಾಸನ ಸಭೆಯಲ್ಲಿ ಒಂದು ಠರಾವನ್ನು ಮಂಡಿಸಿದರು ದೇವರಾಜ ಅರಸರು. ಅದನ್ನು ಓದಿದ ತರಾಸು ಅವರ ಆನಂದಕ್ಕೆ ಪಾರವೇ ಇಲ್ಲದಾಯಿತು. ಇಡೀ ಸದನ ಠರಾವನ್ನು ಒಕ್ಕೊರಲಿನಿಂದ ಅನುಮೋದಿಸಿತ್ತು. ನಂತರ 1-11-1973ರಂದು ಅವಿರೋಧವಾಗಿ ಅನುಷ್ಠಾನಕ್ಕೆ ಬಂದ ಹೆಸರು ‘ಕರ್ನಾಟಕ’ !
ಈಗ ಕರ್ನಾಟಕ ಸಂಭ್ರಮ ೫೦ ನಡೆಯುತ್ತಿದೆ. ಈ ಸಮಯದಲ್ಲಿ ಇಷ್ಟೆಲ್ಲ ವಿರೋಧ ಪ್ರತಿರೋಧಗಳ ಸಮನ್ವಯ ಮಾಡಿಕೊಂಡು ದೀರ್ಘಕಾಲ ನನೆಗುದಿಗೆ ಬಿದ್ದಿದ್ದ ಕರ್ನಾಟಕ ಎಂಬ ಹೆಸರನ್ನು ಖಾಯಂಗೊಳಿಸಿದ ವ್ಯಕ್ತಿಯನ್ನೇ ಮರೆತಂತೆ ಕಾಣುತ್ತದೆ.
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು? ವಿಧಾನ ಸೌಧದ ನಿರ್ಮಾತೃ ? ಮೊದಲ ಕನ್ನಡಿಗ ಪ್ರಧಾನಿ? ಎಂದೊಡನೆ ಹೆಸರುಗಳು ಫಕ್ಕನೆ ಹೊಳೆಯುತ್ತವೆ. ಕರ್ನಾಟಕ ಎಂಬ ಹೆಸರನ್ನು ಅಧಿಕೃತಗೊಳಿಸಿದವರು ಯಾರು? ಎಂದರೆ ಅನೇಕರು ಗೊಂದಲಗೊಳ್ಳುತ್ತಾರೆ. ಯಾರು? ಎಂದು ಮರು ಪ್ರಶ್ನಿಸುತ್ತಾರೆ. ಬಹುಶಃ ಆ ಹೆಸರನ್ನು ಎಲ್ಲರೂ ಒಮ್ಮತದಿಂದ ಒಪ್ಪುವಂತೆ ಶ್ರಮಿಸಿದ ವ್ಯಕ್ತಿ ಯಾರು ಎಂಬುದು ಪ್ರಶ್ನಾರ್ಥಕವಾಗಿ ಉಳಿಯಬಾರದು. ವೈಯಕ್ತಿಕವಾಗಿ ನೋಡಿದರೆ ಅರಸ್‌ರ ಒಲವು ಇದ್ದದ್ದು ಅದೇ ಹಳೇ ಮೈಸೂರೆಂಬ ಹೆಸರಿನ ಮೇಲೆ. ತಾವು ಹುಟ್ಟಿಬೆಳೆದ ಪ್ರದೇಶವೆಂಬ ಮಮತೆ. ಹಿಂದೊಮ್ಮೆ ಶ್ರೀರಂಗಪಟ್ಟಣದಲ್ಲಿ ಅದೇ ಸಂಗತಿ ಹೇಳಿ ತೀವ್ರ ವಿವಾದಕ್ಕೀಡಾಗಿದ್ದರು. ವಿರೋಧಗಳು ಹೆಚ್ಚಾದಾಗ ತಮ್ಮ ಒಲವನ್ನು ಮರೆತರು. ಕರ್ನಾಟಕ ಹೆಸರಿನ ಐತಿಹಾಸಿಕ ಮಹತ್ವವನ್ನು ಮನಗಂಡು ಅದೇ ಹೆಸರನ್ನು ಅನುಷ್ಠಾನಕ್ಕೆ ತಂದರು.
ಶಾಸನ ಸಭೆಯಲ್ಲಿ ಠರಾವನ್ನು ಮಂಡಿಸುವಾಗ ವಿವಾದಿತ ಅಂಶಗಳನ್ನೆಲ್ಲಾ ಪ್ರಸ್ತಾಪಿಸಿ ಅದ್ಭುತವಾದ ಭಾಷಣವನ್ನು ಮಾಡಿದರು. ‘ಈವರೆಗಿನ ನಾನಾ ಚರ್ಚೆಗಳಿಂದ ನಾನು ಅರಿತಿರುವಂತೆ, ಇದರಲ್ಲಿ ಇನ್ನು ಮುಂದೆ ಯಾವುದೇ ಚರ್ಚೆಗೂ ಅವಕಾಶವಿಲ್ಲ. ಬದಲಾವಣೆಯನ್ನು ಮಾಡಬೇಕು ಎಂದರೆ ಕರ್ನಾಟಕ ಎಂದೇ ಮಾಡಬೇಕು. ಎಂಬ ನಿರ್ಣಯವನ್ನು ಇಂದು ಮಂಡಿಸಿದ್ದೇನೆ. ಕರ್ನಾಟಕ ಎಂಬ ಹೆಸರನ್ನು ನಮ್ಮ ನಾಡಿನ ರಾಜರುಗಳು ಹೆಮ್ಮೆಯಿಂದ ಉಪಯೋಗಿಸುತ್ತಿದ್ದರು. ಇದರಂತೆ ವಿಜಯನಗರದ ರಾಜರು, ಹೊಯ್ಸಳರು, ಕದಂಬರು ಮೊದಲಾದವರೂ ಕರ್ನಾಟಕ ಸಿಂಹಾಸನಾಽಶ್ವರರೇ. ಹೀಗೆ ಕರ್ನಾಟಕವೆಂಬ ಹೆಸರು ಪ್ರಾಚೀನ ಕಾಲದಿಂದ ಒಂದಲ್ಲ ಒಂದು ಬಗೆಯಲ್ಲಿ ಬಳಕೆಯಲ್ಲಿ ಬರುತ್ತಲೇ ಇತ್ತು. ಬಹಳಷ್ಟು ಸಾಹಿತಿಗಳು, ಭಾಷಾ ವಿದ್ವಾಂಸರುಗಳು ಅಭಿಪ್ರಾಯಪಟ್ಟಂತೆ ಕರ್ಣಾಟಕವೂ ಸರಿಯೇ. ಮೈಸೂರು ಕನ್ನಡನಾಡು, ಮೈಸೂರು ಕರ್ನಾಟಕ ಎಂದಿಟ್ಟರೆ ಸೂಕ್ತವೇ?’ ಎಂದು ವಿಪುಲವಾದ ಚರ್ಚೆ ಕೊನೆ ಮೊದಲಿಲ್ಲದೆ ನಡೆಯುತ್ತಲೇ ಇತ್ತು. ಇದು ಎಲ್ಲಿಯವರೆಗೆ ಹೋಯಿತೆಂದರೆ, ತಿರುಪತಿ ದೇವಾಲಯದಲ್ಲಿ ತಿಮ್ಮಪ್ಪನ ಆನೆಗೆ ಹಾಕುವ ನಾಮ ತೆಂಕಲು ಖಿ ಶೇಪ್ ಇರಬೇಕೇ? ಅಥವಾ ಬಡಗಲು ಇರಬೇಕೇ ಎಂದು ಸುಪ್ರೀಂ ಕೋರ್ಟ್‌ವರೆಗೆ ಹೋದರೆ ತೀರ್ಪು ಬರುವುದರೊಳಗೆ ಆನೆಯೇ ಸತ್ತು ಹೋದ ರೀತಿಯಂತೆ ಆಗುವುದು ಬೇಡ. ದಿನ ಬಳಕೆಗೆ ಕರ್ನಾಟಕ ಎನ್ನುವುದು ಹೆಚ್ಚು ಸುಲಭ. ನಮ್ಮ ಸಂಪುಟದ ಬಹಳಷ್ಟು ಶಾಸಕರು ಅಭಿಪ್ರಾಯಪಟ್ಟಿರುವಂತೆ ನಮ್ಮ ರಾಜ್ಯಕ್ಕೆ ಒಂದು ಶಾಶ್ವತವಾದ ಹೊಸ ಹೆಸರನ್ನಿಟ್ಟು ಈಗಿನ ವಿವಾದವನ್ನು ಕೊನೆಗೊಳಿಸುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇನೆ. ಭೇದ ಭಾವಗಳೇನೇ ಇರಲಿ, ಕರ್ನಾಟಕ ಎಂಬ ಹೆಸರನ್ನಿಡಲು ಒಮ್ಮತದಿಂದ ಎಲ್ಲರೂ ಒಪ್ಪಿಗೆ ನೀಡಿದ್ದಾರೆ’ ಎಂದು ೨೭-೦೭-೧೯೭೨ರಂದು ಠರಾವನ್ನು ಮಂಡಿಸಿದರು. ಒಂದೇ ಒಂದು ವಿರೋಧವಿಲ್ಲದೆ ‘ಕರ್ನಾಟಕ ರಾಜ್ಯ’ ಹೆಸರು ಅಂಗೀಕಾರವಾಯಿತು. 1-11-1973ರಲ್ಲಿ ನಾಮಕರಣವಾಯಿತು. ಅಂದೇ ಕನ್ನಡ ರಾಜ್ಯೋತ್ಸವ ನಡೆಯಿತು.
ನಾನಾ ವಿರೋಧಗಳ ನಡುವೆ ಕರ್ನಾಟಕ ರಾಜ್ಯವೆಂಬ ಶಾಶ್ವತ ಹೆಸರನ್ನಿಟ್ಟು, ಅಖಂಡ ಕರ್ನಾಟಕವನ್ನು ರೂಪಿಸಿದ ಕೀರ್ತಿ ದೇವರಾಜ ಅರಸು ಅವರದ್ದು , ಅವರನ್ನು ಸ್ಮರಿಸಬೇಕಾದದ್ದು ಅವರಿಗೆ ಮಾಡುವ ಮೆಹರ್ಬಾನಿಯಲ್ಲ. ನಾವು ಸಲ್ಲಿಸಬೇಕಾದ ಕೃತಜ್ಞತೆ. ಅವರ ಭಾವಚಿತ್ರವನ್ನು ಸಮಾರಂಭದಲ್ಲಿಡಬೇಕು ಮತ್ತು ಆ ಭಾಷಣವನ್ನು ವಿದ್ಯಾರ್ಥಿಗಳೆಲ್ಲರೂ ಓದುವಂತೆ ಈಗೊಂದು ಕರಪತ್ರ ಪ್ರಕಟಿಸಿದರೆ ಉತ್ತಮ. ಕರ್ನಾಟಕ ಎಂಬ ಹೆಸರು ಅನುಷ್ಠಾನಕ್ಕೆ ಬರಲು ಏನೆಲ್ಲಾ ತಕರಾರುಗಳು ನಡೆದಿದ್ದವು ಎಂಬುದು ವಿದ್ಯಾರ್ಥಿಗಳಿಗೆ ತಿಳಿದೀತು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…