ಎಡಿಟೋರಿಯಲ್

ಬದುಕುವ ರೀತಿಯೇ ಅಪಾಯಕಾರಿಯಾಗಿದ್ದರೆ?

ಅವನನ್ನು ಕೊಚ್ಚಿದರಂತೆ. ಇವನನ್ನು ಅಮಾನುಷವಾಗಿ ಕಡಿದರಂತೆ. ಈ ಬರ್ಬರ ಕೊಲೆ ಸರಣಿಗೆ ಕೊನೆ ಮೊದಲಿಲ್ಲವೇ? ದಿನವೂ ಲಾಂಗು ಮಚ್ಚುಗಳೇ ವಿಜೃಂಭಿಸಿದರೆ ಜನ ಸಾಮಾನ್ಯರ ಗತಿಯೇನು? ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸರೇಕೆ ನಿಷ್ಕ್ರಿಯರಾಗಿದ್ದಾರೆ?… ನಿತ್ಯವೂ ಇವೇ ಚರ್ಚೆಗಳು. ಕೊನೆ ಮೊದಲಿಲ್ಲದ ಪ್ರಶ್ನೆಗಳು.

ಸರಣಿ ದರೋಡೆ, ಕಳ್ಳತನಗಳೋ, ಗ್ಯಾಂಗ್ ರೇಪ್, ರೌಡಿಸಂ, ಕೋಮು ಗಲಭೆಯೋ ಆದರೆ ಪೊಲೀಸ್ ವೈಫಲ್ಯವೆನ್ನಬಹುದು. ದುಷ್ಟಶಕ್ತಿಗಳನ್ನು ನಿಯಂತ್ರಿಸಿಲ್ಲ ಎನ್ನಬಹುದು. ವ್ಯಕ್ತಿಗತ ಹಗೆತನದ ಹತ್ಯೆಗಳಲ್ಲಿ ಪೊಲೀಸ್ ವೈಫಲ್ಯ ಕಡಿಮೆ. ಅದು ತೀರ ವೈಯಕ್ತಿಕವಾದದ್ದು ಮತ್ತು ಎಂದಾದರೂ, ಯಾವುದಾದರೂ ರೂಪದಲ್ಲಿ ಸಂಭವಿಸಲೇ ಬೇಕಾದದ್ದು. ಇಪ್ಪತ್ತು ದಿನಕ್ಕೂ ಆಗಬಹುದು. ಇಪ್ಪತ್ತು ವರ್ಷಕ್ಕೂ ನಡೆಯಬಹುದು.

ಕಾರಣ : ಕೊಲೆಯಾದವನ ಜೀವನ ವಿಧಾನ, ಸುತ್ತಮುತ್ತಲಿನವರೊಂದಿಗೆ ನಡೆದುಕೊಳ್ಳುವ ರೀತಿ, ಅವನು ಬದುಕಿದ್ದ ಬಗೆಯೇ ಭೀಕರ ಕೊಲೆಯನ್ನು ಆಹ್ವಾನಿಸಿಕೊಳ್ಳುವಂತಿತ್ತು. ಸಿಕ್ಕಿದವರ ಮೇಲೆಲ್ಲಾ ಗೂಂಡಾಗರ್ದಿ ಮಾಡಿಕೊಂಡು, ಅಮಾಯಕರಿಗೆ ಮೋಸ, ವಂಚನೆ, ದಗಾಕೋರತನ ಮಾಡಿ ಸರ್ವನಾಶ ಮಾಡಿದ್ದವರು, ಕಂಡವರ ಸಂಸಾರಗಳನ್ನು ಹಾಳುಮಾಡಿದ್ದ ಕಾಮಪಿ ಪಾಸುಗಳು ಹೇಗೆ ತಾನೇ ಸ್ವಾಭಾವಿಕ ಸಾವು ಕಂಡಾರು? ಬದುಕಿದ್ದಾಗ ಹತ್ತು ಜನಕ್ಕೆ ಅಯ್ಯೋ ಅನ್ನಿಸಿದವನು, ಕೆಲವಾರು ವರ್ಷ ತಾನುಂಟೋ ಮೂಲೋಕ ವುಂಟೋ ಎಂಬಂತೆ ಮೆರೆಯಬಹುದು. ಜನರು ತನ್ನ ದುಷ್ಕತ್ಯಗಳನ್ನು ಮರೆಯಲಿ ಎಂದು ಸಮಾಜ ಸೇವಕನ ವೇಷ ಧರಿಸಬಹುದು. ದೈವಭಕ್ತ ದುರಂಧರನಂತೆ ಧರ್ಮಸೇವಾನಿರತನಂತೆ ಸೋಗು ಹಾಕಬಹುದು. ತಾನೊಬ್ಬ ಸಂಪೂರ್ಣ ಬದಲಾದ ಮನುಷ್ಯ, ಎಲ್ಲವನ್ನೂ ಬಿಟ್ಟು ಈಗ ಸಮಾಜಸೇವೆಯಲ್ಲಿ ತೊಡಗಿದ್ದೇನೆ ಎಂದು ಬೋಂಕಬಹುದು.

ಜನಗಳಿಗೆ ಜ್ಞಾಪಕಶಕ್ತಿ ಕಡಿಮೆ ಎನ್ನುತ್ತಾರೆ. ಅವರು ಹಿಂದಿನದೆಲ್ಲವನ್ನೂ ಸುಲಭವಾಗಿ ಮರೆತುಬಿಡುತ್ತಾರೆ ಎನ್ನುವುದುಂಟು. ಅದು ನಿಜವೂ ಇರಬಹುದು. ತುಳಿದಿದ್ದ ಕತ್ತೆ ಮರೆತು ಮುನ್ನಡೆಯಬಹುದೇನೋ. ತುಳಿಸಿಕೊಂಡ ನಾಗರಹಾವು? ಅದೇಕೆ ಮರೆತೀತು? ನಾಗರಕ್ಕೆ ಸೇಡು ಹದಿನಾಲ್ಕು ವರ್ಷ. ನರನಿಗೆ ನಲವತ್ತನಾಲ್ಕು ವರುಷ!

ವ್ಯಕ್ತಿಗತವಾದ ಅವನ ನೋವಿನ ನೆನಪುಗಳು ಮರೆಯುವುದಿಲ್ಲವಲ್ಲ? ರೌಡಿ ಮಾಡಿರುವ ಮೋಸ, ವಂಚನೆಯ ನೀಚ ಕೆಲಸಗಳು ವರ್ಷ ಉರುಳಿದರೂ ಹಸಿರಾಗಿರುತ್ತವೆ. ಅವನಿಂದಾಗಿ ತಮ್ಮ ಕುಟುಂಬವೇ ಸರ್ವನಾಶವಾಯಿತೆಂಬ ಸೇಡಿನ ಕುದಿತ ಸದಾ ಜೀವಂತವಿರುತ್ತದೆ. ಪ್ರತೀಕಾರ ತೀರಿಸಲು ಆತ ತಡಮಾಡಬಹುದೇನೋ. ಹಾಳಾಗಿ ಹೋಗಲಿ ಎಂದು ಮರೆತಂತೆ ಸುಮ್ಮನಾಗಿರಲೂಬಹುದು. ಆದರೆ ನೋವಿನ ದಳ್ಳುರಿ, ತನ್ನ ಕುಟುಂಬಸ್ಥರು ಅಯ್ಯೋ ಎಂದು ನರಳಿ ಹಾಕಿದ್ದ ಕಣ್ಣೀರನ್ನು ಅವನ ಒಳಮನಸ್ಸು ಮರೆವುದೆಂತು? ಸೇಡು ತೀರಿಸುವ ಸಂದರ್ಭ ಬಂದರೆ ಅವನೆಂದಿಗೂ ಬಿಡಲಾರ. ತನ್ನಿಂದಾಗದಿದ್ದರೆ ಬೇರೆಯವರಿಂದಲಾದರೂ ಮಾಡಿಸದಿರಲಾರ. ಸೇಡು ತೀರಿದ ಮೇಲೆಯೇ ಅವನ ಒಡಲ ದಳ್ಳುರಿ ಶಮನವಾಗಲು ಸಾಧ್ಯ. ನಾಜಿ ಸೈನಿಕರಿಂದ ನಾಶವಾಗಿದ್ದ ಯೆಹೂದ್ಯರ ಮಕ್ಕಳು ಮೊಮ್ಮಕ್ಕಳು ಹುಡುಕಿ ಹುಡುಕಿ ಸೇಡು ತೀರಿಸಿಕೊಂಡದ್ದನ್ನು ಹೇಗೆ ಮರೆಯಲಾದೀತು? ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಎಲ್ಲೋ ಅಜ್ಞಾತವಾಗಿದ್ದ ಐಕ್ ಮನ್ ಥರದವರನ್ನು ಹುಡುಕಿ ಹಿಡಿದದ್ದು ಕ್ಲಾಸಿಕ್ ಉದಾಹರಣೆ.

ಜನರಿಗೆ ಬೀಭತ್ಸವಾಗಿ ಕೊಲೆಯಾದವನ ದಾರುಣ ಚಿತ್ರ ಮಾತ್ರವೇ ಕಾಣುತ್ತದೆ. ಸತ್ತವನಿಗಾಗಿ ಮಮ್ಮಲ ಮರುಗುತ್ತಾರೆ. ಕೊಲೆಯಾದವನ ಹೀನತನಗಳು ಅವರಿಗೆ ಗೊತ್ತಿಲ್ಲವೆಂದಲ್ಲ. ಅದೊಂದು ಕೆಟ್ಟಕಾಲ. ಆಗ ಹಾಗೆ ಹಾರಾಡುತ್ತಿದ್ದ. ಈಗೆಲ್ಲ ತುಂಬ ಒಳ್ಳೆಯವನಾಗಿದ್ದ. ಮುಖ್ಯವಾಹಿನಿಗೆ ಬಂದು, ರಾಜಕೀಯ ಪಕ್ಷ ಸೇರಿ ಮಂತ್ರಿ ಮಹೋದಯರ ಸಖ್ಯ ಬೆಳೆಸಿದ್ದ. ಮಾತುಕತೆ ವ್ಯವಹಾರ ಎಲ್ಲದರಲ್ಲೂ ನಂಬಿಕಸ್ತನಾಗಿ ನಡೆದುಕೊಳ್ಳುತ್ತಿದ್ದ. ಅಂಥವನನ್ನು ಅಷ್ಟು ಭೀಕರವಾಗಿ ಕೊಲ್ಲುವ ಅಗತ್ಯವಿರಲಿಲ್ಲ ಎಂಬ ವ್ಯಾಖ್ಯಾನಗಳು ಬರುತ್ತವೆ. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು ಎನ್ನುತ್ತಾರೆ.

ಅವರಿಗೆ ಅರಿವಾಗದ ಸಂಗತಿ ಎಂದರೆ, ಕೊಲೆಯಾದವನು ಅದಕ್ಕಿಂತ ನಾಲ್ಕು ಪಟ್ಟು ಭೀಕರ ಕೊಲೆಗೆ ಅರ್ಹನಾಗಿದ್ದ ಎಂಬುದು. ಅವನ ಕರ್ಮಕಾಂಡಗಳನ್ನು ಕೇಳಿದರೆ ಅನುಕಂಪ ಕೊಲೆಗಾರನತ್ತ ವಾಲಿದರೂ ಆಶ್ಚರ್ಯವಿಲ್ಲ. ಸರಣಿ ಕೊಲೆ, ಡಕಾಯತಿ, ರೇಪ್‌ಗಳನ್ನು ಮಾಡುತ್ತಿದ್ದ ದಂಡುಪಾಳ್ಯ ಗ್ಯಾಂಗಿನವರಿಗೆ ಅಂತಹುದೇ ಕೃತ್ಯಗಳಲ್ಲಿದ್ದ ಉಮೇಶ್ ರೆಡ್ಡಿ, ದೆಹಲಿಯ ನಿರ್ಭಯಾ ರೇಪಿಸ್ಟರಿಗೆ ಯಾವ ಕರುಣೆ ತೋರಲಾದೀತು? ಸುಲಿಗೆ, ರೌಡಿಸಂ, ಮಾಫಿಯ ದಂಧೆಗಳಲ್ಲಿದ್ದ ರೌಡಿ ಜಯರಾಜ, ಕೊತ್ವಾಲ, ಬೆಕ್ಕಿನಕಣ್ಣು ಮುಂತಾದವರ ಅಂತ್ಯ ಹೇಗಾಗಬೇಕೆಂದು ಬಯಸುತ್ತೀರಿ? ಚೀಟಿ ನಡೆಸುತ್ತೇನೆ, ಸೈಟು ಮನೆ ಕೊಡಿಸುತ್ತೇನೆ, ಕೆಲಸದ ಆರ್ಡರನ್ನೇ ಮನೆ ಬಾಗಿಲಿಗೆ ತಂದುಕೊಡುತ್ತೇನೆ ಎಂದು ಉಂಡೆ ನಾಮ ತಿಕ್ಕಿದವರನ್ನು ಜನ ಸುಮ್ಮನೆ ಬಿಟ್ಟಾರೆಂದು ಭಾವಿಸುತ್ತೀರಾ?

ಮೋಸ ಹೋದವರು, ಅನ್ಯಾಯಕ್ಕೆ ತುತ್ತಾದವರು, ಶೋಷಣೆಗೆ ಬಲಿಯಾದವರು, ಅಮಾಯಕ ದುರ್ಬಲರು ಯಾವುದೇ ಬಗೆಯ ಬೆಂಬಲವಿಲ್ಲದ ಅಸಹಾಯಕರಾಗಿದ್ದಾಗ ಪ್ರತೀಕಾರ ತೆಗೆದುಕೊಳ್ಳದೆ ಇರಬಹುದು. ತಮ್ಮ ದುರದೃಷ್ಟವನ್ನೇ ಹಳಿದುಕೊಂಡು ನಿಷ್ಕ್ರಿಯರಾಗಿರಬಹುದು. ಆದರೆ ಸತ್ತವನು ಮಾಡಿದ್ದ ಮೋಸದಿಂದಾಗಿ ಇಡೀ ಸಂಸಾರ ದಿನವೂ ಪರಿತಾಪಪಡುತ್ತಿರುತ್ತದೆ. ಅನೇಕ ಕೋರ್ಟ್ ತಕರಾರುಗಳಿಗೆ, ನಾನಾ ಆರ್ಥಿಕ ಕೋಟಲೆಗಳಿಗೆ, ತೀವ್ರ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಿರುತ್ತದೆ. ಆದರೆ ಇವ್ಯಾವುದನ್ನೂ ಸಹಿಸದ ಒಬ್ಬನಂತೂ ಇರುತ್ತಾನೆ. ಅವನು ಮಾತ್ರ ದ್ರೋಹಿಯನ್ನು ನಡು ರಸ್ತೆಯಲ್ಲಿ ಕೊಚ್ಚಲೂ ಹೇಸಲಾರನು.

ಹಾಗಿದ್ದರೆ ಮೋಸ ವಂಚನೆ, ಅನ್ಯಾಯ ಮಾಡಿದವರೆಲ್ಲರೂ ಕೊಲೆಯಾಗಿಯೇ ಬಿಡುತ್ತಾರಾ? ಮಾಡಬಾರದ ಅನ್ಯಾಯ ಮಾಡಿಕೊಂಡು, ಐಷಾರಾಮಿ ಜೀವನ ಮಾಡ್ತಿರೋರು ನಮ್ಮ ಸುತ್ತಲೂ ಇದ್ದಾರಲ್ಲಾ ಅವರಿಗೆ ಯಾರೇನು ಮಾಡಿದ್ದಾರೆ? ಸುಖವಾಗೇ ಇದ್ದಾರಲ್ಲಾ? ಎಂಬ ಪ್ರಶ್ನೆ ಬರಬಹುದು.

ಅಷ್ಟು ಸುಲಭವಾಗಿ ಅವರನ್ನು ಜನ ಬಿಟ್ಟು ಬಿಡುತ್ತಾರೆಂದು ತಿಳಿಯಲಾಗದು. ವಿಧವೆಯರ, ಅಸಹಾಯಕರ ಆಸ್ತಿಗಳನ್ನು ಲಪಟಾಯಿಸಿರುವವರಿಗೆ ಲೆಕ್ಕವಿಲ್ಲ. ಚಿಲ್ಲರೆ ಮೊತ್ತವನ್ನು ಬೀಸಾಡಿ ದೊಡ್ಡ ಆಸ್ತಿಯನ್ನು ಬರೆಸಿಕೊಂಡು ಬೀಗುತ್ತಿರು ತ್ತಾರೆ. ಆದರೆ ಅವರ ಅಂತ್ಯವೂ ಇದೇ ಬಗೆಯದು. ಅದು ಪ್ರಕೃತಿಯ ನ್ಯಾಯ ನಿರ್ಣಯ! ಬಿಲ್ಡರ್‌ಗಳು, ಗುತ್ತಿಗೆದಾರರು, ಮೀಟರ್ ಬಡ್ಡಿ ವಸೂಲಿಯವರು, ಲೇವಾದೇವಿಯವರು ಏನೇ ಮಿಣ್ಣಗೆ ಬೆಣ್ಣೆ ಮಾತಾಡಿಕೊಂಡಿರಲಿ ಅದೇಕೆ ಅಂಥವರೂ ಗಟಾರದ ಹೆಣವಾಗಿ ಬೀಳುತ್ತಾರೋ?!

ಒಂದಂತೂ ನಿಜ. ಇಂಥವರಲ್ಲಿ ಎಲ್ಲರೂ ಚರಂಡಿ ಹೆಣವಾಗದಿರಬಹುದು. ಆದರೆ ಇವರುಗಳು ಅವನತಿ ಕಾಣುವಲ್ಲಿ ವಿಚಿತ್ರವಾದ ನ್ಯಾಯಸೂತ್ರವೊಂದು ಅವರ ಮೇಲೆ ಅಜ್ಞಾತವಾಗಿ ಸೇಡು ತೀರಿಸಿಕೊಂಡಿರುತ್ತದೆ! ಮನುಷ್ಯ ಮಾಡಿದ ಕಾನೂನಿನಿಂದ ಬಚಾವಾಗಿರಬಹುದು. ಆದರೆ ಪ್ರಕೃತಿಯೇ ಹೆಣೆದಿರುವ ನ್ಯಾಯಸೂತ್ರದಿಂದ ಶಿಕ್ಷಿತರಾದವರ ಸಂಖ್ಯೆಯೇ ದೊಡ್ಡದು.

lokesh

Recent Posts

‘ನಮಗೆ ರಕ್ಷಣೆ ಕೊಡಿ’.. ಮೈಸೂರು ಎಸ್‌ಪಿ ಕಚೇರಿಗೆ ಬಂದ ತುಮಕೂರಿನ ಪ್ರೇಮಿಗಳು

ಮೈಸೂರು : ನಾವು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಕೊಡಿ ಎಂದು ತುಮಕೂರು ಮೂಲದ…

11 mins ago

ರಸ್ತೆಗಳು ಗುಂಡಿಮಯ….ಜನರಿಗೆ ಜೀವ ಭಯ!

ಪ್ರಶಾಂತ್‌ ಎಸ್. ಮೈಸೂರು : ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆ ವ್ಯಾಪ್ತಿಯ ಕಂದಾಯ ಇಲಾಖೆ ನೌಕರರ…

22 mins ago

ವಿದ್ಯುತ್‌ ಬಿಲ್‌ ಬಾಕಿ ; 3 ಗ್ರಾಪಂಗಳಿಗೆ ಸೆಸ್ಕ್‌ ಶಾಕ್‌

ಚಾಮರಾಜನಗರ : ನೀರಿನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ವಿದ್ಯುತ್ ಸಂಪರ್ಕವನ್ನು…

35 mins ago

ಮಹಾಪಂಚ್‌ ಕಾರ್ಟೂನ್‌

ಮಹಪಂಚ್‌ ಕಾರ್ಟೂನ್‌ | ಏ.17 ಶುಕ್ರವಾರ

3 hours ago

ಇಸ್ರೇಲ್-ಲೆಬನಾನ್‌ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್‌

ಇಸ್ರೇಲ್‌ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…

13 hours ago

ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಇಲ್ಲ : ಪ್ರಧಾನಿ ಮೋದಿ ಅಭಯ

ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…

14 hours ago