ಎಡಿಟೋರಿಯಲ್

ವಾಂಗ್ಚುಕ್ ಹೋರಾಟ ಕುರಿತು ನಿರ್ಲಕ್ಷ್ಯ ಸಲ್ಲದು

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸುಮಾರು ೨೦ ದಿನಗಳ ಕಾಲ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಅವರು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ದೇಶಾದ್ಯಂತ ಸಂಚಲನ ಮೂಡಿಸಿದೆ.

ತೀರಾ ನಿತ್ರಾಣಗೊಂಡಿದ್ದರಿಂದ ವಾಂಗ್ಚೂಕ್‌ಅವರನ್ನು ಹೊಸದಿಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ದಿಲ್ಲಿಯ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಳಿಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಹೊಸದಿಲ್ಲಿಯಲ್ಲಿ ಹಲವಾರು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದೆ. ವಾಂಗ್ಚೂಕ್ ಅವರು ಈ ಪ್ರತಿಭಟನೆಯನ್ನು ಬೆಂಬಲಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸಂಸತ್ ಅಧಿವೇಶನ ಆರಂಭವಾಗಲಿರುವ ಸೋಮವಾರ, ಸಂಸತ್ ಭವನಕ್ಕೆ ಮುತ್ತಿಗೆ ಹಾಕುವುದು ಪ್ರತಿಭಟನಾಕಾರರ ತೀರ್ಮಾನ ಎನ್ನಲಾಗಿದೆ. ‘ಸೋಮವಾರ (ಜು.೨೦)ದ ವರೆಗೂ ನಾನು ಬದುಕುತ್ತೇನೆ. ನೀವು ಎಲ್ಲರೂ ಸಂಸತ್ ಭವನಕ್ಕೆ ಬನ್ನಿ’ ಎಂದು ವಾಂಗ್ಚೂಕ್ ಕರೆ ನೀಡಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ.

ದೇಶ ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿರುವ ಪರಿಸ್ಥಿತಿಯಿಂದ ಪ್ರಜಾತಂತ್ರ ವ್ಯವಸ್ಥೆಯ ಬುಡವೇ ಅಲ್ಲಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಆತಂಕವಾಗಿದೆ. ನೀಟ್ ವಿದ್ಯಾರ್ಥಿಗಳ ಬದುಕಿನ ಮಹತ್ವದ ತಿರುವು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗಾಲಾದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಷ್ಟೆಲ್ಲ ರಾದ್ಧಾಂತಗಳು ನಡೆದರೂ ಕೇಂದ್ರ ಸರ್ಕಾರ ಮಾತ್ರ ನಿರ್ವಿಕಾರವಾಗಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವಾಗಿದೆ. ಸಂವಿಧಾನವು ಪ್ರಜೆಗಳ ವಾಕ್ ಸ್ವಾತಂತ್ರ್ಯ, ಪ್ರಶ್ನಿಸುವ ಸ್ವಾತಂತ್ರ್ಯಕ್ಕೆ ಯಾವುದೇ ಸರ್ಕಾರ ಅಂಕುಶ ಹಾಕದೆ, ಉತ್ತರದಾಯಿತ್ವ ಪ್ರದರ್ಶಿಸಬೇಕು ಎನ್ನುತ್ತದೆ.

ಆದರೆ, ವಾಸ್ತವದಲ್ಲಿ ಕೇಂದ್ರ ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ ಎಂಬುದಾಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಸಿಜೆಪಿ ನೇತೃತ್ವದ ಪ್ರತಿಭಟನೆಗೆ ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು, ಸಂಸತ್‌ನ ಬಹಳಷ್ಟು ವಿಪಕ್ಷಗಳು ಬೆಂಬಲ ಸೂಚಿಸಿರುವುದು ಕೇಂದ್ರದ ಲೋಪಕ್ಕೆ ಕನ್ನಡಿ ಹಿಡಿದಿದೆ. ಸೋನಮ್ ವಾಂಗ್ಚೂಕ್ ಏಕಾಏಕಿ ಹೋರಾಟಕ್ಕಿಳಿದವರಲ್ಲ. ಲಡಾಖ್ ಬುಡಕಟ್ಟು ಸಮುದಾಯಗಳು ಪರವಾಗಿ ಧ್ವನಿ ಎತ್ತಿ, ಉಪವಾಸ ಸತ್ಯಾಗ್ರಹ ನಡೆಸಿ, ಬಂಧನಕ್ಕೂ ಒಳಗಾಗಿದ್ದವರು. ಅವರ ತಂದೆ ಸೋನಮ್ ವಾಂಗ್ಯೂಲ್ ಕೂಡ ಲಡಾಖ್ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇಂತಹ ಹೋರಾಟಗಾರ ಕುಟುಂಬದ ವಾಂಗ್ಚೂಕ್ ಅವರನ್ನು ಕೇಂದ್ರ ನಿರ್ಲಕ್ಷಿಸಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಹಾಗಿರಲಿ, ಕನಿಷ್ಠಪಕ್ಷ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನವನ್ನೂ ಮಾಡದಿರುವುದು ವಿಪರ್ಯಾಸ.

ಹಿಂದೆ ರೈತ ವಿರೋಧಿಯಾದ ಕಾನೂನುಗಳನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ, ವರ್ಷಾನುಗಟ್ಟಲೆ ರೈತರು ನಡೆಸಿದ ಹೋರಾಟದ ಎದುರು ತಲೆಬಾಗುವಂತಹ ಪರಿಸ್ಥಿತಿ ಬಂದಿತ್ತು. ಇದೀಗ ಯುವ ಸಮುದಾಯದ ಜೊತೆಗೆ ಹಿರಿಯ ಹೋರಾಟಗಾರರೂ ಸೇರಿ ನಡೆಸುತ್ತಿರುವ ಪ್ರತಿಭಟನೆ ಎಚ್ಚರಿಕೆಯ ಘಂಟೆಯಾಗಿದೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಮೀನಮೇಷ ಎಣಿಸುತ್ತಿರುವುದು ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇನ್ನೂ ಹಲವಾರು ಕಾಣದ ಕೈಗಳು ಇರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿವೆ.

ಸೋನಮ್ ವಾಂಗ್ಚೂಕ್ ಅವರು ಮಾತ್ರವಲ್ಲದೆ, ಹಲವು ಯುವಜನರು ಇದೇ ಪ್ರತಿಭಟನೆಯಲ್ಲಿ ನ್ಯಾಯಕ್ಕಾಗಿ ಉಪವಾಸ ಮಾಡುತ್ತಿದ್ದಾರೆ. ಯಾರೊಬ್ಬರ ಜೀವಕ್ಕೆ ಆಪತ್ತು ಬಂದರೂ ಕೇಂದ್ರ ಸರ್ಕಾರ ಹೊಣೆಯಾಗಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ನೆರೆಯ ನೇಪಾಳ ದೇಶದಲ್ಲಿ ಯುವಜನರ ಶಕ್ತಿ ಆಡಳಿತವನ್ನು ಅಲುಗಾಡಿಸಿ, ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ತುರ್ತು ಅಗತ್ಯವಾಗಿದೆ.

” ಸೋನಮ್ ವಾಂಗ್ಚೂಕ್ ಅವರು ಮಾತ್ರವಲ್ಲದೆ, ಹಲವು ಯುವಜನರು ಇದೇ ಪ್ರತಿಭಟನೆ ಯಲ್ಲಿ ನ್ಯಾಯಕ್ಕಾಗಿ ಉಪವಾಸ ಮಾಡುತ್ತಿದ್ದಾರೆ. ಯಾರೊಬ್ಬರ ಜೀವಕ್ಕೆ ಆಪತ್ತು ಬಂದರೂ ಕೇಂದ್ರ ಸರ್ಕಾರ ಹೊಣೆ ಯಾಗಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

3 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

4 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

5 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

8 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

9 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

9 hours ago