ಎಡಿಟೋರಿಯಲ್

ವೈಡ್‍ಆಂಗ್‍ಲ್ : ಕಾಂತಾರದಿಂದ ಎಲ್ಲೆಡೆ ವ್ಯಾಪಿಸಿದ ಹೊಂಬಾಳೆ ಕಂಪು!

ಬಾನಾ ಸುಬ್ರಮಣ್ಯ

ವಿಭಿನ್ನ, ವಿಶಿಷ್ಟ ಚಿತ್ರಗಳ ನಿರ್ಮಾಣದ ಮೂಲಕ ಭಾಷಾ ಸೀಮೋಲ್ಲಂಘನ ಮಾಡುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು

ತಮ್ಮ ನಿರ್ಮಾಣ ಸಂಸ್ಥೆಯ ಮೂಲ ಉದ್ಧೇಶವನ್ನು ಜಾಲತಾಣದಲ್ಲಿ ವಿಜಯ್‍ ಅವರು ಹೇಳಿರುವುದು ಹೀಗೆ: My vision is to use cinema as a force for change and promote kannada culture across the globe. At Hombale, we strive to produce entertaining and compelling content shaped to cater to a global audience, while adhering our roots. ‘ಕಾಂತಾರʼ ಚಿತ್ರ ಅವರ ಈ ಹೇಳಿಕೆಗೆ ಬದ್ಧವಾಗಿರುವ ಚಿತ್ರ.

ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆ, ಆರಾಧನೆಗಳ ಹಿನ್ನೆಲೆಯಲ್ಲಿ, ಪ್ರಕೃತಿ ಮತ್ತು ಮನುಷ್ಯ ನಡುವಿನ ಪರಸ್ಪರ ಸಂಬಂಧ, ಬದುಕು, ಘರ್ಷಣೆಗಳನ್ನು ಹೇಳಿದ ಈ ಚಿತ್ರಕ್ಕೆ ವಿಶ್ವಾದ್ಯಂತದೊರೆತ ಸ್ವಾಗತ ಮತ್ತು ಪ್ರತಿಕ್ರಿಯೆಗಳ ಕುರಿತು ವಿವರಿಸುವುದು ಕಷ್ಟಸಾಧ್ಯ. ಸಾಮಾಜಿಕ ತಾಣಗಳಲ್ಲಂತೂ ಮಂದಿ ಪೈಪೋಟಿಗೆ ಬಿದ್ದಂತೆ ಇದರ ಬಗ್ಗೆ ನೆಚ್ಚಿನ, ಮೆಚ್ಚಿನ ಮಾತುಗಳನ್ನಾಡಿದ್ದೇ ಆಡಿದ್ದು, ಕನ್ನಡಚಿತ್ರರಂಗಕ್ಕೆ ಇನ್ನಷ್ಟು ಹೆಮ್ಮೆ, ಗೌರವವನ್ನು ತಂದದ್ದು ಹೌದು. ಪ್ರೇಕ್ಷಕರು ಮಾತ್ರವಲ್ಲ, ಜೊತೆಗೆ ಕನ್ನಡ, ಮಲಯಾಳ, ತಮಿಳು, ತೆಲುಗು ಹಿಂದಿ ಚಿತ್ರರಂಗಗಳ ಜನಪ್ರಿಯ ನಟರಿಂದಲೂ ಮುಕ್ತಕಂಠದ ಮೆಚ್ಚುಗೆ.
ಇತ್ತೀಚೆಗೆ ಚಿತ್ರರಂಗದಲ್ಲಿ, ವಿಶೇಷವಾಗಿ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಪದ ʻಪ್ಯಾನ್‍ಇಂಡಿಯಾʼ ಚಿತ್ರಗಳು. ಎಂಬತ್ತರ ದಶಕದಲ್ಲಿ ರವಿಚಂದ್ರನ್‍ ಅವರು ನಿರ್ಮಿಸಿ, ನಿರ್ದೇಶಿಸಿದ್ದ ʻಶಾಂತಿಕ್ರಾಂತಿʼ ಪ್ಯಾನ್‍ಇಂಡಿಯಾ ಚಿತ್ರ; ಕನ್ನಡದಲ್ಲಿ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ನಟಿಸಿದರೆ, ತಮಿಳು, ತೆಲುಗಲ್ಲಿ ಅಲ್ಲಿನ ವರ್ಚಸ್ವೀ ನಟರು ನಟಿಸಿದ್ದರು. ಈಗ ಕನ್ನಡದಲ್ಲಿ ತಯಾರಾಗಿ ಇತರ ಭಾಷೆಗಳಿಗೆ ಡಬ್‍ ಆದ ಚಿತ್ರಗಳನ್ನು ʻಪ್ಯಾನ್‍ಇಂಡಿಯಾʼ ಎಂದು ಹೇಳುವ ಪರಿಪಾಠ ಆರಂಭವಾಗಿದೆ.
ʻಕಾಂತಾರʼ ಚಿತ್ರವನ್ನು ಮೊದಲು ಬಿಡುಗಡೆ ಮಾಡಿದ್ದು ಕನ್ನಡದಲ್ಲಿ. ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರಿಗೆ, ತಮ್ಮ ನೆಲದ ಚಿತ್ರವನ್ನು ತಮ್ಮ ನಾಡಿನ ಭಾಷೆಯಲ್ಲೇ ಪ್ರೇಕ್ಷಕ ನೋಡಬೇಕು, ಅದರ ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಕನ್ನಡೇತರರಿಗೂ ಆಗಬೇಕು ಎನ್ನುವ ಹಂಬಲ. ಅಂತೆಯೇ ವಿಶ್ವಾದ್ಯಂತ ಏಕಕಾಲದಲ್ಲಿ ʻಕಾಂತಾರʼ ತೆರೆಕಂಡಿತು.
ಸೆಪ್ಟೆಂಬರ್ 30ರಂದು ಚಿತ್ರ ತೆರೆಕಂಡ ದಿನದಿಂದ, ಈ ಕ್ಷಣದವರೆಗೂ ʻಕಾಂತಾರʼದ ಸೃಷ್ಟಿಸಿರುವ ಪ್ರಭಾವಲಯ, ಕನ್ನಡಚಿತ್ರರಂಗಕ್ಕೆ ತಂದ ಗೌರವ, ಹೊಂಬಾಳೆಗೆ ಸಿಗುತ್ತಿರುವ ಮನ್ನಣೆ ಊಹಾತೀತ.

ಇದರಲ್ಲಿ ದಕ್ಷಿಣಕನ್ನಡದಲ್ಲಿನ ದೈವಾರಾಧನೆ, ಆಚರಣೆಯ ಕುರಿತಂತೆ ಇದೆ. ಈ ಆರಾಧನೆ, ಆಚರಣೆಗಳು ಕೇವಲ ಇಲ್ಲಿಗೆ ಮಾತ್ರ ಸೀಮಿತವಲ್ಲ, ಭಾರತದ ಉದ್ದಗಲಕ್ಕೂ ಒಂದಲ್ಲಒಂದುರೀತಿಯಲ್ಲಿ ಇಂತಹ ನಂಬಿಕೆ, ಆಚರಣೆಗಳು ಇರುತ್ತವೆಯಾದ್ದರಿಂದ, ಇದುಇಲ್ಲಿಗಷ್ಟೇ ಸೀಮಿತವಾದ ವಸ್ತುವಲ್ಲ ಎನ್ನುವುದು ರಿಷಭ್‍ ಅಂಬೋಣ. ಅವರ ಹಿಂದಿನ ಚಿತ್ರವೂ ಅಷ್ಟೇ. ʻಕಾಸರಗೋಡು ಹಿರಿಯಪ್ರಾಥಮಿಕಶಾಲೆ, ಕೊಡುಗೆ:ರಾಮಣ್ಣರೈʼ ಚಿತ್ರದಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯದ ಕುರಿತಂತೆ ಹೇಳಿದ್ದರೂ, ಅದು ಕೇವಲ ಕನ್ನಡ ಭಾಷೆಯ ಸಮಸ್ಯೆಯಷ್ಟೇ ಅಲ್ಲ, ದೇಶಾದ್ಯಂತ ಭಾರತೀಯ ಭಾಷೆಗಳು ಎದುರಿಸುತ್ತಿರುವ ಸಮಸ್ಯೆಯನ್ನು ಪ್ರಾತಿನಿಧಿಕವಾಗಿ ಬಿಂಬಿಸಿತ್ತು.

ಎಲ್ಲ ದೇಶಗಳ, ಎಲ್ಲ ಭಾಷೆಗಳ ವಿಮರ್ಶಕರು ʻಕಾಂತಾರʼ ಚಿತ್ರದ ಕುರಿತಂತೆ ಏಕ ಪ್ರಕಾರದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯವಾಹಿನಿ ಚಿತ್ರಗಳ ಬಹುತೇಕ ಮಂದಿ ಈ ಚಿತ್ರದ ಬಗ್ಗೆ ಮಾತನಾಡುತ್ತಾ, ʻಈ ಚಿತ್ರದ ಕುರಿತಂತೆ ಹೇಳಲು ನಮ್ಮಲ್ಲಿ ಪದಗಳಿಲ್ಲʼ ಎಂದರು! ಹಿಂದಿ, ತಮಿಳು, ತೆಲುಗು ಚಿತ್ರಗಳ ಮಂದಿ ಕೆಲವರು, ʻಈ ಚಿತ್ರವನ್ನು ನೋಡಿ ನಮ್ಮವರು ಕಲಿಯಬೇಕುʼಎಂದು ಸಲಹೆ ನೀಡಿದ್ದೂ ಇದೆ.

ತಮ್ಮ ವ್ಯವಹಾರ ಜಾಲದ ಬೇಡಿಕೆಯ ಒತ್ತಡಕ್ಕೆ ಮಣಿದಿರುವ ಹೊಂಬಾಳೆ ಸಂಸ್ಥೆ ಇದೀಗ ʻಕಾಂತಾರʼ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ವಾರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳ ಆವೃತ್ತಿ ಬಿಡುಗಡೆಯಾದರೆ, ಮುಂದಿನ ವಾರ ಮಲಯಾಳ ಆವೃತ್ತಿ ತೆರೆಗೆ ಬರಲಿದೆ.
ಮುಂಬೈಯಲ್ಲಿ ಅದಾಗಲೇ ಕನ್ನಡ ಆವೃತ್ತಿಯ ಪ್ರದರ್ಶನ ಹತ್ತರಿಂದ ನೂರಇಪ್ಪತ್ತಕ್ಕೇರಿದೆ. ದಕ್ಷಿಣ ಭಾರತದ ಯಾವುದೇ ಭಾಷೆಯ ಚಿತ್ರ ಬಿಡುಗಡೆ ಮಾಡದ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಈ ಚಿತ್ರ ತೆರೆಕಂಡಿದೆ. ಎಲ್ಲೆಡೆಯಿಂದ ಮುಕ್ತಕಂಠದ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರದ ಹಿಂದಿ ಅವತರಣಿಕೆ ಸುಮಾರು 2500 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಆಗಲಿದೆ ಎನ್ನುವುದು ನಿರ್ಮಾಣ ವಲಯದಿಂದ ಬಂದಿರುವ ವರ್ತಮಾನ.
ಈ ವರ್ಷ ಸೌರಮಾನ ಯುಗಾದಿಯಂದು ತೆರೆಕಂಡ ಹೊಂಬಾಳೆಯ ʻಕೆಜಿಎಫ್‍ ಚಾಪ್ಟರ್ 2ʼ ಚಿತ್ರ ಬಾಕ್ಸಾಫೀಸು ಗಳಿಕೆಯಲ್ಲಿ ದಾಖಲೆ ನಿರ್ಮಿಸಿತ್ತು. ಇಡೀ ದೇಶದಲ್ಲೇ ಅತ್ಯಧಿಕ ಗಳಿಕೆಯ ಎರಡನೇ ಚಿತ್ರ ಎನ್ನುವ ದಾಖಲೆಯನ್ನು ಬರೆದಿತ್ತು. ಹಿಂದಿ ಅವತರಣಿಕೆಯ ಗಳಿಕೆ, ಅಲ್ಲಿನ ಉದ್ಯಮಿಗಳನ್ನು ಕಂಗೆಡಿಸಿತ್ತು ಎನ್ನುವ ವರದಿಗಳಿದ್ದವು. ಬಹುಭಾಷೆಗಳಲ್ಲಿ ತೆರೆಕಂಡ ʻಕೆಜಿಎಫ್‍ ಚಾಪ್ಟರ್ 2ʼ ಮತ್ತು ಕನ್ನಡದಲ್ಲಿ ಮಾತ್ರತೆರೆ ಕಂಡು, ನಂತರ ಬಹು ಜನರ ಬೇಡಿಕೆಯ ಕಾರಣ ಇತರ ಭಾಷೆ ಡಬ್ ಆಗಿ ತೆರೆಕಾಣುತ್ತಿರುವ ʻಕಾಂತಾರʼ, 2022ರಲ್ಲಿ ಹೊಸದಾಖಲೆಯನ್ನು ಬರೆಯುತ್ತಿದೆ.
2014ರಲ್ಲಿ ಬಿಡುಗಡೆಯಾದ ಪುನೀತ್‍ ಅಭಿನಯದ ʻನಿನ್ನಿಂದಲೇʼ ಚಿತ್ರದೊಂದಿಗೆ ಮೊದಲಹೆಜ್ಜೆ ಇಟ್ಟ ಹೊಂಬಾಳೆ ಸಂಸ್ಥೆ ನಿರ್ಮಿಸಿದ ಏಳು ಕನ್ನಡ ಚಿತ್ರಗಳು ತೆರೆಕಂಡಿವೆ. ಪುನೀತ್‍ ಅಭಿನಯದ ʻರಾಜಕುಮಾರʼ, ʻಯುವರತ್ನʼ, ಯಶ್‍ ಅಭಿನಯದʻ ಮಾಸ್ಟರ್ ಪೀಸ್ʼ, ʻಕೆಜಿಎಫ್ʼ ಮತ್ತು ʻಕೆಜಿಎಫ್‍ ಚಾಪ್ಟರ್ 2ʼ ಹಾಗೂ ರಿಷಭ್‍ಶೆಟ್ಟಿ ಅವರ ʻಕಾಂತಾರʼ ಈ ಚಿತ್ರಗಳು.
ಸಂತೋಷ್ ಆನಂದರಾಮ್ ನಿರ್ದೇಶನದ, ಜಗ್ಗೇಶ್ ಮುಖ್ಯ ಭೂಮಿಕೆಯ ʻರಾಘವೇಂದ್ರ ಸ್ಟೋರ್ಸ್ʼ ತೆರೆಗೆ ಸಿದ್ಧವಾಗಿದೆ. ಕೆಜಿಎಫ್‍ನ ಪ್ರಶಾಂತ್‍ನೀಲ್‍ ರಚನೆ, ಡಾ.ಸೂರಿ ನಿರ್ದೇಶನದಲ್ಲಿ ಶ್ರೀಮುರಳಿ ಮುಖ್ಯಪಾತ್ರದ ʻಬಘೀರʼ ಚಿತ್ರೀಕರಣದಲ್ಲಿದೆ. ಕನ್ನಡ ಮಾತ್ರವಲ್ಲದೆ, ಇತರ ಭಾರತೀಯ ಭಾಷೆಗಳಲ್ಲೂ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಹೊಂಬಾಳೆಯ ತೆಲುಗು ಚಿತ್ರ ʻಸಾಲಾರ್ʼ ಸಿದ್ಧವಾಗುತ್ತಿದೆ.
ಕಳೆದ ವಾರ ಮಲಯಾಳ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾನವಾಗಲಿರುವ ʻರೋಮಂʼಚಿತ್ರ ಬೆಂಗಳೂರಿನಲ್ಲಿ ಸೆಟ್ಟೇರಿದೆ. ʻಲೂಸಿಯಾʼಮೂಲಕ ಗಮನ ಸೆಳೆದ ಪವನ್‍ಕುಮಾರ್ ಈ ಚಿತ್ರವನ್ನುನಿರ್ದೇಶಿಸುತ್ತಿದ್ದು, ಮಲಯಾಳದ ನಟ ಫಹಾದ್‍ ಫಾಸಿಲ್‍ ಮತ್ತು ʻಸೂರರೈಪೆಟ್ರುʼ ಖ್ಯಾತಿಯ ಅಪರ್ಣ ಬಾಲಮುರಳಿ ಪ್ರಮುಖ ಪಾತ್ರಧಾರಿಗಳು.
ಪ್ರತಿಭಾವಂತ ನಿರ್ದೇಶಕರಿಗೆ ಮುಕ್ತ ಆಹ್ವಾನವಿರುವ ಹೊಂಬಾಳೆ ಸಂಸ್ಥೆ ಕನ್ನಡ ಚಿತ್ರರಂಗದ ಮುಖ್ಯವಾಹಿನಿಯ ಪಥವನ್ನು ಬದಲಿಸುವತ್ತ ಹೆಜ್ಜೆ ಹಾಕುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿಯವರ ಪರಂವಃ ದಂತಹ ಸಂಸ್ಥೆಯೂ.ಇದು ಕೂಡಾ ನವಪ್ರತಿಭೆಗಳಿಗೆ ಆಸರೆಯಾಗುತ್ತಿದೆ. ಚಂದನವನ ಘಮ್ಮೆನ್ನತೊಡಗಿದೆ. ಕಸ್ತೂರಿ ಕನ್ನಡದ ಪರಿಮಳವೂ!

andolanait

Recent Posts

ಮಂಡ್ಯ ನೆಲದಲ್ಲಿ ಕನ್ನಡ ಕಹಳೆ

ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…

4 mins ago

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

10 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago