ಎಡಿಟೋರಿಯಲ್

ವೈಡ್ ಆಂಗಲ್ : 2022: ಕೊರೊನಾದ ನಂತರ ಕನ್ನಡ ಚಿತ್ರರಂಗ ಕಂಡ ‘ಕಾಂತಾರ

‘ಕಾಂತಾರ’ ಎಂದರೆ, ಕಾಡು, ನಿಗೂಢ ಕಾಡು ಎಂದರ್ಥ. ದುರ್ಗಮ ಹಾದಿ, ಒಂದು ರೀತಿಯ ಕಬ್ಬು ಎಂದೂ ಕಿಟೆಲ್ ಸೇರಿಸಿದ್ದಾರೆ. ಕೊರೊನಾ ಕೂಡ ಒಂದು ರೀತಿಯಲ್ಲಿ ಕಾಂತಾರದಂತೆಯೇ ಎನ್ನಿ. ಚಿತ್ರೋದ್ಯಮದ ಕುರಿತು ಇದನ್ನು ಹೇಳುವುದಾದರೆ, ಇದು ಕೆಲವರಿಗೆ ದುರ್ಗಮ ಹಾದಿಯಾದರೆ, ಇನ್ನು ಕೆಲವರಿಗೆ ಅದು ಕಬ್ಬೂ ಆಗಬಹುದು. ಅದು ಅವರವರು ಅದನ್ನು ನೋಡುವ, ತೊಡಗಿಸಿಕೊಳ್ಳುವ ರೀತಿಗೆ ಅನುಗುಣವಾಗಿರುತ್ತದೆ.

೨೦೨೨, ಕನ್ನಡ ಚಿತ್ರೋದ್ಯಮದ ಪಾಲಿಗೆ ಒಂದು ರೀತಿಯಲ್ಲಿ ಹರ್ಷ ತಂದ ವರ್ಷ. ಭಾರತದಲ್ಲಿ ತಯಾರಾದ ವರ್ಷದ ಮೊದಲ ಅತ್ಯುತ್ತಮ ಜನಪ್ರಿಯ ಚಿತ್ರಗಳಲ್ಲಿ ಮೂರು ಕನ್ನಡದವು. ‘ಕಾಂತಾರ’, ‘ಕೆಜಿಎಫ್ ಚಾಪ್ಟರ್ ೨’ ಮತ್ತು ೭೭೭ ಚಾರ್ಲಿ’ ಈ ಮೂರೂ ಚಿತ್ರಗಳು. ಮೊದಲ ಬಾರಿಗೆ ಹಿಂದಿ ಚಿತ್ರರಂಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿ ಬಂದ ಬೆಳವಣಿಗೆ ಇದು. ಮೊದಲ ಹತ್ತು ಚಿತ್ರಗಳಲ್ಲಿ ಒಂದೇ ಒಂದು ಹಿಂದಿ ಚಿತ್ರವಿದ್ದು, ಉಳಿದ ಒಂಬತ್ತು ಚಿತ್ರಗಳೂ ದಕ್ಷಿಣದವು!

ಹೊಂಬಾಳೆ ಸಂಸ್ಥೆ ನಿರ್ಮಿಸಿದ ಎರಡು ಚಿತ್ರಗಳಲ್ಲಿ ಪ್ರಶಾಂತ್ ನೀಲ್ ನಿರ್ದೇಶಿಸಿದ ‘ಕೆಜಿಎಫ್ ಚಾಪ್ಟರ್ ೨’ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ತೆರೆಕಂಡಿತು. ಏಪ್ರಿಲ್ ತಿಂಗಳಲ್ಲಿ ತೆರೆಕಂಡ ಆ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆ ಭಾರತೀಯ ಚಲನ ಚಿತ್ರೋದ್ಯಮ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿಸಿತ್ತು. ಪರಭಾಷೆಯ ಚಿತ್ರ ವೊಂದು ತಮ್ಮ ಭಾಷೆಗೆ ಡಬ್ ಆಗಿ, ಮೂಲಚಿತ್ರಗಳಿಗಿಂತಲೂ ಹೆಚ್ಚು ಗಳಿಸುವುದನ್ನು ಅವರು ನಿರೀಕ್ಷಿಸಿರಲಿಲ್ಲ. ಭಾರತೀಯ ಭಾಷಾ ಚಿತ್ರಗಳಲ್ಲೆಲ್ಲ, ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆಯಿತದು. ಸುಮಾರು ೧,೨೦೦ ಕೋಟಿ ರೂ.ಗಳಿಗೂ ಮಿಗಿಲಾದ ಗಳಿಕೆಯ ಚಿತ್ರ ‘ಕೆಜಿಎಫ್ ಚಾಪ್ಟರ್ ೨’.

ಚಿತ್ರದ ತಾಂತ್ರಿಕತೆ, ಆಧುನಿಕ ತಂತ್ರಜ್ಞಾನದ ಬಳಕೆಯೇ ಮೊದಲಾಗಿ ಹಾಲಿವುಡ್ ಚಿತ್ರಗಳಿಗೆ ಇದನ್ನು ಹೋಲಿಸಲಾಯಿತು. ಆದರೆ, ಚಿತ್ರದ ಕಥಾವಸ್ತುವಿನ ಕುರಿತಂತೆ ಭಿನ್ನಾಭಿಪ್ರಾಯಗಳಿದ್ದವು. ಕೆಜಿಎಫ್‌ನ ಮೊದಲ ಭಾಗದಲ್ಲೇ ಪರಿಚಯವಾಗಿದ್ದ ಮುಖ್ಯಪಾತ್ರಧಾರಿ ಯಶ್, ಈ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದರು. ಚಿತ್ರದ ನಿರ್ಮಾಣ ವೆಚ್ಚದಂತೆ, ಪ್ರಚಾರಕ್ಕೂ ಈ ಚಿತ್ರಕ್ಕೆ ವೆಚ್ಚ ಮಾಡಲಾಗಿತ್ತು. ಇಂದಿನ ಡಿಜಿಟಲ್ ಯುಗದಲ್ಲಿ ಪ್ರಚಾರ ಪಡೆಯುವುದು ಇಲ್ಲವೇ ಬ್ರಾಂಡ್ ಆಗುವುದನ್ನು ಸಮರ್ಥವಾಗಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಯಿತು.

ಈ ಸಂಸ್ಥೆಯದೇ ಇನ್ನೊಂದು ಚಿತ್ರ ‘ಕಾಂತಾರ’.ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರು ತಮ್ಮೂರಲ್ಲೇ ಸೆಟ್ ಹಾಕಿ ತಯಾರಿಸಿದ ಈ ಚಿತ್ರ ಅಷ್ಟೇನೂ ಪ್ರಚಾರದಲ್ಲಿರಲಿಲ್ಲ. ಇತರ ಭಾಷೆಗಳಲ್ಲಿ ಡಬ್ ಮಾಡುವ ಯೋಚನೆಯೂ ಇರಲಿಲ್ಲ. ಕನ್ನಡ ಚಿತ್ರವೊಂದು ಕನ್ನಡದಲ್ಲಿಯೇ ಪರಭಾಷೆಯ ಪ್ರೇಕ್ಷಕರನ್ನು ತಲುಪಬೇಕು, ನಮ್ಮ ಸಿನಿಮಾದಂತೆಯೇ ನಮ್ಮ ಭಾಷೆಯನ್ನೂ ಅವರು ತಿಳಿಯುವಂತಾಗಬೇಕು ಎನ್ನುವುದಾಗಿ ರಿಷಭ್ ಶೆಟ್ಟಿ ಮೊದಲಿನಿಂದಲೂ ಹೇಳುತ್ತಿದ್ದರು. ಹೊಂಬಾಳೆಯೂ ಅವರಿಗೆ ಒತ್ತಾಸೆಯಾಯಿತು. ವಿಶ್ವದಾದ್ಯಂತ ಆ ಚಿತ್ರ ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ಮಾತ್ರ ತೆರೆಗೆ ಬಂತು. ಎಲ್ಲೆಡೆ ಮುಕ್ತಕಂಠದ ಸ್ವಾಗತ, ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಿದ ವರ್ಷಗಳ ಕಾಲ ಚಿತ್ರಮಂದಿರಗಳತ್ತ ಹೆಜ್ಜೆ ಇಡದವರನ್ನೂ ಆಕರ್ಷಿಸಿದ ಚಿತ್ರ ‘ಕಾಂತಾರ’. ಅದರ ಗೆಲುವು, ಗಳಿಕೆ, ಜನಪ್ರಿಯತೆ ಪವಾಡಸದೃಶ ಬೆಳವಣಿಗೆ.

ಮನರಂಜನೋದ್ಯಮದ ರೀತಿಯೇ ಹಾಗೆ. ಅದನ್ನು ತಮ್ಮ ಭಾಷೆಗಳಿಗೆ ಡಬ್ ಮಾಡಿ, ಬಿಡುಗಡೆ ಮಾಡಲು, ಉದ್ಯಮಿಗಳು ಮುಂದಾದರು. ವಾರದ ಒಳಗೆ ಎಲ್ಲವೂ ಆಯಿತು. ಮಲಯಾಳಂ, ತಮಿಳು, ತೆಲುಗು, ಹಿಂದಿ ಮಾತ್ರವಲ್ಲ, ಕೊನೆಗೆ ತುಳುವಿಗೂ ಡಬ್ ಆಗಿ ಪ್ರದರ್ಶನ ಕಂಡಿತು.

ಮೂಲ ಚಿತ್ರಗಳಿಗಿಂತ ಡಬ್ ಆಗಿ ಬಂದ ಚಿತ್ರಗಳ ಗಳಿಕೆ ತೆಲುಗು ಮತ್ತು ಹಿಂದಿ ಚಿತ್ರರಂಗದ ಮಂದಿಯ ನಿದ್ದೆಗೆಡಿಸಿತ್ತು. ಇದನ್ನು ತಡೆಯಲು ಏನು ಮಾಡಬಹುದು ಎನ್ನುವ ಕುರಿತಂತೆ ಹಿಂದಿ ಚಿತ್ರೋದ್ಯಮದ ಘಟಾನುಘಟಿ ಮಂದಿ ಒಟ್ಟಾಗಿ ಸೇರಿ ಚರ್ಚಿಸಿದ್ದಿದೆ. ತೆಲುಗು ಚಿತ್ರ ನಿರ್ಮಾಪಕರ ಸಂಘಟನೆಯೊಂದು ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬಗಳ ವೇಳೆ ಮೂಲ ಚಿತ್ರಗಳಿಗೆ ಮಾತ್ರ ಚಿತ್ರಮಂದಿರಗಳನ್ನು ನೀಡಬೇಕು, ಉಳಿದರೆ ಡಬ್ ಆದ ಚಿತ್ರಗಳಿಗೆ ನೀಡಬಹುದು ಎನ್ನುವ ತನ್ನ ನಿರ್ಧಾರವನ್ನು ಪ್ರದರ್ಶಕರಿಗೆ ರವಾನಿಸಿದೆ. ದಶಕಗಳ ಕಾಲ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರುದ್ಧ ಏಕೆ ನಿಂತಿತ್ತು ಎನ್ನುವುದು ಅವರಿಗೆ ಈಗ ಅರಿವಾಗತೊಡಗಿದೆ.

ಕನ್ನಡದಲ್ಲಿ ೨೧೦ಕ್ಕೂ ಹೆಚ್ಚು ಚಿತ್ರಗಳು ಈ ವರ್ಷ ತೆರೆಕಂಡವು. ಅವುಗಳಲ್ಲಿ ಭಾರೀ ಸುದ್ದಿ ಮಾಡಿದ, ಪ್ರಚಾರ ಮಾಡಿದ ಕೈಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿದರೆ, ಗಳಿಕೆಯಲ್ಲಿ ಸೋತವುಗಳೇ ಹೆಚ್ಚು. ಬಹುತೇಕ ಸಂದರ್ಭಗಳಲ್ಲಿ ಚಿತ್ರಗಳ ಗುಣಮಟ್ಟಕ್ಕಿಂತ, ಪ್ರಚಾರದ ಮಟ್ಟದ ಮೂಲಕ ಗೆಲ್ಲಲು ಹೊರಟ ಚಿತ್ರಗಳೇ ಹೆಚ್ಚು. ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಪ್ರಚಾರ ವೆಚ್ಚ ಸಾಧಾರಣ ಚಿತ್ರವೊಂದರ ನಿರ್ಮಾಣ ವೆಚ್ಚದಷ್ಟಾಗುತ್ತದೆ.

ಕೊರೊನಾ ಪೂರ್ವದಲ್ಲಿ ತಯಾರಾಗಿದ್ದ, ಸೆಟ್ಟೇರಿ ನಂತರ ಪೂರ್ಣಗೊಂಡ ಚಿತ್ರಗಳು ಕೊರೊನಾ ನಂತರ ತೆರೆಕಂಡವು. ಚಿತ್ರಗಳ ಬಿಡುಗಡೆಗೆ ನಿಯಂತ್ರಣವಾಗಲೀ, ಶಿಸ್ತಾಗಲೀ ಇದ್ದಂತಿಲ್ಲ. ವಾರದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳು ತೆರೆಕಂಡ ಉದಾಹರಣೆಯೂ ಇದೆ. ಕಳೆದ ವಾರ ತೆರೆಕಂಡ ಚಿತ್ರವೊಂದು, ಎರಡನೇ ದಿನವೇ ಅಲ್ಲಿಂದ ಎತ್ತಂಗಡಿಯಾಗಿತ್ತು. ‘ಇದೇನೂ ಹೊಸದಲ್ಲ, ಪ್ರೇಕ್ಷಕರು ಬಾರದೆ ಇದ್ದರೆ, ಅವರು ಬೇರೆ ಚಿತ್ರಗಳನ್ನು ಪ್ರದರ್ಶಿಸುತ್ತಾರೆ’ ಎನ್ನುತ್ತಾರೆ ಹಿರಿಯ ವಿತರಕರೊಬ್ಬರು.

ಸುದೀಪ್ ಅಭಿಯದ ‘ವಿಕ್ರಾಂತ್ ರೋಣ’ ನಿರೀಕ್ಷೆಯ ಗೆಲುವನ್ನು ಕಾಣಲಿಲ್ಲ. ಪುನೀತ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ಗೆ ಶಿವರಾಜಕುಮಾರ್ ದನಿ ನೀಡಿ, ಅದನ್ನು ಬಿಡುಗಡೆ ಮಾಡಲಾಯಿತು. ನಂತರ ಹೊಸ ತಂತ್ರಜ್ಞಾನ ಬಳಸಿ, ಅವರದ್ದೇ ದನಿಯನ್ನು ಅಳವಡಿಸಿ ಬಿಡುಗಡೆ ಮಾಡುವ ಪ್ರಯತ್ನವೂ ಆಯಿತು. ಪುನೀತ್ ನಿಧನಾನಂತರ ಅವರ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಅಶ್ವಿನಿ ಪುನೀತ್‌ರಾಜಕುಮಾರ್ ‘ಗಂಧದ ಗುಡಿ’ ಚಿತ್ರವನ್ನು ಬಿಡುಗಡೆ ಮಾಡಿದರು.

ಈ ಬಾರಿಯ ವಿಶೇಷವೆಂದರೆ ಹೊಸಬರ ಆಗಮನ. ನಿರ್ದೇಶಕರಾಗಿ, ತಂತ್ರಜ್ಞರಾಗಿ, ನಟನಟಿಯರಾಗಿ ಹೊಸ ಪ್ರತಿಭಾವಂತರು ಬರುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕಿಂತ ಅದರ ಬಿಡುಗಡೆ, ಬಿಡುಗಡೆ ಪೂರ್ವ ಪ್ರಚಾರವೇ ಸಾಕಷ್ಟು ಮಂದಿಗೆ ಕೈಗೆಟುಕದ ಹಣ್ಣು. ಚಿತ್ರಮಂದಿರಗಳ ಬಾಡಿಗೆಗಳೂ ದುಬಾರಿ. ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ವಾರ ಗಳಿಕೆಯಲ್ಲಿ ೫೦:೫೦ ಪ್ರದರ್ಶಕರು ಮತ್ತು ನಿರ್ಮಾಪಕರು ಹಂಚಿಕೊಂಡರೆ, ಮುಂದಿನ ವಾರಗಳಲ್ಲಿ ಕ್ರಮವಾಗಿ ೫೫:೪೫, ೬೦:೪೦. ೬೫:೩೫, ೭೦:೩೦ ಹೀಗೆ ಹಂಚಲಾಗುತ್ತದೆ. ಚಿತ್ರವೊಂದು ಶತದಿನ ಕಂಡರೆ, ಹದಿನೈದು ವಾರಗಳ ಪ್ರದರ್ಶನ ಕಂಡರೆ ಹೆಚ್ಚು ಪಾಲು ಸಿಗುವುದು ಪ್ರದರ್ಶಕರಿಗೆ. ಇವುಗಳನ್ನು ನಿಯಂತ್ರಿಸಲು, ಉದ್ಯಮದ ಪ್ರಾತಿನಿಽಕ ಸಂಸ್ಥೆಗಳು ಮುಂದಾಗಬೇಕು. ಎಲ್ಲ ಸಂಘಟನೆಗಳಿಗೂ ಚುನಾವಣೆ ನಡೆದು ಹೊಸ ಪದಾಧಿಕಾರಿಗಳು ಬಂದರೂ, ಈ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ಆಗಿಲ್ಲ.

ನಿರೀಕ್ಷೆಯ ಮಟ್ಟದ ಗೆಲುವು ಕಾಣದೇ ಇದ್ದರೂ, ಸಾಧಕರೊಬ್ಬರ ಜೀವನಚರಿತ್ರೆ ಎನ್ನುವ ಕಾರಣಕ್ಕೆ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಯಾನದ ಕಥಾನಕ ‘ವಿಜಯಾನಂದ’ ಗಮನಾರ್ಹ. ಹೊಸಬರ ಹಲವು ಒಳ್ಳೆಯ ಚಿತ್ರಗಳು ಗೆಲುವಿನ ಅವರ ನಿರೀಕ್ಷೆಯನ್ನು ಹುಸಿ ಮಾಡಿದವು.

ಕೊರೊನಾ ದಿನಗಳಲ್ಲಿ ಚಲನಚಿತ್ರ ಪ್ರದರ್ಶನಗಳಿಗೆ ಅವಕಾಶ ಇರಲಿಲ್ಲ. ಒಟಿಟಿ ತಾಣಗಳ ಮೂಲಕ ಮನೆಯಲ್ಲೇ ಕುಳಿತು ದೇಶವಿದೇಶಗಳ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಎಲ್ಲರಿಗೂ ಇತ್ತು. ಭಾರತದ ಇತರ ಭಾಷೆಗಳ, ವಿಶೇಷವಾಗಿ ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗದೆ ಉಳಿದ ಮಲಯಾಳಂ ಚಿತ್ರಗಳು, ಕೊರಿಯನ್ ಚಿತ್ರಗಳು, ಕನ್ನಡ ಸಿನಿಮಾಪ್ರೇಮಿಗಳ ಪಾಲಿಗೆ ಹೊಸ ನೋಟವನ್ನು ಕೊಟ್ಟಿತ್ತು. ಚಿತ್ರ ನಿರ್ಮಾತೃಗಳಿಗೂ ಸಮಕಾಲೀನ ಚಿತ್ರರಂಗದ ಆಗುಹೋಗುಗಳನ್ನು ತಿಳಿದುಕೊಂಡು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲು ಅವರಿಗೆ ಕೊರೊನಾ ‘ಊರ್ವಶಿ ಶಾಪ ವರ’ವಾದಂತಾಗಿತ್ತು!

ಒಟಿಟಿಗಳು ಪ್ರೇಕ್ಷಕರ ಸಿನಿಮಾ ಜ್ಞಾನವನ್ನೂ ವಿಸ್ತರಿಸಿದೆ. ಹಾಗಾಗಿಯೇ, ‘ಸಂತೆಗೆ ಮೂರು ಮೊಳ’ ನೇಯುವ ರೀತಿಯ ಚಿತ್ರಗಳನ್ನು ನಿರಾಕರಿಸುತ್ತಾರೆ.

೨೦೨೩ರಲ್ಲಿ ಸದಭಿರುಚಿಯ, ಸಮಾಜಮುಖಿ ಚಿತ್ರಗಳು ಹೆಚ್ಚು ಹೆಚ್ಚು ಬರಲಿ, ಉದ್ಯಮದ, ಸಮಾಜದ ಆರೋಗ್ಯವನ್ನು ಉಳಿಸುವಂತಾಗಲಿ, ಗೆಲುವು ಇನ್ನಷ್ಟು ಇರಲಿ ಎನ್ನುತ್ತಾ 2022ಕ್ಕೆ ವಿದಾಯ ಹೇಳೋಣ.

andolanait

Recent Posts

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

4 mins ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

14 mins ago

ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್‌…

31 mins ago

ಶಿವರಾಜಕುಮಾರ್ ಚಿತ್ರಕ್ಕೆ ತಮಿಳು ನಿರ್ದೇಶಕ; ಮುಂದಿನ ವರ್ಷ ‘#MB’ ಪ್ರಾರಂಭ

ಶಿವರಾಜಕುಮಾರ್‍ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…

34 mins ago

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು…

37 mins ago

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

53 mins ago