ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ವರ್ಷ. ಹಲವು ವಿವಾದಗಳು, ಹಗರಣಗಳು, ಏಳು-ಬೀಳುಗಳ ನಡುವೆ ಸುಭದ್ರ ಸರ್ಕಾರ ಮುನ್ನಡೆಸುತ್ತಿದ್ದಾರೆ. ಅವರ ಸ್ಥಾನವಂತೂ ಭದ್ರವಾಗಿದೆ. ಮುಖ್ಯಮಂತ್ರಿಗಳ ವರ್ಷದ ಸಾಧನೆ ಮತ್ತು ವೈಫಲ್ಯಗಳೇನು? ಪ್ರಮುಖರಿಬ್ಬರ ಭಿನ್ನ ಅನಿಸಿಕೆಗಳು ಇಲ್ಲಿವೆ.
ನೋಟ
-ಎಂ.ಜಿ.ಮಹೇಶ್,ಮುಖ್ಯ ವಕ್ತಾರರು,ರಾಜ್ಯ ಬಿಜೆಪಿ
ಮತಾಂತರ ನಿಷೇಧ ಕಾಯ್ದೆ, ನೂತನ ಶಿಕ್ಷಣ ನೀತಿ ಜಾರಿಯ ಹೆಗ್ಗಳಿಕೆ
ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಂದು ವರ್ಷ ಸೇರಿ ಒಟ್ಟು ಮೂರು ವರ್ಷಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ದೊಡ್ಡದಾದ ಸಮರ್ಥ ಆಡಳಿತವನ್ನು ಕೊಡುವ ಕೆಲಸ ಮಾಡಿದ್ದಾರೆ. ಅದರಲ್ಲೂ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಎಂಬಂತೆ ತಾವು ಅಧಿಕಾರ ವಹಿಸಿಕೊಂಡ ತಕ್ಷಣ ಅನೇಕ ಸುಧಾರಣೆಗಳನ್ನು ಆರಂಭಿಸಿದರು. ಪೈಲಟ್ ವಾಹನ ರದ್ದು ಸೇರಿ ಸಾಮಾನ್ಯ ವ್ಯಕ್ತಿ ಆಗಿ ಅವರು ಜನರಿಗೆ ಸ್ಪಂದಿಸಿದರು. ಭಾರತದ ಭೌಗೋಳಿಕ ಮತ್ತು ಸಂಸ್ಕೃತಿ ಹಾಗೆಯೇ ಉಳಿಯುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಿದ್ದು, ಇದೊಂದು ದಿಟ್ಟತನದ ನಿರ್ಧಾರವಾಗಿದೆ. ಕೋವಿಡ್ ಸಂದರ್ಭದಲ್ಲಿ ಯಶಸ್ವಿಯಾಗಿ ನಿರ್ವಹಿಸಿದರು. ವಿರೋಧಿಗಳ ಪ್ರಚೋದನೆಯ ನಡುವೆಯೂ ಅವರು ಸಂಯಮ ಕಳೆದುಕೊಳ್ಳಲಿಲ್ಲ.
ಮೇಕೆದಾಟು ವಿಚಾರದಲ್ಲೂ ತಾಳ್ಮೆಯ ಮೂರ್ತಿ ರೂಪದಲ್ಲಿ ಭಾಷೆ ಬಳಸಿದ್ದಲ್ಲದೆ, ವಿರೋಧ ಪಕ್ಷಗಳ ಪ್ರತಿಭಟನೆ, ಆಂದೋಲನವನ್ನು ನಿಭಾಯಿಸಿದರು. ವಿರೋಧಿಗಳ ಪ್ರಚೋದನೆ ಇದ್ದರೂ ಪ್ರಚೋದನಕಾರಿ ರೂಪದಲ್ಲಿ ವರ್ತಿಸದೆ ಸಂಯಮದಿಂದ ವರ್ತಿಸಿ ಮಾದರಿ ನಾಯಕನಾಗಿ ಬೊಮ್ಮಾಯಿ ಹೊರಹೊಮ್ಮಿದರು.
ಒಂದು ವರ್ಷದ ಒಳಗೆ ಬಜೆಟ್ ಅನುಷ್ಠಾನಕ್ಕೆ ತರಲು ದೊಡ್ಡದಾದ ಉಪಕ್ರಮಗಳನ್ನು ಕೈಗೊಂಡರು. ಬಜೆಟ್‌ನಲ್ಲಿ ತಿಳಿಸಿದ ಶೇ. ೬೮ ಕಾಮಗಾರಿಗಳನ್ನು ಈ ಕ್ಯಾಲೆಂಡರ್ ವರ್ಷದಲ್ಲೇ ಮಾಡಲು ಸೂಚನೆ ಕೊಟ್ಟು ಅನುಷ್ಠಾನದತ್ತ ರಾಜ್ಯ ಮುನ್ನಡೆದಿದೆ.
ಯಡಿಯೂರಪ್ಪ ಕಿಸಾನ್ ಸಮ್ಮಾನ್ ನಿಧಿಗೆ ಹೆಚ್ಚುವರಿ ಮೊತ್ತ ನೀಡಿದ್ದರು. ಅದರ ಜೊತೆಗೇ ಬೊಮ್ಮಾಯಿಯವರು ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಜೋಡಿಸಿದರು. ಬಳಿಕ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಕೊಡುವ ಬೆಳೆ ಪರಿಹಾರಧನವನ್ನು ಬಹುತೇಕ ದ್ವಿಗುಣಗೊಳಿಸಿದರು. ರಾಜ್ಯದಲ್ಲಿ ಕೃಷಿ ಸಂಬಂಧ ಆಮೂಲಾಗ್ರ ಅಧ್ಯಯನದ ಬಳಿಕ ಸುಧಾರಣೆಗಳನ್ನು ತಂದರು. ಅವರ ಪ್ರಯತ್ನದ ಫಲವಾಗಿ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು ಒಂದೊಂದಾಗಿ ಬಂದವು. ದೆಹಲಿಯಲ್ಲೂ ರಚನಾತ್ಮಕ ಚರ್ಚೆ ಮಾಡಿ ಕರ್ನಾಟಕಕ್ಕೆ ಲಾಭ ಆಗುವಂತೆ ಪ್ರಯತ್ನ ಮಾಡಿದರು.
ಕನ್ನಡಿಗರ ಪರ ಉದ್ಯೋಗ ನೀತಿ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ.
ನೂತನ ಶಿಕ್ಷಣ ನೀತಿಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿದ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಅದನ್ನು ಸರಿದೂಗಿಸಿಕೊಂಡು ಬರಲಾಗಿದೆ. ಕರ್ನಾಟಕ ಎಂದರೆ ಮೌಲ್ಯಯುತ ಶಿಕ್ಷಣ ಮತ್ತು ಸಾಧನೆಗೆ ಪ್ರಮುಖ ಸ್ಥಾನ ಎಂಬಂತೆ ಬಿಂಬಿತವಾಗಿದೆ. ಕರ್ನಾಟಕದ ಆಡಳಿತವನ್ನು ನೀತಿ ಆೋಂಗವು ನಾವೀನ್ಯತೆ ಉಳ್ಳ (ಇನೊವೇಟಿವ್) ಯೋಜನೆ ಮತ್ತು ಅನುಷ್ಠಾನದ್ದು ಎಂದು ಮೆಚ್ಚುಗೆ ಸೂಚಿಸಿದೆ. ಇವೆಲ್ಲ ನಿಟ್ಟಿನಲ್ಲಿ ಕರ್ನಾಟಕವು ಮಾದರಿ ಸ್ಥಾನ ಪಡೆಯುವಂತಾಗಿದೆ.
ಇದರಿಂದಾಗಿ ಕರ್ನಾಟಕಕ್ಕೆ ಸಹಸ್ರಾರು ಕೋಟಿ ಅನುದಾನ ಲಭಿಸಿತು.
ಕರ್ನಾಟಕವು ಇಡೀ ದೇಶದಲ್ಲೇ ಅತ್ಯಂತ ಪ್ರಗತಿಪಥದ ರಾಜ್ಯವಾಗಿ ಹೊರಹೊಮ್ಮಲು ಕಾರಣವಾಗಿದೆ. ಕರ್ನಾಟಕದಲ್ಲಿ ಸಾವಿರಾರು ನವೋದ್ಯಮಗಳು ಬಂದಿವೆ. ಅದರಲ್ಲಿ ಕರ್ನಾಟಕದ ಯುವಕರ ಪಾತ್ರ ದೊಡ್ಡದಿದೆ. ನರೇಂದ್ರ ಮೋದಿ ೫ ಟ್ರಿಲಿಯನ್ ಎಕಾನಮಿಗೆ ರಾಜ್ಯದ ಕೊಡುಗೆಯ ರೋಡ್ ಮ್ಯಾಪನ್ನೂ ಕೂಡ ಹಾಕಿಟ್ಟುಕೊಳ್ಳಲಾಗಿದೆ. ಭಾರತದ ೫ ಟ್ರಿಲಿಯನ್ ಇಕಾನಮಿಯಲ್ಲಿ ಕರ್ನಾಟಕದ ಕೊಡುಗೆಯು ಒಂದೂವರೆಯಿಂದ ಎರಡು ಟ್ರಿಲಿಯನ್ ನಷ್ಟಿದ್ದರೆ ಕರ್ನಾಟಕದ ಶ್ರೇಷ್ಠತೆ ಯಾವ ಮಟ್ಟದಲ್ಲಿರುತ್ತದೆ ಅಲ್ಲವೇ? ಆ ಶ್ರೇಷ್ಠತೆಗೆ ನಾವೆಲ್ಲರೂ ಆಶಿಸಿ ಜೊತೆಗೂಡೋಣ.
===-
ಪ್ರತಿ ನೋಟ
-ಎಂ.ಲಕ್ಷ್ಮಣ್, ವಕ್ತಾರರು, ಕೆಪಿಸಿಸಿ
ಹಗರಣ,ಆಡಳಿತ ವೈಫಲ್ಯವೇ ಒಂದು ವರ್ಷದ ಬಿಜೆಪಿ ಸಾಧನೆ
ಕೇಂದ್ರಸರ್ಕಾರದಿಂದ ಬರಬೇಕಿರುವ ಸುಮಾರು ೮,೦೦೦ ಕೋಟಿ ರೂಪಾಯಿ ಬಾಕಿ ಹಣವನ್ನು ರಾಜ್ಯಕ್ಕೆ ತರುವಲ್ಲಿ ಮುಖ್ಯಮಂತ್ರಿಗಳು ವಿಫಲವಾಗಿದ್ದಾರೆ. ಕಾಮಗಾರಿಗಳಲ್ಲಿ ಶೇ.೪೦ ರಷ್ಟು ಲಂಚ ಪಡೆಯುತ್ತಿರುವ ಸಚಿವರು, ಬಿಜೆಪಿ ಮುಖಂಡರಿಂದಾಗಿ ಅವರವರ ಮನೆ ಉದ್ಧಾರವಾಗಿದೆ ಹೊರತು ಜನಸಾಮಾನ್ಯರ ಉದ್ಧಾರವಾಗಿಲ್ಲ. ಪಿಎಸ್‌ಐ ನೇಮಕಾತಿ ಹಗರಣ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಪ್ರತಿ ಅಭ್ಯರ್ಥಿಯಿಂದ ೪೦ ಲಕ್ಷದಿಂದ ೧.೫ ಕೋಟಿಯವರೆಗೂ ಲಂಚ ಪಡೆದಿರುವುದು, ದೇಶದ ಇತಿಹಾಸದಲ್ಲಿ ರಾಜ್ಯ ಎಡಿಜಿಪಿ ಮತ್ತು ಬೆಂಗಳೂರು ಜಿಲ್ಲಾಧಿಕಾರಿ ಭ್ರಷ್ಟಾಚಾರದ ಆರೋಪದ ಮೇರೆಗೆ ಬಂಧನವಾಗಿದೆ. ಆರೋಪಿಗಳಿಂದ ಇನ್ನೂ ಹೇಳಿಕೆ ಪಡೆಯದೇ ಇರುವುದು, ಪ್ರಮುಖ ಮಂತ್ರಿಗಳು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿ.
ಶೇ.೪೦ ರಷ್ಟು ಕಮಿಷನ್ ಬೇಡಿಕೆ ಆರೋಪದಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರು ರಾಜೀನಾಮೆ ನೀಡಿದ್ದಾರೆ. ಅದಕ್ಕಿಂತ ಬೇರೆ ಸಾಕ್ಷಿ ಬೇಕೆ?
ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರೊಫೆಸರ್ಗಳ ನೇಮಕಾತಿಯಲ್ಲಿ ಅಕ್ರಮ ವಾಗಿರುವುದರಿಂದ ಯೂನಿವರ್ಸಿಟಿ ಕುಲಸಚಿವ ಮತ್ತು ಪ್ರಾಧ್ಯಾಪಕಿಯ ಬಂಧನವಾಗಿದೆ. ಕೆ.ಪಿ.ಎಸ್.ಸಿ. ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಎಫ್‌ಡಿಸಿ ಸೇರಿ ಹಲವಾರು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆಯೆಂದು ಹಲವರನ್ನು ಬಂಧಿಸಲಾಗಿದೆ. ಇದೆಲ್ಲ ಆಡಳಿತ ವೈಫಲ್ಯವಲ್ಲದೇ ಮತ್ತೇನು?
ಅತಿವೃಷ್ಠಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ರಾಜ್ಯದ ಆರ್ಥಿಕತೆ ಕುಸಿದಿದೆ. ಸರ್ಕಾರ ದಿವಾಳಿಯತ್ತ ಸಾಗಿದೆ. ಹೂಡಿಕೆಯಲ್ಲಿ ಬೆಂಗಳೂರು ಅಗ್ರ ಸ್ಥಾನ ಕಳೆದುಕೊಂಡಿದೆ. ಪ್ರತಿಷ್ಠಿತ ಎಂಎನ್‌ಸಿಗಳು ನೆರೆಯ ತೆಲಂಗಾಣ ಮತ್ತು ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ.
ಕರಾವಳಿಯಲ್ಲಿ ಬಿಜೆಪಿ ಹಿಂದು ಸಂಘಟನೆಗಳ ಮೂಲಕ ಕೋಮುಗಲಭೆ ಸೃಷ್ಟಿಸಿ ಆ ಪ್ರಾಂತ್ಯದಲ್ಲಿ ಹೂಡಿಕೆ ಮಾಡಲು ಯಾರೂ ಬಾರದಂತೆ ಮಾಡಲಾಗಿದೆ. ಪಠ್ಯಪುಸ್ತಕಗಳಲ್ಲಿದ್ದ ಇತಿಹಾಸಕಾರರ ಲೇಖನಗಳನ್ನು ತೆಗೆದು ಕುವೆಂಪು, ಅಂಬೇಡ್ಕರ್, ಬಸವಣ್ಣ ಅಂತಹವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅವಮಾನ ಮಾಡಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸಲಾಗಿದೆ.
ಇತ್ತೀಚಿಗೆ ಬಡವರು ತಿನ್ನುವ ಅನ್ನ, ಮೊಸರು, ಮಜ್ಜಿಗೆ, ಹಪ್ಪಳ, ಉಪ್ಪಿನಕಾಯಿಗೂ ತೆರಿಗೆ ಹಾಕಲಾಗಿದೆ. ಮೇಕೆದಾಟು ಜಲಾಶಯ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಹೆಸರಿನಲ್ಲಿ ೧೦ ಜಿಲ್ಲೆಗಳ ಪೈಕಿ ೧೫೦೦ ಗ್ರಾಮಗಳನ್ನು ಒಕ್ಕಲೆಬ್ಬಿಸಲು ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರೂ, ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ರಾಜ್ಯ ಸರ್ಕಾರವನ್ನು ಕಮಿಷನ್ ಮತ್ತು ಕಮ್ಯುನಲ್ ಮಾಡಿದ್ದೆ ಬಿಜೆಪಿ ಸರ್ಕಾರದ ಸಾಧನೆಗಳು. ಬಿಜೆಪಿಯ ಅಂಗಸಂಸ್ಥೆಗಳ ಮೂಲಕ ಕೋಮು ಗಲಭೆ ಬಿತ್ತಲು ಕಳೆದ ಒಂದು ವರ್ಷದಿಂದ ಹಿಜಾಬ್, ಹಲಾಲ್, ಆಜಾನ್ ಎಂಬ ಹೆಸರಿನಲ್ಲಿ ಹೊಡೆದು ಆಳುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ದೊಡ್ಡ ಸಾಕ್ಷಿಯಾಗಿದೆ.
ಒಂದು ವರ್ಷದ ಆಡಳಿತ ನಡೆದ ಗುರುತೇ ಇಲ್ಲ. ಮುಖ್ಯಮಂತ್ರಿ ಕೇಂದ್ರಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಹಿತಾಸಕ್ಕಿ ಕಾಪಾಡುತ್ತಿಲ್ಲ.
ಸಚಿವರು ತಮ್ಮ ಇಲಾಖೆ ಕೆಲಸ ಬಿಟ್ಟು ಲೂಟಿ ಮಾಡುವಲ್ಲಿ ಕಾರ್ಯೋನ್ಮುಖವಾಗಿರುವುದರಿಂದ ಎಲ್ಲ ಇಲಾಖೆಗಳಲ್ಲೂ ಕಮಿಷನ್ ಸರ್ವವ್ಯಾಪಿಯಾಗಿದೆ.. ಸರ್ಕಾರವನ್ನು ‘ಕಮಿಷನ್ ಸರ್ಕಾರ’ವಾಗಿ ಪರಿವರ್ತಿಸಿದ್ದೇ ಮುಖ್ಯಮಂತ್ರಿ ಬೊಮ್ಮಯಿ ಅವರ ಸಾಧನೆ!
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…