ಹೆಚ್ಚಿದ ಹಿಂಸೆ: ಪ್ಯಾಲೆಸ್ಟೇನ್ ಜನರು ಇಸ್ರೇಲ್ ವಿರುದ್ಧ ಮತ್ತೆ ಸಿಡಿದೇಳುವ ಸಾಧ್ಯತೆ?
ಹೊಸ ಸರ್ಕಾರ ಬಂದು ಇದೀಗ ತಾನೆ ತಿಂಗಳು ಮುಗಿದಿರುವ ಈ ಸಮಯದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಜನರ ನಡುವೆ ಭಾರೀ ಪ್ರಮಾಣದ ಸಂಘರ್ಷ ಸಿಡಿಯುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಕಟ್ಟಾ ಬಲಪಂಥ ಮತ್ತು ಪ್ಯಾಲೆಸ್ಟೇನ್ ವಿರೋಧಿ ನಿಲುವುಳ್ಳ ಪಕ್ಷಗಳ ಬೆಂಬಲ ಪಡೆದು ಮತ್ತೆ ಪ್ರಧಾನಿಯಾಗಿರುವ ಬೆಂಜಮಿನ್ ನೇತಾನ್ಯಹು ಈಗಾಗಲೇ ಪ್ಯಾಲೆಸ್ಟೇನ್ ಜನರನ್ನು ರೊಚ್ಚಿಗೆಬ್ಬಿಸಿದ್ದಾರೆ.
ಪ್ಯಾಲೆಸ್ಟೇನ್ ಜನರಿಗೆ ಪ್ರತ್ಯೇಕ ದೇಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ ಬಂದಿರುವ ಬಲಪಂಥೀಯರ ನಾಯಕ ಬೆನ್ ಗವಿರ್‌ಗೆ ರಾಷ್ಟ್ರೀಯ ಭದ್ರತೆ ಖಾತೆ ಕೊಟ್ಟಿರುವುದು ಮತ್ತು ಬೆಜಾಲ್ ಸ್ಮಾಟ್ರಿಚ್‌ಗೆ ಹಣಕಾಸು ಖಾತೆ ನೀಡಿರುವುದರ ಕೆಟ್ಟ ಪರಿಣಾಮವನ್ನು ಈಗಾಗಲೇ ಕಾಣಬಹುದಾಗಿದೆ. ಕಳೆದ ವಾರ ಇಸ್ರೇಲ್ ಭದ್ರತಾ ಪಡೆಗಳು ಪಶ್ಚಿಮ ದಂಡೆಯ ಜೆನಿನ್ ನಗರದ ಬಳಿಯಿರುವ ಪ್ಯಾಲೆಸ್ಟೇನ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದವು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಇಸ್ರೇಲ್ ಭದ್ರತಾಪಡೆಗಳ ಗುಂಡಿಗೆ 9 ಪ್ಯಾಲೆಸ್ಟೇನ್ ಜನರು ಸತ್ತು ಹಲವರು ಗಾಯಗೊಂಡಿದ್ದರು. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿರುವ ಪ್ಯಾಲೆಸ್ಟೇನ್ ಉಗ್ರಗಾಮಿಗಳ ವಿವರ ಪತ್ತೆ ಮಾಡಿ ಬಂಧಿಸುವ ಉದ್ದೇಶದಿಂದ ಇಸ್ರೇಲ್ ಪಡೆಗಳು ಈ ದಾಳಿ ನಡೆಸಿದವು. ಅಮಾಯಕ ಪ್ಯಾಲೇಸ್ಟೇನ್ ನಿರಾಶ್ರಿತರ ಮೇಲೆ ನಡೆದ ಈ ದಾಳಿ ತೀವ್ರ ಖಂಡನೆಗೆ ಗುರಿಯಾಗಿದೆ. ಈ ದಾಳಿಯಿಂದ ಪ್ಯಾಲೆಸ್ಟೇನ್ ಜನರು ಆಕ್ರೋಶ ವ್ಯಕ್ತ ಮಾಡಿದ್ದರು. ಪ್ರತೀಕಾರದ ಬೆದರಿಕೆಯೂ ಇಸ್ರೇಲ್ ಪಡೆಗಳಿಗೆ ಇತ್ತು. ಈ ಹತ್ಯಾಕಾಂಡ ನಡೆದ ಮಾರನೆಯ ದಿನವೇ ಪ್ಯಾಲೆಸ್ಟೇನ್ ಉಗ್ರಗಾಮಿಯೊಬ್ಬ ಯಹೂದಿಗಳ ಪ್ರಾರ್ಥನಾ ಸಭೆಯೊಂದರ ಮೇಲೆ ಗುಂಡಿನ ದಾಳಿ ಮಾಡಿದ. ಈ ದಾಳಿಯಲ್ಲಿ ಏಳು ಮಂದಿ ಯಹೂದಿಗಳು ಸತ್ತು ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಜರ್ಮನಿ ನಾಜಿಗಳು ಅಲ್ಲಿನ ಯಹೂದಿಗಳ ಮೇಲೆ ನಡೆಸಿದ ಘೋರ ಹತ್ಯಾಕಾಂಡದ ನೆನಪಿಗಾಗಿ ನಡೆದ ಪ್ರಾರ್ಥನಾ ಸಭೆ ಅದಾಗಿತ್ತು. ಈ ಘಟನೆ ಇಸ್ರೇಲ್ ಜನರ ತೀವ್ರ ನೋವಿಗೆ ಕಾರಣವಾಗಿ ಶನಿವಾರ ಹತ್ತು ಸಾವಿರಕ್ಕೂ ಹೆಚ್ಚು ಯಹೂದಿಗಳು ಬೀದಿಗೆ ಇಳಿದು ಪ್ರತಿಭಟನಾ ಪ್ರದರ್ಶನ ನಡೆಸಿದರು. ಸಹಜವಾಗಿಯೇ ನೇತಾನ್ಯಹು ತುರ್ತು ಸಂಪುಟ ಸಭೆ ಕರೆದು ಭದ್ರತೆ ಹೆಚ್ಚಿಸಲು ತೀರ್ಮಾನ ತೆಗೆದುಕೊಂಡರು. ಯಹೂದಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳಲು ನೇತಾನ್ಯಹು ಸರ್ಕಾರ ನಿರ್ಧರಿಸಿತು. ಈ ಘಟನೆಗೆ ಕಾರಣರಾದವರನ್ನು ಗುರುತಿಸಿ ಅವರ ಮನೆಗಳಿಗೆ ಬೀಗ ಹಾಕಿ ನಂತರ ಅವುಗಳನ್ನು ಧ್ವಂಸ ಮಾಡಲು ಸರ್ಕಾರ ತೀರ್ಮಾನಿಸಿತು. ಎಲ್ಲ ಆಕ್ರಮಿತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲ ಇನ್ನೂ ಹೆಚ್ಚು ಜನರಿಗೆ ಭದ್ರತೆಯ ದೃಷ್ಟಿಯಿಂದ ಬಂದೂಕು ಲೈಸನ್ಸ್ ಕೊಡಬೇಕೆಂಬ ಸಲಹೆಯನ್ನು ಗೃಹ ಸಚಿವ ಬೆನ್ ಗವಿರ್ ಮಾಡಿದ್ದಾರೆ. ಇದಕ್ಕೆ ಒಪ್ಪಿಗೆಯೂ ಸಿಗುವ ಸಾಧ್ಯತೆ ಇದೆ. ಆಕ್ರಮಿತ ಪ್ರದೇಶಗಳಲ್ಲಿ ಹಾರಾಡುತ್ತಿರುವ ಪ್ಯಾಲೆಸ್ಟೇನ್ ಧ್ವಜಗಳನ್ನು ತೆಗೆದುಹಾಕಬೇಕೆಂದು ಸೂಚಿಸಲಾಗಿದೆ. ಪ್ಯಾಲೆಸ್ಟೇನ್ ನಿವಾಸಿಗಳನ್ನು ಸಹಜವಾಗಿ ಈ ಕ್ರಮಗಳೆಲ್ಲಾ ಪ್ಯಾಲೆಸ್ಟೇನ್ ಜನರ ಆಕ್ರೋಶಕ್ಕೆ ಕಾರಣವಾಗಿವೆ. ಇಸ್ರೇಲ್ ಜನರು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ ಎಂದು ಪ್ಯಾಲೆಸ್ಟೇನ್ ಜನರ ಉಗ್ರವಾದಿ ಸಂಘಟನೆ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್‌ನಲ್ಲಿ ಯಹೂದಿಗಳ ಅಸ್ತಿತ್ವನ್ನೇ ನಿರಾಕರಿಸುವ ಲೆಬನಾನ್‌ನ ಹಿಜಬುಲ್ಲ ಉಗ್ರವಾದಿ ಸಂಘಟನೆಯೂ ಇಸ್ರೇಲ್ ಆಡಳಿತಗಾರರಿಗೆ ಸವಾಲೆಸೆದಿದೆ.
ಈ ಎಲ್ಲ ಬೆಳವಣಿಗಗಳು ಅರಬ್ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್ ನಾಯಕರು ಪರಿಸ್ಥಿತಿ ಹದಗೆಡಲು ಇಸ್ರೇಲ್ ನಾಯಕರೇ ಕಾರಣ ಎಂದು ದೂಷಿಸಿದ್ದಾರೆ. ಇಸ್ರೇಲ್‌ನ ವಿಸ್ತರಣಾ ನೀತಿ ಮತ್ತು ಪ್ಯಾಲೆಸ್ಟೇನ್ ಜನರ ಮೇಲೆ ನಡೆಸುತ್ತಿರುವ ಸಶಸ್ತ್ರ ದಾಳಿಗಳನ್ನು ಖಂಡಿಸಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಪ್ರದೇಶದಲ್ಲಿನ ಈ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆ ಕೂಡಾ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಅವರನ್ನು ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಪ್ರದೇಶಗಳಿಗೆ ಸೊಮವಾರವೇ ಭೇಟಿ ನೀಡಿ ಮಾತುಕತೆ ನಡೆಸಲು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಸಂಘರ್ಷ ನಡೆಯದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಅವರ ಭೇಟಿ ಎಷ್ಟರ ಮಟ್ಟಿಗೆ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಕಳೆದ ವರ್ಷ ಇಸ್ರೇಲ್ ಭದ್ರತಾಪಡೆಗಳು ನಡೆಸಿದ ದಾಳಿಯಲ್ಲಿ ಮೂವತ್ತು ಮಕ್ಕಳೂ ಸೇರಿದಂತೆ ೧೭೦ ಜನರು ಸತ್ತಿದ್ದಾರೆ. ಪ್ಯಾಲೇಸ್ಟೇನ್ ಉಗ್ರವಾದಿಗಳು 19 ಮಂದಿ ಇಸ್ರೇಲ್ ಜನರನ್ನೂ ಕೊಂದಿದ್ದಾರೆ. ಈ ವರ್ಷ ಈಗಾಗಲೇ 19 ಮಂದಿ ಪ್ಯಾಲಸ್ಟೇನಿಯನ್ನರು ಮತ್ತು ಎಂಟು ಮಂದಿ ಇಸ್ರೇಲಿಗಳೂ ಬಲಿಯಾಗಿದ್ದಾರೆ.
1948ರಲ್ಲಿ ಯಹೂದಿಗಳಿಗಾಗಿಯೇ ಪ್ರತ್ಯೇಕ ದೇಶ ಇಸ್ರೇಲ್ ಸ್ಥಾಪನೆಗೆ ವಿಶ್ವಸಂಸ್ಥೆ ಅವಕಾಶ ನೀಡಿದ ದಿನದಿಂದಲೂ ಪ್ಯಾಲೆಸ್ಟೇನ್ ಸಮಸ್ಯೆ ಉಲ್ಬಣಗೊಂಡಿದೆ. ಪ್ಯಾಲೆಸ್ಟೇನ್‌ಗೆ ಅರಬ್ ದೇಶಗಳು ಬೆಂಬಲ ನೀಡಿ ಇಸ್ರೇಲ್ ವಿರುದ್ಧ ಯುದ್ಧ ಮಾಡಿ ಸೋತು ಸುಣ್ಣಗಾಗಿವೆ. ಹಾಗೆಂದು ಪ್ಯಾಲೆಸ್ಟೇನ್ ಜನರು ತಮ್ಮ ಬೇಡಿಕೆಯನ್ನು ಕೈಬಿಟ್ಟಿಲ್ಲ. ತಾವು ಇರುವ ಪ್ರದೇಶವನ್ನು ತಾವು ಬಿಟ್ಟುಕೊಡುವುದಿಲ್ಲ ಎನ್ನುವುದು ಪ್ಯಾಲೆಸ್ಟೇನ್ ಜನರ ನಿಲುವು. ನಾವಿರುವುದು ತಮ್ಮ ಪೂರ್ವಜರಿದ್ದ ಪ್ರದೇಶ ಎಂದು ಯಹೂದಿಗಳು ವಾದಿಸುತ್ತ ಬಂದಿದ್ದಾರೆ. ಇಸ್ರೇಲ್‌ನ ಅಸ್ತಿತ್ವವನ್ನೆ ಪ್ಯಾಲೆಸ್ಟೇನ್ ಜನರು ಒಪ್ಪುವುದಿಲ್ಲ. ಇಸ್ರೇಲ್‌ಗೆ ಮಾನ್ಯತೆ ನೀಡಿದಂತೆ ಪ್ಯಾಲಸ್ಟೇನ್‌ಗೂ ಮಾನ್ಯತೆ ನೀಡಲು ೧೯೪೮ರಲ್ಲಿಯೇ ವಿಶ್ವಸಂಸ್ಥೆ ಸಿದ್ಧವಿತ್ತು. ಆದರೆ ಇಸ್ರೇಲ್‌ಗೆ ಮಾನ್ಯತೆ ನೀಡುವುದನ್ನು ಅರಬ್ ದೇಶಗಳು ಒಪ್ಪಲಿಲ್ಲ. ಇಸ್ರೇಲ್ ರಚನೆ ಆಗೇಬಿಟ್ಟಿತು. ಈಗಲೂ ವಿಶ್ವಸಂಸ್ಥೆ ಪ್ಯಾಲೆಸ್ಟೇನ್ ದೇಶ ರಚನೆಗೆ ಸಿದ್ಧ ಆದರೆ ಪ್ಯಾಲೆಸ್ಟೇನ್ ತಮ್ಮ ನೆರೆಯಲ್ಲಿ ಇಸ್ರೇಲ್ ಇರುವುದನ್ನು ಒಪ್ಪುವುದಿಲ್ಲ.
ಪ್ಯಾಲೆಸ್ಟೇನ್ ಜನರಲ್ಲಿ ಒಗ್ಗಟ್ಟಿಲ್ಲ. ಗಾಜಾ ಪಟ್ಟಿ ಪ್ರದೇಶದ ಆಡಳಿತ ಹಮಾಸ್ ಎಂಬ ಹೆಸರಿನ ಉಗ್ರಗಾಮಿ ಹಿಡಿತದಲ್ಲಿದೆ. ಪಶ್ಚಿಮ ದಂಡೆ ಪ್ರದೇಶದ ಆಡಳಿತ ಮಹಮ್ಮದ್ ಅಬ್ಬಾಸ್ ನೇತೃತ್ವದ ಉದಾರವಾದಿ ಗುಂಪು ‘ಫತಾ’ ದ ಹಿಡಿತದಲ್ಲಿದೆ. ಇಸ್ರೇಲ್ ಅಸ್ತಿತ್ವವನ್ನು ಹಮಾಸ್ ನಾಯಕರು ಒಪ್ಪುವುದಿಲ್ಲ. ಆದರೆ ಫತಾ ಸಂಘಟನೆ ಒಪ್ಪುತ್ತದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಫತಾ ಸಿದ್ಧವಿದೆ. ಆದರೆ ಹಮಾಸ್ ಸಿದ್ಧವಿಲ್ಲ. ಹೀಗಾಗಿ 75 ವರ್ಷಗಳಿಂದ ಪ್ಯಾಲೆಸ್ಟೇನ್ ದೇಶ ರಚನೆ ಪ್ರಶ್ನೆ ಹಾಗೆಯೇ ನೆನೆಗುದಿಗೆ ಬಿದ್ದಿದೆ. ಪ್ಯಾಲೆಸ್ಟೇನ್ ಜನರ ನಾಯಕರಾಗಿದ್ದ ಯಾಸಾರ್ ಅರಾಫತ್ ಬದುಕಿದ್ದಾಗ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲಾಗಿತ್ತು. ನಾರ್ವೆಯ ಓಸ್ಲೋ ನಗರದಲ್ಲಿ ನಡೆದ ಮಾತುಕತೆಯಲ್ಲಿ ಇಸ್ರೇಲ್ ಪ್ರಧಾನಿ ಮತ್ತು ಯಾಸಾರ್ ಅರಾಫತ್ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದರು. ಈ ಒಪ್ಪಂದದ ಪ್ರಕಾರ ಪ್ಯಾಲೆಸ್ಟೇನ್ ಜನರು ಇಸ್ರೇಲ್ ಅಸ್ತಿತ್ವಕ್ಕೆ ಮಾನ್ಯತೆ ಕೊಡಬೇಕಿತ್ತು. ಹಾಗೆಯೇ ಪ್ಯಾಲೆಸ್ಟೇನ್ ಪ್ರತ್ಯೇಕ ದೇಶ ರಚನೆಗೆ ಇಸ್ರೇಲ್ ಒಪ್ಪಿಗೆ ಸೂಚಿಸಬೇಕಿತ್ತು. ಸಂಘರ್ಷದಿಂದಾಗಿ ವಲಸೆ ಹೋದ ಪ್ಯಾಲೆಸ್ಟೇನ್ ಜನರಿಗೆ ಪುನರ್‌ವಸತಿ ಕಲ್ಪಿಸಬೇಕಿತ್ತು. 1967ರ ಸ್ಥಿತಿ ಆಧರಿಸಿ ಪಶ್ಚಿಮ ದಂಡೆ ಮತ್ತು ಪೂರ್ವ ಜರೂಸಲೆಂ ಅನ್ನು ಪ್ಯಾಲೆಸ್ಟೇನ್ ಪ್ರದೇಶವೆಂದು ಗುರುತಿಸಲು ತೀರ್ಮಾನಿಸಲಾಗಿತ್ತು. ಈ ವಿಚಾರದಲ್ಲಿ ಮುಂದೆ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದವು.
ಕ್ರ್ತ್ಯೈಸ್ತ, ಮುಸ್ಲಿಮ್ ಮತ್ತು ಯಹೂದಿಗಳಿಗೆ ಪವಿತ್ರವಾದ ಸ್ಥಳಗಳು ಹಳೆಯ ಜರೂಸಲೆಂನ ಒಂದೇ ಜಾಗದಲ್ಲಿವೆ. ಏಸುಕ್ರಿಸ್ತನನ್ನು ಶಿಲುಗೆಗೆ ಏರಿಸಿದ ಮತ್ತು ಅವರ ಪುನರುತ್ಥಾನವಾದ, ಅದೇ ರೀತಿ ಪ್ರವಾದಿ ಮಹಮದ್ ಪೈಗಂಬರ್ ಸ್ವರ್ಗಕ್ಕೆ ಹೋದ ಮತ್ತು ಯಹೂದಿಗಳ ‘ಅಳುವ ಗೋಡೆ’ ಕೂಡಾ ಒಂದೇ ಸ್ಥಳದಲ್ಲಿದೆ. ಹೀಗಾಗಿಯೇ ಮತ್ತೆ ಮತ್ತೆ ಘರ್ಷಣೆಗಳು ಸಂಭವಿಸುತ್ತಿವೆ. 1948ರಲ್ಲಿಯೇ ಇಸ್ರೇಲ್ ಜರೂಸಲೆಂನ ಪೂರ್ವಭಾಗವನ್ನು ಅತಿಕ್ರಮಿಸಿಕೊಂಡಿದೆ. 1967ರ ಯುದ್ಧದ ನಂತರ ಪಶ್ಚಿಮ ಭಾಗವನ್ನೂ ಆಕ್ರಮಿಸಿಕೊಂಡಿದೆ. ಪಶ್ಚಿಮ ಜರೂಸಲೆಂ ತಮ್ಮ ಉದ್ದೇಶಿತ ದೇಶದ ರಾಜಧಾನಿ ಎಂದು ಪ್ಯಾಲೆಸ್ಟೇನ್ ನಾಯಕರು ಪಟ್ಟು ಹಿಡಿದರೆ, ಇಸ್ರೇಲ್ ನಾಯಕರೂ ಕೂಡ ಜರೂಸಲೆಂ ತಮ್ಮ ರಾಜಧಾನಿ ಎಂದು ಹಠಮಾಡುತ್ತಿದ್ದಾರೆ. ಹೀಗಾಗಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದು ಸೇರಿಕೊಂಡು ಬಿಡಿಸಲಾಗದ ಕಗ್ಗಂಟಾಗಿ ಪರಿಣಮಿಸಿದೆ. ಆದರೆ ಇದು ಪರಿಹಾರ ಕಂಡುಹಿಡಿಯಲು ಅಸಾಧ್ಯವಾದ ಸಮಸ್ಯೆಯೇನಲ್ಲ. ಎರಡೂ ಕಡೆಯವರು ಮನಸ್ಸು ಮಾಡಬೇಕಷ್ಟೆ.
ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ…
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…