ಎಡಿಟೋರಿಯಲ್

ವಿದೇಶ ವಿಹಾರ : ಮೋದಿ ಎದುರಿಸಲಿರುವ ಸವಾಲುಗಳು ಹತ್ತಾರು

ಡಿ. ವಿರಾಜಶೇಖರ

ಜಿ-೨೦ ಅಧ್ಯಕ್ಷತೆ ಭಾರತಕ್ಕೆ: ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಅವಕಾಶ 

ವಿಶ್ವದ ಪ್ರಮುಖ ಅಭಿವೃದ್ಧಿ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ೨೦ ದೇಶಗಳ ಶಕ್ತಿಶಾಲಿ ವೇದಿಕೆ (ಜಿ-೨೦) ಅಥವಾ ಗುಂಪಿನ ಅಧ್ಯಕ್ಷತೆ ಇದೀಗ ಭಾರತಕ್ಕೆ ಸಿಕ್ಕಿದೆ. ಜಿ-೨೦ ಅಧ್ಯಕ್ಷತೆ ಸಿಗುವುದರಿಂದ ಸಿಗುವ ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಅವಕಾಶ ಮಹತ್ವದ್ದಾಗಿದೆ.
ಆಸ್ಟ್ರೇಲಿಯಾ, ಭಾರತ, ಬ್ರೆಜಿಲ್, ಅರ್ಜೆಂಟೈನಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಯೂರೋಪ್ ಒಕ್ಕೂಟ ಈ ಗುಂಪಿನ ಸದಸ್ಯ ದೇಶಗಳು. ಈ ಗುಂಪಿನ ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣ ಜಾಗತಿಕ ಉತ್ಪನ್ನ ಪ್ರಮಾಣದ ಶೇ.೮೫ ರಷ್ಟು. ವಿಶ್ವದ ಒಟ್ಟು ವಾಣಿಜ್ಯ ವಹಿವಾಟಿನ ಶೇ.೭೫ ಭಾಗ ಜಿ-೨೦ ದೇಶಗಳದ್ದೇ ಆಗಿದೆ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.೬೦ ಭಾಗವನ್ನು ಈ ಜಿ-೨೦ ಪ್ರತಿನಿಧಿಸುತ್ತದೆ. ಜಗತ್ತಿನ ಆರ್ಥಿಕ ವ್ಯವಸ್ಥೆ ಆರೋಗ್ಯಪೂರ್ಣವಾಗಿರಿಸುವ, ವಿವಿಧ ದೇಶಗಳ ನಡುವೆ ಆರ್ಥಿಕ ಸಹಕಾರ ಸಾಧಿಸುವ ಮತ್ತು ಅದಕ್ಕಾಗಿ ನಿಯಮಗಳನ್ನು ರೂಪಿಸುವ ಉದ್ದೇಶವನ್ನು ಜಿ-೨೦ ಹೊಂದಿದೆ. ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶಗಳಿಗೆ ಈ ಗುಂಪಿನಲ್ಲಿ ಸಮಾನ ಸ್ಥಾನ-ಮಾನ ನೀಡುವ ಮತ್ತು ಅವುಗಳಿಗೆ ನೆರವಾಗುವ ಗುರಿಯನ್ನೂ ಹೊಂದಿರುವ ಈ ಗುಂಪು ಸಂಘಟನೆಗೊಂಡದ್ದು ೧೯೯೯ರಲ್ಲಿ. ಈ ಗುಂಪು ತನ್ನ ೨೨ವರ್ಷಗಳ ಅಸ್ತಿತ್ವದಲ್ಲಿ ಸಾಧಿಸಿದ್ದು ಕಡಿಮೆಯೇ. ಆದರೆ ಏನೂ ಸಾಧಿಸಿಲ್ಲ ಎನ್ನುವಂತಿಲ್ಲ. ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿಯುದಂತೆ ನೋಡಿಕೊಳ್ಳುವಲ್ಲಿ ಅಲ್ಪಮಟ್ಟಿಗಾದರೂ ಯಶಸ್ವಿಯಾಗಿದೆ. ಮುಖ್ಯವಾಗಿ ೨೦೦೮ರ ಆರ್ಥಿಕ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸಿದೆ. ಕೋವಿಡ್ ೧೯ರ ಹೊಡೆತವನ್ನು ಸರಿಯಾಗಿ ಎದುರಿಸಲು ಸಾಧ್ಯವಾಗದೇ ಹೋದರೂ ಇಂಥ ಸಮಸ್ಯೆ ತಲೆದೋರಿದಾಗ ಮಾಡಬೇಕಾದ್ದು ಏನು ಎನ್ನುವುದನ್ನು ಜಿ-೨೦ ಕಲಿತಿದೆ. ಹವಾಮಾನದಲ್ಲಿ ಆಗುತ್ತಿರುವ ಆತಂಕಕಾರಿ ಬದಲಾವಣೆಗೆ ಸಂಬಂಧಿಸಿದಂತೆ ಅಗತ್ಯ ಆರ್ಥಿಕ ಬೆಂಬಲವನ್ನು ಒದಗಿಸುವಲ್ಲಿ ಜಿ-೨೦ ಭಾಗಶಃ ಯಶಸ್ವಿಯಾಗಿದೆ. ಜಿ-೨೦ ಯಶಸ್ಸಿಗೆ ಹೋಲಿಸಿದರೆ ವೈಫಲ್ಯವೇ ಹೆಚ್ಚು.
ಮುಖ್ಯವಾಗಿ ಕೋವಿಡ್ ೧೯ ಪಿಡುಗನ್ನು ನಿಯಂತ್ರಿಸುವ ವಿಚಾರದಲ್ಲಿ ಜಿ-೨೦ ಎಡವಿದ್ದು ದೊಡ್ಡ ವೈಫಲ್ಯ. ಕೋವಿಡ್ ನಿರೋಧ ವ್ಯಾಕ್ಸಿನ್ ಉತ್ಪಾದನೆ ಮತ್ತು ಹಂಚಿಕೆ ನಡುವೆ ಹೊಂದಾಣಿಕೆೆಯೇ ಇಲ್ಲ. ತನ್ನ ಸದಸ್ಯ ದೇಶಗಳಿಗೇ ವ್ಯಾಕ್ಸಿನ್ ಪೂರೈಕೆಯಾಗದಂಥ ಸ್ಥಿತಿ. ಅಭಿವೃದ್ಧಿ ದೇಶಗಳಲ್ಲಿ ಶೇ.೬೦ ಭಾಗ ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ, ಬಡ ದೇಶಗಳಲ್ಲಿ ಶೇ.೯೬ ಭಾಗ ಜನರಿಗೆ ವ್ಯಾಕ್ಸಿನ್ ಲಭ್ಯವಾಗಿಯೇ ಇಲ್ಲ. (೨೦೨೧ರ ಅಂಕಿ-ಅಂಶ) ಜರ್ಮನಿ ಮತ್ತು ಯುರೋಪಿನ ಕೆಲವು ದೇಶಗಳು ಚರ್ಚೆಗೆ ತಂದ ವ್ಯಾಕ್ಸಿನ್‌ಗಳ ಕೃತಿಸ್ವಾಮ್ಯ ಪ್ರಶ್ನೆಯನ್ನು ಇಂದಿಗೂ ಪರಿಹರಿಸಲು ಸಾಧ್ಯವಾಗಿಲ್ಲ. ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತೆರಿಗೆ ವಿಚಾರದಲ್ಲಿ ಒಂದು ಸೂತ್ರ ರೂಪಿತವಾಗಿದ್ದರೂ ಆ ಸಂಬಂಧವಾದ ವಿವಾದಗಳನ್ನು ಬಗೆಹರಿಸುವ ವಿಚಾರದಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ವಿಫಲವಾಗಿದೆ. ಚೀನಾದ ವೇಗದ ಅಭಿವೃದ್ಧಿ ಮತ್ತು ಬ್ರೆಕ್ಸಿಟ್‌ನ ಪರಿಣಾಮಗಳನ್ನು ಎದುರಿಸುವಲ್ಲಿ ಜಿ-೨೦ ಯಶಸ್ಸು ಕಂಡಿಲ್ಲ. ಚೀನಾದ ವಾಣಿಜ್ಯ ವಹಿವಾಟು ಕುರಿತ ವಿವಾದ ವಿವಿಧ ದೇಶಗಳ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ. ಉತ್ಪಾದನೆ ಮತ್ತು ವಿತರಣೆ ವಿಚಾರದಲ್ಲಿನ ಅಸಮತೋಲನ ಬಡದೇಶಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ರಷ್ಯಾ ದೇಶ ಯುಕ್ರೇನ್ ದೇಶದ ಮೇಲೆ ನಡೆಸಿದ ಮಿಲಿಟರಿ ದಾಳಿಯಿಂದ ಉದ್ಭವಿಸಿರುವ ಸಮಸ್ಯೆಯಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಒಳಗಾಗಿದೆ. ರಷ್ಯಾದಿಂದ ಪೂರೈಕೆಯಾಗುತ್ತಿದ್ದ ತೈಲ, ಅನಿಲ ಕನಿಷ್ಠ ಮಟ್ಟಕ್ಕೆ ಬಂದು ನಿಂತಿದೆ. ಇದರಿಂದಾಗಿ ಇಡೀ ಯುರೋಪ್ ಸಂಕಷ್ಟಕ್ಕೆ ಒಳಗಾಗಿದೆ.  ದಿಢೀರನೆ ಕಂಡುಕೊಳ್ಳಲು ಸಾಧ್ಯವಿಲ್ಲದ್ದರಿಂದ ಯುರೋಪಿನಲ್ಲಿ ಇಂಧನ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಜನರು ಹೆಚ್ಚುವರಿ ಭಾರ ಹೊರುವಂತಾಗಿದೆ. ಈ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಜಿ-೨೦ ಸಫಲವಾಗಿಲ್ಲ. ಯುಕ್ರೇನ್‌ನಿಂದ ಪೂರೈಕೆಯಾಗುತ್ತಿದ್ದ ದವಸ- ಧಾನ್ಯ ಸಾಗಣೆಯಲ್ಲಿಯೂ ವ್ಯತ್ಯುವಾಗಿ ಬಡ ದೇಶಗಳು ಕಂಗಾಲಾಗಿವೆ.
ಇಂಥ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಿ-೨೦ರ ಅಧ್ಯಕ್ಷತೆಯನ್ನು ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ನಡೆದ ಶೃಂಗಸಭೆಯಲ್ಲಿ ಕಳೆದ ವಾರ ಅಧ್ಯಕ್ಷ ಜೋಕೋ ವಿಡೋಡು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಹಿಸಿಕೊಟ್ಟಿದ್ದಾರೆ. ಇದೇ ತಿಂಗಳ ಮೊದಲ ದಿನದಿಂದ ಭಾರತದ ಅಧ್ಯಕ್ಷತೆಯ ಒಂದು ವರ್ಷದ ಅವಧಿ ಆರಂಭವಾಗಿದೆ. ಈ ಅವಕಾಶ ಸಿಕ್ಕಿದ್ದರಿಂದ ಸಹಜವಾಗಿಯೇ ಸಾಕಷ್ಟು ಸಂತೋಷಗೊಂಡಿರುವ ಮೋದಿ ಅವರು ‘ಜಿ-೨೦ ಸಂಘಟನೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ನೀತಿಯ ಆಧಾರದ ಮೇಲೆ ಕೆಲಸಮಾಡುತ್ತದೆ ಎಂದು ಹೇಳಿದ್ದಾರೆ.
ಜಿ-೨೦ರ ಲಾಂಛನದಲ್ಲಿ ಬಿಜೆಪಿಯ ಪಕ್ಷದ ಲಾಂಛನದಲ್ಲಿರುವಂಥ ಕಮಲದ ಹೂವನ್ನು ಬಳಸಿರುವ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಮುಂದೆಯು ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿ ಜಿ-೨೦ ರ ಮಹತ್ವವೇ ಹಿಂದೆ ಸರಿದರೆ ಆಶ್ಚರ್ಯವಾಗುತ್ತದೆ.
ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಭಾರತಕ್ಕೆ ಇದೊಂದು ಒಳ್ಳೆಯ ಅವಕಾಶ ಎನ್ನುವುದೇನೋ ಸರಿ. ಆದರೆ ಆ ಸಮಸ್ಯೆಗಳು ಸರಳವಾಗಿ ಪರಿಹಾರವಾಗುವಂಥವಲ್ಲ ಎನ್ನುವುದೇ ಮೋದಿ ಅವರಿಗೆ ಎದುರಾಗುವ ಸವಾಲು. ಅಧ್ಯಕ್ಷತೆ ವಹಿಸಿಕೊಂಡ ತತ್‌ಕ್ಷಣ ಎದುರಾಗುವ ಸಮಸ್ಯೆ ಯುಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಹಾಗೂ ಅದರಿಂದ ಉದ್ಭವವಾಗಿರುವ ಪರಿಣಾಮ. ಯುಕ್ರೇನ್ ಯುದ್ಧದ ವಿಚಾರದಲ್ಲಿ ಭಾರತವು ತನ್ನ ಹಿತ ಕಾಯ್ದುಕೊಳ್ಳಲು ರಷ್ಯಾ ಜೊತೆಗೆ ನಿಂತಿದೆ. ಹಾಗೆಂದ ಮಾತ್ರಕ್ಕೆ ಭಾರತ ಯುದ್ಧದ ಪರ ಇದೆಯಂತಲ್ಲ. ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ಪ್ರಯತ್ನ ಅಷ್ಟೆ. ಈ ನಿಲುವಿನಿಂದಾಗಿ ಭಾರತ ವಿಶ್ವದ ಬಲಿಷ್ಠ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾನು ಯಾರ ಪರವೂ ಅಲ್ಲ, ಶಾಂತಿಯ ಪರ ಎಂದು ವಿದೇಶಾಂಗ ಸಚಿವರು ಮೇಲಿಂದ ಮೇಲೆ ಹೇಳುತ್ತಿದ್ದರೂ ಯಾರೂ ನಂಬುತ್ತಿಲ್ಲ. ಇದೇನೇ ಇದ್ದರೂ ಸವಾಲು ಎಂಬಂತೆ ಜಿ-೨೦ ಅಧ್ಯಕ್ಷತೆ ಭಾರತಕ್ಕೆ ವರ್ಗಾವಣೆಯಾಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಇದು ಯುದ್ಧದ ಕಾಲವಲ್ಲ ಎಂದು ಸಲಹೆ ಮಾಡಿದ ಮೋದಿ ಅವರಿಗೆ ಇದೀಗ ಯುದ್ಧ ನಿಲ್ಲಿಸುವಂಥ ಹೊಣೆಗಾರಿಕೆ ವಹಿಸಿದಂತಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮೋದಿ ಅವರು ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮತ್ತೊಮ್ಮೆ ಸಲಹೆ ಮಾಡಬಹುದು. ಆದರೆ ಯುದ್ಧ ನಿಲ್ಲಿಸುವ ಅಥವಾ ಬಿಡುವ ವಿಚಾರ ಪುಟಿನ್ ಅವರಿಗೇ ಬಿಟ್ಟದ್ದು. ಅಮೆರಿಕದ ಅಧ್ಯಕ್ಷ ಜೋ ಬಿಡನ್ ಈಗಾಗಲೇ ಮಾತುಕತೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ ಯುಕ್ರೇನ್ ಮೇಲೆ ಯಾವುದೇ ಷರತ್ತು ವಿಧಿಸುವಂತಿಲ್ಲ ಎಂದು ಬಿಡನ್ ಜೊತೆಗೆ ಮಾತುಕತೆ ನಡೆಸಿದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಸ್ಪಷ್ಟನೆ ನೀಡಿದ್ದಾರೆ. ಈ ಷರತ್ತುಬದ್ಧ ಆಹ್ವಾನವನ್ನು ಪುಟಿನ್ ತಿರಸ್ಕರಿಸಿದ್ದಾರೆ. ಈಗಾಗಲೇ ಆಕ್ರಮಿಸಿಕೊಂಡಿರುವ ಪ್ರದೇಶಗಳು ರಷ್ಯಾದಲ್ಲೇ ಉಳಿಯಬೇಕು ಎಂಬ ಷರತ್ತನ್ನು ಪುಟಿನ್ ಹಾಕಿದ್ದಾರೆ. ಹೀಗಾಗಿ ಮಾತುಕತೆ ತತ್‌ಕ್ಷಣ ಆರಂಭವಾಗುವ ಸೂಚನೆ ಇಲ್ಲ.
ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಭಾರತ ಸಂಬಂಧಿಸಿದವರೆಲ್ಲರ ಜೊತೆ ಚರ್ಚಿಸಿ ಒಂದು ಪರಿಹಾರ ಕಂಡುಹಿಡಿಯಬಹುದು. ಅದಕ್ಕೆ ವ್ಯಾಕ್ಸಿನ್ ಉತ್ಪಾದನೆ ಮಾಡುವ ದೇಶಗಳ ಸಹಕಾರ ಬಹಳ ಮುಖ್ಯ. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ವಾತಾವರಣಕ್ಕೆ ಸೇರುವ ಕಾರ್ಬನ್ ಪ್ರಮಾಣ ತಗ್ಗಿಸುವ ಕುರಿತಂತೆ ಈಗಾಗಲೇ ಒಂದು ಒಪ್ಪಂದ ಆಗಿದೆ. ಹಾಗೆೆಯೇ ವಾತಾವರಣದ ವೈಪರೀತ್ಯದಿಂದ ಹಾನಿಗೊಳಗಾದ ದೇಶಗಳಿಗೆ ನೆರವು ನೀಡುವ ವಿಚಾರದಲ್ಲಿ ಒಂದು ನಿಧಿ ಸ್ಥಾಪಿಸಲು ಬಾಲಿ ಶೃಂಗಸಭೆಯಲ್ಲಿ ನಿರ್ಧರಿಸಲಾಗಿದೆ. ಸಾಕಷ್ಟು ಹಣವನ್ನು ಮೀಸಲಿರಿಸಲಾಗಿದೆ. ಬಾಲಿ ಶೃಂಗಸಭೆಯ ತೀರ್ಮಾನಗಳು ಜಾರಿಯಾಗುವಂತೆ ನೋಡಿಕೊಳ್ಳುವ ಕೆಲಸ ಭಾರತ ಮಾಡಬೇಕಾಗುತ್ತದೆ. ಭಯೋತ್ಪಾದನೆ ಕುರಿತಂತೆ ಕಠಿಣ ನಿಯಮಗಳನ್ನು ರೂಪಿಸಲು ಭಾರತ ಪ್ರಯತ್ನಿಸುವ ಸಾಧ್ಯತೆ ಇದೆ. ತಂತ್ರಜ್ಞಾನ ವಿಚಾರದಲ್ಲಿ ಭಾರತ ಮುಂದಿದ್ದು, ಮುಂದುವರಿದ ದೇಶಗಳು ಮತ್ತು ಮುಂದುವರಿದ ದೇಶಗಳ ನಡುವೆ ಇರುವ ಅಂತರವನ್ನು ತಗ್ಗಿಸಲು ಯೋಜನೆ ರೂಪಿಸಿ ಜಾರಿಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ.
ಭಾರತ ವಿಶ್ವ ಮಟ್ಟದಲ್ಲಿ ಇದುವರೆಗೆ ದೊಡ್ಡದಾಗಿ ಬಿಂಬಿತವಾಗಿಲ್ಲ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಕಾಲದಲ್ಲಿ ಅಲಿಪ್ತ ಚಳವಳಿ ಆರಂಭವಾದಾಗ ಭಾರತ ವಿಶ್ವದ ಗಮನ ಸೆಳೆದಿತ್ತು. ಅದು ಬಿಟ್ಟರೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿ ಕೆರಳಿಸಿರುವುದು ಈಗಲೇ. ವಿಶ್ವಕ್ಕೆ ಕೊಡುಗೆ ನೀಡಬಹುದಾದಂಥ ಸಾಧನೆಯನ್ನು ಮಾಡಲು ಇದುವರೆಗೆ ಭಾರತಕ್ಕೆ ಸಾಧ್ಯವಾಗಿಲ್ಲ. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ದೊಡ್ಡದು. ಅದನ್ನು ಬಳಸಿಕೊಂಡು ಜಿ-೨೦ರ ಎಲ್ಲ ವ್ಯವಹಾರಗಳನ್ನೂ ಡಿಜಿಟಲೀಕರಣಗೊಳಿಸಬಹುದು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಎಲ್ಲ ದೇಶಗಳಿಗೆ ಭಾರತ ನೆರವಾಗಬಹುದು. ಎಲ್ಲ ದೇಶಗಳೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಡಳಿತ ನಡೆಸುವಂತಾದರೆ ಅದು ದೊಡ್ಡ ಮಟ್ಟದ ಬದಲಾವಣೆಗೆ ದಾರಿ ಮಾಡಿಕೊಡಬಹುದು. ಇದೇನೇ ಇದ್ದರೂ ಹಳೆಯ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಜಿ-೨೦ ಜನರಿಗೆ ಹತ್ತಿರವಾಗುವಂತೆ ಮಾಡುವುದು ಕಷ್ಟದ ಕೆಲಸವೇ. ಮೋದಿ ಅವರ ಮುಂದೆ ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಸವಾಲುಗಳಿವೆ. ಅವುಗಳನ್ನು ಪರಿಹರಿಸಲು ಅವರು ಯತ್ನಿಸುವುದು ಅನಿವಾರ್ಯ. ಪರಿಹಾರವಾದರೆ ಅವರಿಗೆ ಕೋಡು. ಇಲ್ಲವಾದರೆ ವೈಫಲ್ಯ ಎಂದು ಯಾರೂ ತಿಳಿಯುವಂತಿಲ್ಲ. ಏಕೆಂದರೆ ಸಮಸ್ಯೆಗಳು ಅಷ್ಟು ಜಟಿಲವಾದವು.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

5 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

5 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

6 hours ago