– ಡಿವಿರಾಜಶೇಖರ
ತೈವಾನ್ ತಮ್ಮ ದೇಶದ ವ್ಯಾಪ್ತಿಯ ದ್ವೀಪ. ತಾಯಿನಾಡಿನೊಂದಿಗೆ ತೈವಾನ್ ವಿಲೀನವಾಗುವುದು ಅನಿವಾರ್ಯ.ನ ಶಾಂತಿಯ ಮಾರ್ಗದಿಂದ ಅದನ್ನು ಸಾಧಿಸಲು ಸಾಧ್ಯವಾಗದಿದ್ದರೆ ಬಲಪ್ರಯೋಗದಿಂದ ಅದನ್ನು ಸಾಧಿಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ತಮ್ಮ ನಿಲುವನ್ನು ಇತ್ತೀಚೆಗೆ ಕಮ್ಯೂನಿಸ್ಟ್ ಪಕ್ಷದ ವಾರ್ಷಿಕ ಸಭೆಯಲ್ಲಿ ಪುನರುಚ್ಛರಿಸಿದ್ದಾರೆ. ಈ ಹೇಳಿಕೆಯನ್ನು ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಕಟುವಾಗಿ ಟೀಕಿಸಿದ್ದಾರೆ. ತೈವಾನ್ ಪ್ರತ್ಯೇಕ ದೇಶ. ವಿಲೀನ ಪ್ರಶ್ನೆ ಎದುರಾದರೆ ಅದನ್ನು ಜನರೇ ನಿರ್ಧರಿಸುತ್ತಾರೆ ಎಂದು ಹೇಳುವ ಮೂಲಕ ಚೀನಾಕ್ಕೆ ಸವಾಲೆಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಚುಣವಣೆಗಳು ನಡೆದದ್ದರಿಂದ ಅವುಗಳಿಗೆ ವಿಶೇಷ ಮಹತ್ವ ಬಂದಿದೆ. ಸ್ಥಳೀಯ ಚುನಾವಣಾ ಫಲಿತಾಂಶಗಳನ್ನು ಣೋಡಿದರೆ ಜನರು ಸರ್ಕಾರದ ವಿರುದ್ಧ ಮತನೀಡಿರುವುದು ಖಚಿತ.
ಯಾವುದೇ ದೇಶದ ಸ್ಥಳೀಯ ಚುನಾವಣೆಗಳ ಫಲಿತಾಂಶಗಳು ಅಷ್ಟು ಮುಖ್ಯವಾಗಿರುವುದಿಲ್ಲ. ಸ್ಥಳೀಯವಾಗಿ ಯಾರು ಗೆದ್ದರು, ಯಾರು ಸೋತರೆಂಬುದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗುವುದು ಅಪರೂಪ. ಆದರೆ ಅಂಥ ಅಪರೂಪದ ಬೆಳವಣಿಗೆ ತೈವಾನ್ನಲ್ಲಿ ನಡೆದಿದೆ. ಚೀನಾದ ಕಟು ವೈರಿಯಾಗಿರುವ ತೈವಾನ್ನ ಅಧ್ಯಕ್ಷೆ ಸಾಯ್ ಇಂಗ್ವೆನ್ ನೇತೃತ್ವದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಡಿಪಿಪಿ) ಸ್ಥಳೀಯ ಚುನಾವಣೆಗಳಲ್ಲಿ (ಮೇಯರ್‌ಗಳು ಮತ್ತು ಕೌನ್ಸಿಲರ್‌ಗಳು, ಮ್ಯಾಜಿಸ್ಟ್ರೇಟ್‌ಗಳು ಮತ್ತು ಗ್ರಾಮಪಂಚಾಯ್ತಿಗಳ ಅಧ್ಯಕ್ಷರು) ಹೀನಾಯವಾಗಿ ಸೋತಿದೆ.
ಚೀನಾ ಪರವಾದಿ ವಿರೋಧ ಪಕ್ಷ ಕೋಮಿನ್ಟಾಂಗ್ (ಟಿಎಂಟಿ) ರಾಜಧಾನಿ ತೈಪೆ ಸೇರಿದಂತೆ ೨೧ ನಗರಗಳ ಪೈಕಿ ೧೩ ನಗರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ ದೇಶದ ಅಧ್ಯಕ್ಷೆ ಸಾಯ್ ಇಂಗ್ ವೆನ್‌ಗೆ ಹಿನ್ನಡೆಯಾಗಿದೆ. ಕೇವಲ ಐದು ನಗರಗಳ ಮೇಯರ್ ಸ್ಥಾನಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಸೋಲಿನ ಹೊಣೆ ಹೊತ್ತು ವೆನ್ ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಕೂಡಾ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ದೇಶದ ಕಾನೂನಿನ ಪ್ರಕಾರ (ಮೂರನೆ ಬಾರಿಗೆ) ವೆನ್ ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಹೊಸಬರು ಅಭ್ಯರ್ಥಿಯಾಗಬೇಕಿದೆ.
೨೦೨೪ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು ಮುಂದೇನಾಗಲಿದೆ ಎಂಬುದಕ್ಕೆ ಈ ಫಲಿತಾಂಶಗಳು ಸೂಚನೆಯಂತಿವೆ ಎಂದು ವಿರೋಧ ಪಕ್ಷದ ನಾಯಕ ಎರಿಕ್ ಚೂ ಹೇಳಿದ್ದಾರೆ. ಈ ಬೆಳವಣಿಗೆಯನ್ನು ಬಳಸಿಕೊಂಡು ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಕೊಮಿನ್ಟಾಂಗ್ ಪಕ್ಷಕ್ಕೆ ಬೆಂಬಲ ನೀಡಿ ತೈವಾನ್ ವಶಪಡಿಸಿಕೊಳ್ಳಲು ಚೀನಾ ಪ್ರಯತ್ನಿಸಬಹುದೇ ಎಂಬುದನ್ನು ಕಾದುನೋಡಬೇಕು.
ರಾಜಧಾನಿ ತೈಪೆ ಮತ್ತೆ ಆಡಳಿತ ಪಕ್ಷದ ಕೈತಪ್ಪಿದೆ. ಚೀನಾ ಹಿಂದಿನ ನಾಯಕ ಚಿಯಾಂಗ್ ಕೈಶೇಖ್ ಅವರ ಮರಿಮಗ ಚಿಯಾಂಗ್ ವಾನ್ ಆನ್ ಅವರು ರಾಜಧಾನಿ ತೈಪೆಯ ಮುಂದಿನ ಮೇಯರ್ ಆಗಿ ಆಯ್ಕೆಯಾಗಿರುವುದು ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ತೈವಾನ್ ಆಡಳಿತಗಾರರು ಚೀನಾದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರಬೇಕೆಂಬ ನಿಲುವನ್ನು ಅವರು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ೧೯೪೯ರಲ್ಲಿ ಮಾವೋ ಗೆರಿಲ್ಲಾಗಳ ಜೊತೆಗಿನ ಯುದ್ಧದಲ್ಲಿ ಸೋತು ತೈವಾನ್‌ಗೆ ಪಲಾಯನ ಮಾಡಿದ ಚಿಯಾಂಗ್ ಕೈ ಶೇಖ್ ಅವರ ಮರಿಮಗ ಈಗಿನ ಚೀನಾ ನಾಯಕರ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸ.
ವಿಶ್ವದ ಸೆಮಿಕಂಡಕ್ಟರ್‌ಗಳ ಒಟ್ಟು ಬೇಡಿಕೆಯಲ್ಲಿ ಶೇ ೯೦ ಭಾಗ ಪೂರೈಸುವ ಶಿಂಚು ನಗರದ ಮೇಯರ್ ಸ್ಥಾನ ಸಣ್ಣಪಕ್ಷವೊಂದರ ಅಭ್ಯರ್ಥಿಯ ಪಾಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಬಲತಂದುಕೊಟ್ಟಿರುವ ನಗರಗಳೆಲ್ಲಾ ಕೋಮಿನ್ಟಾಂಗ್ ಪಕ್ಷದ ಪಾಲಾಗಿರುವುದು ಆಡಳಿತ ಪಕ್ಷದಲ್ಲಿ ಭೀತಿ ಹುಟ್ಟಿಸಿದೆ.
ಚುನಾವಣಾ ಪ್ರಚಾರದಲ್ಲಿ ಆಡಳಿತ ಪಕ್ಷ ಸಹಜವಾಗಿಯೇ ಚೀನಾ ಜೊತೆಗಿನ ಸಂಬಂಧ ಕೆಟ್ಟಿರುವ ಬಗ್ಗೆ ಪ್ರಸ್ತಾಪಿಸಿತ್ತು. ಹಾಗೆ ಪ್ರಸ್ತಾಪ ಮಾಡದೆ ಇರಲು ಸಾಧ್ಯವಿರಲಿಲ್ಲ ಕೂಡಾ. ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನಾನ್ಸಿ ಪೆಲೋಸಿ ತೈಪೆಗೆ ಭೇಟಿ ನೀಡಿದ್ದು ಚೀನಾವನ್ನು ಕೆರಳಿಸಿತ್ತು.
೨೫ ವರ್ಷಗಳಲ್ಲಿ ಅಮೆರಿಕದ ಉನ್ನತ ಮಟ್ಟದ ನಾಯಕರೊಬ್ಬರು ತೈವಾನ್‌ಗೆ ಭೇಟಿ ನೀಡಿದ್ದು ಇದೇ ಮೊದಲು. ಈ ಭೇಟಿಯ ಹಿನ್ನೆಲೆಯಲ್ಲಿ ಚೀನಾ ತೈವಾನ್ ಪ್ರದೇಶದ ಸುತ್ತಲೂ ಭಾರಿ ಪ್ರಮಾಣದ ಮಿಲಿಟರಿ ಕವಾಯತನ್ನು ನಡೆಸಿತು. ಅರವತ್ತಕ್ಕೂ ಹೆಚ್ಚು ಕ್ಷಿಪಣಿಗಳನ್ನು ತೈವಾನ್ ಸುತ್ತಲಿನಿಂದ ಹಾರಿಸಿತು. ಯುದ್ಧ ವಿಮಾನಗಳು ತೈವಾನ್ ಗಡಿಯಲ್ಲಿ ಹಾರಾಡಿದವು. ಯುದ್ಧನೌಕೆಗಳನ್ನೂ ತೈವಾನ್ ಸಮುದ್ರದಲ್ಲಿ ನಿಲ್ಲಿಸಲಾಗಿತ್ತು. ಇದಕ್ಕೆ ಪ್ರತಿಯಾಗಿಯೋ ಎನ್ನುವಂತೆ ಅಮೆರಿಕ, ತೈವಾನ್ ನೆರೆಯ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ತನ್ನ ಎರಡು ಯುದ್ಧ ನೌಕೆಗಳನ್ನು ತಂದು ನಿಲ್ಲಿಸಿತು. ಇನ್ನೇನು ಯುದ್ಧ ಆರಂಭವಾಗುತ್ತದೆ ಎಂದೆನ್ನಿಸುವಂಥ ವಾತಾವರಣ ನಿರ್ಮಾಣವಾಗಿತ್ತು.
ಯುದ್ಧ ಅಮೆರಿಕಕ್ಕಾಗಲೀ, ಚೀನಾಕ್ಕಾಗಲಿ ಬೇಕಿರಲಿಲ್ಲ. ಹೀಗಾಗಿ ಅಂಥದ್ದೇನೂ ಅಪಾಯ ಆಗಲಿಲ್ಲ. ಆದರೆ ತೈವಾನನ್ನು ಹೆದರಿಸಿ ತನ್ನ ತೆಕ್ಕೆಗೆ ತಂದುಕೊಳ್ಳುವ ಪ್ರಯತ್ನವನ್ನಂತೂ ಚೀನಾ ನಡೆಸಿತು. ಏಕ ಚೀನಾ ನೀತಿಗೆ ತಾನು ಬದ್ಧ ಎಂದು ಅಮೆರಿಕ ಹೇಳುತ್ತಲೇ ಬಂದಿದೆ.
ತೈವಾನ್ ಪ್ರತ್ಯೇಕ ದೇಶ ಎಂದೇನೂ ಅಮೆರಿಕ ಹೇಳುತ್ತಿಲ್ಲ. ಆದರೆ ತೈವಾನ್‌ಗೆ ಸದಾ ಬೆಂಬಲವಾಗಿ ನಿಂತಿದೆ. ತೈವಾನ್ ಸ್ವತಂತ್ರವಾಗಿ ಬೆಳೆದಿದ್ದು ಅಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ. ಅದನ್ನು ರಕ್ಷಿಸಲು ತಾನು ಬದ್ಧವಾಗಿರುವುದಾಗಿ ಅಮೆರಿಕ ಹೇಳುತ್ತಿದೆ. ಹೀಗಾಗಿಯೇ ಯುದ್ಧ ನೌಕೆಗಳನ್ನು ತೈವಾನ್ ಬಳಿಯ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ತಂದು ನಿಲ್ಲಿಸಿದುದಾಗಿ ಅಮೆರಿಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ತೈವಾನ್ ಜೊತೆ ಅಮೆರಿಕ ಉತ್ತಮ ವಾಣಿಜ್ಯ ಬಾಂಧವ್ಯ ಹೊಂದಿದೆ. ಆಧುನಿಕ ತಂತ್ರಜ್ಞಾನದ ಎಲ್ಲ ಉಪಕರಣಗಳು ತೈವಾನ್ನಲ್ಲಿ ತಯಾರಾಗುತ್ತಿದ್ದು ಅವನ್ನು ಕೊಳ್ಳುವ ಪ್ರಮುಖ ದೇಶ ಅಮೆರಿಕವಾಗಿದೆ. ಈ ಕಾರಣದಿಂದಲೂ ಅಮೆರಿಕ ತೈವಾನ್‌ಗೆ ಬೆಂಬಲವಾಗಿದೆ. ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಚೀನಾದ ಮೇಲೆ ಹಿಡಿತ ಸಾಧಿಸಲು ಕೂಡಾ ಅಮೆರಿಕ ತೈವಾನ್ನನ್ನು ಬಳಸಿಕೊಳ್ಳುವಂತೆ ಕಾಣುತ್ತಿದೆ.
ತೈವಾನ್ ತಮ್ಮ ದೇಶದ ವ್ಯಾಪ್ತಿಯ ದ್ವೀಪ. ತಾಯಿನಾಡಿನೊಂದಿಗೆ ತೈವಾನ್ ವಿಲೀನವಾಗುವುದು ಅನಿವಾರ್ಯ. ಶಾಂತಿಯ ಮಾರ್ಗದಿಂದ ಅದನ್ನು ಸಾಧಿಸಲು ಸಾಧ್ಯವಾಗದಿದ್ದರೆ ಬಲಪ್ರಯೋಗದಿಂದ ಅದನ್ನು ಸಾಧಿಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ತಮ್ಮ ನಿಲುವನ್ನು ಇತ್ತೀಚೆಗೆ ಕಮ್ಯೂನಿಸ್ಟ್ ಪಕ್ಷದ ವಾರ್ಷಿಕ ಸಭೆಯಲ್ಲಿ ಪುನರುಚ್ಛರಿಸಿದ್ದಾರೆ. ಈ ಹೇಳಿಕೆಯನ್ನು ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಕಟುವಾಗಿ ಟೀಕಿಸಿದ್ದಾರೆ. ತೈವಾನ್ ಪ್ರತ್ಯೇಕ ದೇಶ. ವಿಲೀನ ಪ್ರಶ್ನೆ ಎದುರಾದರೆ ಅದನ್ನು ಜನರೇ ನಿರ್ಧರಿಸುತ್ತಾರೆ ಎಂದು ಹೇಳುವ ಮೂಲಕ ಚೀನಾಕ್ಕೆ ಸವಾಲೆಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಚುಣವಣೆಗಳು ನಡೆದದ್ದರಿಂದ ಅವುಗಳಿಗೆ ವಿಶೇಷ ಮಹತ್ವ ಬಂದಿದೆ.
ಸ್ಥಳೀಯ ಚುನಾವಣಾ ಫಲಿತಾಂಶಗಳನ್ನು ಣೋಡಿದರೆ ಜನರು ಸರ್ಕಾರದ ವಿರುದ್ಧ ಮತನೀಡಿರುವುದು ಖಚಿತ.
ಕಳೆದ ಚುನಾವಣೆಗಳಲ್ಲಿಯೂ ಆಡಳಿತ ಡಿಪಿಪಿ ಉತ್ತಮ ಸಾಧನೆಯನ್ನೇನೂ ಮಾಡಿರಲಿಲ್ಲ. ಚೀನಾದ ಬೆದರಿಕೆಗೆ ಬಗ್ಗದ ಸರ್ಕಾರದ ನಡೆಯನ್ನು ಜನರು ಮೆಚ್ಚಿ ಈ ಬಾರಿ ಮತನೀಡಬಹುದು ಎಂಬ ಲೆಕ್ಕಾಚಾರ ಆಡಳಿತ ಪಕ್ಷದವರಾಗಿತ್ತು. ಆದರೆ ಜನರು ಸ್ಥಳೀಯ ವಿಷಯಗಳ ಆಧಾರದ ಮೇಲೆ ಮತನೀಡಿದಂತೆ ಕಾಣುತ್ತದೆ. ಮುಖ್ಯವಾಗಿ ಕರೋನಾ ಪಿಡುಗಿನಿಂದ ಉದ್ಭವಿಸಿದ ಪರಿಸ್ಥಿತಿ ಮತ್ತು ಸಾವು-ನೋವನ್ನು ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ ಎಂಬ ಅಸಮಾಧಾನ ಮತದಾರರನ್ನು ಕಾಡಿದಂತೆ ಕಾಣುತ್ತಿದೆ.
ತೈವಾನ್ ಮೇಲೆ ಚೀನಾ ದಾಳಿ ಮಾಡಬಹುದು ಎಂಬ ಆಡಳಿತ ಪಕ್ಷದ ನಾಯಕರ ಆರೋಪ ಹುರುಳಿಲ್ಲದ್ದು ಎಂದು ವಿರೋಧೀ ಕೋಮಿನ್ಟಾಂಗ್ ಪಕ್ಷದ ನಾಯಕರ ಅಭಿಪ್ರಾಯ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಚೀನಾ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಓಳ್ಳೆಯದು ಎನ್ನುವುದು ಅವರ ನಿಲುವು. ಆದರೆ ಚೀನಾಕ್ಕೆ ಶರಣಾಗತವಾಗುವ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ತೈವಾನ್ ಒಳಗಡೆಯೇ ತನ್ನ ಪರವಾದ ಗಟ್ಟಿ ಜನಧ್ವನಿ ಇರುವುದು ಚೀನಾಕ್ಕೆ ಸಂತೋಷ ತಂದಿದೆ.
ಪ್ರಜಾತಂತ್ರ ವ್ಯವಸ್ಥೆಯುಳ್ಳ ಪುಟ್ಟ ದ್ವೀಪ ತೈವಾನ್ ಹಲವು ಶತಮಾನಗಳ ಹಿಂದೆ ಚೀನಾದ ಭಾಗವಾಗಿತ್ತು.
೧೮ನೇ ಶತಮಾನದಲ್ಲಿ ನಡೆದ ಯುದ್ಧದಲ್ಲಿ ಸೋತ ಅಂದಿನ ಸರ್ಕಾರ ತೈವಾನನ್ನು ಜಪಾನ್‌ಗೆ ಕೊಟ್ಟಿತು. ಎರಡನೆಯ ಮಹಾಯುದ್ಧದಲ್ಲಿ ಸೋತ ಜಪಾನ್, ತೈವಾನನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು. ಚಿಯಾಂಗ್ ಕೈಶೇಖ್ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಈ ಸರ್ಕಾರದ ನೀತಿಗಳನ್ನು ವಿರೋಧಿಸಿ ಮಾವೋ ಜೆಡಾಂಗ್ ನೇತೃತ್ವದ ಬಂಡಾಯಗಾರರು ಯುದ್ಧಕ್ಕೆ ಇಳಿದರು. ಈ ಯುದ್ಧದಲ್ಲಿ ಚಿಯಾಂಗ್ ಕೈಶೇಖ್ ಸೋತರು. ತನ್ನ ಬೆಂಬಲಿಗರು, ವ್ಯಾಪಾರಗಾರರು, ಶ್ರೀಮಂತರೊಂದಿಗೆ ತೈವಾನ್‌ಗೆ ಪಲಾಯನ ಮಾಡಿ ಅಲ್ಲಿ ನೆಲೆ ಮಾಡಿಕೊಂಡರು. ಕೋಮಿನ್ಟಾಂಗ್ ನೇತೃತ್ವದ ಸರ್ಕಾರವನ್ನೂ ರಚಿಸಿದರು. ಅವರ ನಿಧನಾ ನಂತರ ಆಡಳಿತ ನಡೆಸಿದವರು ಮುಕ್ತ ಹಾಗೂ ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಿದ್ದರಿಂದಾಗಿ ತೈವಾನ್ ಅಭಿವೃದ್ಧಿಯಲ್ಲಿ ದಾಪುಕಾಲು ಹಾಕತೊಡಗಿತು. ಎಪ್ಪತ್ತರ ದಶಕದಲ್ಲಿ ತೈವಾನ್‌ನಲ್ಲಿ ನಡೆದ ಕೈಗಾರೀಕರಣ ದೇಶವನ್ನು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಿಸಿತು. ಇದರ ಪರಿಣಾಮ ಇಂದು ತೈವಾನ್ ಶಕ್ತಿ ದೇಶವಾಗಿ ಬೆಳೆದಿದೆ.
ಚೀನಾ ಕಮ್ಯುನಿಸ್ಟ್ ದೇಶವಾದರೂ ಆರ್ಥಿಕವಲಯವನ್ನು ಮುಕ್ತ ಮಾರುಕಟ್ಟೆಯ ಭಾಗವಾಗಿ ಮಾಡಿ ಭಾರಿ ಪ್ರಮಾಣದ ಅಭಿವೃದ್ದಿಯನ್ನು ಸಾಧಿಸಿದೆ. ತೈವಾನ್ ಅಭಿವೃದ್ಧಿ ಕೂಡಾ ಚೀನಾಕ್ಕೆ ಸವಾಲೊಡ್ಡವಂಥದ್ದು. ಎಲೆಕ್ಟ್ರಾನಿಕ್, ಮಾಹಿತಿ ತಂತ್ರಜ್ಞಾನ, ಮೊಬೈಲ್, ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ ಚಿಪ್ಸ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮೊದಲ ಸಾಲಿನ ದೇಶವಾಗಿದೆ. ಸಹಜವಾಗಿಯೇ ತೈವಾನನ್ನು ತಮ್ಮ ದೇಶದ ಭಾಗವನ್ನಾಗಿ ಮಾಡಿಕೊಳ್ಳಲು ಚೀನಾದ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ತೈವಾನ್ ಕಮ್ಯುನಿಸ್ಟ್ ಚೀನಾದ ಭಾಗ ಮಾಡಲು ಪ್ರಜಾತಂತ್ರ ದೇಶಗಳಿಗೆ ಇಷ್ಟವಿಲ್ಲ. ಹೀಗಾಗಿಯೇ ವಿವಾದ.
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್ನಾಥ್ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…